Advertisement

ಉದ್ಯಾವರ: ಒಡೆಯನ ಕೈ ಚಪ್ಪಾಳೆಯ ಕರೆಗೆ ತಳದಿಂದ ಮೇಲೆದ್ದು ಬರುವ ಮೀನುಗಳು

09:51 PM Oct 26, 2020 | mahesh |

ಉದ್ಯಾವರ: ಬಾವಿಯಲ್ಲಿಯೇ ಸಾಕುತ್ತಿರುವ ವಿವಿಧ ಜಾತಿಯ ಬಣ್ಣ ಬಣ್ಣದ ಮೀನುಗಳು ತಮ್ಮ ಒಡೆಯನ ಕೈ ಚಪ್ಪಾಳೆಯ ಪ್ರೀತಿಯ ಕರೆಗೆ ಹಾತೊರೆದು ಮೇಲೆದ್ದು ಬರುವುದು ಇದೀಗ ಜನರ ಆಕರ್ಷಣೆಯ ಕೇಂದ್ರವಾಗಿವೆೆ.

Advertisement

ಉದ್ಯಾವರ ಬೈಲುಜಿಡ್ಡೆ ನಿವಾಸಿ ಮೊಹಮ್ಮದ್‌ ರಫೀಕ್‌ ಸಾಬ್ಜನ್‌ ಅವರು 5 ವರ್ಷಗಳ ಹಿಂದೆ ತನ್ನ ಮೊಮ್ಮಕ್ಕಳಿಗಾಗಿ ಗೋಲ್ಡನ್‌ ಫಿಶ್‌ ಸಹಿತ ಅಕ್ವೇರಿಯಂನಲ್ಲಿ ಪೋಷಿಸುವ ವಿವಿಧ ಜಾತಿಯ ಅತ್ಯಾಕರ್ಷಕ ಬಣ್ಣದ ಮೀನುಗಳನ್ನು ಖರೀದಿಸಿ ತಂದು ತನ್ನ ಮನೆಯ ಬಾವಿಯಲ್ಲಿಯೇ ಸಾಕುತ್ತಿದ್ದರು.

ಮೊದಲು ಮಸ್ಕತ್‌ ಪ್ಯಾಲೇಸ್‌ನಲ್ಲಿ ಉದ್ಯೋಗದಲ್ಲಿದ್ದ ಮೊಹಮ್ಮದ್‌ ರಫೀಕ್‌ ಸಾಬjನ್‌ ಅವರು 5 ವರ್ಷಗಳ ಹಿಂದೆ ಪ್ರಥಮ ಬಾರಿಗೆ 10 ಚಿಕ್ಕ ಮೀನುಗಳನ್ನು ಖರೀದಿಸಿ ಈ ಬಾವಿಗೆ ಹಾಕಿದ್ದರು. ಪತ್ನಿ ನಸೀಮಾ ಸಿದ್ಧಪಡಿಸಿಕೊಟ್ಟ ಚಪಾತಿಯನ್ನು ಹಾಗೂ ಮೀನಿನ ಆಹಾರವನ್ನು ಈ ಮೀನುಗಳಿಗೆ ನೀಡುತ್ತಾ ಬರುತ್ತಿದ್ದಾರೆ.

ಮೊಮ್ಮಕ್ಕಳಲ್ಲಿ ಹೆಚ್ಚಿದ ಆಸಕ್ತಿಯನ್ನು ಕಂಡ ಅವರು ಮತ್ತೆ ವಿಶೇಷ ತಳಿಯ ಬಣ್ಣದ ಮೀನುಗಳನ್ನು ಖರೀದಿಸಿ ಬಾವಿಗೆ ಹಾಕಿ ಪೋಷಿಸುತ್ತಾ ಬಂದಿದ್ದು ಸುಮಾರು 80ರಷ್ಟು ಬಣ್ಣದ ಮೀನುಗಳನ್ನು ಬಾವಿಗೆ ಹಾಕಿರುತ್ತಾರೆ. ಇದೀಗ ಅದು ಬೆಳೆಯುತ್ತಾ ಮರಿ ಇಟ್ಟು ವಿವಿಧ ಜಾತಿಯ ಸುಮಾರು 200ಕ್ಕೂ ಅಧಿಕ ಮೀನುಗಳು ಈ ಬಾವಿಯಲ್ಲಿ ಚಿತ್ತಾಕರ್ಷಕ ರೀತಿಯಲ್ಲಿ ಕಾಣಸಿಗುತ್ತಿವೆ.

ಒಡೆಯನ ಕೈ ಚಪ್ಪಾಳೆಗೆ ಮೇಲೆದ್ದು ಬರುವ ಮೀನು
ಸುಮಾರು 30 ಅಡಿ ಆಳದ ಈ ಬಾವಿಯಲ್ಲಿ ಕಂಡು ಬರುತ್ತಿರುವ ಈ ಮೀನುಗಳು ನೀರಿನಾಳದಲ್ಲಿಯೇ ಗಿರವಿ ಹೊಡೆಯುತ್ತಾ ಇರುತ್ತವೆ. ಆದರೆ ಒಡೆಯನ ಕೈ ಚಪ್ಪಾಳೆಯ ಸದ್ದು ಕೇಳಿಸಿದ ಕೂಡಲೇ ನೀರಿನ ಮೇಲಕ್ಕೆ ಬಂದು ತಮ್ಮ ಇರುವಿಕೆಯನ್ನು ತೋರ್ಪಡಿಸುತ್ತವೆ.

Advertisement

ನಿತ್ಯ ಬಳಕೆಯ ಕುಡಿಯುವ ನೀರಿನ ಬಾವಿಯು ಇದಾಗಿದ್ದು, ಬೆಳಗ್ಗೆ ಗಂಟೆ 6.30, ಅಪರಾಹ್ನ 1.30, ಸಂಜೆ 7ರ ಸುಮಾರಿಗೆ ಒಟ್ಟು ದಿನಕ್ಕೆ ಮೂರು ಬಾರಿ ಮೀನಿಗೆ ಆಹಾರವನ್ನು ಒದಗಿಸುವ ರಫೀಕ್‌ ಸಾಬjನ್‌ ಬೆಳಗ್ಗೆ 4 ಚಪಾತಿ ಮತ್ತು ಸಂಜೆ 2 ಚಪಾತಿಗಳನ್ನು ಮೀನುಗಳಿಗೆ ನೀಡುತ್ತಾರೆ. ಇಂತಹ ಸುಂದರ ಕ್ಷಣಗಳನ್ನು ನೋಡಿ ಆನಂದಿಸಲು ಸಾಕಷ್ಟು ಮಂದಿ ಇಲ್ಲಿಗೆ ಬರುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next