Advertisement

ಉಡುಪಿ ಜಿಲ್ಲಾಸ್ಪತ್ರೆ ಮೇಲ್ದರ್ಜೆ ಕಾಮಗಾರಿ; ಬ್ರಹ್ಮಾವರಕ್ಕೆ ತಾತ್ಕಾಲಿಕ ಸ್ಥಳಾಂತರ

01:14 AM Nov 19, 2020 | mahesh |

ಉಡುಪಿ: ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಪೂರ್ಣಗೊಳ್ಳುವ ವರೆಗೆ ಆಸ್ಪತ್ರೆಯು ಬ್ರಹ್ಮಾವರದಲ್ಲಿ ಕಾರ್ಯನಿರ್ವಹಿಸಲಿದೆ. ಬುಧವಾರ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಯಿತು.

Advertisement

ಆಸ್ಪತ್ರೆಯನ್ನು 115 ಕೋ.ರೂ. ವೆಚ್ಚದಲ್ಲಿ 250 ಬೆಡ್‌ಗಳಿಗೆ ಮೇಲ್ದರ್ಜೆಗೇರಿಸಲಿದ್ದು, ಫೆಬ್ರವರಿ/ ಮಾರ್ಚ್‌ನಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ರೋಗಿಗಳನ್ನು ಇದೇ ಕಟ್ಟಡದಲ್ಲಿ ಉಳಿಸಿಕೊಂಡು ಕಾಮಗಾರಿ ಕೈಗೊಳ್ಳುವುದು ಅಸಾಧ್ಯವಾಗಿರುವ ಕಾರಣ ಮತ್ತು ಕೆಲಸವನ್ನು ವೇಗವಾಗಿ ಮುಗಿಸುವ ನಿಟ್ಟಿನಲ್ಲಿ ಎರಡು ವರ್ಷದ ಮಟ್ಟಿಗೆ ಪೂರ್ಣ ಪ್ರಮಾಣದಲ್ಲಿ ಬ್ರಹ್ಮಾವರದ ಸಮುದಾಯ ಆಸ್ಪತ್ರೆಗೆ ಸ್ಥಳಾಂತರಿಸಬೇಕು ಎಂದು ಶಾಸಕ ಕೆ. ರಘುಪತಿ ಭಟ್‌ ಸಲಹೆ ನೀಡಿದರು. ಸದಸ್ಯರು ಅನುಮೋದಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಬಳಿಯ ಎಎನ್‌ಎಂ ತರಬೇತಿ ಕೇಂದ್ರದಲ್ಲಿ ಒಂದೆರಡು ವಿಭಾಗಗಳನ್ನು ಸ್ಥಳಾಂತರಿಸಬಹುದು. ಬಿ.ಆರ್‌. ಶೆಟ್ಟಿ ಆಸ್ಪತ್ರೆಗೆ ಕೆಲವು ವಿಭಾಗಗಳನ್ನು ಹಂಚಬೇಕು ಎಂದು ಭಟ್‌ ತಿಳಿಸಿದರು.

ಹೊರರೋಗಿ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿ ಒಂದೇ ಕಡೆ ಇರಿಸಬೇಕಾಗುತ್ತದೆ. ಬ್ರಹ್ಮಾವರವು ಜಿಲ್ಲೆಯ ಕೇಂದ್ರ ಸ್ಥಾನದಲ್ಲಿ ರುವುದರಿಂದ ಬ್ರಹ್ಮಾವರಕ್ಕೆ ಇವೆರಡನ್ನು ಸ್ಥಳಾಂತರಿಸುವುದು ಸೂಕ್ತ ಎಂದು ವೈದ್ಯರೂ ಆದ ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ಸಲಹೆ ನೀಡಿದರು. ಬ್ರಹ್ಮಾವರದ ಪ್ರವಾಸಿ ಮಂದಿರವನ್ನೂ ಇದಕ್ಕೆ ಉಪಯೋಗಿಸಿಕೊಳ್ಳಬಹುದು. ಅಗತ್ಯವಿದ್ದರೆ ಬ್ರಹ್ಮಾವರದ ರೋಗಿಗಳನ್ನು ಬಾರಕೂರು, ಕೋಟ ಆಸ್ಪತ್ರೆಗೆ ಶಿಫಾರಸು ಮಾಡಬಹುದು ಎಂದು ಭಟ್‌ ಸಲಹೆ ನೀಡಿದರು.

ಅಕ್ಕಿ, ಬೇಳೆ ವಂಚನೆ
ಲಾಕ್‌ಡೌನ್‌ ಅವಧಿಯಲ್ಲಿ ಬೈಂದೂರು ವ್ಯಾಪ್ತಿಯಲ್ಲಿ ಅಕ್ಷರದಾಸೋಹ ಯೋಜನೆ ಯಡಿ ಅಕ್ಕಿ – ಬೇಳೆ ವಿತರಣೆಯಲ್ಲಿ ಅವ್ಯವಹಾರ ಆಗಿದೆ. ಶಿಕ್ಷಕರ ನಿಯೋಜನೆ ಯಲ್ಲಿ ನಿಯಮ ಮೀರಲಾಗಿದೆ. ಈ ಕುರಿತು ತನಿಖೆ ನಡೆಸಬೇಕೆಂದು ಶಂಕರ ಪೂಜಾರಿ, ಬಾಬು ಶೆಟ್ಟಿ ಆಗ್ರಹಿಸಿದರು. 10 ದಿನಗಳಲ್ಲಿ ವರದಿ ನೀಡುವಂತೆ ಸಿಇಒ ಸೂಚಿಸಿದರು.

Advertisement

ಕೆಲವು ಸಾಮಾಜಿಕ ಪಿಂಚಣಿದಾರರಿಗೆ ದೊರಕಿಲ್ಲ ಎಂದು ಜನಾರ್ದನ ತೋನ್ಸೆ ತಿಳಿಸಿದಾಗ ಖಜಾನೆ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸಭೆಯನ್ನು ನಡೆಸಿ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು ಎಂದು ರಘುಪತಿ ಭಟ್‌ ಸೂಚಿಸಿದರು.

ಜಿ.ಪಂ. ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಶೋಭಾ ಜಿ. ಪುತ್ರನ್‌, ಸುಮಿತ್‌ ಶೆಟ್ಟಿ, ಪ್ರತಾಪ್‌ ಹೆಗ್ಡೆ, ಡಿಎಫ್ಒ ಆಶೀಶ್‌ ರೆಡ್ಡಿ, ಉಪಕಾರ್ಯದರ್ಶಿ ಕಿರಣ್‌ ಪೆಡ್ನ್ ಕರ್‌, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌ ಉಪಸ್ಥಿತರಿದ್ದರು.

ಪ್ರಾಕೃತಿಕ ವಿಕೋಪ: ಅರ್ಜಿಗೆ ಅವಧಿ ವಿಸ್ತರಣೆ
ಆಗಸ್ಟ್‌ನಲ್ಲಿ ಉಂಟಾದ ತೀವ್ರ ಪ್ರಾಕೃತಿಕ ವಿಕೋಪದಿಂದ ನಷ್ಟಕ್ಕೊಳಗಾದವರಿಗೆ ತುರ್ತು ಪರಿಹಾರವಾಗಿ 10,000 ರೂ. ನೀಡಲಾಗುತ್ತಿದೆ. ಶೇ. 90 ಜನರಿಗೆ ಇದು ಲಭಿಸಿದೆ. ಒಂದಿಷ್ಟು ಜನರಿಗೆ ಮಾಹಿತಿ ಕೊರತೆಯಿಂದ ದೊರಕಿಲ್ಲ. ಅಂತಹವರಿಗಾಗಿ ಅರ್ಜಿ ಸಲ್ಲಿಸಲು ನ. 30ರ ವರೆಗೆ ಅವಕಾಶವಿದೆ. ತಹಶೀಲ್ದಾರರು ಮಾಹಿತಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ರಘುಪತಿ ಭಟ್‌, ಜನಾರ್ದನ ತೋನ್ಸೆ, ಚಂದ್ರಿಕಾ ಕೇಳ್ಕರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next