“ಕೆಜಿಎಫ್-2′ ಸಿನಿಮಾದ ನಂತರ ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಕನ್ನಡ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ ಜೋರಾಗುತ್ತಿದೆ.
ಈಗ ಕನ್ನಡದ ಮತ್ತೂಂದು ಪ್ಯಾನ್ ಇಂಡಿಯಾ ಸಿನಿಮಾ “777 ಚಾರ್ಲಿ”, ಇದೇ ಜೂ. 10ಕ್ಕೆ ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲೂ ತೆರೆಗೆ ಬರುತ್ತಿದೆ. ಈಗಾಗಲೇ ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಗಳಲ್ಲೂ ಭರ್ಜರಿಯಾಗಿ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ “777 ಚಾರ್ಲಿ’ ಕಡೆಯಿಂದ ಮತ್ತೂಂದು ಮಾಹಿತಿ ಹೊರಬಿದ್ದಿದೆ.
ಅದೇನೆಂದರೆ, “777 ಚಾರ್ಲಿ’ ಸಿನಿಮಾದ ಹಿಂದಿ ಅವತರಣಿಕೆಯ ವಿತರಣೆಯ ಹಕ್ಕುಗಳನ್ನು “ಯುಎಫ್ಓ’ ಸಂಸ್ಥೆ ಪಡೆದುಕೊಂಡಿದೆ. ಈ ಮೂಲಕ ಚಾರ್ಲಿಯ ಹವಾ ಕೂಡಾ ಹೆಚ್ಚಾ ಗಿ ದೆ. ಇನ್ನು ಈಗಾಗಲೇ ಬಿಡುಗಡೆಯಾಗಿರುವ “777 ಚಾರ್ಲಿ’ ಸಿನಿಮಾದ ಟೀಸರ್ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಬೇರೆ ಬೇರೆ ಭಾಷೆಯ ಸ್ಟಾರ್, ನಿರ್ಮಾಪಕರು, ನಿರ್ದೇಶಕರು ಕೂಡ ಟೀಸರ್ ಮೆಚ್ಚಿಕೊಂಡಿದ್ದಾರೆ.
ಕಳೆದ ಕೆಲವು ವಾರಗಳಿಂದ “777 ಚಾರ್ಲಿ’ ಚಿತ್ರದ ವಿತರಣೆ ಪ್ಲಾನಿಂಗ್ ಮಾಡಿಕೊಳ್ಳುತ್ತಿರುವ ಚಿತ್ರತಂಡಕ್ಕೆ ಬೇರೆ ಬೇರೆ ಭಾಷೆಗಳ ವಿತರಕರಿಂದಲೂ ಭಾರೀ ಬೇಡಿಕೆ ವ್ಯಕ್ತವಾಗಿದೆ. ತೆಲುಗಿನಲ್ಲಿ ನಟ ರಾಣಾ ದಗ್ಗುಬಾಟಿ, ತಮಿಳಿನಲ್ಲಿ ನಿರ್ದೇಶಕ ಕಾರ್ತಿಕ್ ಸುಬ್ಬರಾಜು, ಮಲಯಾಳಂನಲ್ಲಿ ನಟ ಕಂ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ “777 ಚಾರ್ಲಿ’ ಸಿನಿಮಾದ ವಿತರಣೆ ಜವಾಬ್ದಾರಿ ಹೊತ್ತಿದ್ದಾರೆ.
ಈಗ ಅದೇ ರೀತಿ ಹಿಂದಿಯ ಮತ್ತೂಂದು ಖ್ಯಾತ ವಿತರಣಾ ಸಂಸ್ಥೆ “ಯುಎಫ್ಓ’ ಹಿಂದಿ ವಿತರಣೆಯ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ರಕ್ಷಿತ್ ಶೆಟ್ಟಿ ತಮ್ಮ ಹೋಮ್ ಬ್ಯಾನರ್ “ಪರಂವಾ ಸ್ಟುಡಿಯೋಸ್’ ಅಡಿಯಲ್ಲಿ ನಿರ್ಮಿಸಿರುವ “777 ಚಾರ್ಲಿ’ ಚಿತ್ರಕ್ಕೆ ಕಿರಣ್ ರಾಜ್ ನಿರ್ದೇಶನವಿದೆ. ಶ್ವಾನ ಮತ್ತು ಮನುಷ್ಯನ ಭಾವನಾತ್ಮಕ ಸಂಬಂಧದ ಸುತ್ತ ನಡೆಯುವ “777 ಚಾರ್ಲಿ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಾಯಕನಾಗಿ ಅಭಿನಯಿಸಿದ್ದು, ಉಳಿದಂತೆ ರಾಜ್ ಬಿ. ಶೆಟ್ಟಿ, ದಾನಿಶ್ ಸೇಠ್, ಸಂಗೀತಾ ಶೃಂಗೇರಿ, ತಮಿಳಿನ ಬಾಬಿ ಸಿಂಹ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.