Advertisement

ಮಳೆ ಅಬ್ಬರಕ್ಕೆ ಮಿಂದೆದ್ದ ಉಡುಪಿ

06:00 AM Jun 21, 2018 | Team Udayavani |

ಉಡುಪಿ: ಉಡುಪಿ ನಗರವೂ ಸೇರಿದಂತೆ ಉಡುಪಿ ತಾಲೂಕಿನಲ್ಲಿ ಜೂ.19ರಂದು ರಾತ್ರಿ ಮತ್ತು ಜೂ. 20ರಂದು ಇಡೀ ದಿನ ನಿರಂತರವಾಗಿ ಸುರಿದ ಮಳೆಯಿಂದಾಗಿ ಸಾಮಾನ್ಯ ಜನಜೀವನ ಬಹುಮಟ್ಟಿಗೆ ಅಸ್ತವ್ಯಸ್ತಗೊಂಡಿತು.

Advertisement

ಬುಧವಾರ ಬೆಳಗಾಗುತ್ತಲೇ ದಟ್ಟ ಮೋಡ, ಜಡಿಮಳೆಯಿಂದಾಗಿ ಕತ್ತಲಾವರಿಸಿಕೊಂಡಿತ್ತು. ಅಂತೆಯೇ ಎಡೆಬಿಡದೆ ಸುರಿದ ಮಳೆಯಿಂದಾಗಿ ನಗರ ಭಾಗದಲ್ಲಿ ಕೆಲವು ಅಂಗಡಿ ಮುಂಗಟ್ಟುಗಳ ಎದುರು ನೀರು ನಿಂತಿತು. ತಗ್ಗುಪ್ರದೇಶಗಳ ನಿವಾಸಿಗಳು ಸಂಜೆವರೆಗೂ ಆತಂಕದಿಂದಲೇ ಸಮಯ ಕಳೆದರು. ಆರಂಭದ ಮಳೆಗೆ ಸ್ವಲ್ಪ ಮಟ್ಟಿಗೆ ನಗರಸಭೆ ಎಚ್ಚೆತ್ತುಕೊಂಡಿದ್ದರಿಂದ  ಕೆಲವು ಮನೆಗಳಿಗೆ ನೀರು ನುಗ್ಗುವುದು ತಪ್ಪಿತು. ಆದಾಗ್ಯೂ ಬುಧವಾರ ರಾ.ಹೆದ್ದಾರಿ 66ರ ಕರಾವಳಿ ಬೈಪಾಸ್‌ ಬಳಿ ಗ್ಯಾರೇಜ್‌ ಹಾಗೂ ಕೆಲವು ಕಾರ್ಮಿಕರ ಜೋಪಡಿ ಪ್ರದೇಶಗಳಲ್ಲಿ ನೀರು ಆವರಿಸಿತು.

ಗ್ಯಾರೇಜ್‌ಗೆ ನೀರು
ಕರಾವಳಿ ಬೈಪಾಸ್‌ ಸಮೀಪ ರಾ.ಹೆದ್ದಾರಿಗೆ ಹೊಂದಿಕೊಂಡಂತಿರುವ ಗ್ಯಾರೇಜ್‌ ಒಂದಕ್ಕೆ ನೀರು ನುಗ್ಗಿ ಅವರು ಕೆಲಸ ಮಾಡಲು ಸಾಧ್ಯವಾಗಲಿಲ್ಲ. ನಗರದ ವಿವಿಧೆಡೆ ಮಳೆಯ ತೀವ್ರತೆಯಿಂದಾಗಿ ಜನಸಂಚಾರ ವಿರಳವಾಗಿತ್ತು. 

ಮುಖ್ಯರಸ್ತೆಗಳಲ್ಲೇ ಸಮಸ್ಯೆ!
ಕರಾವಳಿ ಬೈಪಾಸ್‌ ರಾ.ಹೆ.66ರಲ್ಲಿ ಬುಧವಾರ ಕೂಡ ರಸ್ತೆಯಲ್ಲಿಯೇ ನೀರು ನಿಂತ ಪರಿಣಾಮ ವಾಹನಗಳು ನಿಧಾನವಾಗಿ ಚಲಿಸಿವೆ. ಕೆಲವೊಮ್ಮೆ ವಾಹನಗಳನ್ನು ನಿಲ್ಲಿಸಿದ್ದರಿಂದ ಬ್ಲಾಕ್‌ ಆಗಿದೆ. ಮಧ್ಯಾಹ್ನ 1.30ರ ಈ ಸಮಸ್ಯೆ ತೀವ್ರವಾಯಿತು. ವಾಹನಗಳ ನಡುವೆ ಕುಂದಾಪುರ ಕಡೆಯಿಂದ ಬರುತ್ತಿದ್ದ ಆ್ಯಂಬುಲೆನ್ಸ್‌ ಕೂಡ ಕೆಲಹೊತ್ತು ಬಾಕಿಯಾಯಿತು. ಇತ್ತ ಕಿನ್ನಿಮೂಲ್ಕಿ ಮುಖ್ಯರಸ್ತೆಯಲ್ಲಿ ಅಜ್ಜರಕಾಡು ತಿರುವಿನಲ್ಲಿ ಭಾರೀ ನೀರು ರಸ್ತೆಯಲ್ಲಿಯೇ ಪ್ರವಹಿಸಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಚಾಲಕರು ತೀವ್ರ ತೊಂದರೆಗೀಡಾದರು. 

ರಜೆ ಅಧಿಕಾರ ಮುಖ್ಯೋಪಾಧ್ಯಾಯರಿಗೆ
ಮಳೆಯ ವಾತಾವರಣವನ್ನು ನೋಡಿಕೊಂಡು ಸ್ಥಳೀಯವಾಗಿ ಇರುವ ಪರಿಸ್ಥಿತಿ ಗಮನಿಸಿ ಆಯಾ ಶಾಲಾ ಮುಖ್ಯೋಪಾಧ್ಯಾಯರು ರಜೆ ನೀಡುವ ವಿವೇಚನಾ ಅಧಿಕಾರವನ್ನು ಈಗಾಗಲೇ ಜಿಲ್ಲಾಧಿಕಾರಿಯವರು ನೀಡಿದ್ದಾರೆ. ಹಾಗಾಗಿ ಮಳೆ ಸಂದರ್ಭ ಆಯಾ ಶಾಲೆಗಳಿಗೆ ರಜೆ ಘೋಷಿಸಲು ಮೇಲಧಿಕಾರಿಗಳ ಒಪ್ಪಿಗೆ ಬೇಕಾಗಿಲ್ಲ. ಪಡುಬಿದ್ರಿ ಭಾಗದಲ್ಲಿ ಹೆಚ್ಚು ನೀರು ನಿಂತ ಪರಿಣಾಮ ಆ ಭಾಗದ ಶಾಲೆಗಳ ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಿರುವ ಮಾಹಿತಿ ಬಂದಿದೆ. 
– ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಡುಪಿ 

Advertisement

ಚರಂಡಿ ಎಲ್ಲಿ ಹೋಯಿತು?
ಕರಾವಳಿ ಬೈಪಾಸ್‌ನಲ್ಲಿ ಫ್ಲೈ ಓವರ್‌ ಕಾಮಗಾರಿ ಇನ್ನೂ ನಡೆಯುತ್ತಿರುವುದು ಹೌದು. ಆದರೆ ಮಳೆಯ ನೀರು ಹರಿಯಲು ತಾತ್ಕಾಲಿಕ ಕೆಲಸವನ್ನಾದರೂ ಮಾಡಬೇಕಿತ್ತು. ಹೆದ್ದಾರಿ ಪ್ರಾಧಿಕಾರದವರು ಕಣ್ಣು ಮುಚ್ಚಿ ಕುಳಿತಿದ್ದಾರೆಯೇ? ಹೀಗೆ ಮಳೆ ಬರುವಾಗ ನಮ್ಮ ಇಲಾಖೆಯ ಅಧಿಕಾರಿಗಳು ಹೊರಗೆ ಬರಬೇಕು.
– ವಿಶ್ವನಾಥ್‌, ಸ್ಥಳೀಯರು,ಕರಾವಳಿ ಬೈಪಾಸ್‌ 

ಚಿತ್ರ: ಗಣೇಶ್‌ ಕಲ್ಯಾಣಪುರ

Advertisement

Udayavani is now on Telegram. Click here to join our channel and stay updated with the latest news.

Next