Advertisement

Udupi: ಬಿಎಸ್ಸೆನ್ನೆಲ್‌ ಟವರ್‌ ನಿರ್ವಹಣೆ ಹೊಣೆ ಪಂಚಾಯತ್‌ ಹೆಗಲಿಗೆ

03:12 PM Nov 26, 2024 | Team Udayavani |

ಉಡುಪಿ: ಜಿಲ್ಲೆಯಲ್ಲಿ ಬಿಎಸ್ಸೆನ್ನೆಲ್‌ ಟವರ್‌ ನಿರ್ವಹಣೆ ಸಮಸ್ಯೆ ದಿನೇದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ಟವರ್‌ ನಿರ್ವಹಣೆಗೆ ಪೈಲಟ್‌ ಯೋಜನೆ ಸಿದ್ಧಪಡಿಸಲಾಗಿದೆ. ಆರಂಭದಲ್ಲಿ ಆಯ್ದ 20 ಗ್ರಾ.ಪಂ.ಗಳಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಟವರ್‌ ನಿರ್ವಹಣೆಯನ್ನು ಸ್ಥಳೀಯ ಗ್ರಾ.ಪಂ.ಗಳು ಮಾಡಿದರೆ ಅದಕ್ಕೆ ತಗಲುವ ವೆಚ್ಚವನ್ನು ಬಿಎಸ್ಸೆನ್ನೆಲ್‌ ಭರಿಸಲಿದೆ.

Advertisement

ಟವರ್‌ ಗ್ರಾ.ಪಂ. ಕೇಂದ್ರ ಕಚೇರಿಯಿಂದ ಎಷ್ಟು ದೂರದಲ್ಲಿದೆ? ಟವರ್‌ನಲ್ಲಿ ಇರುವ ನಿರ್ವಹಣೆ ಕೊರತೆಗಳೇನು? ಯಾವುದನ್ನು ಗ್ರಾ.ಪಂ.ನಿಂದ ನಿರ್ವಹಿಸಬಹುದು ಎಂದು ಪಟ್ಟಿ ಮಾಡಲಾಗುತ್ತದೆ. ಟವರ್‌ನ ವಿದ್ಯುತ್‌ ಸಂಪರ್ಕ, ವಿದ್ಯುತ್‌ ವ್ಯತ್ಯಯವಾದಾಗ ಜನರೇಟರ್‌ ಆನ್‌ ಮಾಡುವುದು, ಜನರೇಟರ್‌ನಲ್ಲಿ ಡೀಸೆಲ್‌ ಬೇಕಾದಷ್ಟು ಇದೆಯೇ ಎಂಬಿತ್ಯಾದಿಗಳನ್ನು ಪರಿಶೀಲಿಸಿ ನಿತ್ಯದ ನೆಲೆಯಲ್ಲಿ ನಿರ್ವಹಣೆ ಮಾಡುವುದು ಮುಖ್ಯವಾಗುತ್ತದೆ.

ಒಪ್ಪಂದ ಹೇಗೆ?
ಟವರ್‌ ನಿರ್ವಹಣೆ ವಿಚಾರದಲ್ಲಿ ಬಿಎಸ್ಸೆನ್ನೆಲ್‌ ಪಂಚಾಯತಿಗಳನ್ನು ಗುರುತಿಸಿ ಜಿಪಂ ಸಿಇಒ ಅವರಿಗೆ ಪ್ರಸ್ತಾವನೆ ಸಲ್ಲಿಸುತ್ತದೆ. ಆ ಪ್ರಸ್ತಾವನೆಯಂತೆ ಆಯಾ ಗ್ರಾಮ ಪಂಚಾಯತಿಗಳಿಗೆ ಜಿಪಂನಿಂದ ಪತ್ರ ಕಳುಹಿಸಲಾಗುತ್ತದೆ. ನಿರ್ವಹಣೆ ವಿಚಾರವಾಗಿ ಪಂಚಾಯತಿ ಮಟ್ಟದಲ್ಲಿ ಸಭೆ ನಡೆಸಿ ತೀರ್ಮಾನ ಮಾಡಲಾಗುತ್ತದೆ. ಪಂಚಾಯತಿ ತೀರ್ಮಾನವೇ ಅಂತಿಮವಾಗಿರುತ್ತದೆ. ನಿರ್ವಹಣೆಗೆ ಒಪ್ಪುವುದು ಅಥವಾ ಬಿಡುವುದು ಆಯಾ ಪಂಚಾಯತಿಗಳಿಗೆ ಬಿಟ್ಟಿ ವಿಚಾರವಾಗಿದೆ.

ಸಮಸ್ಯೆಯೇನು?
ಜಿಲ್ಲೆಯಲ್ಲಿ 161 ಬಿಎಸ್ಸೆನ್ನೆಲ್‌ ಟವರ್‌ಗಳಿವೆ. ಇದರಲ್ಲಿ ಸುಮಾರು 60ಕ್ಕೂ ಅಧಿಕ ಟವರ್‌ಗಳಲ್ಲಿ ಬ್ಯಾಟರಿ ಸಮಸ್ಯೆಯಿದೆ. ಇನ್ನು ಕೆಲವೆಡೆ ಜನರೆಟರ್‌ ಸರಿಯಿಲ್ಲ. ಇದರಿಂದ ವಿದ್ಯುತ್‌ ವ್ಯತ್ಯಯವಾದ ಕೂಡಲೇ ಸಿಗ್ನಲ್‌ ಹೋಗುತ್ತದೆ. ಬಿಎಸ್ಸೆನ್ನೆಲ್‌ ಬಳಕೆದಾರರಿಗೆ ನೆಟ್‌ವರ್ಕ್‌ ಸಿಗುವುದಿಲ್ಲ. ಹೀಗಾಗಿ ಹೊಸ ಬ್ಯಾಟರಿ ಹಾಕಬೇಕು ಎಂಬ ಒತ್ತಾಯವಿದ್ದರೂ ಗುತ್ತಿಗೆದಾರರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇನ್ನು ಬಹುತೇಕ ಟವರ್‌ಗಳು 3ಜಿಯಲ್ಲಿವೆ. ಅದನ್ನು 4ಜಿಗೆ ಮೇಲ್ದರ್ಜೆಗೆ ಏರಿಸಬೇಕಾಗಿದೆ.

ನಿರ್ವಹಣೆ ಮಾಡುವವರ್ಯಾರು?
ಸದ್ಯದ ಮಟ್ಟಿಗೆ ಗ್ರಾಪಂಗಳಲ್ಲಿ ಸಿಬಂದಿ ಕೊರತೆ ಇದೆ. ಇದರ ನಡುವೆಯೂ ಟವರ್‌ ನಿರ್ವಹಣೆ ಮಾಡಬೇಕೆಂದರೆ ಕನಿಷ್ಠ ಒಬ್ಬರು ಅಥವಾ ಇಬ್ಬರು ಸಿಬಂದಿ ಹೆಚ್ಚುವರಿಯಾಗಿಯೂ ಬೇಕಾಗಬಹುದು. ಸಿಬಂದಿ ಕೊರತೆ ಕಾರಣಕ್ಕೆ ಬಿಎಸ್ಸೆನ್ನೆಲ್‌ ಅವರಿಗೂ ಗ್ರಾಮೀಣ ಭಾಗದಲ್ಲಿ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಗ್ರಾಮ ಪಂಚಾಯತ್‌ಗಳ ವಾಟರ್‌ಮನ್‌, ಬಿಲ್‌ ಕಲೆಕ್ಟರ್‌ ಮೂಲಕ ನಿರ್ವಹಣೆ ಮಾಡಬಹುದು, ನಿರ್ವಹಣೆಗಾಗಿ ಹೆಚ್ಚುವರಿ ವೇತನ ನೀಡುವ ಬಗ್ಗೆ ಒಪ್ಪಂದ ಮಾಡುವ ಸಂದರ್ಭದಲ್ಲಿ ತೀರ್ಮಾನಿಸಲಾಗುತ್ತದೆ.

Advertisement

30 ಹೊಸ ಟವರ್‌ಗೆ ಪ್ರಸ್ತಾವನೆ
ಬಿಎಸ್ಸೆನ್ನೆಲ್‌ ನೆಟ್‌ವರ್ಕ್‌ ಸಮಸ್ಯೆ ಸರಿಪಡಿಸುವ ಕಾರ್ಯವೂ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಬಿಎಸ್ಸೆನ್ನೆಲ್‌ ಮೊಬೈಲ್‌ ಜೀವಸೆಲೆಯಾಗಿದೆ. ಹೀಗಾಗಿ ಈಗಿರುವ ಟವರ್‌ಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುವ ಜತೆಗೆ ಹೊಸದಾಗಿ 30 ಟವರ್‌ಗಳನ್ನು ಸ್ಥಾಪಿಸಲು ಪ್ರಸ್ತಾವನೆಯನ್ನು ಬಿಎಸ್ಸೆನ್ನೆಲ್‌ಗೆ ಕಳುಹಿಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.

ನಿರ್ವಹಣೆ ನೀಡುವ ಸಂಬಂಧ ಚರ್ಚೆ
ಬಿಎಸ್ಸೆನ್ನೆಲ್‌ ಟವರ್‌ಗಳನ್ನು ಪೈಲೆಟ್‌ ಪ್ರಾಜೆಕ್ಟ್ ಅಡಿಯಲ್ಲಿ ಗ್ರಾಮ ಪಂಚಾಯತ್‌ಗಳಿಗೆ ನಿರ್ವಹಣೆಗೆ ನೀಡಲು ಸಂಬಂಧ ಚರ್ಚೆ ನಡೆದಿದೆ. ಬಿಎಸ್ಸೆನ್ನೆಲ್‌ನಿಂದ ಪ್ರಸ್ತಾವನೆ ಬಂದ ಅನಂತರದಲ್ಲಿ ಅದನ್ನು ಗ್ರಾಮ ಪಂಚಾಯತ್‌ಗಳಿಗೆ ಕಳುಹಿಸುತ್ತೇವೆ. ಹಣಕಾಸಿನ ಹೊರೆ ಬಾರದಂತೆ ಆಯಾ ಪಂಚಾಯತ್‌ಗಳು ನಿರ್ವಹಣೆಗೆ ಸಂಬಂಧಿಸಿ ನಿರ್ಣಯ ತೆಗೆದುಕೊಳ್ಳಲಿವೆ.
– ಪ್ರತೀಕ್‌ ಬಾಯಲ್‌, ಸಿಇಒ, ಜಿ.ಪಂ. ಉಡುಪಿ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next