Advertisement

ಹೋಳಿಗೆ ರಂಗು : ಯುಗಾದಿಗೆ ಓಡಿಬಂದ ಒಬ್ಬಟ್ಟು

09:30 AM Apr 04, 2019 | Hari Prasad |

ನೂರಾರು ಸಿಹಿತಿಂಡಿಗಳನ್ನು ತಯಾರಿಸಿ ತಿನ್ನಬಹುದಾದರೂ ರಾಜ ಮರ್ಯಾದೆ ಸಿಗುವುದು ಹೋಳಿಗೆ ಅಥವಾ ಒಬ್ಬಟ್ಟಿಗೇ. ಸಾಂಪ್ರದಾಯಿಕವಾಗಿ ಯುಗಾದಿಯನ್ನು ಸ್ವಾಗತಿಸುವಾಗ ಮನೆಮನೆಯಲ್ಲೂ ಒಬ್ಬಟ್ಟು ತಯಾರಾಗುತ್ತದೆ. ಹೆಚ್ಚಿನವರು ತಯಾರಿಸುವುದು ಕಡಲೇಬೇಳೆ ಹಾಗೂ ಕಾಯಿ ಹೋಳಿಗೆಯನ್ನು. ಇವೆರಡು ವರೈಟಿ ಬಿಟ್ರೆ ಬೇರೆ ಬಗೆಯ ಹೋಳಿಗೆ ಮಾಡೋಕಾಗಲ್ವ ಎಂಬುದು ಹಲವರ ಪ್ರಶ್ನೆ. ಅದಕ್ಕೆ ಉತ್ತರ ಇಲ್ಲಿದೆ. ವಿವಿಧ ತರಕಾರಿ ಮತ್ತು ಹಣ್ಣುಗಳಿಂದಲೂ ಹೋಳಿಗೆ ತಯಾರಿಸಬಹುದಾಗಿದ್ದು, ಅಂಥ ಕೆಲವು ರೆಸಿಪಿಗಳು ಹೀಗಿವೆ…

Advertisement

ಸೋರೆಕಾಯಿ ಹೋಳಿಗೆ


ಬೇಕಾಗುವ ಸಾಮಗ್ರಿ: ಕಣಕಕ್ಕೆ- ಮೈದಾ ಹಿಟ್ಟು- 3 ಕಪ್‌, ನೀರು- 1 ಕಪ್‌, ಅಡುಗೆ ಎಣ್ಣೆ – 1/4 ಕಪ್‌, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಿಶಿನ ಪುಡಿ. ಹೂರಣಕ್ಕೆ- ಸೋರೆಕಾಯಿ ತುರಿ- 3 ಕಪ್‌, ಬೆಲ್ಲ- 1 ಕಪ್‌, ತುಪ್ಪ- 2 ಚಮಚ, ಏಲಕ್ಕಿ- 4, ಚಿರೋಟಿ ರವೆ- 2 ಚಮಚ (ಬೇಕಿದ್ದರೆ)

ಮಾಡುವ ವಿಧಾನ: ಮೈದಾ ಹಿಟ್ಟನ್ನು ಪಾತ್ರೆಗೆ ಹಾಕಿ, ನೀರು, ಉಪ್ಪು, ಅರಶಿನಪುಡಿ ಹಾಕಿ ಚೆನ್ನಾಗಿ ನಾದಿ, ಕಣಕ ತಯಾರಿಸಿ. ಅದನ್ನು ಒಂದು ಗಂಟೆಯ ಕಾಲ ಮುಚ್ಚಿಡಿ. ಸೋರೆಕಾಯಿಯ ಸಿಪ್ಪೆ ತೆಗೆದು, ತಿರುಳು-ಬೀಜಗಳನ್ನು ಬೇರ್ಪಡಿಸಿ, ಬಿಳಿಭಾಗವನ್ನು ತುರಿದಿಟ್ಟುಕೊಳ್ಳಿ. ಆ ತುರಿಯನ್ನು ಬಾಣಲೆಗೆ ಹಾಕಿ, ಬೆಲ್ಲ ಸೇರಿಸಿ, ತುಪ್ಪ ಹಾಕಿ, ಆಗಾಗ ಸೌಟಿನಿಂದ ಕೈಯಾಡಿಸುತ್ತ ಸಣ್ಣ ಉರಿಯಲ್ಲಿ ಬೇಯಿಸಿ. ತಳ ಬಿಟ್ಟು ಬರುವಾಗ ಕೆಳಗಿಳಿಸಿ. ಏಲಕ್ಕಿ ಪುಡಿ ಬೆರೆಸಿ ಹೂರಣ ಸಿದ್ಧಪಡಿಸಿ. ಬಿಸಿ ಆರಿದ ಮೇಲೆ ಲಿಂಬೆಯ ಗಾತ್ರದ ಉಂಡೆಗಳನ್ನು ತಯಾರಿಸಿ. ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು, ಲಿಂಬೆ ಗಾತ್ರದ ಕಣಕದ ಉಂಡೆಯನ್ನು ಸ್ವಲ್ಪ ತಟ್ಟಿ, ಅದರ ಒಳಗೆ ಹೂರಣದ ಉಂಡೆಯನ್ನು ಇಟ್ಟು ಸಂಪೂರ್ಣವಾಗಿ ಕಣಕದಿಂದ ಮುಚ್ಚಿ ಉಂಡೆ ಕಟ್ಟಿ. ಇದನ್ನು ಎಣ್ಣೆ ಸವರಿದ ಪ್ಲಾಸ್ಟಿಕ್‌ ಶೀಟ್‌ ಮೇಲೆ ಇರಿಸಿ, ಒಬ್ಬಟ್ಟು ತಟ್ಟಿ, ಅಥವಾ ಚಪಾತಿ­ಯಂತೆ ಮೈದಾ/ ಗೋಧಿ ಹಿಟ್ಟಿನಲ್ಲಿ ಮುಳುಗಿಸಿ ಲಟ್ಟಿಸಿ. ತವಾದಲ್ಲಿ ಬೇಯಿಸಿ. ಸೋರೆಕಾಯಿ ಹೋಳಿಗೆಯನ್ನು ಕಾಯಿಹಾಲಿ­ನೊಂದಿಗೆ ಸವಿಯಲು ಚೆನ್ನಾಗಿರು­ತ್ತದೆ. ಇದೇ ರೀತಿ ಸಿಹಿಗುಂಬಳ­ಕಾಯಿಯ ಹೋಳಿಗೆಯನ್ನೂ ತಯಾರಿಸಬಹುದು.

ರವೆ ಹೋಳಿಗೆ


ಬೇಕಾಗುವ ಸಾಮಗ್ರಿ: ಕಣಕಕ್ಕೆ- ಮೈದಾ ಹಿಟ್ಟು- 3 ಕಪ್‌, ನೀರು- 1 ಕಪ್‌, ಅಡುಗೆ ಎಣ್ಣೆ – 1/4 ಕಪ್‌, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಿಶಿನ ಪುಡಿ. ಹೂರಣಕ್ಕೆ- ಉಪ್ಪಿಟ್ಟು ರವೆ- 1 ಕಪ್‌, ಬೆಲ್ಲ- ಒಂದೂವರೆ ಕಪ್‌, ತುಪ್ಪ- 4 ಚಮಚ, ನೀರು – 3 ಕಪ್‌, ತೆಂಗಿನ ತುರಿ- 1/2 ಕಪ್‌, ಏಲಕ್ಕಿ- 4

ಮಾಡುವ ವಿಧಾನ: ಮೈದಾ ಹಿಟ್ಟನ್ನು ಪಾತ್ರೆಗೆ ಹಾಕಿ, ನೀರು, ಉಪ್ಪು, ಅರಶಿನಪುಡಿ ಹಾಕಿ ಚೆನ್ನಾಗಿ ನಾದಿ, ಕಣಕ ತಯಾರಿಸಿ. ಅದನ್ನು ಒಂದು ಗಂಟೆಯ ಕಾಲ ಮುಚ್ಚಿಡಿ. ರವೆಯನ್ನು ಸಣ್ಣ ಉರಿಯಲ್ಲಿ ಸುವಾಸನೆ ಬರುವಷ್ಟು ಹುರಿಯಿರಿ. ಬಾಣಲೆಯಲ್ಲಿ ನೀರು ಕಾಯಲು ಇಟ್ಟು, ನೀರು ಕುದಿಯಲಾರಂಭಿಸಿದಾಗ ರವೆ ಸೇರಿಸಿ ಬೇಯಿಸಿ. ಬೆಲ್ಲದ ಪುಡಿ, ತೆಂಗಿನತುರಿ ಮತ್ತು ತುಪ್ಪವನ್ನು ಸೇರಿಸಿ, ತಳ ಹಿಡಿಯದಂತೆ ಕೈಯಾಡಿಸಿ. ರವೆ ಬೆಂದ ಮೇಲೆ ಏಲಕ್ಕಿ ಪುಡಿಯನ್ನು ಸೇರಿಸಿ, ಚೆನ್ನಾಗಿ ಬೆರೆಸಿ. ಬಿಸಿ ಆರಿದ ಮೇಲೆ ಈ ಹೂರಣದಿಂದ ಉಂಡೆಗಳನ್ನು ಸಿದ್ಧಪಡಿಸಿ. ಕಣಕ­ದಿಂದಲೂ ಸಮಾನ ಗಾತ್ರದ ಉಂಡೆಗಳನ್ನು ಮಾಡಿ, ತಟ್ಟಿ, ಹೂರಣದ ಉಂಡೆಯನ್ನು ಒಳಗಿಟ್ಟು ಪುನಃ ಉಂಡೆ ಮಾಡಿ. ಒಬ್ಬಟ್ಟು ತಟ್ಟಿ, ತವಾದಲ್ಲಿ ಎರಡೂ ಕಡೆ ಬೇಯಿಸಿ.

Advertisement

ಬಾಳೆಹಣ್ಣಿನ ಹೋಳಿಗೆ


ಬೇಕಾಗುವ ಸಾಮಗ್ರಿ: ಕಣಕಕ್ಕೆ- ಮೈದಾ ಹಿಟ್ಟು- 3 ಕಪ್‌, ನೀರು- 1 ಕಪ್‌, ಅಡುಗೆ ಎಣ್ಣೆ – 1/4 ಕಪ್‌, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಿಶಿನ ಪುಡಿ. ಹೂರಣಕ್ಕೆ- ಬಾಳೆಹಣ್ಣು- 6, ಬೆಲ್ಲ- 1 ಕಪ್‌, ಚಿರೋಟಿ ರವೆ- 2 ಚಮಚ, ತುಪ್ಪ- 4 ಚಮಚ, ಹಾಲು – 1 ಕಪ್‌

ಮಾಡುವ ವಿಧಾನ: ಮೈದಾ ಹಿಟ್ಟನ್ನು ಪಾತ್ರೆಗೆ ಹಾಕಿ, ನೀರು, ಉಪ್ಪು, ಅರಿಶಿನಪುಡಿ ಹಾಕಿ ಚೆನ್ನಾಗಿ ನಾದಿ, ಕಣಕ ತಯಾರಿಸಿ. ಅದನ್ನು ಒಂದು ಗಂಟೆಯ ಕಾಲ ಮುಚ್ಚಿಡಿ. ಬಾಳೆಹಣ್ಣುಗಳನ್ನು ಸಣ್ಣಗೆ ಹೆಚ್ಚಿ, ಬಾಣಲೆಗೆ ಹಾಕಿ, ತುಪ್ಪ ಸೇರಿಸಿ, ಆಗಾಗ ಸೌಟಿನಲ್ಲಿ ಕೈಯಾಡಿಸುತ್ತಾ ಬೇಯಿಸಿ. ಹಣ್ಣುಗಳು ಬೆಂದ ಸುವಾಸನೆ ಬರುವಾಗ ಚಿರೋಟಿ ರವೆ ಸೇರಿಸಿ ಕೆದಕಿ. ಕೊನೆಯದಾಗಿ ಹಾಲು ಸೇರಿಸಿ ಪುನಃ ಕೈಯಾಡಿಸಿ, ಬೆಂಕಿ ಆರಿಸಿ. ಬಾಳೆಹಣ್ಣಿನ ಹೂರಣ ಸಿದ್ಧವಾಗುತ್ತದೆ. ಬಿಸಿ ಆರಿದ ಈ ಮಿಶ್ರಣದಿಂದ ಹೂರಣಕ್ಕಾಗಿ ಉಂಡೆಗಳನ್ನು ಮಾಡಿ. ಕಣಕದಿಂದಲೂ ಸಮಾನ ಗಾತ್ರದ ಉಂಡೆಗಳನ್ನು ಮಾಡಿ, ತಟ್ಟಿ, ಹೂರಣದ ಉಂಡೆಯನ್ನು ಒಳಗಿಟ್ಟು ಪುನಃ ಉಂಡೆ ಮಾಡಿ. ಇದನ್ನು ಎಣ್ಣೆ ಸವರಿದ ಪ್ಲಾಸ್ಟಿಕ್‌ ಶೀಟ್‌ ಮೇಲೆ ಇರಿಸಿ, ಒಬ್ಬಟ್ಟು ತಟ್ಟಿ, ತವಾದಲ್ಲಿ ಎರಡೂ ಕಡೆ ಬೇಯಿಸಿ. ಬಾಳೆಹಣ್ಣಿನ ಹೋಳಿಗೆಯನ್ನು ತುಪ್ಪದೊಂದಿಗೆ ತಿನ್ನಲು ರುಚಿ.

ಡ್ರೈ ಪ್ರೂಟ್ಸ್‌ ಹೋಳಿಗೆ


ಬೇಕಾಗುವ ಸಾಮಗ್ರಿ: ಕಣಕಕ್ಕೆ- ಮೈದಾ ಹಿಟ್ಟು- 3 ಕಪ್‌, ನೀರು- 1 ಕಪ್‌, ಅಡುಗೆ ಎಣ್ಣೆ – 1/4 ಕಪ್‌, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಿಶಿನ ಪುಡಿ. ಹೂರಣಕ್ಕೆ- ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ, ಅಂಜೂರ, ಖರ್ಜೂರ ಇತ್ಯಾದಿ ಒಣಹಣ್ಣುಗಳು- 1 ಕಪ್‌, ಸ್ವಲ್ಪ ಬೆಲ್ಲ (ಬೇಕಿದ್ದರೆ) ಚಿರೋಟಿ ರವೆ- 1 ಚಮಚ, ತುಪ್ಪ- 1 ಚಮಚ.

ಮಾಡುವ ವಿಧಾನ: ಮೈದಾ ಹಿಟ್ಟನ್ನು ಪಾತ್ರೆಗೆ ಹಾಕಿ, ನೀರು, ಉಪ್ಪು, ಅರಶಿನಪುಡಿ ಹಾಕಿ ಚೆನ್ನಾಗಿ ನಾದಿ, ಕಣಕ ತಯಾರಿಸಿ. ಅದನ್ನು ಒಂದು ಗಂಟೆಯ ಕಾಲ ಮುಚ್ಚಿಡಿ. ಎಲ್ಲಾ ಒಣಹಣ್ಣುಗಳನ್ನು ಮಿಕ್ಸಿಗೆ ಹಾಕಿ ಸಣ್ಣರವೆಯ ಹದಕ್ಕೆ ಪುಡಿ ಮಾಡಿಕೊಳ್ಳಿ. ಸಿಹಿಗೆ ಬೇಕಿದ್ದರೆ ಸ್ವಲ್ಪ ಬೆಲ್ಲ ಸೇರಿಸಿ. ಬಾಣಲೆಗೆ ತುಪ್ಪ ಹಾಕಿ, ರುಬ್ಬಿದ ಮಿಶ್ರಣ ಹಾಗೂ ಚಿರೋಟಿ ರವೆ ಸೇರಿಸಿ ಕೈಯಾಡಿಸಿ. ಬಿಸಿ ಆರಿದ ಮೇಲೆ ಈ ಮಿಶ್ರಣದಿಂದ ಹೂರಣಕ್ಕಾಗಿ ಉಂಡೆಗಳನ್ನು ಮಾಡಿ.
ಕಣಕದಿಂದಲೂ ಸಮಾನ ಗಾತ್ರದ ಉಂಡೆಗಳನ್ನು ಮಾಡಿ, ತಟ್ಟಿ, ಹೂರಣದ ಉಂಡೆಯನ್ನು ಒಳಗಿಟ್ಟು ಪುನಃ ಉಂಡೆ ಮಾಡಿ. ಇದನ್ನು ಎಣ್ಣೆ ಸವರಿದ ಪ್ಲಾಸ್ಟಿಕ್‌ ಶೀಟ್‌ ಮೇಲೆ ಇರಿಸಿ, ಒಬ್ಬಟ್ಟು ತಟ್ಟಿ, ತವಾದಲ್ಲಿ ಬೇಯಿಸಿ. ಡ್ರೈ ಫ್ರೂಟ್ಸ್‌ನಿಂದ ಮಾಡುವ ಈ ಹೋಳಿಗೆಯು ಬಹಳ ಪುಷ್ಟಿಕರ.

ಸಿಹಿಗೆಣಸಿನ ಹೋಳಿಗೆ


ಬೇಕಾಗುವ ಸಾಮಗ್ರಿ: ಕಣಕಕ್ಕೆ- ಮೈದಾ- 3 ಕಪ್‌, ನೀರು- 1 ಕಪ್‌, ಎಣ್ಣೆ – 1/4 ಕಪ್‌, ಉಪ್ಪು, ಚಿಟಿಕೆ ಅರಿಶಿನ ಪುಡಿ. ಹೂರಣಕ್ಕೆ- ಬೇಯಿಸಿ ಪುಡಿ ಮಾಡಿದ ಸಿಹಿಗೆಣಸು- 2 ಕಪ್‌, ತೆಂಗಿನತುರಿ- ಅರ್ಧ ಕಪ್‌, ಅಕ್ಕಿ ಹಿಟ್ಟು- 2 ಚಮಚ, ಬೆಲ್ಲ-1 ಕಪ್‌, ತುಪ್ಪ- 4 ಚಮಚ, ಏಲಕ್ಕಿ- 4

ಮಾಡುವ ವಿಧಾನ: ಮೈದಾ ಹಿಟ್ಟನ್ನು ಪಾತ್ರೆಗೆ ಹಾಕಿ, ನೀರು, ಉಪ್ಪು, ಅರಶಿನಪುಡಿ ಹಾಕಿ ಚೆನ್ನಾಗಿ ನಾದಿ, ಕಣಕ ತಯಾರಿಸಿ. ಅದನ್ನು ಒಂದು ಗಂಟೆಯ ಕಾಲ ಮುಚ್ಚಿಡಿ.
ಬೇಯಿಸಿದ ಸಿಹಿಗೆಣಸು, ತೆಂಗಿನ ತುರಿ, ಅಕ್ಕಿ ಹಿಟ್ಟು, ಬೆಲ್ಲ, ತುಪ್ಪ, ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ. ಕೊನೆಯದಾಗಿ ಏಲಕ್ಕಿ ಪುಡಿ ಸೇರಿಸಿ. ಬಿಸಿ ಆರಿದ ಮೇಲೆ ಈ ಮಿಶ್ರಣದಿಂದ ಹೂರಣಕ್ಕಾಗಿ ಉಂಡೆಗಳನ್ನು ಮಾಡಿ. ಕಣಕದಿಂದಲೂ ಸಮಾನ ಗಾತ್ರದ ಉಂಡೆಗಳನ್ನು ಮಾಡಿ, ತಟ್ಟಿ, ಹೂರಣದ ಉಂಡೆಯನ್ನು ಒಳಗಿಟ್ಟು ಪುನಃ ಉಂಡೆ ಮಾಡಿ. ಇದನ್ನು ಎಣ್ಣೆ ಸವರಿದ ಪ್ಲಾಸ್ಟಿಕ್‌ ಶೀಟ್‌ ಮೇಲೆ ಇರಿಸಿ, ಒಬ್ಬಟ್ಟು ತಟ್ಟಿ, ತವಾದಲ್ಲಿ ಎರಡೂ ಕಡೆ ಬೇಯಿಸಿ.

ಕ್ಯಾರೆಟ್‌ ಹೋಳಿಗೆ
ಬೇಕಾಗುವ ಸಾಮಗ್ರಿ: ಕಣಕಕ್ಕೆ- ಮೈದಾ- 3 ಕಪ್‌, ನೀರು- 1 ಕಪ್‌, ಅಡುಗೆ ಎಣ್ಣೆ – 1/4 ಕಪ್‌, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಿಶಿನ ಪುಡಿ. ಹೂರಣಕ್ಕೆ- ಕ್ಯಾರೆಟ್‌ ದೊಡ್ಡದು- 5, ಬೆಲ್ಲ- 1 ಕಪ್‌, ತುಪ್ಪ- 2 ಚಮಚ, ಏಲಕ್ಕಿ- 4.

ಮಾಡುವ ವಿಧಾನ: ಮೈದಾ ಹಿಟ್ಟನ್ನು ಪಾತ್ರೆಗೆ ಹಾಕಿ, ನೀರು, ಉಪ್ಪು, ಅರಶಿನಪುಡಿ ಹಾಕಿ ಚೆನ್ನಾಗಿ ನಾದಿ, ಕಣಕ ತಯಾರಿಸಿ. ಅದನ್ನು ಒಂದು ಗಂಟೆಯ ಕಾಲು ಮುಚ್ಚಿಡಿ. ಕ್ಯಾರೆಟ್‌ ತುರಿದು, ಬಾಣಲೆಯಲ್ಲಿ ಹಾಕಿ, ಬೆಲ್ಲ ಸೇರಿಸಿ, ತುಪ್ಪ ಹಾಕಿ, ಸೀದು ಹೋಗದಂತೆ ಆಗಾಗ ಸೌಟಿನಿಂದ ಕೈಯಾಡಿಸುತ್ತ ಸಣ್ಣ ಉರಿಯಲ್ಲಿ ಬೇಯಿಸಿ. ಮಿಶ್ರಣವು ತಳಬಿಟ್ಟು ಬರುವಾಗ ಕೆಳಗಿಳಿಸಿ. ಏಲಕ್ಕಿಯನ್ನು ಕುಟ್ಟಿ ಪುಡಿಮಾಡಿ ಬೆರೆಸಿ ಹೂರಣ ಸಿದ್ಧಪಡಿಸಿ. ಬಿಸಿ ಆರಿದ ಮೇಲೆ ಲಿಂಬೆ ಗಾತ್ರದ ಉಂಡೆಗಳನ್ನು ತಯಾರಿಸಿ. ಕಣಕವನ್ನೂ ಸಮಾನ ಗಾತ್ರದ ಉಂಡೆ ಮಾಡಿಟ್ಟುಕೊಳ್ಳಿ. ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು, ಕಣಕದ ಉಂಡೆಯನ್ನು ಸ್ವಲ್ಪ ತಟ್ಟಿ, ಅದರ ಒಳಗೆ ಹೂರಣದ ಉಂಡೆಯನ್ನು ಇಟ್ಟು ಸಂಪೂರ್ಣವಾಗಿ ಕಣಕದಿಂದ ಮುಚ್ಚಿ ಉಂಡೆ ಕಟ್ಟಿ. ಇದನ್ನು ಎಣ್ಣೆ ಸವರಿದ ಪ್ಲಾಸ್ಟಿಕ್‌ ಶೀಟ್‌ ಮೇಲೆ ಇರಿಸಿ, ಒಬ್ಬಟ್ಟು ತಟ್ಟಿ ಅಥವಾ ಚಪಾತಿಯಂತೆ ಮೈದಾ/ ಗೋಧಿ ಹಿಟ್ಟಿನಲ್ಲಿ ಮುಳುಗಿಸಿ ಲಟ್ಟಿಸಿ, ತವಾದಲ್ಲಿ ಎರಡೂ ಕಡೆ ಬೇಯಿಸಿ. ಕ್ಯಾರೆಟ್‌ ಹೋಳಿಗೆಯನ್ನು ತುಪ್ಪದೊಂದಿಗೆ ಸವಿಯಲು ಚೆನ್ನಾಗಿರುತ್ತದೆ. ಇದೇ ರೀತಿ ಬೀಟ್‌ರೂಟ್‌ ಹೋಳಿಗೆಯನ್ನೂ ತಯಾರಿಸಬಹುದು, ಬೀಟ್‌ರೂಟ್‌ ಸಹಜವಾಗಿಯೇ ಸಿಹಿಯಾಗಿರುವುದರಿಂದ ಕಡಿಮೆ ಬೆಲ್ಲ ಹಾಕಿದರೆ ಸಾಕು.

— ಹೇಮಮಾಲಾ ಬಿ., ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next