Advertisement

ಉಡುಪಿ: ಯಾರಾಗುವರು ಉಸ್ತುವಾರಿ ?

08:56 AM May 20, 2018 | |

ಉಡುಪಿ: ಬಿ.ಎಸ್‌. ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ ಮೂರೇ ದಿನಗಳಲ್ಲಿ ರಾಜೀನಾಮೆ ಕೊಟ್ಟಿದ್ದು, ಮುಂದಿನ ಅವಕಾಶ ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿಕೂಟಕ್ಕೆ ಸಿಕ್ಕಿದೆ. ಬಿಜೆಪಿ ಸರಕಾರ ರಚನೆಯಾಗಿದ್ದರೆ ಜಿಲ್ಲೆಯ ಐವರು ಶಾಸಕರಲ್ಲಿ ಒಬ್ಬರಲ್ಲ ಒಬ್ಬರಿಗೆ ಸಚಿವ ಪದವಿ ಸಿಗುವ ಖಾತ್ರಿ ಇತ್ತು. ಆದರೆ ಈಗ ಕಾಂಗ್ರೆಸ್‌- ಜೆಡಿಎಸ್‌ ಸರಕಾರ ರಚಿಸಿವೆ, ಈ ಪಕ್ಷಗಳಿಂದ ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ವಿಧಾನಸಭಾ ಸದಸ್ಯನಿಲ್ಲ. ಹೀಗಾಗಿ ಉಡುಪಿ ಜಿಲ್ಲೆಗೆ ಉಸ್ತುವಾರಿ ಸಚಿವರು ಯಾರಾಗುವರು ಎಂಬ ಕುತೂಹಲ ಉಂಟಾಗಿದೆ.

Advertisement

ಈಗಿರುವ ಸಾಧ್ಯತೆ ಪ್ರಕಾರ ವಿಧಾನ ಪರಿಷತ್‌ ಸದಸ್ಯ ಕುಂದಾಪುರದ ಪ್ರತಾಪಚಂದ್ರ ಶೆಟ್ಟಿಯವರಿಗೆ ಅವಕಾಶಗಳು ಹೆಚ್ಚಿವೆ. ಮೈತ್ರಿಕೂಟ ಸರಕಾರವಿರುವಾಗ ಸಾಮಾನ್ಯವಾಗಿ ಜಿಲ್ಲೆಗಳನ್ನು ಉಭಯ ಪಕ್ಷಗಳು ಹಂಚಿಕೊಳ್ಳುತ್ತವೆ. ಹೀಗಾಗಿ ದ.ಕ., ಉಡುಪಿ ಜಿಲ್ಲೆ ಎರಡೂ ಜಿಲ್ಲೆಯನ್ನು ಕಾಂಗ್ರೆಸ್‌ ವಹಿಸಿಕೊಳ್ಳಬಹುದು ಅಥವಾ ಒಂದು ಜಿಲ್ಲೆಯನ್ನು ಕಾಂಗ್ರೆಸ್‌ ಮತ್ತು ಇನ್ನೊಂದು ಜಿಲ್ಲೆಯನ್ನು ಜೆಡಿಎಸ್‌ ಹಂಚಿಕೊಳ್ಳಬಹುದು. 

ಯಾರು ಉಸ್ತುವಾರಿ ಸಚಿವರು?
ಇದುವರೆಗೆ ಉಡುಪಿ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರಾಗಿದ್ದ ಒಂಬತ್ತು ಮಂದಿ ಶಾಸಕರಲ್ಲಿ ಕೆ. ಜಯಪ್ರಕಾಶ್‌ ಹೆಗ್ಡೆ -ಜನತಾದಳ, ಡಿ.ಟಿ. ಜಯಕುಮಾರ್‌ -ಜೆಡಿಎಸ್‌, ಡಾ| ವಿ.ಎಸ್‌. ಆಚಾರ್ಯ, ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿಯವರಾದರೆ ಉಳಿದವರೆಲ್ಲರೂ ಕಾಂಗ್ರೆಸ್‌ ಸರಕಾರದಲ್ಲಿ ಸಚಿವರಾಗಿದ್ದರು. ಡಿ.ಟಿ. ಜಯಕುಮಾರ್‌ ಅವರು ಎಚ್‌.ಡಿ. ಕುಮಾರಸ್ವಾಮಿ- ಯಡಿಯೂರಪ್ಪ ಸರಕಾರವಿರುವಾಗ ಉಸ್ತುವಾರಿ ಸಚಿವರಾಗಿದ್ದರು. ಈಗ ಮತ್ತೆ ಅಂತಹ ಕಾಲ ಕೂಡಿ ಬರುತ್ತಿದೆ.

ಉಡುಪಿ ಜಿಲ್ಲೆ ಜೆಡಿಎಸ್‌ ಪಾಲಿಗಾದರೆ ಹೊರಗಿನ ಸಚಿವರು ಇಲ್ಲಿಗೆ ಉಸ್ತುವಾರಿಯಾಗಿ ಬರಲಿದ್ದಾರೆ. ವಿಧಾನ ಪರಿಷತ್‌ ಸದಸ್ಯರಾಗಿ ಸಚಿವರಾಗಬಲ್ಲ ವರ್ಚಸ್ಸು ಹೊಂದಿದ ಸ್ಥಳೀಯ ಜೆಡಿಎಸ್‌ ನಾಯಕರು ಇಲ್ಲವಾದ ಕಾರಣ ಹೊರಗಿನ ಜಿಲ್ಲೆಯವರು ಉಸ್ತುವಾರಿಯಾಗುವುದು ಅನಿವಾರ್ಯ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಪ್ರತಾಪಚಂದ್ರ ಶೆಟ್ಟಿಯವರಿಗೆ ಅವಕಾಶ ಕೂಡಿ ಬಂದೀತು. ಸುದೀರ್ಘ‌ ಕಾಲ ವಿಧಾನಸಭಾ ಸದಸ್ಯರಾಗಿ, ವಿಧಾನ ಪರಿಷತ್‌ ಸದಸ್ಯರಾಗಿ ಆಡಳಿತಾತ್ಮಕ ಸೂಕ್ಷ್ಮ ವಿಷಯಗಳು ತಿಳಿದಿದ್ದರೂ ಪ್ರತಾಪಚಂದ್ರ ಶೆಟ್ಟಿಯವರಿಗೆ ಸಚಿವರಾಗುವ ಯೋಗ ಬಂದಿರಲಿಲ್ಲ. ಈಗದು ಬರುವ ಲಕ್ಷಣಗಳಿವೆ. 

ಇವರು ಉಸ್ತುವಾರಿ ಸಚಿವರಾಗಿದ್ದರು
 ಕೆ. ಜಯಪ್ರಕಾಶ್‌ ಹೆಗ್ಡೆ, ವಸಂತ ಸಾಲ್ಯಾನ್‌, ರೋಶನ್‌ ಬೇಗ್‌, ಸುಮಾ ವಸಂತ್‌, ಮೋಟಮ್ಮ, ಡಿ.ಟಿ. ಜಯಕುಮಾರ್‌, ಡಾ| ವಿ.ಎಸ್‌. ಆಚಾರ್ಯ, ಕೋಟ ಶ್ರೀನಿವಾಸ ಪೂಜಾರಿ, ಪ್ರಮೋದ್‌ ಮಧ್ವರಾಜ್‌ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಇದುವರೆಗೆ ಒಂಬತ್ತು ಮಂದಿ ಸಚಿವರಾಗಿದ್ದು, ಮುಂದಿನವರು ಹತ್ತನೆಯವರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next