Advertisement

ಭಾರೀ ಮಳೆ-ಗಾಳಿಗೆ ನಲುಗಿದ ಉಡುಪಿ

02:41 AM Aug 07, 2019 | Team Udayavani |

ಉಡುಪಿ: ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ನಗರದ ವಿವಿಧೆಡೆ ಅಪಾರ ಹಾನಿ ಉಂಟಾಗಿದೆ. ಗಾಳಿ ಸಹಿತ ಗುಡುಗು ಮಳೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗ್ಗೆ ಗಾಳಿ ಮಳೆಗೆ ಹಲವೆಡೆ ವಿದ್ಯುತ್‌ ಕಂಬಗಳು ಸಹಿತ ಹಲವಾರು ಮರಗಳು ಧರಾಶಾಯಿಯಾದವು.

Advertisement

ಅಜ್ಜರಕಾಡು

ಅಜ್ಜರಕಾಡುವಿನ ಎಲ್ಐಸಿ ಪಕ್ಕದ ರಸ್ತೆಯ ಬಳಿ 5ಕ್ಕೂ ಅಧಿಕ ಬೃಹತ್‌ ಗಾತ್ರದ ಮರಗಳು ವಿದ್ಯುತ್‌ ತಂತಿಯ ಮೇಲೆ ಬಿದ್ದಿದ್ದವು. ಇದರ ಪರಿಣಾಮ 10ರಷ್ಟು ವಿದ್ಯುತ್‌ ಕಂಬಗಳು ಉರುಳಿವೆ. 4 ಅಂಗಡಿಗಳು ಮತ್ತು ನಿಲ್ಲಿಸಿದ್ದ ಶಾಲಾ ವಾಹನವೊಂದು ಜಖಂಗೊಂಡಿವೆ. ವಿದ್ಯುತ್‌ ಕಂಬಗಳು, ಮರಗಳು ನಡುರಸ್ತೆಯಲ್ಲಿ ಉರುಳಿಬಿದ್ದ ಪರಿಣಾಮ ಅಜ್ಜರಕಾಡು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು. ಮರಬಿದ್ದ ಬಗ್ಗೆ ಹಲವರಿಗೆ ಮಾಹಿತಿ ಇಲ್ಲದ ಕಾರಣ ಬಸ್ಸು ಸಹಿತ ಇತರ ವಾಹನಗಳು ಅಜ್ಜರಕಾಡು ಬಳಿ ಬಂದು ಹಿಂದಿರುಗುತ್ತಿದ್ದ ದೃಶ್ಯಗಳು ಕಂಡುಬಂತು. ಟೀಚರ್ ಟ್ರೈನಿಂಗ್‌ ಶಾಲೆಯ ಪಕ್ಕದ ಅನಂತರಾಮ್‌ ಆಚಾರ್‌ ಅವರ ಕ್ಯಾಂಟೀನ್‌ ಮಗುಚಿ ಬಿದ್ದಿದೆ.

ಮಿಷನ್‌ ಕಂಪೌಂಡ್‌

ಮಿಷನ್‌ ಕಂಪೌಂಡ್‌ ಬಳಿ ವಿದ್ಯುತ್‌ ಕಂಬವೊಂದು ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾವೊಂದರ ಮೇಲೆ ಬಿದ್ದ ಪರಿಣಾಮ ರಿಕ್ಷಾ ಜಖಂಗೊಂಡ ಘಟನೆ ನಡೆಯಿತು. ಯಾರಿಗೂ ಹಾನಿಯಾಗಿಲ್ಲ. ತತ್‌ಕ್ಷಣವೇ ಮೆಸ್ಕಾಂಗೆ ಮಾಹಿತಿ ನೀಡಿ ವಿದ್ಯುತ್‌ ಸರಬರಾಜು ಸ್ಥಗಿತಗೊಳಿಸಲಾಯಿತು.

Advertisement

ಚಿಟ್ಪಾಡಿ

ಚಿಟ್ಪಾಡಿ ವಾರ್ಡ್‌ನ ಗಿರಿಜಾ ಶೆಟ್ಟಿಗಾರ್ತಿ ಎಂಬವರ ಮನೆಗೆ ಬೃಹತ್‌ ಗಾತ್ರದ ಮರಬಿದ್ದು ಅಪಾರ ಪ್ರಮಾಣದಲ್ಲಿ ಹಾನಿಯುಂಟಾಯಿತು. ಮರಬಿದ್ದ ರಭಸಕ್ಕೆ ಗಿರಿಜಾ ಶೇರಿಗಾರ್ತಿ ಅವರಿಗೂ ಅಲ್ಪಸ್ವಲ್ಪ ಗಾಯಗಳಾದವು. ಸ್ಥಳಕ್ಕೆ ವಾರ್ಡ್‌ ಸದಸ್ಯರಾದ ಕೃಷ್ಣರಾವ್‌ ಕೊಡಂಚ ಹಾಗೂ ನಗರಸಭೆಯ ಹೆಲ್ತ್ ಇನ್‌ಸ್ಪೆಕ್ಟರ್‌ ಆನಂದ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆಗೆ ಸುಮಾರು 2 ಲ.ರೂ.ನಷ್ಟು ಸಂಭವಿಸಿದೆ.

ಮಣಿಪಾಲ

ಮಾಧವಕೃಪಾ ಶಾಲೆಯ ಬಳಿ ರಸ್ತೆಯಲ್ಲಿ ಹಾದು ಹೋಗುವ ನೀರಿನಿಂದ ಚರಂಡಿ ಯಾವು ದೆಂದು ಗೋಚರಿಸದೆ ವಾಹನ ಸವಾರರು ಸಹಿತ ವಿದ್ಯಾರ್ಥಿಗಳು, ಪಾದಚಾರಿಗಳು ತೊಂದರೆ ಗೀಡಾದರು. ಚರಂಡಿಗೆ ಮಳೆ ನೀರು ತುಂಬಿದ ಕಾರಣ ನೀರು ಉಕ್ಕಿ ಹರಿಯುತ್ತಿತ್ತು. ಮಣಿಪಾಲ ಪ್ರಸ್‌ ಬಳಿ ನಿಲ್ಲಿಸಲಾಗಿದ್ದ ಕಾರೊಂದರ ಮೇಲೆ ಮರಬಿದ್ದು ಕಾರಿಗೆ ಹಾನಿಯಾಗಿದೆ.

ಬೈಲೂರು

ಬೈಲೂರಿನ ಶಾಂತಿನಗರ 31ನೇ ವಾರ್ಡ್‌ನ ಅನಂತಕೃಷ್ನ ಕಾಂಪ್ಲೆಕ್ಸ್‌ನ ವಿಷ್ಣುಭಟ್ ಅವರ ಕಾಂಪೌಂಡ್‌ಗೆ ಮರ ಬಿದ್ದು ಹಾನಿಯಾಗಿದೆ. ಸಮೀಪದಲ್ಲೇ ಇದ್ದ ವಿದ್ಯುತ್‌ ಕಂಬ ಕೂಡ ಮಗುಚಿಬಿದ್ದಿದೆ.

ಪರ್ಕಳ

ಪರ್ಕಳದ ಬಿ.ಎಂ. ಶಾಲೆಯ ಛಾವಣಿ ಕುಸಿದು 4 ಕೋಣೆಗಳಿಗೆ ಹಾನಿಯುಂಟಾಯಿತು. ಸುಮಾರು 600ರಷ್ಟು ಹಂಚುಗಳು ನೆಲ ಕ್ಕುರುಳಿದ್ದವು. 50ರಿಂದ 60 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಕೌನ್ಸಿಲರ್‌ಗಳಾದ ಮಂಜುನಾಥ ಮಣಿಪಾಲ, ಸುಮಿತ್ರಾ ಶೆಟ್ಟಿಗಾರ್‌, ತಹಶೀಲ್ದಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರಾದ ಅನಂತ ಕೃಷ್ಣ ವೈ. ಅವರು ಹಂಚುಗಳನ್ನು ಒದಗಿಸಿದ್ದಾರೆ. ಮೊದಿನ್‌ ಅವರು ಸಹಕರಿಸಿದ್ದಾರೆ. ಪರ್ಕಳ ಸಮೀಪದ ಕೃಷ್ಣ ಶೆಟ್ಟಿಗಾರ್‌ ಎಂಬವರ ಮನೆಗೆ ಮರಬಿದ್ದು ಹಾನಿಯಾಗಿದೆ. ಇಲ್ಲಿನ ಸ್ಟೇಟ್ಬ್ಯಾಂಕ್‌ ಸಮೀಪವಿರುವ ನಾರಾಯಣ ನಾಯಕ್‌ ಅವರ ಕಟ್ಟಡದ ಮೇಲ್ಭಾಗಕ್ಕೆ ಮರ ಬಿದ್ದು ಹಾನಿಯಾಗಿದೆ.

ಇಂದ್ರಾಳಿ

ಭಾರೀ ಗಾಳಿ, ಮಳೆಗೆ ಆಂಜನೇಯ ಇಂದ್ರಾಣಿ ತೀರ್ಥದ ಶ್ರೀನಾಗರ ಸನ್ನಿಧಿಯ ಛಾವಣೆಗೆ ಹಾನಿಯಾಗಿದೆ. ಇಲ್ಲೇ ಸಮೀಪ ದಲ್ಲಿದ್ದ ಕಟ್ಟಡಕ್ಕೂ ಹಾನಿಯುಂಟಾಗಿದೆ.

ಹಿರಿಯಡ್ಕ

ಗಾಳಿಯ ರಭಸಕ್ಕೆ ಕಾಜಾರುಗುತ್ತುವಿನ ಸುಜಾತಾ ನಾಯಕ್‌ ಹಾಗೂ ಹಿರಿಯಡ್ಕ ಅಂಜಾರು ಗ್ರಾಮದ ಕೃಷ್ಣಪ್ಪ ಪೂಜಾರಿ ಅವರ ಮನೆಗಳು ಸಂಪೂರ್ಣ ಹಾನಿಯಾಗಿವೆ. ಸ್ಥಳಕ್ಕೆ ತಹಶೀಲ್ದಾರ್‌ ಹಾಗೂ ಹಿರಿಯಡ್ಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಾವಂಜೆ

ಹಾವಂಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಕುದ್ರು ನಿವಾಸಿಯಾದ ಮರಿಯಾ ಡಿ’ಅಲ್ಮೇಡಾ ಅವರ ಮನೆ ಸುತ್ತ ನೆರೆ ನೀರು ವಿಪರೀತ ಏರಿಕೆಯಾಗಿತ್ತು. ಬಾಣಬೆಟ್ಟು ಪಾರ್ವತಿ ಪೂಜಾರ್ತಿ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಬ್ರಹ್ಮಾವರ ತಹಶೀಲ್ದಾರ್‌ ಕಿರಣ್‌ ಗೋಪಾಲ ಕೃಷ್ಣ ಗೌರಯ್ಯ, ಕಂದಾಯ ನಿರೀಕ್ಷಕರಾದ ಲಕ್ಷ್ಮೀನಾರಾಯಣ ಭಟ್, ಹಾವಂಜೆ ಗ್ರಾ.ಪಂ.ಅಧ್ಯಕ್ಷೆ ವಸಂತಿ ಶೆಟ್ಟಿ, ಉಪಾಧ್ಯಕ್ಷ ಸತೀಶ್‌ ಶೆಟ್ಟಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಗ್ರಾಮ ಕರಣಿಕ ಮಾಳಪ್ಪ ರೇವಣ್ಣನವರ್‌, ಪಂಚಾಯತ್‌ ಸದಸ್ಯ ಉದಯ ಕೋಟ್ಯಾನ್‌ ಹಾಗೂ ಸಿಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೈಲಿನ ಮೇಲೆ ಬಿದ್ದ ಮರ

ಮಂಗಳವಾರ ಬೆಳಗ್ಗೆ 5.30ಕ್ಕೆ ಮಂಗಳೂರಿನತ್ತ ಸಾಗುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಮರ ಬಿದ್ದಿದೆ. ಯಾವುದೇ ಹಾನಿ ಸಂಭವಿಸಲಿಲ್ಲ. ತತ್‌ಕ್ಷಣ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next