ಉಡುಪಿ: ಜಿಲ್ಲೆಯಲ್ಲಿ ರವಿವಾರ ಹಲವೆಡೆ ಸಾಧಾರಣ ಮಳೆಯಾಗಿದೆ. ಕೆಲವು ಪ್ರದೇಶಗಳಲ್ಲಿ ಸಂಜೆ ಬಳಿಕ ಉತ್ತಮ ಮಳೆಯಾಗಿದೆ. ಮಳೆಯ ಜತೆ ಗಾಳಿಯೂ ರಭಸವಾಗಿ ಬೀಸುತ್ತಿತ್ತು.
ಉಡುಪಿ, ಬ್ರಹ್ಮಾವರ, ಕುಂದಾಪುರ, ಬೈಂದೂರು, ಕಾಪು, ಹೆಬ್ರಿ, ಕಾರ್ಕಳ, ಸಿದ್ದಾಪುರ, ಪೆರ್ಡೂರು, ಬೆಳ್ಮಣ್, ಪಡುಬಿದ್ರಿ, ಮಲ್ಪೆ ಸುತ್ತಮುತ್ತ ದಿನವಿಡೀ ಬಿಟ್ಟುಬಿಟ್ಟು ಮಳೆಯಾಗಿದೆ.
ಕುಂದಾಪುರ, ಬೈಂದೂರು, ಮಲ್ಪೆ, ಕಾಪು, ಪಡುಬಿದ್ರಿ ಕಡಲತೀರದ ಗ್ರಾಮಗಳಲ್ಲಿ ಕಡಲ್ಕೊರೆತ ಆತಂಕ ಮುಂದುವರಿದಿದೆ.
ಸಮುದ್ರದ ವಾತಾವರಣ ಪ್ರಕ್ಷುಬ್ಧವಾಗಿದ್ದು, ಬೃಹತ್ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿರುವ ಕಾರಣ ಹಲವು ತೆಂಗಿನ ಮರಗಳು ಕೊಚ್ಚಿಕೊಂಡು ಹೋಗಿವೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಕಡಲಬ್ಬರ ಇನ್ನೂ ಒಂದೆರಡು ದಿನ ಇರುವ ಸಾಧ್ಯತೆ ಇದೆ. ಪ್ರಸ್ತುತ ಆರೆಂಜ್ ಅಲರ್ಟ್ ನೀಡಲಾಗಿದೆ.
ಗಾಳಿ – ಮಳೆಯಿಂದಾಗಿ ಕುಂದಾಪುರ ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳಿಗೆ ಮತ್ತು 21ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ರವಿವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳ ಕಾಲ 36.4 ಮಿ. ಮೀ. ಸರಾಸರಿ ಮಳೆಯಾಗಿದೆ.