ಬೆಂಗಳೂರು: ಗೌರಿಬಿದನೂರಿನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ತಯಾರಿ ನಡೆಸುತ್ತಿರುವ ಡಾ ಕೆ.ಕೆಂಪರಾಜು ಎಂಬುವರು ತಮ್ಮ ಕ್ಷೇತ್ರದ ಮತದಾರರಿಗೆ ವಿತರಿಸಿಲು ಸಂಗ್ರಹಿಸಿದ್ದ ರೇಷನ್ ಕಿಟ್‌ಗಳನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಮಹಾಲಕ್ಷ್ಮೀ ಲೇಔಟ್‌ನ ಮಾರಪ್ಪನಪಾಳ್ಯ ವಾರ್ಡ್‌ನ ಸಹಾಯಕ ಅಭಿಯತಂರ ಜಿ.ಟಿ.ಧನಂಜಯ ಎಂಬುವರು ನೀಡಿದ ದೂರಿನ ಮೇರೆಗೆ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಕೆಂಪರಾಜು ಮತ್ತು ಆಶಿಕ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ. ಕೆಂಪರಾಜು ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದು, ತಮ್ಮ ಕ್ಷೇತ್ರದ ಮತದಾರರಿಗೆ ಆಮಿಷವೊಡ್ಡಲು ಯಶವಂತಪುರ ಎಪಿಎಂಸಿ ಯಾರ್ಡ್‌ನಲ್ಲಿರುವ ಗೋಡನ್‌ನಲ್ಲಿ ರೇಷನ್ ಕಿಟ್‌ಗಳನ್ನು ಬಿಳಿ ಚೀಲಗಳಿಗೆ ಪ್ಯಾಕ್ ಮಾಡಿ, ಅಕ್ರಮವಾಗಿ ಸಂಗ್ರಹಿಸಿದ್ದರು.
ಈ ಮಾಹಿತಿ ಮೇರೆಗೆ ದೂರುದಾರ ಧನಂಜಯ್ ಹಾಗೂ ಕಂದಾಯ ಪರಿವೀಕ್ಷಕರಾದ ನಿಂಗರಾಜು ಜತೆ ಎಪಿಎಂಸಿ ಯಾರ್ಡ್ ಗೋಡೌನ್ ಮೇಲೆ ಮಾ.16ರ ರಾತ್ರಿ 9 ಗಂಟೆ ಸುಮಾರಿಗೆ ದಾಳಿ ನಡೆಸಿದ್ದರು. ಈ ವೇಳೆ ಗೋಡನ್‌ನಲ್ಲಿದ್ದ ಆಶಿಕ್ ನನ್ನು ವಿಚಾರಣೆ ನಡೆಸಿದಾಗ ಕೆಂಪರಾಜು ಅವರು, ತಮ್ಮ ಕ್ಷೇತ್ರದ ಮತದಾರರಿಗೆ ಯುಗಾದಿ ಹಬ್ಬದ ಪ್ರಯುಕ್ತ ಹಂಚಲು ಸಂಗ್ರಹಿಸಿದ್ದಾರೆ. ಈ ಚೀಲದಲ್ಲಿ ಕೆಂಪರಾಜು ಭಾವಚಿತ್ರ ಹಾಗೂ 2019ರಿಂದ ನಿಮ್ಮ ಸೇವೆಯಲ್ಲಿ ಎಂದು ಪ್ರಿಂಟ್ ಹಾಕಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕೆಂಪರಾಜುಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ಹೇಳಿದರು.
ಲಕ್ಷಾಂತರ ರೂ. ಮೌಲ್ಯದ ರೇಷನ್ ಕಿಟ್ ವಶ: ಕೆಂಪರಾಜು ಭಾವಚಿತ್ರವಿರುವ 50 ಚೀಲ ರೇಷನ್ ಕಿಟ್, 1000 ಖಾಲಿ ಚೀಲಗಳಂತೆ ತುಂಬಿ ಪ್ಯಾಕ್ ಮಾಡಿರುವ 14 ದೊಡ್ಡ ಬಂಡಲ್‌ಗಳು, ಗೋದಿ ಹಿಟ್ಟಿನ 415 ಚೀಲಗಳು, ಮೈದ ಹಿಟ್ಟಿನ 1350 ಚೀಲಗಳು, 1010 ಬಾಕ್ಸ್‌ನಲ್ಲಿರುವ ಬೆಲ್ಲ, ಕಡ್ಲೆ ಹಿಟ್ಟು ತುಂಬಿರುವ 200 ಚೀಲಗಳು, ರವೆ ತುಂಬಿರುವ 700 ಚೀಲಗಳು, 32 ಬಾಕ್ಸ್ ಹಪ್ಪಳ, ಉಪ್ಪು ತುಂಬಿದ್ದ 1950 ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ.