Advertisement

ಉಡುಪಿಯ ಮಹಿಳೆಗೆ ಉಗಾಂಡಾ ರಾಷ್ಟ್ರ ಪುರಸ್ಕಾರ

08:19 PM Oct 11, 2019 | Team Udayavani |

ಉಡುಪಿ: ಅದಮಾರು ಮೂಲದ ಸುಮನ್‌ ವೆಂಕಟೇಶ್‌ ಅವರು ನಡೆಸುತ್ತಿರುವ ಸಾಮಾಜಿಕ ಕಾರ್ಯಗಳಿಗಾಗಿ ಅವರನ್ನು ಆಫ್ರಿಕಾ ಖಂಡದ ಉಗಾಂಡಾ ಸರಕಾರ ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ.

Advertisement

ಬುಧವಾರ ಉಗಾಂಡಾದಲ್ಲಿ ನಡೆದ 57ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರಾಧ್ಯಕ್ಷ ಯುವೆರಿ ಕಗುಟ ಮುಸೆವೆನಿ ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಮೊದಲ ಮಹಿಳೆ ಎಂಬ ಕೀರ್ತಿಗೆ ಸುಮನ್‌ ಪಾತ್ರರಾಗಿದ್ದಾರೆ. ಜಿಂಬಾಬ್ವೆ ರಾಷ್ಟ್ರಾಧ್ಯಕ್ಷ ಎಮರ್ಸನ್‌ ಮಂಗಾಗ್ವ ಮುಖ್ಯ ಅತಿಥಿಯಾಗಿದ್ದರು.

ಉಗಾಂಡಾದ ಭಾರತೀಯ ಮಹಿಳಾ ಸಂಘದ ಅಧ್ಯಕ್ಷೆಯಾಗಿರುವ ಸುಮನ್‌, 24 ವರ್ಷಗಳಿಂದ ಅಲ್ಲಿ ನೆಲೆಸಿದ್ದು, 13 ವರ್ಷಗಳಿಂದ ಮಹಿಳಾ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಉಗಾಂಡಾದ ಕರ್ನಾಟಕ ಸಂಘದ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು. 1940ರಿಂದ ಅಸ್ತಿತ್ವದಲ್ಲಿರುವ ಸಂಘಟನೆಯು ಸುಮನ್‌ ಅವರ ಸೇವೆಯ ಮೂಲಕ ಅಮೂಲ್ಯ ಕೊಡುಗೆ ಸಲ್ಲಿಸುತ್ತಿದೆ. ಅವರ ಸೇವೆ ಮುಖ್ಯವಾಗಿ ಮಹಿಳೆಯರು, ಮಕ್ಕಳಿಗೆ ಸಂಬಂಧಿಸಿದ್ದಾಗಿದೆ.

ಸುಸಜ್ಜಿತ ಆಸ್ಪತ್ರೆ, ಮಕ್ಕಳ ದತ್ತು
ಸುಮನ್‌ ಇದಕ್ಕಾಗಿಯೇ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿದ್ದಾರೆ. ಕ್ಯಾನ್ಸರ್‌ ತಪಾಸಣೆ- ಚಿಕಿತ್ಸಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಉಗಾಂಡಾದ 45 ಬಡ ವಿದ್ಯಾರ್ಥಿಗಳ ಪದವಿ ತನಕದ ಶಿಕ್ಷಣ ಶುಲ್ಕವನ್ನು ಸಂಸ್ಥೆ ಭರಿಸುತ್ತಿದೆ. ಇದರ ಮೊತ್ತ 9 ಕೋಟಿ ಉಗಾಂಡಾ ಶಿಲ್ಲಿಂಗ್‌. ಕಂಪಾಲಾದ 80 ವರ್ಷ ಹಳೆಯ ಕಸುಬಿ ಪ್ರಾ. ಶಾಲೆಯನ್ನು 25 ಕೋಟಿ ಉಗಾಂಡಾ ಶಿಲ್ಲಿಂಗ್‌ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, 900 ವಿದ್ಯಾರ್ಥಿಗಳಿದ್ದ ಶಾಲೆಯಲ್ಲೀಗ 1,500 ಮಂದಿ ಇದ್ದಾರೆ. 2018ರಲ್ಲಿ ಆಸ್ಪತ್ರೆಯಲ್ಲಿ ಪ್ರಸೂತಿ ಗೃಹ, ಕಾರ್ಮಿಕ ವಿಭಾಗ ಮತ್ತು ಶಸ್ತ್ರಚಿಕಿತ್ಸಾ ಥಿಯೇಟರ್‌ ನಿರ್ಮಿಸಿಕೊಡಲಾಗಿದೆ. ಸಂಘಟನೆ ಲಾಭರಹಿತವಾಗಿದ್ದು, ಇದಕ್ಕಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ, ಕಾರ್ಪೊರೇಟ್‌ ಜಗತ್ತಿನ ಮೂಲಕ ದೇಣಿಗೆಯನ್ನು ಸಂಗ್ರಹಿಸಲಾಗುತ್ತಿದೆ.

ಸುಮನ್‌ ಅವರು ಅದಮಾರಿನ ಶ್ರೀನಿವಾಸ ರಾವ್‌ ಮತ್ತು ರೂಪಾ ರಾವ್‌ ಅವರ ಪುತ್ರಿ. ಪತಿ ವೆಂಕಟೇಶ್‌ ಬೆಂಗಳೂರಿನವರಾಗಿದ್ದು ಉಗಾಂಡಾದಲ್ಲಿ ಕನ್ಸಲ್ಟೆಂಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next