Advertisement

ಉದ್ಯಾವರ-ಪಿತ್ರೋಡಿ ರಸ್ತೆ; ಇಲ್ಲಿ  ಸಂಚರಿಸುವುದೇ ಸವಾಲು!

01:00 AM Feb 11, 2019 | Harsha Rao |

ಕಟಪಾಡಿ: ಉದ್ಯಾವರ-ಪಿತ್ರೋಡಿ ಸಂಪರ್ಕ ಕಲ್ಪಿಸುವ ಪ್ರಮುಖ ಸಂಪರ್ಕ ರಸ್ತೆ ದುಸ್ಥಿತಿಯಲ್ಲಿದ್ದು, ಸಂಚರಿಸುವುದೇ ಸವಾಲಾಗಿದೆ. ಮೀನುಗಾರಿಕಾ ಇಲಾಖೆಗೆ ಸೇರಿದ 3 ಕಿ.ಮೀ. ಉದ್ದದ ಈ ರಸ್ತೆಯಲ್ಲಿ ಜಲ್ಲಿ ಸಂಪೂರ್ಣ ಕಿತ್ತುಹೋಗಿದ್ದು, ಹೊಂಡ-ಗುಂಡಿಗಳಿಂದ ತುಂಬಿದೆ.  

Advertisement

ಪ್ರಮುಖ ಸಂಪರ್ಕ ರಸ್ತೆ 
ಗ್ರಾಮ ಪಂಚಾಯತ್‌ ಕಚೇರಿ, ಅಂಚೆ ಕಚೇರಿ, ಸರಕಾರಿ ಶಾಲಾ ಕಾಲೇಜು, ಖಾಸಗಿ ಶಾಲೆಗಳು, ಮೆಸ್ಕಾಂ ಕಚೇರಿ, ಪಶು ಆರೋಗ್ಯ ಕೇಂದ್ರ, ಆರೋಗ್ಯ ಉಪಕೇಂದ್ರಗಳು, ಬ್ಯಾಂಕ್‌, ಮೀನು ಮಾರುಕಟ್ಟೆ  ಹೀಗೆ ಎಲ್ಲವನ್ನು ಸಂಪರ್ಕಿಸಲೂ ಇದೇ ರಸ್ತೆಯಾಗಬೇಕು. ಆದರೆ ರಸ್ತೆ ಹಾಳಾಗಿರುವುದರಿಂದ ಜನರು ಸಮಸ್ಯೆಗೀಡಾಗಿದ್ದಾರೆ.  

ಗ್ರಾಮಸ್ಥರ ಬವಣೆ 
ಬಿ.ಎಂ. ಸ್ಕೂಲ್‌, ಶಾಂತಿನಗರ, ಬೋಳಾರಗುಡ್ಡೆ, ಐಸ್‌ಪ್ಲಾಂಟ್‌, ಕಮಾನು ಬಳಿಯ ಐಡಿಯಲ್‌ ಸ್ಟಾಪ್‌, ಸಿಂಡಿಕೇಟ್‌ ಬ್ಯಾಂಕ್‌  ಸ್ಟಾಪ್‌, ಗೋವಿಂದ ನಗರ,  ಸಂಪಿಗೆ ನಗರ, ಪಿತ್ರೋಡಿ ಭಾಗದ ಗ್ರಾಮಸ್ಥರು ಇದರಲ್ಲೇ ನಿತ್ಯವೂ ಸಂಚರಿಸಬೇಕು. ಆದರೆ ಹಲವಾರು ವರ್ಷಗಳಿಂದ ಈ ರಸ್ತೆ ದುರಸ್ತಿ ಕಂಡಿಲ್ಲ. ಈ ರಸ್ತೆಯಲ್ಲಿ 4 ನರ್ಮ್ ಬಸ್‌ಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತವೆ.  

ಆಕ್ರೋಶ 
ಇಷ್ಟೊಂದು ಬಹು ಬೇಡಿಕೆಯುಳ್ಳ  ಪಿತ್ರೋಡಿ ಸಂಪರ್ಕ ರಸ್ತೆ  ಇನ್ನೂ ರಿಪೇರಿಯಾಗದೆ  ಇದರ ಅಭಿವೃದ್ಧಿಗೆ ಮುಂದಾಗದೇ ಇರುವುದು ಜನರನ್ನು ಕೆರಳಿಸಿದೆ. ಇದೇ ರಸ್ತೆಯಲ್ಲಿ ಮಂತ್ರಿಗಳು, ಶಾಸಕರು, ಜನಪ್ರತಿನಿಧಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದರೂ ರಸ್ತೆ ದುರಸ್ತಿ ಮಾಡುವ ಇಚ್ಛಾಶಕ್ತಿ ಪ್ರಕಟಿಸಿಲ್ಲ. ಉದ್ಯಾವರ ಗ್ರಾ.ಪಂ. ಅಧಿಕಾರಿಗಳು ಮತ್ತು ಕಾಪು ಶಾಸಕರ ಗಮನಕ್ಕೆ ತಂದಿದ್ದು, ಏನೂ ಮಾಡಲಾಗದೆ ಕೈಚೆಲ್ಲಿದೆ. ಈ ರಸ್ತೆಗೆ ತೇಪೆ ಮಾತ್ರ ಹಾಕಬಾರದು, ಫೇವರ್‌ ಫಿನಿಶ್‌ ಕಾಮಗಾರಿ ನಡೆಸಬೇಕು ಎನ್ನುವುದು ಆಗ್ರಹವಾಗಿದೆ.  

ತುರ್ತು ಅನುದಾನದಲ್ಲಿ ದುರಸ್ತಿ ಕಾಮಗಾರಿ
ಮೀನುಗಾರಿಕೆ ಇಲಾಖೆಯ ರಸ್ತೆ. ಇದಕ್ಕೆ ಸರಕಾರದಿಂದ ನಿಧಿ ಬಿಡುಗಡೆಯಾಗಿಲ್ಲ. ಪಂಚಾಯತ್‌ ಮತ್ತು ಸ್ಥಳೀಯರ ಬೇಡಿಕೆಯನ್ವಯ ಶಾಸಕನ ನೆಲೆಯಲ್ಲಿ ಶಿಫಾರಸುಗೊಳಿಸಿ 7 ಲಕ್ಷ ರೂ. ಅನುದಾನ ಬಳಸಿಕೊಂಡು ತುರ್ತಾಗಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಇಲಾಖಾ ಅನುದಾನ ಬಿಡುಗಡೆ ಬಳಿಕ ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿ ಮಾಡಲಾಗುವುದು. 
-ಲಾಲಾಜಿ ಆರ್‌. ಮೆಂಡನ್‌, ಶಾಸಕರು, ಕಾಪು ಕ್ಷೇತ್ರ

Advertisement

ಪ್ರಸ್ತಾವನೆ ಸಲ್ಲಿಕೆ
ಉದ್ಯಾವರ-ಪಿತ್ರೋಡಿ ರಸ್ತೆಯ ಮರುಡಾಮರೀಕರಣದೆಡೆಗೆ ಎರಡು ಸೇತುವೆಗಳ ವಿಸ್ತರೀಕರಣ ಮತ್ತು ರಿಕನ್‌ಸ್ಟ್ರಕ್ಷನ್‌ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 
 -ಉದಯ ಕುಮಾರ್‌, ಸಹಾಯಕ ಎಂಜಿನಿಯರ್‌, ಮೀನುಗಾರಿಕಾ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next