Advertisement

UGC; ಪದವಿ ಕಲಿಕೆ ಅವಧಿ ನಿರ್ಧಾರ ಆಯ್ಕೆ ಶೀಘ್ರ: ಚೇರ್ಮನ್‌ ಹೇಳಿದ್ದೇನು?

12:25 AM Nov 29, 2024 | Team Udayavani |

ಹೊಸದಿಲ್ಲಿ: ನಿರ್ದಿಷ್ಟ ಅವಧಿಯ ಪದವಿ ಕೋರ್ಸ್‌ ಕಲಿಕೆಯ ಬದಲು, ವಿದ್ಯಾರ್ಥಿ ಗಳಿಗೆ ಕಲಿಕಾ ಅವಧಿಯನ್ನು ವಿಸ್ತರಿಸುವ ಅಥವಾ ಕಿರಿದುಗೊಳಿಸುವ ಅವಕಾಶ ವನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಶೀಘ್ರವೇ ಕಲ್ಪಿಸಲಿವೆ.

Advertisement

ಈ ಸಂಬಂಧಿ ಮಾರ್ಗಸೂಚಿ ಗಳಿಗೆ ವಿ.ವಿ. ಧನಸಹಾಯ ಆಯೋಗ (ಯುಜಿಸಿ) ಒಪ್ಪಿಗೆ ನೀಡಿದೆ. ಕಿರಿದು ಪದವಿ ಕಾರ್ಯಕ್ರಮ (ಎಡಿಪಿ) ಮತ್ತು ವಿಸ್ತರಿತ ಪದವಿ ಕಾರ್ಯಕ್ರಮ (ಇಡಿಪಿ)ಗೆ ಸಂಬಂಧಿಸಿದ ಕರಡು ನಿಯಮಗಳನ್ನು ಜನರ ಪರಿಶೀಲನೆಗೆ ಬಿಡಲಾಗಿದೆ.

ಪ್ರಸ್ತುತ ಹಲವು ಪ್ರಮುಖ ವಿದೇಶಿ ವಿ.ವಿ.ಗಳು ಇದೇ ಮಾದರಿಯಲ್ಲಿ ಪದವಿಗಳನ್ನು ನೀಡುತ್ತಿವೆ.

ಏಕೆ ಈ ಯೋಜನೆ?
ಅತ್ಯುತ್ತಮ ಶೈಕ್ಷಣಿಕ ಫ‌ಲಿತಾಂಶಗಳನ್ನು ಹೊಂದಿರುವ ಅಥವಾ ಹೆಚ್ಚುವರಿ ಕ್ರೆಡಿಟ್‌ (ವಿದ್ಯಾರ್ಥಿಯ ಶೈಕ್ಷಣಿಕ ಪ್ರದರ್ಶನದ ಅನುಸಾರ ಪ್ರತೀ ಸೆಮಿಸ್ಟರ್‌ ಅಂಕಗಳನ್ನು ನೀಡಲಾಗುತ್ತದೆ)ಗಳನ್ನು ಹೊಂದಿರುವ ವಿದ್ಯಾರ್ಥಿಗಳು ನಿರ್ದಿಷ್ಟ ಪದವಿ ಅವಧಿಗಿಂತಲೂ ಮುಂಚೆಯೇ ಕಿರಿದು ಪದವಿ ಕಾರ್ಯಕ್ರಮ (ಎಡಿಪಿ) ದಡಿ ಪದವಿಯನ್ನು ಪಡೆದುಕೊಳ್ಳಬಹುದು. ಅದೇ ರೀತಿ ವೈಯಕ್ತಿಕ ಮತ್ತು ಆರ್ಥಿಕ ತೊಂದರೆ ಅಥವಾ ಶೈಕ್ಷಣಿಕವಾಗಿ ಸವಾಲುಗಳನ್ನು ಎದುರಿಸುತ್ತಿರುವವರು ಹೆಚ್ಚುವರಿ ಸಮಯವನ್ನು ಪಡೆದುಕೊಂಡು ವಿಸ್ತರಿತ ಪದವಿ ಕಾರ್ಯಕ್ರಮ (ಇಡಿಪಿ) ದಡಿ ಪದವಿಯನ್ನು ಪೂರ್ಣಗೊಳಿಸಬಹುದು. ಒಂದು ಅಥವಾ 2ನೇ ಸಮಿಸ್ಟರ್‌ ಪೂರ್ಣ ಗೊಳಿಸಿದ ಬಳಿಕವಷ್ಟೇ ಇಡಿಪಿ ಅಥವಾ ಎಡಿಪಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಆಯ್ಕೆ ಮಾಡಿಕೊಳ್ಳುವವರ ಸಾಮರ್ಥ್ಯ ಮೌಲ್ಯಮಾಪನಕ್ಕೆ ಉನ್ನತ ಶಿಕ್ಷಣ ಸಂಸ್ಥೆಗಳು ಸಮಿತಿಯನ್ನು ರಚಿಸಬೇಕಾಗುತ್ತದೆ ಎಂದು ಯುಜಿಸಿ ಹೇಳಿದೆ.

ಎಡಿಪಿ ಅಥವಾ ಇಡಿಪಿಯಡಿ ಪಡೆದ ಪದವಿಯನ್ನು ಸಾಮಾನ್ಯ ಅವಧಿಯ ಪದವಿಗಳಿಗೆ ಸಮಾನವಾಗಿಯೇ ಪರಿಗಣಿಸಲಾಗುತ್ತದೆ. ವಿದ್ಯಾರ್ಥಿಯ ಅಗತ್ಯಗಳಿಗಾಗಿ ಕಿರಿದು ಅಥವಾ ವಿಸ್ತರಿತ ಅವಧಿಯಲ್ಲಿ ಪದವಿಯನ್ನು ಪೂರ್ಣಗೊಳಿಸಲಾಗಿದೆ ಎಂಬ ಟಿಪ್ಪಣಿ ಯನ್ನು ಪದವಿ ಪ್ರಮಾಣ ಪತ್ರಗಳು ಹೊಂದಿರಲಿವೆ.
ಈ ಕಾರ್ಯಕ್ರಮಗಳಿಂದ ಅಂತರ್‌ಶಿಸ್ತೀಯ ಮತ್ತು ವೃತ್ತಿಪರ ಕೋರ್ಸ್‌ಗಳು ಪಡೆಯುವ ಅಥವಾ ಇತರ ಜವಾಬ್ದಾರಿಗಳೊಂದಿಗೆ ಶಿಕ್ಷಣ ಪಡೆ ಯುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ.

Advertisement

ಯುಜಿಸಿ ಚೇರ್ಮನ್‌ ಹೇಳಿದ್ದೇನು?
“ತಮ್ಮ ಕಲಿಕಾ ಸಾಮರ್ಥ್ಯಗಳಿಗೆ ಅನುಸಾರವಾಗಿ ವಿದ್ಯಾರ್ಥಿಗಳು ಅಧ್ಯಯನ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಎಡಿಪಿ ಯಡಿ ವಿದ್ಯಾರ್ಥಿಗಳು ಪ್ರತೀ ಸೆಮಿಸ್ಟರ್‌ಗೆ ಹೆಚ್ಚುವರಿ ಕ್ರೆಡಿಟ್‌ಗಳೊಂದಿಗೆ ಕಿರಿದುಗೊಳಿಸಲಾದ ಅವಧಿಯಲ್ಲಿ ಪದವಿಯನ್ನು ಪೂರ್ಣಗೊಳಿಸಬಹುದು ಅಥವಾ ಪ್ರತೀ ಸೆಮಿಸ್ಟರ್‌ಗೆ ಕಡಿಮೆ ಕ್ರೆಡಿಟ್‌ ಗಳೊಂದಿಗೆ ಇಡಿಪಿಯಡಿ ಪದವಿ ಯನ್ನು ಪಡೆಯಬಹುದು’ ಎಂದು ಯುಜಿಸಿ ಚೇರ್ಮನ್‌ ಜಗದೀಶ್‌ ಕುಮಾರ್‌ ಹೇಳಿದ್ದಾರೆ. ಸಾಮಾನ್ಯ ಪದವಿ ಪಡೆಯುವಾಗ ಪಡೆಯುವಷ್ಟೇ ಕ್ರೆಡಿಟ್‌ಗಳನ್ನು ಎಡಿಪಿ ಮತ್ತು ಇಡಿಪಿ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಈ ಕುರಿತು ಮೌಲ್ಯಮೌಪನ ಮಾಡಲು ಉನ್ನತ ಶಿಕ್ಷಣ ಸಂಸ್ಥೆಗಳು ಸಮಿತಿಯನ್ನು ರಚಿಸುತ್ತವೆ. ಹಾಗಾಗಿ ಈ ಪದವಿಗಳು ಸಾಮಾನ್ಯ ಅವಧಿಯ ಪದವಿಗಳಿಗೆ ಸಮಾನವಾಗಿರುತ್ತವೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next