ಶಿರ್ವ: ವಿಶ್ವದ ಪರಿಕಲ್ಪನೆಗೆ ಹುಟ್ಟೂರು ಎಲ್ಲರ ಊರು-ಎಲ್ಲೂರು ಬೆನ್ನೆಲುಬಾಗಿದ್ದು ಪ್ರೋತ್ಸಾಹ ,ಸ್ಪೂರ್ತಿ ನೀಡುತ್ತಿದೆ.ವಿಶ್ವದ ದೃಷ್ಟಿಕೋನ ಪ್ರೋತ್ಸಾಹಿಸುವ ಹುಟ್ಟೂರಿನ ಜನತೆಯ ಸಹಕಾರದಿಂದ ಪರ್ಯಾಯ ಯಶಸ್ವಿಯಾಗಿ ಶ್ರೀಕೃಷ್ಣ ದೇವರ ಅನುಗ್ರಹ ಎಲ್ಲರಿಗೂ ಲಭಿಸಲಿ.ವಿಶ್ವವನ್ನು ಕಾಣುವ ಹುಟ್ಟುಗುಣ ಹೊಂದಿದ ವಿಶ್ವಗೀತಾ ಪರ್ಯಾಯಕ್ಕೆ ಮೂಲಸ್ಪೂರ್ತಿ ಹುಟ್ಟೂರು ಎಂದು ಪರ್ಯಾಯ ಪೀಠಾರೋಹಣ ಗೈಯಲಿರುವ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಹೇಳಿದರು.
ಜ. 10 ರಂದು ಕುತ್ಯಾರು ಯುವಕ ಮಂಡಲದ ವಠಾರದಲ್ಲಿ ಪುತ್ತಿಗೆ ಶ್ರೀ ಸಮ್ಮಾನ ಸಮಿತಿ,ಕುತ್ಯಾರು ಯುವಕ ಮಂಡಲ ಮತ್ತು ಕುತ್ಯಾರು ಉಲ್ಲಾಯ ಫ್ರೆಂಡ್ಸ್ ನ ಆಶ್ರಯದಲ್ಲಿ ಎಲ್ಲೂರು ಸೀಮೆಯ ಭಕ್ತರ ಸಮಕ್ಷಮದಲ್ಲಿ ನಡೆದ ಹುಟ್ಟೂರ ಗುರುವಂದನೆ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ವಿಶ್ವಾಸದ ಸಂಕೇತವಾಗಿ ಹುಟ್ಟೂರ ಗುರುವಂದನೆ ನೆರವೇರಿಸಿದ ಹುಟ್ಟೂರಿನ ಹೆಮ್ಮೆಯ ಪುರೋಹಿತ ಕುತ್ಯಾರು ಕೇಂಜ ಶ್ರೀಧರ ತಂತ್ರಿಯವರಿಗೆ ರಾಜಪುರೋಹಿತರೆಂದು ಗುರುತಿಸುತ್ತಾ , ಸಮಾಜಕ್ಕೆ ಸ್ಪೂರ್ತಿ ನೀಡುವ ಅವರ ಸಮಷ್ಠಿ ಚಿಂತನೆಯಿಂದ ಊರು,ಸಮಾಜ,ದೇಶ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಶುಭಾಶಂಸನೆಗೈದು ವಿಶ್ವದ ಹಿಂದೂಸಮಾಜಕ್ಕೆ ಉಪದೇಶ, ಮಾರ್ಗದರ್ಶನ ನೀಡುವುದರೊಂದಿಗೆ ಶ್ರೀ ಕೃಷ್ಣನ ಉಪದೇಶ ಜಗತ್ತಿಗೇ ಪ್ರಚಾರ ಮಾಡುವ ವ್ಯಕ್ತಿ ಮತ್ತು ಶಕ್ತಿಯಾಗಿರುವ ಪುತ್ತಿಗೆ ಶ್ರೀಗಳಿಗೆ ಪರ್ಯಾಯದೊಂದಿಗೆ ಶ್ರೀ ರಾಮ ಪ್ರತಿಷ್ಠೆಯ ಯೋಗಾಯೋಗವೂ ಲಭಿಸಿದೆ ಎಂದು ಹೇಳಿದರು. ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಮನುಕುಲದ ಸೇವೆಯನ್ನೇ ಗುರಿಯನ್ನಾಗಿಸಿ ಕಾಯಾ ವಾಚಾ ಮನಸಾ ಕೃಷ್ಣನಿಗೆ ಅರ್ಪಿಸಿ, ದೇಶಕ್ಕೆ ವಿಶ್ವಮಾನ್ಯತೆ ಒದಗಿಸಿದ ವಿಶ್ವಗುರು ಪುತ್ತಿಗೆ ಶ್ರೀಗಳು ಪರ್ಯಾಯವೇರುವ ಸಂದರ್ಭದಲ್ಲಿ ಶಾಸಕನಾಗಿ ಕರ್ತವ್ಯ ನಿರ್ವಹಿಸುವ ಸೌಭಾಗ್ಯ ಒದಗಿಬಂದಿದೆ ಎಂದು ಹೇಳಿದರು. ಪುತ್ತಿಗೆ ಶ್ರೀಗಳನ್ನು ಚೆಂಡೆ,ವಾದ್ಯಘೋಷಗಳೊಂದಿಗೆ ಸಭಾ ಮಂಟಪಕ್ಕೆ ಬರಮಾಡಿಕೊಳ್ಳಲಾಯಿತು.
ಮಟ್ಟಾರು ರತ್ನಾಕರ ಹೆಗ್ಡೆ,ಕುತ್ಯಾರು ಕೃಷ್ಣಮೂರ್ತಿ ಭಟ್,ಅರುಣಾಕರ ಶೆಟ್ಟಿ, ಕುತ್ಯಾರು ಅರಮನೆಯ ಜಿನೇಶ್ ಬಲ್ಲಾಳ್,ವಿ. ಸುಬ್ಬಯ್ಯ ಹೆಗ್ಡೆ ,ಕುತ್ಯಾರು ಗ್ರಾ.ಪಂ. ಅಧ್ಯಕ್ಷ ಜನಾರ್ಧನ ಆಚಾರ್ಯ,ಸಂಘಟಕರಾದ ಕೇಂಜ ಅಬ್ಬೆಟ್ಟುಗುತ್ತು ಸಾಯಿನಾಥ ಶೆಟ್ಟಿ, ಕುತ್ಯಾರು ಯುವಕ ಮಂಡಲದ ಅಧ್ಯಕ್ಷ ಸುಶಾಂತ ಶೆಟ್ಟಿ,ಉಲ್ಲಾಯ ಫ್ರೆಂಡ್ಸ್‌ನ ಅಧ್ಯಕ್ಷ ಪವನ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿದ್ದರು.
ಕುತ್ಯಾರು ನವೀನ್ ಶೆಟ್ಟಿ ಸ್ವಾಗತಿಸಿದರು.ನಿವೃತ್ತ ಪ್ರಾಂಶುಪಾಲ ಅನಂತ ಮೂಡಿತ್ತಾಯ ಕಾರ್ಯಕ್ರಮ ನಿರೂಪಿಸಿ, ಸಮ್ಮಾನ ಸಮಿತಿಯ ಸಂಚಾಲಕ ಕುತ್ಯಾರು ಕೇಂಜ ಶ್ರೀಧರ ತಂತ್ರಿ ವಂದಿಸಿದರು. ಬಳಿಕ ಮೈಸೂರು ಶ್ರೀ ರಾಮಚಂದ್ರ ಆಚಾರ್ಯ ಮತ್ತು ತಂಡದವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ: ತೀರ್ಥಹಳ್ಳಿ: ಶ್ರೀ ರಾಮೇಶ್ವರ ಕ್ಷೇತ್ರದಲ್ಲಿ ಎಳ್ಳಮಾವಾಸ್ಯೆ ಜಾತ್ರೆ: ಭಕ್ತರಿಂದ ತೀರ್ಥಸ್ನಾನ