Advertisement

2018ಕ್ಕೆ ಉಡುಪಿ ತ್ಯಾಜ್ಯ ಮುಕ್ತ: ಶ್ರೀನಿವಾಸನ್‌

08:55 AM Jul 26, 2017 | Karthik A |

ಉಡುಪಿ: ಉಡುಪಿ ಜಿಲ್ಲೆಯನ್ನು 2018ರ ಅ. 2ರೊಳಗೆ ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಕ್ರಿಯಾಯೋಜನೆ ರೂಪಿಸಲಾಗಿದೆ. ಇನ್ನು ಮುಂದೆ ಘನ ಮತ್ತು ದ್ರವ ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸಲಾಗವುದು. ಉಡುಪಿಯು ದಕ್ಷಿಣ ಭಾರತದ ಮೊದಲ ತ್ಯಾಜ್ಯಮುಕ್ತ ಜಿಲ್ಲೆಯಾಗಲಿದೆ ಎಂದು ಇಂಡಿಯನ್‌ ಗ್ರೀನ್‌ ಸರ್ವಿಸ್‌ ವೆಲ್ಲೂರಿನ ಯೋಜನಾ ನಿರ್ದೇಶಕ ವೆಲ್ಲೂರು ಶ್ರೀನಿವಾಸನ್‌ ಹೇಳಿದರು. ಮಣಿಪಾಲದ ರಜತಾದ್ರಿಯ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಮಂಗಳವಾರ ಉಡುಪಿ ಜಿಲ್ಲೆಯ ಎಲ್ಲ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಿಬಂದಿಗೆ ಆಯೋಜಿಸಿದ್ದ ಘನ ಮತ್ತು ದ್ರವತ್ಯಾಜ್ಯ ವಿಲೇವಾರಿ ಕುರಿತ ಕಾರ್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

Advertisement

2013-14ರಲ್ಲಿ ಬೆಂಗಳೂರಿನಲ್ಲಿ ನಾನು ಅಧ್ಯಯನ ಮಾಡಿದ ಪ್ರಕಾರ ಅಲ್ಲಿ ಉತ್ಪಾದನೆಯಾಗುವ ಕಸದಿಂದ ತಿಂಗಳಿಗೆ ಕನಿಷ್ಠ 27 ಕೋ.ರೂ. ಆದಾಯ ಗಳಿಸಬಹುದಾಗಿದ್ದು, ಅಷ್ಟು ಪ್ರಮಾಣದ ಆದಾಯ ಕಸದ ರೂಪದಲ್ಲಿ ವ್ಯರ್ಥವಾಗುತ್ತಿದೆ. ಈಗಾಗಲೇ ನಾನು ಈಶಾನ್ಯ ಭಾರತದ ಅಸ್ಸಾಂನ ಒಂದು ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ರೂಪು ಗೊಳಿಸಿದ್ದು, ಆ ದಿಶೆಯಲ್ಲಿ ಆ. 15ರಂದು ಉಡುಪಿಯ ಕೆಲವು ಗ್ರಾಮಗಳನ್ನು ಪೈಲಟ್‌ ಯೋಜನೆಯಲ್ಲಿ ತೆಗೆದುಕೊಂಡು ಕಾರ್ಯ ನಿರ್ವಹಿಸಲಾಗುವುದು ಎಂದರು.

ಕಾರ್ಯಾಗಾರವನ್ನು ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಮಾತನಾಡಿ, ಉಡುಪಿ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದರೂ, ಸಂಗ್ರಹಿಸಿದ ತ್ಯಾಜ್ಯದ ವಿಲೇವಾರಿಯಲ್ಲಿ ಹಿಂದುಳಿದಿದ್ದೇವೆ. ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕ ರೀತಿಯಲ್ಲಿ ಮಾಡುವ ಕುರಿತು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಬೇಕಿದೆ. ಅದೇ ರೀತಿ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಜಲಜಾಗೃತಿ ಮೂಡಿಸಿ, ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸದಸ್ಯೆ ಗೀತಾಂಜಲಿ ಸುವರ್ಣ, ಉಡುಪಿ ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ತಾ.ಪಂ. ಅಧ್ಯಕ್ಷರಾದ ಉಡುಪಿಯ ನಳಿನಿ ಪ್ರದೀಪ್‌ ರಾವ್‌, ಕುಂದಾಪುರದ ಜಯಶ್ರೀ ಮೊಗವೀರ, ಕಾರ್ಕಳದ ಮಾಲಿನಿ ಶೆಟ್ಟಿ, ಪುರಸಭೆ ಅಧ್ಯಕ್ಷರಾದ ಕಾಪುವಿನ ಸೌಮ್ಯಾ, ಕಾರ್ಕಳದ ಅನಿತಾ ಅಂಚನ್‌, ಕುಂದಾಪುರದ ವಸಂತಿ ಸಾರಂಗ್‌, ಸಾಲಿಗ್ರಾಮ ಪ.ಪಂ. ಅಧ್ಯಕ್ಷೆ ರತ್ನಾ ನಾಗರಾಜ್‌ ಜಿಲ್ಲಾ ಪರಿಸರ ಅಧಿಕಾರಿ ಲಕ್ಷ್ಮೀಕಾಂತ್‌ ಉಪಸ್ಥಿತರಿದ್ದರು. ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌ ಸ್ವಾಗತಿಸಿದರು. ಉಪಕಾರ್ಯದರ್ಶಿ ನಾಗೇಶ್‌ ರಾಯ್ಕರ್‌ ವಂದಿಸಿದರು.

‘ತ್ಯಾಜ್ಯಮುಕ್ತ ನಗರ: ಎಲ್ಲರ ಹೊಣೆ’
ಜಿಲ್ಲೆಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಅಧಿಕವಾಗಿದೆ. ಅಗತ್ಯವಿರುವ ಸರಕಾರಿ ಭೂಮಿ ಹಾಗೂ ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡುವ ಪರಿಣಿತರ ಕೊರತೆಯಿದೆ. ಜಿಲ್ಲೆಯಲ್ಲಿ ತ್ಯಾಜ್ಯ ನಿರ್ಮೂಲನೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಏರ್ಪಡಿಸಲಾಗಿದೆ. ಕಸವನ್ನು ಸಮರ್ಪಕವಾಗಿ ಬಳಸಿದರೆ ಒಂದು ಸಂಪನ್ಮೂಲ. ಈಗಾಗಲೇ ಬಯಲು ಶೌಚಮುಕ್ತ ಜಿಲ್ಲೆಯಾಗಿದ್ದು, ಇಡೀ ದೇಶದಲ್ಲಿ ಉಡುಪಿ ಜಿಲ್ಲೆಯನ್ನು ತ್ಯಾಜ್ಯಮುಕ್ತ ಮಾದರಿ ಜಿಲ್ಲೆಯನ್ನಾಗಿ ಮಾಡುವ ಜವಾಬ್ದಾರಿ ಮತ್ತು ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next