Advertisement

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹತ್ತು ಹಲವು ಸಮಸ್ಯೆ

05:57 PM Jan 26, 2022 | Team Udayavani |

ಉಡುಪಿ: ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸಿಬಂದಿಯಿಲ್ಲದ ಕಾರಣ ಯಾವ ಕೆಲಸ ಕಾರ್ಯಗಳೂ ನಡೆಯದೇ ಸಾರ್ವಜನಿಕರು ಬರಿಗೈನಲ್ಲಿ ಹಿಂದಿರು ಗುವಂತಾಗಿದೆ.

Advertisement

ಇತ್ತೀಚೆಗಷ್ಟೇ ಪ್ರಾಧಿಕಾರದ ಸಿಬಂದಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಲಾಗಿತ್ತು. ವಾಣಿಜ್ಯ ಭೂಮಿ ಪರಿವರ್ತನೆಗಾಗಿ ರೇಷ್ಮಾ ನಾಯಕ್‌ ಅವರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರಾಧಿಕಾರದ ನಗರ ಯೋಜನ ಸದಸ್ಯ (ತಾಂತ್ರಿಕ ಸಿಬಂದಿ)/ಸಹಾಯಕ ನಿರ್ದೇಶಕ ಗುರುಪ್ರಸಾದ್‌, ಸಹಾಯಕ ಯೋಜನ ಸದಸ್ಯೆ (ತಾಂತ್ರಿಕ ಸಿಬಂದಿ) ನೈಮಾ ಸಹೀದ್‌, ಹೊರಗುತ್ತಿಗೆ ನೌಕರ ಶಿವಪ್ರಸಾದ್‌ ಅವರೆಲ್ಲ ಸೇರಿ 3 ಲ.ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದರು. ಬಳಿಕ 2.5 ಲ.ರೂ.ಗೆ ಒಪ್ಪಿದ್ದರು. ಈ ಬಗ್ಗೆ ರೇಷ್ಮಾ ಅವರು ಎಸಿಬಿಗೆ ಮಾಹಿತಿ ನೀಡಿದ್ದು, ಅದರಂತೆ ದಾಳಿ ನಡೆದಿತ್ತು. ಈಗ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಆದರೂ ಮತ್ತೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸುವಂತಿಲ್ಲ. ಬೇರೆಡೆ ಅವಕಾಶ ಇದ್ದರೆ ಕೆಲವು ಷರತ್ತುಗಳನ್ನು ಪೂರೈಸಿ ಕರ್ತವ್ಯ ನಿರ್ವಹಿಸಬಹುದಾಗಿದೆ.

ಇನ್ನೂ ಆಗಿಲ್ಲ ಸಿಬಂದಿ ನೇಮಕ
ನಗರಾಭಿವೃದ್ಧಿ ಪ್ರಾಧಿಕಾರದ ಮೇಲೆ ಜ.13ರಂದು ಎಸಿಬಿ ದಾಳಿ ನಡೆದ ಬಳಿಕ ಅಲ್ಲಿ ಸಿಬಂದಿಯೇ ಇಲ್ಲದಂತಾಗಿದೆ. ಹೊಸ ಸಿಬಂದಿ ನೇಮಕವೂ ನಡೆದಿಲ್ಲ. ಇದರಿಂದಾಗಿ ಸಾವಿರಾರು ಫೈಲ್‌ಗ‌ಳು ವಿಲೇವಾರಿಗೆ ಬಾಕಿ ಉಳಿದಿವೆ. ದಿನವೊಂದಕ್ಕೆ 100ರಿಂದ 150ರಷ್ಟು ಅರ್ಜಿಗಳು ಬರುತ್ತಿವೆ.

ಮಳೆಗಾಲಕ್ಕೂ ಮುನ್ನ
ಕಾಮಗಾರಿ ಮುಗಿಸುವ ತವಕ
ಮೇ, ಜೂನ್‌ ತಿಂಗಳಿಗೂ ಮುನ್ನ ಕಟ್ಟಡ ನಿರ್ಮಾಣ ಸಹಿತ ಹಲವಾರು ಕಾಮಗಾರಿಗಳನ್ನು ಮುಗಿಸುವ ತವಕ ಸಾರ್ವಜನಿಕರಿಗಿದೆ. ಕಟ್ಟಡ ಪರವಾನಿಗೆ ಪಡೆಯಲೂ ಅಲೆದಾಡುವಂತಾಗಿದೆ. ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಸಿಬಂದಿ ನೇಮಕಗೊಳಿಸಿ ಸಾರ್ವಜನಿಕ ರಿಗೆ ಅನುವು ಮಾಡಿಕೊಡುವ ಅಗತ್ಯವಿದೆ.

ಅಧ್ಯಕ್ಷರಿಲ್ಲದ ಪ್ರಾಧಿಕಾರ!
ನಗರಸಭೆ ಪ್ರಾಧಿಕಾರದಲ್ಲಿ ಸಿಬಂದಿ ಕೊರತೆ ಒಂದೆಡೆಯಾದರೆ ಈ ಹಿಂದಿನ ಅಧ್ಯಕ್ಷರಾದ ರಾಘವೇಂದ್ರ ಕಿಣಿ ಅವರು ರಾಜೀನಾಮೆ ನೀಡಿ 1 ತಿಂಗಳು ಹತ್ತಿರ ಬರುತ್ತಿದ್ದರೂ ಹೊಸ ಅಧ್ಯಕ್ಷರ ನೇಮಕ ಇನ್ನೂ ಆಗಿಲ್ಲ. ಪರ್ಯಾಯ ಮಹೋತ್ಸವದ ನೆಪದಲ್ಲಿ ವಿಳಂಬವಾಯಿತು ಎಂಬ ನೆಪವಿತ್ತು. ಆದರೆ ಈಗ ಅಧ್ಯಕ್ಷರ ಆಯ್ಕೆಗೂ ಸೂಕ್ತ ಕಾಲ ಬಂದಿದೆ. ಶೀಘ್ರ ಅಧ್ಯಕ್ಷರು ಹಾಗೂ ಸಿಬಂದಿಯ ನೇಮಕವಾದರಷ್ಟೇ ಜನಸಾಮಾನ್ಯರು ವಿನಾಕಾರಣ ಅಲೆದಾಡುವುದು ತಪ್ಪಲಿದೆ.

Advertisement

ಹಲವು ಫೈಲ್‌ ಬಾಕಿ
ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಅಧ್ಯಕ್ಷರು, ಸಿಬಂದಿ ನೇಮಕದ ಬಗ್ಗೆ ಸರಕಾರ ನಿರ್ಧಾರ ತೆಗೆದುಕೊಳ್ಳಬೇಕಿದೆ. ತಾಂತ್ರಿಕ ಸಿಬಂದಿ ಯ ಕೊರತೆಯೂ ಇದೆ. ಹಲವಾರು ಫೈಲ್‌ಗ‌ಳು ಬಾಕಿ ಇರುವ ಬಗ್ಗೆ ದೂರು ಬಂದಿವೆ. ಸಿಬಂದಿ ನೇಮಕವಾದ ಬಳಿಕ ಈ ಎಲ್ಲ ತೊಡಕುಗಳು ನಿವಾರಣೆಯಾಗಲಿವೆ.
-ರಾಜು, ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ ಉಡುಪಿ

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next