Advertisement
ಉಡುಪುಮೂಲೆ ಗೋಪಾಲಕೃಷ್ಣ ಭಟ್ಟರು ಪ್ರತಿಷ್ಠಿ ಹವ್ಯಕ ಬ್ರಾಹ್ಮಣ ಮನೆತನದ ಕೊಡಂಕಿರಿ ರಾಮ ಭಟ್ಟ ಮತ್ತು ಸರಸ್ವತಿ ಅಮ್ಮನವರ ಮೂವರು ಮಕ್ಕಳಲ್ಲಿ ಹಿರಿಯವರಾಗಿ 1944ರ ನವೆಂಬರ 26ರಂದು ಜನಿಸಿದರು. ರಘುರಾಮ ಮತ್ತು ಹೇಮಾವತಿಯವರು ಸೋದರ ಹಾಗೂ ಸೋದರಿಯರು.
Related Articles
Advertisement
ಯಕ್ಷಗಾನ ಕ್ಷೇತ್ರದಲ್ಲಿ ಉಡುಪು ಮೂಲೆಯವರೆಂದೇ ಪ್ರಸಿದ್ಧರಾದ ಗೋಪಾಲಕೃಷ್ಣ ಭಟ್ಟರು ತಮ್ಮ ನಿವಾಸದಲ್ಲಿಯೇ ಯಕ್ಷಗಾನ ಕಲಾಸಂಘವನ್ನು ಸ್ಥಾಪಿಸಿ ಅನೇಕ ಮಂದಿ ಶಿಷ್ಯರನ್ನು ಅರ್ಥಗಾರಿಕೆಯಲ್ಲಿ ತರಬೇತುಗೊಳಿಸಿರುತ್ತಾರೆ. ಅವರಲ್ಲಿ ಕೆಲವರು ಈಗ ಪ್ರಸಿದ್ಧ ಅರ್ಥಧಾರಿಗಳಾಗಿದ್ದಾರೆ. ಬದಿಯಡ್ಕದ ಶ್ರೀ ಅಯ್ಯಪ್ಪ ಕಲಾವೃಂದದ ನಿರ್ದೇಶಕರಾಗಿ ನಾಟಕಗಳ, ಬಯಲಾಟಗಳ ಪಾತ್ರಗಳಿಗೆ ನಿರ್ದೇಶನವನ್ನು ನೀಡುತ್ತಿದ್ದರು.
ಉಡುಪುಮೂಲೆಯವರು ಮುಖ್ಯವಾಗಿ ಅನೇಕ ಯಕ್ಷಗಾನದ ಬಗ್ಗೆ ಮತ್ತು ವೈಚಾರಿಕ ಲೇಖನಗಳನ್ನು ಬರೆದಿದ್ದು ಅವುಗಳು ನಾಡಿನ ಸ್ಮರಣ ಸಂಚಿಕೆಗಳಲ್ಲಿ, ಅಭಿನಂದನಾ ಗ್ರಂಥಗಳಲ್ಲಿ ಹಾಗೂ ಕೆಲವು ನಿಯತಕಾಲಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ವ್ಯಕ್ತಿಚಿತ್ರಣವನ್ನು ಕಾವ್ಯರೂಪದಲ್ಲಿ ರಚಿಸುತ್ತಿದ್ದರು. ಅಪ್ರಕಟಿತ “ಎಲೆಮರೆಯ ಕಾಯಿಗಳು’ ಎಂಬುದು ಇಂತಹ ಒಂದು ರಚನೆ. ಅಲ್ಲದೆ ತಾಳಮದ್ದಳೆಯಲ್ಲಿ ಅವರ ಮೆಚ್ಚಿನ ವಿದುರ, ಸುಗ್ರೀವ, ಅಕ್ರೂರ, ವಿಭೀಷಣ, ಶಲ್ಯ ಮೊದಲಾದ ಪಾತ್ರಗಳ ಚಿತ್ರಣಗಳನ್ನು ಹಾಗೂ ಮಕ್ಕಳಿಗಾಗಿ ಕೆಲವು ಕಿರುನಾಟಕಗಳನ್ನೂ ರಚಿಸಿರುತ್ತಾರೆ. ಆದರೆ ಹಲವು ವರ್ಷಗಳ ಹಿಂದೆ ರಚಿತವಾದ ಅವುಗಳ ಹಸ್ತಪ್ರತಿಗಳು ಕೂಡ ಈಗಿಲ್ಲ.
ಅವರ ಧರ್ಮಪತ್ನಿ ಶಾರದ. ಈ ದಂಪತಿಗಳ ಮೂವರು ಮಕ್ಕಳಲ್ಲಿ ಹಿರಿಯವರಾದ ಬಾಲಮುರಳಿಕೃಷ್ಣ ಬೆಂಗಳೂರಿನಲ್ಲಿ ಆಯುರ್ವೇದ ಡಾಕ್ಟರ್, ಮಗಳು ಲಲಿತ ವಿವಾಹಿತಳಾಗಿ ಪತಿಯೊಂದಿಗೆ ಬೆಂಗಳೂರಿನ ಕಂಪೆನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಮತ್ತೋರ್ವ ಮಗ ರಾಘವೇಂದ್ರ ಸಂಸ್ಕೃತ ಸ್ನಾತಕೋತ್ತರ ಪದವಿಯನ್ನು ಪಡೆದು ಪಾರಂಪರಿಕ ಮಂತ್ರವಾದ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ. ಇವರ ಪತ್ನಿ ಅನುಪಮಾ ರಾಘವೇಂದ್ರ ಇವರು ನೃತ್ಯ ವಿದುಷಿಯಾಗಿದ್ದು ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಎಂಬ ಕಲಾಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
ಗೋಪಾಲಕೃಷ್ಣ ಭಟ್ಟರ ತಮ್ಮ ರಘುರಾಮ ಭಟ್ಟರು ಸಾಹಿತಿ, ಉಪಾನ್ಯಾಸಕರಾಗಿದ್ದು ಇದೀಗ ಹುದ್ದೆಯಿಂದ ನಿವೃತ್ತಿಯಾಗಿ ಉಡುಪುಮೂಲೆಯಲ್ಲಿ ಅಣ್ಣನೊಂದಿಗೆ ನೆಲೆಸಿ ಸಹಕರಿಸುತ್ತಿದ್ದಾರೆ. ತಂಗಿ ಹೇಮಾವತಿ ಮತ್ತು ಅವರ ಪತಿ ಪ್ರತಿಷ್ಠಿತ ಉನ್ನತ ಹುದ್ದೆಯಲ್ಲಿದ್ದಾರೆ.
ಉಡುಪುಮೂಲೆ ಗೋಪಾಲಕೃಷ್ಣ ಭಟ್ಟರ ಸಪ್ತತಿ ಸಂಭ್ರಮವನ್ನು 2013 ಜೂನ್ ತಿಂಗಳಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಗಿತ್ತು. ಈ ಶುಭ ಅವಸರದಲ್ಲಿ ಸಪ್ತತಿ ಸಂಭ್ರಮದ “ದ್ರಷ್ಟಾರ’ ಎಂಬ ನೆನಪಿನ ಸಂಪುಟವನ್ನು ಪೂಜ್ಯ ಶ್ರೀ ಎಡನೀರು ಮಠಾಧೀಶರು ಬಿಡುಗಡೆಗೊಳಿಸಿದ್ದರು.
– ಲೇ: ಕೇಳು ಮಾಸ್ತರ್ ಅಗಲ್ಪಾಡಿ