Advertisement

ಬೇವು ಬೆಲ್ಲದ ಯುಗಾದಿ : ಚಾಂದ್ರಮಾನ ಯುಗಾದಿಯ ಆಚರಣೆ ಹೇಗೆ..?

06:29 PM Apr 12, 2021 | Team Udayavani |

ಸಂವತ್ಸರಗಳು ಐದು ಬಗೆಯಾಗಿವೆ. ಅರ್ಥಾತ್ ವರ್ಷದ ಗಣನಾ ವಿಧಾನವೂ ಐದು ಬಗೆಯಾಗಿದೆ. ಸೌರ ಮಾನ, ಚಾಂದ್ರಮಾನ, ಸಾವನಮಾನ, ಬಾರ್ಹ ಸ್ಪತ್ಯ ಮಾನ, ನಾಕ್ಷತ್ರ ಮಾನ. ಆದರೇ, ಸೌರ ಮಾನ ಹಾಗೂ ಚಾಂದ್ರಮಾನ ಪದ್ಧತಿಗಳು ಮಾತ್ರ ಕರ್ನಾಟಕದಲ್ಲಿ ಆಚರಣೆಯಲ್ಲಿವೆ.

Advertisement

ಸೂರ್ಯನ ಮೇಷಾದಿ ಹನ್ನೆರಡು ರಾಶಿಚಕ್ರದಲ್ಲಿ ಸಂಚರಿಸುವ ಕಾಲವನ್ನಾಧರಿಸಿದ ಪದ್ಧತಿ ಸೌರಮಾನವಾಗಿದೆ. ಒಂದು ವರ್ಷಕ್ಕೆ. 364 ¼ ದಿನಗಳು ಬರುತ್ತವೆ. ಇದನ್ನು ಸಂವತ್ಸರ ಎನ್ನುತ್ತಾರೆ.

ಚೈತ್ರಾದಿ ಹನ್ನೆರಡು ಮಾಸಗಳ ವರ್ಷವನ್ನು ಚಾಂದ್ರಮಾನ ಎನ್ನುತ್ತಾರೆ. ವರ್ಷದಲ್ಲಿ 354 ದಿನಗಳು ಬರುತ್ತವೆ. ಮೂರು ವರ್ಷಗಳಿಗೊಮ್ಮೆ ಅಧಿಕ ಮಾಸ ಬಂದು ದಿನಗಳು ಹೊಂದಾಣಿಕೆಯಾಗುತ್ತವೆ. ಇದನ್ನು ಅನುವತ್ಸರ  ಎಂದು ಹೇಳಲಾಗುತ್ತದೆ.

ಓದಿ : ಕುರಾನ್ ನ 26 ಸೂಕ್ತ ರದ್ದುಗೊಳಿಸಬೇಕೆಂಬ ಅರ್ಜಿ ವಜಾಗೊಳಿಸಿ,50 ಸಾವಿರ ದಂಡ ವಿಧಿಸಿದ ಸುಪ್ರೀಂ

ಇಂದಿನ ಸೂರ್ಯೋದಯದಿಂದ ಮರುದಿನದ ಸೂರ್ಯೋದಯದ ಕಾಲವನ್ನನುಸರಿಸಿ ವರ್ಷದಲ್ಲಿ 360 ದಿನಗಳನ್ನು ತಿಳಿಸುವುದು ಸಾವನಮಾನ. ಇದನ್ನು ವತ್ಸರ ಎಂದು ಕರೆಯಲಾಗುತ್ತದೆ.

Advertisement

ಮೇಷಾದಿ ರಾಶಿಗಳಲ್ಲಿ ಯಾವುದಾದರೊಂದು ರಾಶಿಯಲ್ಲಿ ‘ಗುರು’ ಇರುವ ಅವಧಿಯನ್ನು ಗಮನಿಸಲು ಕಾಲಗಣನೆ, ದಿನಗಣನೆ ಮಾಡಿ ವರ್ಷಕ್ಕೆ 360 ರಿಂದ 370 ದಿನಗಳಿರುವ ಮಾನವನ್ನು ಬಾರ್ಹ ಸ್ಪತ್ಯ ಮಾನ ಎಂದು ಹೇಳಲಾಗುತ್ತದೆ. ಇದನ್ನು ಪರಿವತ್ಸರ ಎಂದು ಕರೆಯುತ್ತಾರೆ.

ಚಂದ್ರನು ಅಶ್ವಿನಿ, ಭರಣಿ ಸೇರಿ ಇಪ್ಪತ್ತೇಳು ನಕ್ಷತ್ರಗಳಲ್ಲಿ ಸಂಚರಿಸುವ ಕಾಲವನ್ನು ಗಮನಿಸಿ 324 ದಿನಗಳು ಬರುವ ವರ್ಷವನ್ನು ನಾಕ್ಷತ್ರಮಾನ ಎಂದು ಹೇಳಲಾಗುತ್ತದೆ. ಇದು ಇದಾವತ್ಸರ.

ಚಾಂದ್ರಮಾನ ಯುಗಾದಿ ಎಂದರೇ, ಬ್ರಹ್ಮನು ವಿಷ್ಣು ದೇವರ ಆಜ್ಞೆಯಂತೆ ಬ್ರಹ್ಮಾಂಡದೊಳಗೆ ಸೃಷ್ಟಿಯನ್ನು ಆರಂಭಸಿದ ದಿನವಾಗಿದೆ. ಕೃತ, ತ್ರೇತಾ, ದ್ವಾಪರ, ಕಲಿಯುಗದ ಆದಿ ಅಂದರೆ ಮೊದಲ ದಿನವಲ್ಲ. ಅದು ಬೇರೆ ಇದೆ.

ಚಾಂದ್ರಮಾನ ಯುಗಾದಿ ಆಚರಣೆ :

ಹಿಂದಿನ ದಿನ ರಾತ್ರಿ ದೇವರ ಕೋಣೆಯಲ್ಲಿ ಅಥವಾ ದೇವರ ಎದುರಿನಲ್ಲಿ ಮಂಗಳ ದೃವ್ಯವನ್ನು ತಟ್ಟೆಯಲ್ಲಿ ಇಡುವುದು, ಮಾವಿನ, ಬೇವಿನ ಸೊಪ್ಪು, ಸೌತೆ ಮೊದಲಾದ ಹಸಿರು ತರಕಾರಿಗಳು, ಸುವರ್ಣ ರಜತ ಆಭರಣಗಳು ಕನ್ನಡಿ, ಹಸಿರು ತೋರಣ, ನೂತನ ವಸ್ತ್ರ, ಶಂಖ, ದೀಪ, ಗಂಟೆ, ಧಾನ್ಯಗಳು, ಫಲ, ತಾಂಬೂಲ, ಹಣ್ಣುಗಳು, ಪಂಚಾಂಗ ಇತ್ಯಾದಿ.

ಬೆಳಗ್ಗೆ ಮುಖ ತೊಳೆದು, ದೇವರ ದರ್ಶನ ಮಾಡಿ, ಹೊಸ ಕನ್ನಡಿಯಲ್ಲಿ ಈ ಮೇಲಿನ ಮಂಗಳ ದೃವ್ಯಗಳನ್ನು ದರ್ಶನ ಮಾಡಿದರೆ ವರ್ಷವಿಡಿ ಭಗವಂತ ಇವುಗಳ ಸಮೃದ್ಧಿಯನ್ನು ಅನುಗ್ರಹಿಸುತ್ತಾನಂತೆ. ಮನೆಯ ಯಜಮಾನರು ಸ್ನಾನ ಮಾಡಿ ದೇವರ ವಿಗ್ರಹ ಅಥವಾ ಸಾಲಿಗ್ರಾಮ ಶಿಲೆಗೆ ಎಳ್ಳೆಣ್ಣೆ ಸೀಗೆ ಪುಡಿ ಅಭೀಷೇಕ ಮಾಡಿ ಅದನ್ನು ಪ್ರಸಾದವೆಂದು ಮನೆಯ ಹಿರಿಯವರಿಂದ ಸ್ವಲ್ಪ ತಲೆಗೆ ಹಚ್ಚಿಸಿಕೊಳ್ಳುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ. ಹೆಂಗಸರು ದೇವರಿಗೆ ಆರತಿ ಮಾಡಿ ಮನೆಯ ಗಂಡಸರಿಗೆ, ಮಕ್ಕಳಿಗೆ ಎಲ್ಲರಿಗೂ ಹಣೆಗೆ ಕುಂಕುಮವಿಟ್ಟು..

ಅಶ್ವತ್ಥಾಮಾ ಬಲಿವ್ಯಸೋ ಹನುಮಾಂಶ್ಚ ವಿಭಿಷಣಃ |

ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವನಃ ||

ಚಿರಂಜೀವಿ ಭವ ಎಂದು ಆಶಿಸಿ ಹಿರಿಯರು ಮುತ್ತೈದೆಯರು  ಕಿರಿಯರ ತಲೆಗೆ ಎಣ್ಣೆ ಸ್ಪರ್ಶಿಸಬೇಕು. ಎಲ್ಲರೂ ಅಭ್ಯಂಜನವನ್ನು ಮಾಡಲೇ ಬೇಕು ಎಂದು ಶಾಸ್ತ್ರ ಹೇಳಿದೆ.

ಸ್ನಾನ ಪೂಜೆಯ ನಂತರ ಮನೆಯ ಎಲ್ಲಾ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು. ದೇವರಿಗೆ ಬೇವು, ಹೂ ಮಿಶ್ರಿತ ಬೆಲ್ಲವನ್ನು ನಿವೇದಿಸಿದ ನಂತರ ಹಿರಿಯರಿಂದ ಪಡೆದು ಸ್ವೀಕರಿಸಿದ ನಂತರ. ಈ ಕೆಳಗಿನ ಮಂತ್ರವನ್ನು ಹೇಳಬೇಕು.

ಶತಾಯುರ್ವಜ್ರದೇವಾಯ ಸರ್ವ ಸಂಪತ್ಕರಾಯ ಚ |

ಸರ್ವಾರಿಷ್ಟ ವಿನಾಶಯ ನಿಂಬಕಂದಲ ಭಕ್ಷಣಮ್ ||

ಪುರೋಹಿತರು  ಪಂಚಾಂಗ ಪಠಿಸುವರು. ಪ್ಲವ ಸಂವತ್ಸರದ ನವ ಅಧಿಪತಿಗಳಿಂದುಂಟಾಗುವ ಫಲಗಳನ್ನು ತಿಳಿಸುತ್ತಾರೆ. ಪಂಚಾಂಗ ಪೂಜೆ , ಬ್ರಾಹ್ಮಣ ಪೂಜೆ, ದೇವರಿಗೆ ಕ್ಷೀರ ಪಾಯಸದ ಅರ್ಪಣೆ ಯಥಾನುಶಕ್ತಿ ದಾನ, ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ, ಮನೆಯಲ್ಲಿ ಎಲ್ಲರೊಂದಿಗೆ ಬೆರೆತು ಹೊಸ ವಸ್ತ್ರ, ಆಭರಣಗಳನ್ನು ಧರಿಸಿ ಸುಖ ಸಂತೋಷದಿಂದ ಅತಿಥಿ ಬಂಧುಗಳನ್ನು ಕೂಡಿ ಭೋಜನ ಸ್ವೀಕಾರ ಮಾಡಬೇಕು.

ಹೀಗೆ ಸಂವತ್ಸರ ಫಲಾದಿಗಳನ್ನು ಪಂಚಾಂಗ ಶ್ರವಣದ ಮೂಲಕ ಕೇಳುವವನು ಇಡೀ ವರ್ಷ ದೇವಾನುಗ್ರಹದಿಂದ ಸುಖಿಸುತ್ತಾನೆ.

ಇನ್ನು, ಪಾರಿಜಾತದ ಎಲೆಯ ಚಿಗುರುಗಳನ್ನು ಪುಷ್ಪಗಳೊಂದಿಗೆ ತಂದು ವಿಧಿಬದ್ಧವಾಗಿ ಚೂರ್ಣ ಮಾಡಿ ಮರಿಚಿ(ಮೆಣಸು), ಹಿಂಗು, ಲವಣ(ಉಪ್ಪು) ಅಜಮೋದ, ಶರ್ಕರ, ತಿಂತ್ರಿಣಿ, ಇವುಗಳೊಂದಿಗೆ ಮೇಲನ ಮಾಡಿ ರಸ ತಯಾರಿಸಿ ದೇವರಿಗೆ ತೋರಿಸಿ ಸ್ವಲ್ಪ ಸ್ವಲ್ಪ ಸೇವಿಸುತ್ತಾರೆ. ಕನ್ನಡಿಯಲ್ಲಿ ಬೆಳಗ್ಗೆ ಮುಖ ದರ್ಶನ ಮಾಡಿದಂತೆ ಕರಗಿದ ಘೃತ(ತುಪ್ಪ)ದಲ್ಲಿ ಮುಖ ದರ್ಶನ ಮಾಡಿ, ದಕ್ಷಿಣೆ ಸಮೇತ ದಾನ ಮಾಡುವ ಪದ್ಧತಿ ಕೂಡ ಇದೆ.

ಡಾ. ಎಚ್ ಕೆ. ಸುರೇಶ್ ಆಚಾರ್ಯ

 ಪ್ರಾಂಶುಪಾಲರು,

 ಎಸ್ ಎಮ್ ಎಸ್ ಪಿ ಸಂಸ್ಕೃತ ಕಾಲೇಜು, ಉಡುಪಿ

ಓದಿ : ಪಂಚಸಮರ ಫ‌ಲಿತಾಂಶ: ರಾಜಕೀಯ ಧ್ರುವೀಕರಣ?

Advertisement

Udayavani is now on Telegram. Click here to join our channel and stay updated with the latest news.

Next