Advertisement

Ugadi astrology 20204: ನಿಮ್ಮ ರಾಶಿ ಭವಿಷ್ಯ‌-ಯಾವ ರಾಶಿಗೆ ಕೇಡು, ಯಾವ ರಾಶಿಗೆ ಒಳಿತು!

05:56 PM Apr 06, 2024 | Team Udayavani |

ವಿ.ಸೂ. : ಈ ರಾಶಿಗಳ ಫ‌ಲವನ್ನು ಓದುವಾಗ ಜಾತಕದ ಗ್ರಹಸ್ಥಿತಿ, ದಶಾಭುಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ನವರತ್ನ ಧಾರಣೆ ವಿಷಯದಲ್ಲಿ ಲಗ್ನ ಹಾಗೂ ಇಡೀ ಜಾತಕವನ್ನು ವಿಮರ್ಶಿಸಬೇಕು. ಈ ಲೇಖನದಲ್ಲಿ ಕೇವಲ ರಾಶಿಯನ್ನು ಮಾತ್ರ ಗಣನೆಗೆ ತೆಗೆದುಕೊಂಡಿದೆ.

Advertisement

ಮೇಷ
(ಅಶ್ವಿ‌ನಿ 4, ಭರಣಿ 4, ಕೃತ್ತಿಕಾ 1)
ಉತ್ಕರ್ಷದ, ಉಲ್ಲಾಸದ ಕಾಲ ಸ್ವಾಭಿಮಾನಿಗಳೂ ಸಂಚಾರಶೀಲರೂ ಆದ ನೀವು “ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಅನೇಕ ಕ್ಷೇತ್ರದಲ್ಲಿ ತೊಡಗಿಕೊಳ್ಳುವಿರಿ. ಉಷ್ಣ ಪ್ರಕೃತಿಯ, ಶೀಘ್ರಕೋಪಿಗಳಾದ, ಸತತ ಕ್ರಿಯಾಶೀಲರಾದ ನಿಮಗೆ ಗುರು, ಶನಿಗಳಿಬ್ಬರೂ ಈ ವರ್ಷ ಅನುಕೂಲರು. ರಾಹುವು ಪ್ರತಿಕೂಲನು. ಧರ್ಮ-ಕರ್ಮಾಧಿಪತಿಗಳ ಶುಭಸ್ಥಾನ ಸ್ಥಿತಿಯಿಂದ ನೀವು ಈ ಸಂವತ್ಸರದಲ್ಲಿ ಉತ್ಕರ್ಷವನ್ನು ಕಾಣುವಿರಿ. ಮನೆಯಲ್ಲಿ ಉಪನಯನ, ವಿವಾಹ, ಗೃಹಪ್ರವೇಶದಂಥ ಮಂಗಲಕಾರ್ಯಗಳ
ಸಂಭ್ರಮವಿರುತ್ತದೆ. ಸಂತಾನ ಹಾಗೂ ಉದ್ಯೋಗದ ಪ್ರಾಪ್ತಿಯಿಂದ ಸಂತೋಷವಿರುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಅವಕಾಶಗಳು ದೊರೆಯುತ್ತವೆ. ಬ್ಯಾಂಕಿಂಗ್‌, ಷೇರು ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ನೀವು ರಂಗನಂತಾಗಿ ಶತ್ರುಗಳು ಮಂಗಗಳಂತಾಗುವರು. ಅಕ್ಟೋಬರ್‌ 20ರಿಂದ ಫೆಬ್ರವರಿಯ ತನಕ ಅಂಗಾರಕನಿಂದಾಗಿ ದೈಹಿಕ ಅನಾರೋಗ್ಯ, ಮೂತ್ರಕೋಶದ ತೊಂದರೆ, ಭೂ ವಿವಾದಗಳಂಥ ಅನಿಷ್ಟ ಫ‌ಲಗಳಿವೆ.

ತೀರ್ಥಯಾತ್ರಾಯೋಗವಿದೆ. ಗುಡಿಕೈಗಾರಿಕೆಯಲ್ಲೂ, ಬೃಹತ್‌ ಹಾಗೂ ಸಣ್ಣ ಕೈಗಾರಿಕೆಯಲ್ಲೂ ಯಶಸ್ಸನ್ನು ಕಾಣುವಿರಿ. ಕಾಲುನೋವು, ಅಲರ್ಜಿಯಿಂದ ಕಿರಿಕಿರಿ ಅನುಭವಿಸುವಿರಿ. ಹವಳದ ದಾನ ಹಾಗೂ ಧಾರಣೆಯಿಂದ ಒಳಿತಾಗುವುದು. ದುರಿತ
ನಿವೃತ್ತಿಗೆ ನರಸಿಂಹನ, ಸುಬ್ರಹ್ಮಣ್ಯನ ಆರಾಧನೆ ಮಾಡಿರಿ.

ವೃಷಭ
(ಕೃತ್ತಿಕಾ 3, ರೋಹಿಣಿ 4, ಮೃಗಶಿರಾ 2)
ಪ್ರಯತ್ನಶೀಲತೆಯೇ ಮಂತ್ರವಾಗಿರಲಿ ವೃಷಭದಂತೆ ಕಷ್ಟಸಹಿಷ್ಣುಗಳೂ, ಭೋಜನಪ್ರಿಯರೂ, ಕಲಾರಸಿಕರೂ ಆದ ನಿಮಗೆ
ಜನ್ಮ ಗುರು, ಕರ್ಮದ ಶನಿಗಳು ಪ್ರತಿಕೂಲರಾದರೆ, ಲಾಭದ ರಾಹು ಅನುಕೂಲನು. ಜನ್ಮಗುರುವು “ಸ್ಥಾನಭ್ರಂಶಧನಕ್ಷಯಂ’ ಎನ್ನುವಂತೆ ಸ್ಥಾನಪಲ್ಲಟ, ಧನನಾಶ, ಕಲಹ, ಬುದ್ದಿ ಮೌಡ್ಯಕ್ಕೆ ಕಾರಣನಾದಾನು. ಶ್ರಮಿಕ ವರ್ಗದ ಕಿರುಕುಳದ ನಡುವೆಯೂ
ಚರ್ಮ, ಔಷಧ, ಪ್ಲಾಸ್ಟಿಕ್‌, ವೈದ್ಯಕೀಯ ಉಪಕರಣಗಳು, ಜೈವಿಕ, ರಾಸಾಯನಿಕ ಪದಾರ್ಥಗಳು, ಕಂಪ್ಯೂಟರ್‌, ಅಬಕಾರಿ, ಉದ್ಯಮಗಳಲ್ಲಿ ಪ್ರಗತಿಯಿದೆ.

ಆರೋಗ್ಯದ ಸಮಸ್ಯೆಯೂ ಕಾಡುತ್ತದೆ. ಷೇರು, ಫೈನಾನ್ಸ್‌ ವ್ಯವಹಾರದಲ್ಲಿ ಎಚ್ಚರ ವಹಿಸಿರಿ. “ಮಾತು ಮುತ್ತು, ಮೌನ ಬಂಗಾರ’ ಎಂಬಂತೆ ವ್ಯವಹರಿಸಿರಿ. ಮಕ್ಕಳ ಮದುವೆ, ವಿದ್ಯೆ, ಉದ್ಯೋಗದ ಚಿಂತೆಯ ನಡುವೆ ಮಂಗಳಕಾರ್ಯಗಳ ಬಗ್ಗೆ ಹೆಚ್ಚು ಪ್ರಯತ್ನ ಅಗತ್ಯ. ನ್ಯಾಯಾಧೀಶರು, ವಕೀಲರು, ನೋಟರಿ ವ್ಯವಹಾರ, ಲೋಕೋಪಯೋಗಿ, ನೀರಾವರಿ, ಮತ್ಸ್ಯೋದ್ಯಮದವರಿಗೆ ವ್ಯವಹಾರ ಮಧ್ಯಮ ಪ್ರಮಾಣದಲ್ಲಿರುವುದು. ದೀಪಾವಳಿಯ ಮುಂದಿನ ದಿನಗಳಲ್ಲಿ , ಅಕ್ಟೋಬರ್‌ 29ರ ಅನಂತರ (ವರ್ಷದ ಕೊನೆಯ ತನಕ) ಭಾಗ್ಯ ಕರ್ಮಾಧಿಪತಿಯಾದ ಶನಿಗೆ ಕುಜನ ದೃಷ್ಟಿ ಬರುವ ಪ್ರಯುಕ್ತ ಶ್ರಮಿಕ ವರ್ಗದವರಿಗೂ, ಸೈನ್ಯ, ಪೊಲೀಸ್‌ ಆರಕ್ಷಕ ಪಡೆಗಳ ಸಿಬಂದಿಗಳಿಗೂ, ಕ್ರೀಡಾಳುಗಳಿಗೂ ದೈಹಿಕ ಹಾಗೂ ಮಾನಸಿಕ ತೊಂದರೆಯ ಸಾಧ್ಯತೆಯಿದ್ದೀತು. ಕವಿ-ಕಲಾವಿದರಿಗೆ, ಕಂಪ್ಯೂಟರ್‌ ಜೈವಿಕ ತಂತ್ರಜ್ಞರಿಗೆ (ಐಟಿ-ಬಿಟಿ) ಉದ್ಯೋಗ ಭದ್ರತೆಯ ಚಿಂತೆ. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶಕ್ಕೆ ಕಠಿಣ ಶ್ರಮ ಅಗತ್ಯ. ವಜ್ರದ ದಾನ, ಧಾರಣೆ, ಶುಭಪ್ರದ. ಶ್ರೀ ಕೃಷ್ಣ – ಮುಖ್ಯಪ್ರಾಣರ ಆರಾಧನೆ
ಮಾಡಿರಿ, ಸ್ಕಂದನನ್ನು ಭಜಿಸಿರಿ, ಸೋದೆ, ಮಂತ್ರಾಲಯದ ರಾಯರ ದರ್ಶನದಿಂದ ಶುಭವಾಗುವುದು.

Advertisement

ಮಿಥುನ
(ಮೃಗಶಿರಾ 2, ಆರ್ದಾ 4, ಪುನರ್ವಸು 3)
ಹೆಜ್ಜೆಹೆಜ್ಜೆಗೂ ಎಚ್ಚರದಿಂದಿರಿ ಹಾಸ್ಯಪ್ರಿಯರೂ, ಪರೇಂಗಿತಜ್ಞರೂ, ಕಲೆ- ಸಾಹಿತ್ಯ- ಸಂಗೀತಪ್ರಿಯರೂ ಆದ ನೀವು ಈ ವರ್ಷ ವಿದ್ಯಾ-ಜ್ಞಾನ, ಸುಖಕರನಾದ ಗುರುವಿನ ವ್ಯಯಸ್ಥಿತಿ, ಕರ್ಮದ ರಾಹು, ಸುಖಸ್ಥಾನದ ಶನಿ, ಧರ್ಮಸ್ಥಾನದ ಶನಿಯಿಂದಾಗಿ ಹೆಜ್ಜೆ
ಹೆಜ್ಜೆಗೂ ಎಚ್ಚರ ಅಗತ್ಯ ಎನ್ನುವುದನ್ನು ಮರೆಯಬೇಡಿ. ರೋಗಾಧಿಪತಿಯಾದ ಅಂಗಾರಕನು ವರ್ಷದ ಬಹುಭಾಗ ಜನ್ಮ ಮತ್ತು ಧನಸ್ಥಾನಗಳಲ್ಲಿ ಸಂಚರಿಸುವ ಪ್ರಯುಕ್ತ ರೋಗ- ರುಜಿನಗಳಿಂದ ಪೀಡಿತರಾಗುವಿರಿ. ನವಮದ ಶನಿ “ವೈರಬಂಧನ
ಮಾತ್ಮಧರ್ಮವಿಹತಿಃ’ ಎನ್ನುವಂತೆ ಧರ್ಮಾಚರಣೆಯಲ್ಲಿ ಲೋಪ, ಅನಗತ್ಯ ವೈರ, ಭಯ, ಬಂಧನ, ನಾಸ್ತಿಕ್ಯದ ಭಾವ ಉಂಟುಮಾಡಿಯಾನು. ಸ್ಥಾನಪಲ್ಲಟವಿದ್ದೀತು.

ಉದ್ಯೋಗದಲ್ಲಿ ಭಡ್ತಿ ನಿರೀಕ್ಷಿಸಬೇಡಿ. ಮಕ್ಕಳ ವಿವಾಹ, ಉದ್ಯೋಗದ ಹೊಣೆಗಳತ್ತ ಗಮನ ಹರಿಸುವಿರಿ. ಸಾಮಾಜಿಕ ಹಾಗೂ ರಾಜಕೀಯ ಮುಖಂಡರಿಗೆ ನಂಬಿದವರೇ ದ್ರೋಹ ಎಸಗಬಹುದು. ಕೃಷಿ, ವಾಣಿಜ್ಯ, ಹೈನುಗಾರಿಕೆಯ ವ್ಯವಹಾರದಲ್ಲಿ ನಷ್ಟ ಭೀತಿ, ಮಂಗಲವಸ್ತುಗಳ ಮಾರಾಟಗಾರರಿಗೂ ಈ ವರ್ಷದಲ್ಲಿ ಹೆಚ್ಚಿನ ಲಾಭವಿರದು. ಉದ್ಯೋಗದ ಅಸ್ಥಿರತೆಯ ಚಿಂತೆ
ಕಾಡೀತು. ಹೆಚ್ಚಿದ ವೆಚ್ಚ , ಬಂಧು-ಬಾಂಧವರ ಅನಾರೋಗ್ಯವೂ ನಿಮಗೆ ಯಕ್ಷಪ್ರಶ್ನೆಯಾಗುವುದು. ದೀಪಾವಳಿಯ ಅನಂತರದ ದಿವಸಗಳಲ್ಲಿ ಅಕ್ಟೋಬರ್‌ 31ರ ಅನಂತರ ಯುಗಾದಿಯ ತನಕ ಸಪ್ತಮಾಧಿಪತಿಯಾದ ನೀಚ ಅಂಗಾರಕನು ಅಷ್ಟಮ ನವಮಾಧಿಪತಿಯಾದ ಶನಿಯನ್ನು ನೋಡುವ ಪ್ರಯುಕ್ತ ಪತ್ನಿಯ ಹಾಗೂ ಹಿರಿಯರ ಶುಶ್ರೂಷೆ ಹೊಣೆ ನಿರ್ವಹಿಸುವಿರಿ.
ಮತ್ಸ್ಯೋದ್ಯಮ, ಹೊಟೇಲ್‌ ವ್ಯವಹಾರದಲ್ಲೂ ಕೆಲಸಗಾರರ ಸಹಕಾರ ಅಷ್ಟಕ್ಕಷ್ಟೇ. ಪಚ್ಚೆ ಹರಳಿನ ದಾನ ಯಾ ಧಾರಣೆ ಶುಭಪ್ರದ, ಹೋಮ ನೆರವೇರಿಕೆಯಿಂದ ದುಃಖ ದೂರವಾಗುವುದು. ರುದ್ರಾಭಿಷೇಕ, ಸುಂದರಕಾಂಡ ಪಾರಾಯಣ ಮಾಡಿಸಿರಿ.

ಕರ್ಕಾಟಕ
(ಪುನರ್ವಸು 1, ಪುಷ್ಯಾ 4, ಆಶ್ಲೇಷಾ 4)
ಲಾಭಕಾರಕ ಗುರುವಿನ ಅನುಗ್ರಹ ವೇಗವಾಗಿ ನಡೆಯುವ ಹಾಗೂ ಪ್ರತಿಕ್ರಿಯೆ ನೀಡುವ ಗುಣದವರಾದ ನೀವು ಗಂಭೀರ ಪ್ರಕೃತಿಯವರಾದರೂ ಚಂದ್ರನಂತೆ ವೃದಿಟಛಿ – ಕ್ಷಯಕ್ಕೆ ಪಾತ್ರರಾಗುವಿರಿ. ಬಹುಕಾಲ ಜನ್ಮ ವ್ಯಯಸ್ಥಾನದ ಕುಜ, ಅಷ್ಟಮಗತ
ಶನಿಯಿಂದಾಗಿ “ಅಷ್ಟಮಗತೇ ದೈನ್ಯಂ ವಿಯೋಗಃ ಸ್ವಕ್ಷಃ’ ಎನ್ನುವಂತೆ ಆತ್ಮೀಯರಿಂದ ದೂರವಾಗುವ ಸಾಧ್ಯತೆಯಿದೆ.

ನಿಮ್ಮ ಸಂಗಾತಿಗೆ ವಾತ, ಬೆನ್ನು ನೋವು, ಅಪಘಾತಾದಿಗಳಿಂದ ತೊಂದರೆ ಎದುರಾಗಬಹುದು, ಹಣಕೊಟ್ಟು ದ್ವೇಷವನ್ನು ಕೊಂಡುಕೊಳ್ಳಬೇಕಾಗಿ ಬಂದರೂ ಲಾಭಕಾರಕ ಗುರುವಿನಿಂದಾಗಿ ಒಂದಿಷ್ಟು ಧನಾಗಮವಾಗುವುದು. ಮನೆಯಲ್ಲಿ
ಮಂಗಲವಾದ್ಯಗಳ ಮಂಜುಳ ನಿನಾದಗಳಿಂದ ಮುದಗೊಳ್ಳುವಿರಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಉತ್ತಮ ಅವಕಾಶವನ್ನು ಪಡೆಯುವರು. ವಿದೇಶ ಪ್ರಯಾಣ ಯೋಗವಿದೆ. ಪುರೋಹಿತರು, ನ್ಯಾಯವಾದಿಗಳು, ಕವಿ, ಕಲಾವಿದರಿಗೆ ಗೌರವಾದರಗಳು ಪ್ರಾಪ್ತಿಯಾಗುವುವು. ವಿದೇಶ ಮೂಲದ ಧನಾಗಮವಿದೆ. ಕಂಪ್ಯೂಟರ್‌, ಎಲೆಕ್ಟ್ರಾನಿಕ್‌ ವಸ್ತುಗಳು, ಅನಿಲ, ಬಾಹ್ಯಾಕಾಶ
ಕ್ಷೇತ್ರಗಳಲ್ಲಿ ವಿಪುಲಾವಕಾಶವಿದೆ. ಹೀಗೆ ಶುಭಾಶುಭ ಫ‌ಲಗಳ ಸಮ್ಮಿಶ್ರ ಜೀವನ ನಿಮ್ಮದಾಗುವುದು. ಜನವರಿಯ ಅನಂತರ ಎಪ್ರಿಲ್‌ 14ರ ತನಕ ಮದುವೆ, ಮುಂಜಿ, ಸೀಮಂತೋನ್ನಯನ, ಗೃಹಪ್ರವೇಶದಂಥ ಸತ್ಕಾರ್ಯಗಳು ಘಟಿಸುತ್ತವೆ. ಷೇರು ವ್ಯವಹಾರ ಮಧ್ಯಮ ಮಟ್ಟದಲ್ಲಿರುವುದು. ತೀರ್ಥಯಾತ್ರಾ ಯೋಗವಿದೆ. ಮುತ್ತಿನ ದಾನ ಯಾ ಧಾರಣೆ ಶುಭಪ್ರದ. ಅರಿಷ್ಟ ಪರಿಹಾರಕ್ಕಾಗಿ ವಿಷ್ಣುಸಹಸ್ರನಾಮ, ರುದ್ರ ಪಾರಾಯಣ ಮಾಡಿರಿ. ತಿರುಪತಿ ದರ್ಶನ ಮಾಡಿರಿ.

ಸಿಂಹ
(ಮಖಾ 4, ಹುಬ್ಬಾ 4, ಉತ್ತರಾ 1)
ಸ್ಥಳ ಖರೀದಿ, ಗೃಹ ನಿರ್ಮಾಣ ಯೋಗ ಹುಟ್ಟು ಹೋರಾಟಗಾರರೂ ಪ್ರಕೃತಿಪ್ರಿಯರೂ ಸ್ವಲ್ಪ ಹೆಚ್ಚೇ ಎನ್ನಬಹುದಾದ ಆತ್ಮಾಭಿಮಾನವುಳ್ಳ ಗಂಭೀರ ಪ್ರವೃತ್ತಿಯ ಧೈರ್ಯಶಾಲಿಗಳೂ ಆದ ನಿಮಗೆ ಈ ವರ್ಷ ಸಪ್ತಮದ ಶನಿ, ಅಷ್ಟಮ ರಾಹು, ದಶಮದ ಶನಿಯಿಂದಾಗಿ ಪತ್ನಿಯ ಹಾಗೂ ನಿಮ್ಮ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕಾಗುವುದು. “ದೂರಾದ್ಘಾಟನಂ’
ಎಂಬಂತೆ ದೂರ ದೇಶದ ಸಂಚಾರದಲ್ಲಿಯೂ ಕ್ಲೇಶಾನುಭವವಿದೆ.

ಕಣ್ಣುನೋವು, ಚರ್ಮವ್ಯಾಧಿ, ಉಬ್ಬಸ, “ದಶಮಸ್ಥಿತೇ ಚ ಧಿಷಣೇ ಸ್ಥಾನಾರ್ಥನಾಶಾಧಿಕಂ…’ ಎನ್ನುವಂತೆ ಉದ್ಯೋಗದಲ್ಲಿ ಸವಾಲುಗಳು, ವಿವಾದಗಳಿದ್ದರೂ ಸ್ಥಳ ಖರೀದಿ, ಗೃಹ ನಿರ್ಮಾಣಯೋಗವಿದೆ. ದೇವಸ್ಥಾನ, ಮಠಗಳ ಜೀರ್ಣೋದಾಟಛಿರ ಪ್ರಕ್ರಿಯೆ ಆರಂಭವಾಗಬಹುದು, ಕೃಷಿ, ತೋಟಗಾರಿಕೆ, ವಾಣಿಜ್ಯ ಬೆಳೆಗಾರರಿಗೆ ಲಾಭ ಕಡಿಮೆ. ರಫ್ತು ಉದ್ಯಮ, ಫೈನಾನ್ಸ್‌ , ಅಬಕಾರಿ ಮತ್ತು ಲೋಕೋಪಯೋಗಿ ಇಲಾಖೆಗಳಲ್ಲಿ ಸಂತೃಪ್ತಿಯ ವಾತಾವರಣವಿರದು. ಆರ್ಥಿಕ ಮುಗ್ಗಟ್ಟಿನ ಜೊತೆಗೆ ಆತ್ಮೀಯರ ಮುನಿಸು, ಕೈಕೆಳಗಿನ ಅಧಿಕಾರಿಗಳ ಅಸಹಕಾರದಿಂದ ಬೇಸರಗೊಳ್ಳುವ ಸಾಧ್ಯತೆಯಿದ್ದೀತು. ಭೂ ಕಲಹ, ಗೃಹಿಣಿಯ ಅನಾರೋಗ್ಯ, ಸಹೋದರರಲ್ಲಿ ವಿರಸ/ ಚಿಂತೆಗೆ ಕಾರಣವಾದರೂ ತೀರ್ಥಯಾತ್ರಾ ಯೋಗವಿದೆ. ಮಾಣಿಕ್ಯದ ದಾನ ಯಾ ಧಾರಣೆಯಿಂದ ನೆಮ್ಮದಿ. ಮನೆಯಲ್ಲಿ ನಿತ್ಯ ಭಜನೆ, ಶುಭಪ್ರದ. ಅರಿಷ್ಟ ಪರಿಹಾರಕ್ಕಾಗಿ ಸುಬ್ರಹ್ಮಣ್ಯನನ್ನು ಆರಾಧಿಸಿ.
ಮನ್ಯುಸೂಕ್ತ ಪಾರಾಯಣ ಮಾಡಿಸಿರಿ.

ಕನ್ಯಾ
(ಉತ್ತರಾ 3, ಹಸ್ತಾ 4, ಚಿತ್ರಾ 2)
ಉತ್ತಮ ಆದಾಯ, ಉತ್ತಮ ಅವಕಾಶಗಳು ಮೇಧಾವಿಗಳೂ, ಧಾರ್ಮಿಕರೂ ಆದ ನಿಮ್ಮ ಸುಖ, ಸಪ್ತಮಾಧಿಪತಿಯ ಭಾಗ್ಯಸ್ಥಿತಿ ಹಾಗೂ ಶತ್ರುಸ್ಥಾನದ ಶನಿಯಿಂದಾಗಿ, ಭಾಗ್ಯರವಿ ಉದಯಾಚಲವನ್ನೇರಿದ್ದಾನೆ ಎಂದರೆ ತಪ್ಪಾಗದು. ಸಿOಹ ಸಹಜವಾದ
ನಾಚಿಕೆ ಹಾಗೂ ಲಾವಣ್ಯದಿಂದ ಕೂಡಿದ ಕಲಾಸಕ್ತರೂ ವಿದ್ಯಾವಂತರೂ ಆದ ನೀವು ಮದುವೆ, ಮುಂಜಿ, ಗೃಹಪ್ರವೇಶ, ಸೀಮಂತೋನ್ನಯನ ಮೊದಲಾದ ಮಂಗಲಕಾರ್ಯಗಳಿಂದ ಮುದಗೊಳ್ಳುವಿರಿ. ಪಾಳುಬಿದ್ದ ಭೂಮಿಗೂ “ಈಟಿಗೆ ಕೋಟಿ ಬೆಲೆ’ ಎನ್ನುವಂತಾಗುವುದು. ಸ್ಥಳ, ವಾಹನ, ಆಭರಣ, ವಸ್ತ್ರಾಲಂಕಾರ ವಸ್ತುಗಳ ಖರೀದಿಯ ಯೋಗವಿದೆ.

ಮಾತೃಮೂಲದಿಂದ ಧನಾಗಮವಾಗುವುದು. ರಾಜಕೀಯ ಕ್ಷೇತ್ರದಲ್ಲಿ ಶತ್ರುಗಳು ಹಿಮ್ಮೆಟ್ಟುವರು . ಫ‌ಲ, ಪುಷ್ಪ , ತರಕಾರಿ, ಕೃಷಿ, ಜೇನು ಸಾಕಣೆ, ಹೈನುಗಾರಿಕೆಯಲ್ಲೂ ಅಭಿವೃದ್ದಿಯಿದೆ. ಅಲರ್ಜಿ, ಸಂಧಿವಾತ, ತಲೆನೋವು ಕಾಡಬಹುದು. ಉದ್ಯೋಗಲಾಭ, ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸದ ಅವಕಾಶ ಪ್ರಾಪ್ತಿಯಾಗಲಿದೆ. ಬಹುಸಮಯದಿಂದ ಕಾಡುವ ಕೆಲವು ಸಮಸ್ಯೆಗಳು ಪರಿಹಾರವಾಗುವುವು. ಕೋರ್ಟು, ಕಚೇರಿಯಲ್ಲಿ ಜಯವಾಗುವುದು. ರಾಜಕೀಯ, ಧಾರ್ಮಿಕ, ಸಾಮಾಜಿಕ, ಮುಖಂಡರಿಗೆ ಸ್ಥಾನ-ಮಾನದ ಪ್ರಾಪ್ತಿಯಿದೆ. ಕ್ರೀಡಾಳುಗಳಿಗೂ, ಕಲಾವಿದರಿಗೂ ಅವಕಾಶಗಳು ದೊರೆಯುವುದಲ್ಲದೆ ಆದಾಯವೂ ಉತ್ತಮವಾಗಿರುವುದು. ಜನವರಿ 14ರ ಮಕರ ಸಂಕ್ರಾಂತಿಯ ಅನಂತರ ವರ್ಷದ ಕೊನೆಯ ತನಕ ಮನೆಯಲ್ಲಿ ಮಂಗಲ ಕಾರ್ಯಗಳು ಘಟಿಸುತ್ತವೆ. ಸ್ವರ್ಣ, ರತ್ನ , ಜವುಳಿ, ಫ‌ಲ- ಪುಷ್ಪಗಳ, ಮಂಗಳ ಪದಾರ್ಥಗಳ, ಕಬ್ಬಿಣ ಇತ್ಯಾದಿಗಳ ಮಾರಾಟಗಾರರಿಗೆ ಲಾಭವಿದೆ. ಮದುವೆಗೆ ವಿಘ್ನವೊಡ್ಡುವವರ ಬಗ್ಗೆ ಎಚ್ಚರ. ಅರಿಷ್ಟ ಪರಿಹಾರಕ್ಕಾಗಿ ಕೃಷ್ಣನನ್ನು ಸ್ತುತಿಸಿ. ನಾಗಾರಾಧನೆ ಮಾಡಿರಿ.

ತುಲಾ
(ಚಿತ್ರಾ 2, ಸ್ವಾತಿ 4, ವಿಶಾಖಾ 3)
ಶನಿ, ಗುರುಗಳ ಪರೀಕ್ಷೆ – ನೆಮ್ಮದಿಯ ನಿರೀಕ್ಷೆ ನಿಮ್ಮದು ಸತ್ಯಧರ್ಮರಾಶಿಯೆಂದು ಪ್ರಸಿದಟಛಿ. ಆದರೆ, ನಿಮ್ಮನ್ನು ಈ ವರ್ಷ ಪಂಚಮದ ಶನಿ, ಅಷ್ಟಮದ ಗುರುಗಳು ಪರೀಕ್ಷೆಗೆ ಒಡ್ಡಲಿದ್ದಾರೆ. ಪ್ರತಿಯೊಂದನ್ನೂ ತುಲನೆ ಮಾಡುವ (ವಿಮರ್ಶಿಸುವ) ಧಾರ್ಮಿಕ ಶ್ರದ್ದೆಯುಳ್ಳ ನಿಮ್ಮದು ನ್ಯಾಯವಾದ ಮಾರ್ಗ. ಒಂದು ವಿವಾದದಿಂದ ಹೊರಬರುವಾಗಲೇ ಮತ್ತೂಂದು ವಿವಾದ ಆರಂಭವಾಗಿ ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವವಾಗುವುದು. ಮಕ್ಕಳ ವಿದ್ಯೆ, ವಿವಾಹ, ಉದ್ಯೋಗದ ಚಿಂತೆ, ಗೋಮುಖವ್ಯಾಘ್ರರ ವಂಚನೆಯ ಅನುಭವವಾದೀತು. ಹಣಕಾಸು ವ್ಯವಹಾರದಲ್ಲಿ ತೀವ್ರ ಎಚ್ಚರವಿರಲಿ. ಗುರು-ಹಿರಿಯರ ಮನಸ್ತಾಪಕ್ಕೆ ಅವಕಾಶ ಕೊಡಬೇಡಿ. ಆರೋಗ್ಯ ಕಾಪಾಡಿಕೊಳ್ಳಿ . ಇಷ್ಟಸ್ಥಾನದ ರಾಹುವಿನಿಂದ ರಾಸಾಯನಿಕ, ಚರ್ಮ, ಗ್ಯಾಸ್‌, ಪ್ಲಾಸ್ಟಿಕ್‌, ಔಷಧದ ಉದ್ಯಮದಲ್ಲಿ ತಕ್ಕಮಟ್ಟಿನ ಲಾಭವಿದೆ. ಅನ್ಯಧರ್ಮೀಯರ ಸಹಕಾರ ದೊರೆಯಬಹುದು. ರಕ್ತದೊತ್ತಡ,
ಉದರವ್ಯಾಧಿ, ಮಧುಮೇಹದ ಸಮಸ್ಯೆಗಳು ಕಾಡಬಹುದು. ಉದ್ಯೋಗದಲ್ಲಿ ಸ್ಥಾನಪಲ್ಲಟ, ಹಿರಿಯ ಅಧಿಕಾರಿಗಳೊಡನೆ ವ್ಯವಹರಿಸುವಾಗ ಮನಸ್ಸನ್ನು ಹಾಗೂ ಮಾತನ್ನು ನಿಗ್ರಹಿಸಿರಿ. ಆನುವಂಶಿಕವಾದ ಕಾಯಿಲೆ, ಬಂಧು-ಮಿತ್ರರ ಕಲಹ, ಪ್ರವಾಸದಲ್ಲಿ ಪ್ರಯಾಸದಿಂದ ಬಳಲುವಿರಿ.

ಪರಿಹಾರಕ್ಕಾಗಿ ತುಲಸಿ ಹಾಗೂ ಅಶ್ವತ್ಥ ಪೂಜೆ ಮಾಡಿಸಿರಿ. ವಜ್ರದ ದಾನ ಹಾಗೂ ಧಾರಣೆಯಿಂದ ಶುಭ. ತಿರುಪತಿಯ ಯಾತ್ರೆ, ಮುಖ್ಯಪ್ರಾಣ ಹಾಗೂ ರುದ್ರದೇವರ ಸೇವೆಯಿಂದ ಅರಿಷ್ಟ ನಿವೃತ್ತಿ, ಗುರುಸೇವೆಯಿಂದ ನೆಮ್ಮದಿ.

ವೃಶ್ಚಿಕಾ
(ವಿಶಾಖಾ 1, ಅನುರಾಧಾ 4, ಜ್ಯೇಷ್ಠ 4)
ಮಂಗಲಕಾರ್ಯಗಳ ಸಂಭ್ರಮ ಈ ರಾಶಿಸಂಜಾತರು ಇನ್ನೊಬ್ಬರ ಗುಟ್ಟನ್ನು ಬಿಡಿಸುವವರೇ ಹೊರತು, ತಮ್ಮ ಗುಟ್ಟನ್ನು ಬಿಡಲೊಲ್ಲರು. ಚೇಳಿನಂತೆ ಗುಪ್ತವಾಗಿ ಕಾರ್ಯವೆಸಗುವ ನಿಮಗೆ ರಹಸ್ಯ ವಿದ್ಯೆಗಳಲ್ಲಿ ಅತ್ಯಾಸಕ್ತಿ. ಪತ್ತೇದಾರಿ, ಮಂತ್ರವಾದ, ಗುಪ್ತಚರ ಇಲಾಖೆಗಳಲ್ಲಿ ಹಾಗೂ ರಹಸ್ಯ ಮಾಹಿತಿ ನೀಡುವ ಸ್ಥಳಗಳಲ್ಲಿ ನೀವು ಯಶಸ್ವಿಯಾಗುವಿರಿ. ಪಂಚಮಾಧಿಪತಿಯಾದ ಗುರುವಿನ ಸಪ್ತಮಸ್ಥಿತಿ ಶುಭಫ‌ಲವನ್ನು ನೀಡಿದರೂ ಬಂಧುಸ್ಥಾನದ ಶನಿ, ಪಂಚಮದ ರಾಹು ಮನೋವ್ಯಥೆಯ
ಸಂಕೇತವಾಗುವರು. ವರ್ಷದಲ್ಲಿ ಬಹುಕಾಲ ಅಷ್ಟಮ, ನವಮದ ಅಂಗಾರಕನ ಸಂಚಾರದಿಂದಾಗಿ ಕೆಲವು ತಪ್ಪು ಹೆಜ್ಜೆಯಿಂದ ಅವಕಾಶವನ್ನು ಕಳೆದುಕೊಳ್ಳುವಿರಿ, ಶ್ರಮವರಿಯದೇ ದುಡಿಯುವುದನ್ನು ಕಡಿಮೆ ಮಾಡಿರಿ. ಸ್ವರ್ಣ ಪೀತಾಂಬರ, ತಾಮ್ರದ ಉದ್ಯಮ, ಮಧ್ಯಮ ಮಟ್ಟದಲ್ಲಿರುವುದು. ಮನೆಯಲ್ಲಿ ಮಂಗಲಕಾರ್ಯಗಳು ಜರಗಲಿವೆ.

ಬಂಧು-ಮಿತ್ರರ ಬಗ್ಗೆ ಎಚ್ಚರವಿರಲಿ. ವಿದೇಶಯಾನ, ತೀರ್ಥಯಾತ್ರಾ ಯೋಗವಿದೆ. ಹಣಕಾಸಿನ ವ್ಯವಹಾರ ತೃಪ್ತಿದಾಯಕವಾದರೂ ಎಚ್ಚರ ಅಗತ್ಯ. ಶೈಕ್ಷಣಿಕ, ಧಾರ್ಮಿಕ ಸಂಸ್ಥೆಗಳಿಗೆ ತತ್ಸಂಬಂಧ ವ್ಯಕ್ತಿಗಳಿಗೆ ಶುಭವಿದೆ. ಪತನಾಪಘಾತಗಳ ಬಗ್ಗೆ ಎಚ್ಚರ ಅಗತ್ಯ. ರಕ್ತದೊತ್ತಡ, ರಕ್ತಹೀನತೆ, ತಲೆನೋವು, ಪಿತ್ತಸಂಬಂಧಿ ರೋಗಗಳು
ಕಂಡುಬರಬಹುದು. ಸ್ಥಳ ಸಂಬಂಧಿ ವಿವಾದ ಕಾಡಬಹುದು. ಜನವರಿಯ ಅನಂತರ ವರ್ಷದ ಕೊನೆಯ ತನಕ (ಯುಗಾದಿಯ ತನಕ – ಎಪ್ರಿಲ್‌ 14)ಜನ್ಮರಾಶ್ಯಾಧಿಪತಿಯ ಅಷ್ಟಮಸ್ಥಾನ ಸ್ಥಿತಿಯಿಂದಾಗಿ ಸ್ವಕೃತ ಅಪರಾಧದ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶ. ಅವಿವಾಹಿತರಿಗೆ ವಿವಾಹ, ವಿವಾಹಿತರಿಗೆ ಸಂತಾನ ಪ್ರಾಪ್ತಿ, ಅಬಕಾರಿ ಕಾಡುತ್ಪತ್ತಿ, ವಾಹನ, ಐಟಿ-ಬಿಟಿ, ರಕ್ಷಣಾ ಸಾಮಗ್ರಿ ಕಟ್ಟಡ ನಿರ್ಮಾಣ ಕ್ಷೇತ್ರಗಳಲ್ಲಿ ಯಶಸ್ಸಿದೆ. ಹವಳದ ದಾನ ಹಾಗೂ ಧಾರಣೆಯಿಂದ ಶುಭ. ಅರಿಷ್ಟ ಪರಿಹಾರಕ್ಕಾಗಿ ಸುಬ್ರಹ್ಮಣ್ಯನನ್ನು ಆರಾಧಿಸಿರಿ. ಶ್ರೀನಿವಾಸನನ್ನು , ಮುಖ್ಯಪ್ರಾಣನನ್ನು ಸ್ತುತಿಸಿರಿ.

ಧನು
(ಮೂಲಾ 4, ಪೂರ್ವಾಷಾಢ 4, ಉತ್ತರಾಷಾಢ 1)
ವಿಕ್ರಮ ಸ್ಥಾನದ ಶನಿಯ ಶ್ರೀರಕ್ಷೆ ವಾಗ್ಮಿಗಳೂ, ಸಂಪ್ರದಾಯನಿಷ್ಠರೂ, ಮೇಧಾವಿಗಳೂ, ತ್ಯಾಗಿಗಳೂ ಆದ ನಿಮಗೆ ಈ ಸಂವತ್ಸರದಲ್ಲಿ ಜನ್ಮ, ಸುಖಾಧಿಪತಿಯ ರೋಗಸ್ಥಾನ ಸ್ಥಿತಿ, ಸುಖಸ್ಥಾನದ ರಾಹುವಿನಿಂದಾಗಿ ದೈಹಿಕ ಹಾಗೂ ಮಾನಸಿಕ ವ್ಯಥೆಯನ್ನು ಅನುಭವಿಸುವಿರಾದರೂ ವಿಕ್ರಮ ಸ್ಥಾನದ ಶನಿಯೇ ಸದ್ಯ ನಿಮ್ಮ ರಕ್ಷಕನು. ಕಫ‌, ವಾತ,
ಗುರುಹಿರಿಯರ ವಿರೋಧ, ಅನಗತ್ಯ ವಿವಾದಗಳು ನಿಮ್ಮಲ್ಲಿ ವೈರಾಗ್ಯಭಾವ ಮೂಡಿಸಬಹುದು.

ಮಂಗಲಕಾರ್ಯಗಳಿಗೆ ವಿಘ್ನ ಸಂಭವಿಸುವುದು. ಮಕ್ಕಳ ವಿದ್ಯಾಭ್ಯಾಸ, ಮದುವೆ, ಉದ್ಯೋಗಗಳ ಸಮಸ್ಯೆಗಳ ನಿವಾರಣೆಗಾಗಿ ಪ್ರಯತ್ನಿಸಬೇಕಾಗುತ್ತದೆ. ಆರ್ಥಿಕವಾಗಿ ಋಣಬಾಧೆ ಹೆಚ್ಚುವುದು. ವಾಹನ, ನೀರು, ವಿಷಜಂತುಗಳ ಬಗ್ಗೆ ಎಚ್ಚರವಿರಲಿ. ಮಧುಮೇಹ, ಉಬ್ಬಸ, ಕರುಳುಸಂಬಂಧಿ ರೋಗಿಗಳು ಜಾಗ್ರತೆಯಿಂದಿರಿ. ಮಂಗಲದ್ರವ್ಯಗಳ ಮಾರಾಟಗಾರರಿಗೆ ರತ್ನ, ರೇಷ್ಮೆಗಳ ವ್ಯಾಪಾರಿಗಳಿಗೆ, ಕಲಾವಿದ, ಲೇಖಕ, ಅಧ್ಯಾಪಕ, ನ್ಯಾಯವಾದಿಗಳಿಗೂ ಈ ಸಂವತ್ಸರದಲ್ಲಿ ಕಿರಿಕಿರಿಯಿದೆ. ವಿದ್ಯಾರ್ಥಿಗಳಿಗೆ ಬಹು ಪರಿಶ್ರಮವೇ ಉತ್ತಮ ಫ‌ಲಿತಾಂಶಕ್ಕೆ ಮಾರ್ಗ. ಉದ್ಯೋಗದಲ್ಲಿ ಬಹು ನಿರೀಕ್ಷೆಯ ಮುಂಭಡ್ತಿಗೆ ಅಡೆ-ತಡೆಯಿದೆ. ನ್ಯಾಯಾಲಯದಲ್ಲಿ ಜಾಗ ಹಾಗೂ ಇನ್ನಿತರ ಕಾರಣಗಳ ವ್ಯಾಜ್ಯ ಸೋಲಿಗೆ ಕಾರಣವಾದೀತು. ಸ್ನೇಹಿತರು ವಿರೋಧಿಗಳಾಗುವರು. ಷೇರು ವ್ಯವಹಾರದಲ್ಲಿ ಬಹು ಎಚ್ಚರ ಅಗತ್ಯ. ಶನಿಯ ಅನುಗ್ರಹ ನಿಮ್ಮನ್ನು ಸ್ವಲ್ಪ ಮಟ್ಟಿಗೆ ರಕ್ಷಿಸುತ್ತದೆ. ಪುಷ್ಯರಾಗದ ದಾನ ಹಾಗೂ ಧಾರಣೆಯಿಂದ ಕ್ಷೇಮ. ದುರಿತ ನಿವೃತ್ತಿಗಾಗಿ ಶ್ರೀಹರಿಯನ್ನು ಆರಾಧಿಸಿ, ಗುರು ಸೇವೆ ಮಾಡಿರಿ.

ಮಕರ
(ಉತ್ತರಾಷಾಢ 3, ಶ್ರವಣ 4, ಧನಿಷ್ಠಾ 2)
ಶಿಕ್ಷಕ – ಕವಿ – ಕಲಾವಿದರಿಗೆ ವಸಂತ ಕಾಲ ಜಿಂಕೆಯಂತೆ ಚುರುಕಾದ, ಮೊಸಳೆಯಂತೆ ಬಲಿಷ್ಠರಾದ ನಿಮಗೆ ಈ ವರ್ಷ ಏಳೂವರೆ ಶನಿಯ ಕಾಟವಿದ್ದರೂ ಗುರು, ರಾಹುಗಳು ಅನುಕೂಲರಾಗಿರುವರು. ಶನಿಯೂ ಆರ್ಥಿಕ ಬಿಕ್ಕಟ್ಟಿಗೆ ಸ್ವಲ್ಪಮಟ್ಟಿಗೆ ಕಾರಣನಾದರೂ ದೇವಾನುಗ್ರಹದಿಂದ ಸಮಸ್ಯೆಗಳು ಪರಿಹಾರ ಕಾಣುವುವು. “ಹೇಮರತ್ನತರುಣೀ ವಾಸೋ ಗೃಹಾಸ್ತಿಃ ಸುತೇ ಜೀವೇ’ ಎನ್ನುವಂತೆ ಆಭರಣ, ವಾಹನ, ಭೂಮಿಯ ಲಾಭದ ಜೊತೆಗೆ ಕಂಕಣಭಾಗ್ಯ ಕೂಡಿಬರುವುದು. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗೌರವಾದರಗಳು ಪ್ರಾಪ್ತಿಯಾಗುವುವು. ಛಾಯಾಗ್ರಾಹಕರು, ಎಕ್ಸ್‌ರೇ, ರಾತ್ರಿ ಕಾಲದ ಉದ್ಯೋಗಿಗಳು, ಕಂಪ್ಯೂಟರ್‌, ಎಲೆಕ್ಟ್ರಾನಿಕ್‌ ಕ್ಷೇತ್ರದವರಿಗೂ ಪ್ರಗತಿಯಿದೆ. ಔಷಧೋಪಕರಣ, ಚರ್ಮ, ಗ್ಯಾಸ್‌, ರಾಸಾಯನಿಕ, ಅಲಂಕಾರ ಸಾಮಗ್ರಿಗಳ ಮಾರಾಟಗಾರರಿಗೂ ಲಾಭವಿದೆ. ಅಧ್ಯಾಪಕ, ಅರ್ಚಕ, ಜ್ಯೋತಿಷಿ, ಕವಿ, ಕಲಾವಿದರಿಗೂ ಇದು ವಸಂತಕಾಲ. ಕೃಷಿ, ವಾಣಿಜ್ಯ, ಫ‌ಲ- ಪುಷ್ಪ ಮಾರಾಟ, ಮೀನುಗಾರಿಕೆ, ಹೈನೋದ್ಯಮದಲ್ಲೂ ಪ್ರಗತಿಯಿದೆ. ಕುಜ ದೃಷ್ಟಿ ಶನಿಯಿಂದ ದೈಹಿಕ ಬಾಧೆ, ವಾಕ್‌ಕಲಹದಿಂದ ವ್ಯಥಿತರಾಗುವಿರಿ, ಮಕ್ಕಳ ವಿದ್ಯಾಭ್ಯಾಸ ಉತ್ತಮ ಮಟ್ಟದಲ್ಲಿದ್ದು ಯೋಗ್ಯ ಉದ್ಯೋಗದ ಪ್ರಾಪ್ತಿಯಿದೆ. ಅರ್ಚಕ, ಪುರೋಹಿತ, ನ್ಯಾಯವಾದಿಗಳು, ಫ‌ಲ-ಪುಷ್ಪಗಳ ವ್ಯಾಪಾರಿಗಳು, ವಾಹನ ಚಾಲಕರು, ಹೊಟೇಲ್‌ ಮಾಲೀಕರು, ಮದ್ಯ-ಮಾಂಸ ವಿಕ್ರಯಿಗಳು, ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟವರಿಗೂ, ವಿಮಾನಯಾನ ಹಾಗೂ ಬಾಹ್ಯಾಕಾಶದ ಕ್ಷೇತ್ರದವರಿಗೂ ಲಾಭವಿದೆ. ನೀಲ ಹರಳಿನ ದಾನ ಹಾಗೂ ಧಾರಣೆಯಿಂದ ಶುಭ. ಪರಿಹಾರಕ್ಕಾಗಿ ಹರಿ, ಹರರ ಸೇವೆ, ಮುಖ್ಯಪ್ರಾಣನ ಆರಾಧನೆ ನಡೆಸಿರಿ. ಶನಿಸ್ತೋತ್ರ ಪಠಿಸಿರಿ.

ಕುಂಭ
(ಧನಿಷ್ಠಾ 2, ಶತಭಿಷಾ 4, ಪೂರ್ವಾಭಾದ್ರಾ 3)
ಗೃಹ ನಿರ್ಮಾಣ, ವಾಹನ ಖರೀದಿ ಯೋಗ ಜನ್ಮ ಶನಿ, ಧನಸ್ಥಾನದ ರಾಹು, ಸುಖಸ್ಥಾನದ ಗುರುವಿನಿಂದ ಕಳೆದ ವರ್ಷದಂತೆ
ಕೆಲವು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವಿರಿ. ಕುಂಭವು ಖಾಲಿ ಮಡಕೆಯ ಸೂಚಕ ಮಾತ್ರವಲ್ಲ , ಮಂಗಲ ಕಲಶದ ಪ್ರತೀಕವೂ ಹೌದು. ಕೆಲವು ತಪ್ಪು ನಿರ್ಧಾರಗಳು ಹೊಚ್ಚ ಹೊಸ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಪ್ರಯಾಣದಿಂದ
ಆಯಾಸ. ಜನ್ಮಶನಿಯಿಂದಾಗಿ ಅಕಾರಣ ಕೋಪ ಆಯಾಸಗಳು ನಿಮ್ಮನ್ನು ಕಾಡುತ್ತವೆ.

ಆತ್ಮೀಯರು ದೂರಸರಿಯುವರು. ಅಪವಾದದಿಂದ ಅವಮಾನಿತರಾಗುವ ಸಾಧ್ಯತೆಯೂ ಇಲ್ಲದಿಲ್ಲ . ಗೃಹ ನಿರ್ಮಾಣ, ಸ್ಥಳ, ವಾಹನ ಖರೀದಿ ಯೋಗವಿದೆ. ಶ್ರಮಿಕ ವರ್ಗದವರಿಗೆ ಪ್ರಯತ್ನಕ್ಕೆ ತಕ್ಕ ಫ‌ಲ ದೊರಕದೆನ್ನುವ ಬೇಸರ. ನಂಬಿದ
ಕೆಲಸದವರಿಂದ ವಂಚನೆಗೆ ಒಳಗಾಗುವ ಸಾಧ್ಯತೆ. ಷೇರು, ಫೈನಾನ್ಸ್‌ ವ್ಯವಹಾರದಲ್ಲಿ ತೀವ್ರ ಎಚ್ಚರ ಅಗತ್ಯ. ಸಂಸಾರದಲ್ಲಿ ಕೊಂಚ ಸಾಮರಸ್ಯದ ಕೊರತೆ ಕಾಣಿಸಬಹುದು. ಹೆಚ್ಚಿನ ಪರಿಶ್ರಮವಿದ್ದರೆ ಮಂಗಲಕಾರ್ಯ ನಡೆದೀತು. ಕಳ್ಳಕಾಕರ ಭಯವಿದೆ.
ಗುರು ಹಿರಿಯರ ಶುಶ್ರೂಷಾಯೋಗವಿದೆ. ಮಠ, ನಾಗಸ್ಥಾನ, ದೇವ-ದೇವಸ್ಥಾನಗಳ ಜೀರ್ಣೋದಾಟಛಿರಗಳಲ್ಲಿ ಭಾಗವಹಿಸುತ್ತೀರಿ. ಪಾಳು ಬಿದ್ದ ಜಾಗಕ್ಕೂ ಉತ್ತಮ ಮೌಲ್ಯ ಬರುತ್ತದೆ. ಕಪ್ಪು ಧಾನ್ಯ ಹಾಗೂ ಕಬ್ಬಿಣದ ಮಾರಾಟದಲ್ಲಿ ಲಾಭವಿದೆ. ನೀಲ ಹರಳಿನ ದಾನ ಹಾಗೂ ಧಾರಣೆಯಿಂದ, ತಿರುಪತಿ ದರ್ಶನದಿಂದ ಶುಭವಾಗುವುದು. ಪರಿಹಾರಕ್ಕಾಗಿ ಶನಿಸ್ತೋತ್ರ, ರುದ್ರಾಭಿಷೇಕ, ಮುಖ್ಯಪ್ರಾಣ, ರಾಮರ ಆರಾಧನೆ ಮಾಡಿರಿ. ನವಗ್ರಹಪೂರ್ವಕ ಶನಿಶಾಂತಿ ಮಾಡಿಸಿ.

ಮೀನ
(ಪೂರ್ವಾಭಾದ್ರಾ 1, 4, ಉತ್ತರಾಭಾದ್ರಾ 4, ರೇವತಿ 4)
ಗುರು – ಹಿರಿಯರ ಜೊತೆಗೆ ಚೆನ್ನಾಗಿರಿ ಸಂವೇದನಾಶೀಲರಾದ, ಸಂಚಾರಿಗಳಾದ ಮೀನಿನಂತೆ ಚುರುಕಾದ ವ್ಯಕ್ತಿತ್ವವುಳ್ಳ ನೀವು
ವ್ಯಯದ ಶನಿ, ಜನ್ಮ ರಾಹು, ದುರಿತದ ಗುರುವಿನಿಂದಾಗಿ ಸ್ಥಾನಭ್ರಂಶ, ವರ್ಗಾವಣೆ, ಒಡಹುಟ್ಟಿದವರಲ್ಲಿ ಹೆಚ್ಚುವ ಮುನಿಸು, ಹಿರಿಯರ ಶುಶ್ರೂಷಾಯೋಗ ಇತ್ಯಾದಿಗಳಿಗೆ ಒಳಗಾಗಬೇಕಾದೀತು. ಅಲರ್ಜಿ ಹಾಗೂ ನರಸಂಬಂಧಿ ಬಾಧೆಗಳೂ ಹೆಚ್ಚಬಹುದು. ಹೆಚ್ಚಿದ ವೆಚ್ಚದ ಮುಂದೆ ಆದಾಯದ ಗಾತ್ರ ಕಡಿಮೆಯಾದೀತು. ಯಾರನ್ನೂ ನಂಬದ ಪರಿಸ್ಥಿತಿ ಎಂದರೆ ಏನೆಂಬುದು ಅನುಭವಕ್ಕೆ ಬರಲಿದೆ. ಮಕ್ಕಳ ವಿದ್ಯಾಭ್ಯಾಸ, ಮದುವೆ, ಉದ್ಯೋಗದ ಹೊಣೆ ಎದುರಿಸಲು ಸಿದಟಛಿರಾಗುವಿರಿ. ಕಿವಿ, ಮೂಗು, ಗಂಟಲು ಸಂಬಂಧಿ ಸಮಸ್ಯೆಗಳಿದ್ದಾವು.

ಗುರು-ಹಿರಿಯರ ಜೊತೆಗೆ ಚೆನ್ನಾಗಿರಿ. ಕಬ್ಬಿಣ, ಕಲ್ಲಿದ್ದಲು, ಅಬಕಾರಿ, ಲೋಕೋಪಯೋಗಿ, ಜವುಳಿ, ಆಹಾರ ಸಂಸ್ಕರಣೆ, ಕಂಪ್ಯೂಟರ್‌, ಫೈನಾ®Õ… ಕ್ಷೇತ್ರಗಳಲ್ಲಿ ಹೆಚ್ಚಿನ ಲಾಭ ನಿರೀಕ್ಷಿಸಬೇಡಿ. ಅರ್ಚಕ, ನ್ಯಾಯವಾದಿ, ಕಲಾವಿದರಿಗೂ ಈ ವರ್ಷ ಶುಭವಿರದು. ಕಾರ್ಮಿಕರ ಅಸಹಕಾರದಿಂದ ಖನ್ನರಾಗುವಿರಿ. ಗರ್ಭಿಣಿಯರು ಎಚ್ಚರ ವಹಿಸಿರಿ. ಕೃಷಿ, ಹೈನುಗಾರಿಕೆ, ಪಶು-ಪಕ್ಷಿಗಳ ಸಾಕಣೆಯಲ್ಲಿ ರೋಗ-ರುಜಿನಗಳ ಬಾಧೆ ಎದುರಿಸುವಿರಿ. ಹಿತಶತ್ರುಗಳಿಂದ ಮೋಸ ಹೋಗದಿರಿ. ಮಕರ ಸಂಕ್ರಾಂತಿಯ ಅನಂತರ ಯುಗಾದಿಯ ತನಕ (ವರ್ಷದ ಕೊನೆಯಲ್ಲಿ) ಮಂಗಲ ಕಾರ್ಯ ನಡೆಯಲಾರದು. ಪುಷ್ಯರಾಗದ ದಾನ ಯಾ ಧಾರಣೆಯಿಂದ ಶುಭವಾಗುವುದು. ಪರಿಹಾರಕ್ಕಾಗಿ ವಿಷ್ಣುಸಹಸ್ರನಾಮ, ರುದ್ರ, ಮನ್ಯುಸೂಕ್ತ ಜಪ ಮಾಡಿ, ಹರಿಗುರುಗಳ ಸೇವೆಯಿಂದ ನೆಮ್ಮದಿ.

ಸರಳ ಪರಿಹಾರ
ದೇವಸ್ಥಾನದಲ್ಲಿ ಪ್ರದಕ್ಷಿಣೆ, ಮನೆಯಲ್ಲಿ ನಿತ್ಯ ಸಂಕೀರ್ತನೆ, ತುಳಸಿಗೆ ದೀಪ ಇಡುವಿಕೆ, ಯೋಗ, ಧ್ಯಾನ, ಪ್ರಾಣಾಯಾಮ; ಬಡವರಿಗೆ ಮಾಡುವ ಅನ್ನದಾನ, ಔಷಧ ದಾನ, ಪಶು-ಪಕ್ಷಿಗಳಿಗೆ ಜಲದಾನ ಮುಂತಾದ ಪರಿಹಾರಗಳಿಂದಲೂ ದುರಿತ ಪರಿಹಾರವಾಗುವುದು.

*ಜ್ಯೋತಿಷರತ್ನ ವಿದ್ವಾನ್‌ ಕೆ.ಶ್ರೀಪತಿ ಉಪಾಧ್ಯಾಯ

Advertisement

Udayavani is now on Telegram. Click here to join our channel and stay updated with the latest news.

Next