ವಿಂಡ್ಹೋಕ್: ಐಸಿಸಿ ಟಿ20 ವಿಶ್ವಕಪ್ ಆಫ್ರಿಕಾ ಅರ್ಹತಾ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಉಗಾಂಡ ದೇಶವು 2024ರ ಟಿ20 ವಿಶ್ವಕಪ್ ಕೂಟಕ್ಕೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದೆ. ಟಿ20 ವಿಶ್ವಕಪ್ ಕೂಟವು ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ನಲ್ಲಿ 2024ರ ಜೂನ್ ನಲ್ಲಿ ನಡೆಯಲಿದೆ.
ಆಫ್ರಿಕಾ ರೀಜನ್ ಅರ್ಹತಾ ಕೂಟದಲ್ಲಿ ಈ ಮೊದಲು ನಮೀಬಿಯಾ ಅರ್ಹತೆ ಪಡೆದಿತ್ತು. ಇದೀಗ ಉಗಾಂಡ ಟಿ20 ವಿಶ್ವಕಪ್ ನ 20ನೇ ದೇಶವಾಗಿ ಅರ್ಹತೆ ಪಡೆದಿದೆ.
ಆದರೆ ಇದೇ ವೇಳೆ ಜಿಂಬಾಬ್ವೆ ಮತ್ತೆ ಅರ್ಹತೆ ಪಡೆಯಲು ವಿಫಲವಾಗಿದೆ. ಕಳೆದ ಟಿ20 ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಜಿಂಬಾಬ್ವೆ, ಬಳಿಕ ಏಕದಿನ ವಿಶ್ವಕಪ್ ಗೆ ಅರ್ಹತೆ ಪಡೆದಿರಲಿಲ್ಲ. ಇದೀಗ ಟಿ20 ವಿಶ್ವಕಪ್ ನಲ್ಲೂ ಜಿಂಬಾಬ್ವೆ ಆಡಲಾಗುತ್ತಿಲ್ಲ.
ಕೀನ್ಯಾ ವಿರುದ್ಧ ಜಿಂಬಾಬ್ವೆ ತನ್ನ ಅಂತಿಮ ಪಂದ್ಯವನ್ನು ಗೆದ್ದರೂ, ಉಗಾಂಡ ತಂಡವು ರುವಾಂಡಾವನ್ನು ಸೋಲಿಸಿದ ನಂತರ ಜಿಂಬಾಬ್ವೆ ಅವಕಾಶ ಕಳೆದುಕೊಂಡಿತು.
ರುವಾಂಡಾವನ್ನು ಬ್ಯಾಟಿಂಗ್ ಮಾಡಲು ಹೇಳಿ 18.5 ಓವರ್‌ಗಳಲ್ಲಿ 65 ರನ್‌ಗಳಿಗೆ ಆಲೌಟ್ ಮಾಡಿದ ನಂತರ ಉಗಾಂಡ 8.1 ಓವರ್‌ಗಳಲ್ಲಿ ತನ್ನ ಗುರಿಯನ್ನು ತಲುಪಿತು. ಉಗಾಂಡಾಗೆ ಇದು ಐತಿಹಾಸಿಕ ಸಂದರ್ಭವಾಗಿದ್ದು, ಇದೀಗ ಮೊದಲ ಬಾರಿಗೆ ಹಿರಿಯರ ವಿಶ್ವಕಪ್ ಗೆ ಅರ್ಹತೆ ಪಡೆದಿದೆ.