Advertisement

Udupi ಶೀಘ್ರ ಇಎಸ್‌ಐ ಆಸ್ಪತ್ರೆ ಕಾಮಗಾರಿ ಆರಂಭ: ಕೋಟ

12:46 AM Sep 05, 2024 | Team Udayavani |

ಮಣಿಪಾಲ: ಕೇಂದ್ರ ಸರಕಾರ ಈಗಾಗಲೇ ಮಂಜೂರು ಮಾಡಿರುವ ಇಎಸ್‌ಐ ಆಸ್ಪತ್ರೆಯ ನಿರ್ಮಾಣಕ್ಕೆ ಪೂರಕ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ನಿರ್ದೇಶನ ನೀಡಿದರು.

Advertisement

ಆಸ್ಪತ್ರೆ ನಿರ್ಮಾಣಕ್ಕೆ ವಾರಂಬಳ್ಳಿಯಲ್ಲಿ ಮೀಸಲಿಟ್ಟಿರುವ ಸುಮಾರು 6 ಎಕ್ರೆ ಜಾಗಕ್ಕೆ ಬುಧವಾರ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ, ಅನಂತರ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳ ಸಭೆ ನಡೆಸಿದರು.

150 ಕೋ.ರೂ. ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ಇಎಸ್‌ಐ ಆಸ್ಪತ್ರೆಯ ಸಂಬಂಧ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ. ಸುಸಜ್ಜಿತ ಆಸ್ಪತ್ರೆ ಶೀಘ್ರದಲ್ಲೇ ನಿರ್ಮಾಣವಾಗಲಿದೆ. 32 ವಸತಿ ಗೃಹಗಳನ್ನು ಒಳಗೊಂಡು 100 ಬೆಡ್‌ನ‌ ಆಸ್ಪತ್ರೆ ಇದಾಗಿದೆ ಎಂದರು.

ಹಿಂದೆ ಸಂಸದರಾಗಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಶಿಫಾರಸಿನಂತೆ ಆಸ್ಪತ್ರೆ ಮಂಜೂರಾಗಿದ್ದು, ಅದರಂತೆ ಈಗ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ. 100 ಬೆಡ್‌ನ‌ ಆಸ್ಪತ್ರೆ ನಿರ್ಮಾಣವಾಗುತ್ತಿದ್ದಂತೆ ಕಾರ್ಮಿಕ ವರ್ಗಕ್ಕೆ ಇದರಿಂದ ಅನುಕೂಲವಾಗಲಿದೆ. ಉಡುಪಿ, ಕುಂದಾಪುರ, ಮಣಿಪಾಲ, ಕಾರ್ಕಳ ಹಾಗೂ ಪಡುಬಿದ್ರಿಯಲ್ಲಿರುವ ಇಎಸ್‌ಐ ಔಷಧಾಲಯಗಳಿಗೆ ವೈದ್ಯರನ್ನು ಕೂಡಲೇ ಒದಗಿಸುವಂತೆ ಸೂಚಿಸಲಾಯಿತು.

ಶಾಸಕರಾದ ಯಶ್‌ಪಾಲ್‌ ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್‌., ಹಿರಿಯ ಇಎಸ್‌ಐ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ವಿಶ್ವಕರ್ಮ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಸದರ ಸೂಚನೆ
ಮಣಿಪಾಲ: ಸ್ವೋದ್ಯೋಗಕ್ಕೆ ಅನುಕೂಲ ಮಾಡಿಕೊಡುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿ ಮಾಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರಗಿದ ಸಭೆಯಲ್ಲಿ ಮಾತನಾಡಿದ ಅವರು, ಪಿಎಂ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ 15,380 ಅರ್ಜಿ ಸಲ್ಲಿಕೆಯಾಗಿದ್ದು, ಅದರಲ್ಲಿ 13,238 ಅರ್ಜಿಗಳನ್ನು ಜಿಲ್ಲಾ ಸಮಿತಿ ಪರಿಶೀಲಿಸಿ ರಾಜ್ಯಕ್ಕೆ ಕಳುಹಿಸಿದೆ. 7,750 ಅರ್ಜಿ ರಾಜ್ಯ ಹಂತದಲ್ಲಿ ಪರಿಶೀಲನೆಗೆ ಒಳಪಟ್ಟು 6,611 ಅರ್ಜಿ ಅನುಮೋದನೆಗೊಂಡಿದೆ. 2,209 ಫ‌ಲಾನುಭವಿಗಳು ಈಗಾಗಲೇ ತರಬೇತಿಯನ್ನು ಪಡೆದಿದ್ದಾರೆ ಎಂದರು.

ವಿಶ್ವಕರ್ಮ ಯೋಜನೆ ಬಗ್ಗೆ ತರಬೇತಿ ನೀಡಲು ಗುರುತಿಸಿರುವ 11 ಕೇಂದ್ರಗಳಲ್ಲಿ 7 ಕೇಂದ್ರಗಳು ಇನ್ನೂ ಆರಂಭವಾಗಿಲ್ಲ. ಇವುಗಳನ್ನು ಸೆ.10ರೊಳಗೆ ಆರಂಭಿಸಬೇಕು ಎಂದು ನಿರ್ದೇಶನ ನೀಡಿದರು.

ಶಾಸಕರಾದ ಯಶ್‌ಪಾಲ್‌ ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಕಿರಣ್‌ ಕೊಡ್ಗಿ ಯೋಜನೆಯ ನಾಮನಿರ್ದೇಶಿತ ಸದಸ್ಯರಾದ ಶ್ರೀನಿಧಿ ಹೆಗ್ಡೆ, ಸುರೇಂದ್ರ ಪಣಿಯಾಡಿ, ಜಿಪಂ ಸಿಇಒ ಪ್ರತೀಕ್‌ ಬಾಯಲ್‌, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್‌., ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ವಿ. ನಾಯಕ್‌, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಹರೀಶ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next