Advertisement

ಉಡುಪಿ: ಮರಳು ಪಡೆದವನೇ ಜಾಣ!

04:37 PM Dec 04, 2019 | Lakshmi GovindaRaju |

ಕುಂದಾಪುರ: ಮೂರ್ನಾಲ್ಕು ವರ್ಷಗಳಿಂದ ಮರಳಿಲ್ಲದೆ ತತ್ತರಿಸಿದ್ದ ಉಡುಪಿ ಜಿಲ್ಲೆಯಲ್ಲಿ ಕಳೆದ ತಿಂಗಳಿನಿಂದ ಮರಳುಗಾರಿಕೆ ಆರಂಭವಾಗಿದ್ದು, ಹಿರಿಯಡ್ಕ, ಕುಂದಾಪುರ ಗಳಲ್ಲಿ ದೊರೆಯುತ್ತಿದೆ. ಆದರೆ ಮರಳು ಬೇಕೆಂದು ಹಣ ಕಟ್ಟಿದರೂ ಕೂಡಲೇ ದೊರೆಯದೆ ಅಡ್ಡೆ ಬಳಿ ಲಾರಿಗಳು ದಿನ
ಗಟ್ಟಲೆ ಕಾಯಬೇಕಾಗಿದ್ದು, ಮಧ್ಯವರ್ತಿಗಳು ಸಕ್ರಿಯರಾಗಿರುವ ಶಂಕೆ ಉಂಟಾಗಿದೆ.

Advertisement

ಜಿಲ್ಲೆಗೆ ಮೂರೇ ಅಡ್ಡೆ
ಕುಂದಾಪುರ ತಾಲೂಕಿನ ಬಳ್ಕೂರು, ಕಂಡೂರುಗಳಲ್ಲಿ ಮತ್ತು ಉಡುಪಿಯ ಹಿರಿಯಡ್ಕದಲ್ಲಿ ಮರಳುಗಾರಿಕೆಗೆ ಅನುಮತಿ ನೀಡಲಾಗಿದೆ. ಕುಂದಾಪುರದಲ್ಲಿ ಒಟ್ಟು 86 ಸಾವಿರ ಮೆ. ಟನ್‌ ಮರಳು ತೆಗೆಯಲು ಈ ವರ್ಷಕ್ಕೆ ಅನುಮತಿ ನೀಡಲಾಗಿದ್ದು, ಮುಂದಿನ ವರ್ಷ ಎ.1ರಿಂದ ಮಾ.31ರ ಅವಧಿಯಲ್ಲಿ ಮತ್ತೆ 86 ಸಾವಿರ ಮೆ. ಟನ್‌ ತೆಗೆಯಬಹುದು.

ಚೇತರಿಕೆ
ಮರಳುಗಾರಿಕೆಯಿಲ್ಲದೆ ನಿಸ್ತೇಜವಾಗಿದ್ದ ನಿರ್ಮಾಣ ಮತ್ತು ಸಂಬಂಧಿತ ಚಟುವಟಿಕೆಗಳು ಈಗ ಜೀವ ಪಡೆದುಕೊಂಡಿವೆ. ಸ್ಥಗಿತಗೊಂಡಿದ್ದ ಮನೆ, ಕಟ್ಟಡ ಕಾಮಗಾರಿಗಳು ಆರಂಭವಾಗಿವೆ. ಆದರೆ ಬೇಡಿಕೆಗೆ ತಕ್ಕಷ್ಟು ಮರಳು ದೊರೆಯುತ್ತಿಲ್ಲ.

ಲಭಿಸಿದ ಉದ್ಯೋಗ
ಸುಮಾರು 55ರಿಂದ 60ರಷ್ಟು ದೋಣಿಗಳಲ್ಲಿ ಸುಮಾರು 300ರಷ್ಟು ಕಾರ್ಮಿಕರು ರವಿವಾರ ಬಿಟ್ಟು ಎಲ್ಲ ದಿನಗಳಲ್ಲೂ ಸಾಂಪ್ರದಾಯಿಕವಾಗಿ ಮರಳು ತೆಗೆಯುತ್ತಿದ್ದಾರೆ. ಲಾರಿಗಳಿಗೆ ತುಂಬಿಸುವುದು, ಲಾರಿ ಚಾಲಕರು, ಮಾಲಕರು, ಕಟ್ಟಡ ಕಾರ್ಮಿಕರಿಗೆ ಉದ್ಯೋಗ ಸಿಕ್ಕಿದೆ. ಬ್ಲಾಕ್‌ ನಂ.4ರಲ್ಲಿ ಪ್ರತಿದಿನ 120ರಿಂದ 150 ಲಾರಿ, ಬ್ಲಾಕ್‌ ನಂ.6ರಲ್ಲಿ 60-80ರಷ್ಟು ಲಾರಿಗಳಲ್ಲಿ ಮರಳು ಹೇರಿ ಸಾಗಿಸಲಾಗುತ್ತಿದೆ.

ಮರಳಿಲ್ಲ
ಡಿ.3ರ ಸಂಜೆ ವೇಳೆಗೆ ಎರಡು ಬ್ಲಾಕ್‌ಗಳಲ್ಲಿ 33 ಸಾವಿರ ಮೆ. ಟನ್‌ ಮರಳು ಎತ್ತಿದಂತಾಗುತ್ತದೆ. ಒಂದು ಅಡ್ಡೆಯಲ್ಲಿ 15 ದಿನಗಳಲ್ಲಿ, ಮತ್ತೂಂದರಲ್ಲಿ 45 ದಿನಗಳ ಅವಧಿಯಲ್ಲಿ ಮಿಕ್ಕುಳಿದ ಮರಳು ಮುಗಿಯ
ಬಹುದು. ಬಳಿಕ ಎ.1ರ ವರೆಗೆ ತೆಗೆಯುವಂತಿಲ್ಲ. ಉಡುಪಿ ಜಿಲ್ಲೆಯ 5 ತಾಲೂಕುಗಳ ಲಾರಿಗಳು ಇಲ್ಲಿ ಬಂದು ಮರಳಿನ ನಿರೀಕ್ಷೆಯಲ್ಲಿರುತ್ತವೆ. ಬಳ್ಕೂರಿನ ಮೈದಾನವೊಂದರಲ್ಲಿ ನೂರಕ್ಕಿಂತ ಹೆಚ್ಚು ಲಾರಿಗಳು ನಿಂತಿದ್ದು ಕಂಡುಬಂದಿದೆ. ಪ್ರತಿದಿನ 200ಕ್ಕಿಂತ ಹೆಚ್ಚು ಲಾರಿಗಳಲ್ಲಿ ಮರಳು ಕೊಂಡೊಯ್ಯಲಾಗುತ್ತದೆ, ಆದರೂ ಬೇಡಿಕೆ ಇದರ ಐದು ಪಟ್ಟು ಇದೆ. ಕಂಡೂರಿನ ಮರಳು ವಿತರಣ ಕೇಂದ್ರಕ್ಕೆ ಭೇಟಿ ನೀಡಿದಾಗ ಅಲ್ಲಿ ಸರಕಾರ ನಿಗದಿ ಪಡಿಸಿದ ದರ, ಟನ್‌ಗೆ 550 ರೂ.ಗಳಂತೆ ಸ್ವೀಕರಿಸುತ್ತಿದ್ದುದು ಕಂಡುಬಂತು. ಲಾರಿಗೆ ಮರಳು ತುಂಬಿಸುವ ದರ ಮತ್ತು ಜಿಎಸ್‌ಟಿ ಪ್ರತ್ಯೇಕ. ಇದೆಲ್ಲಕ್ಕಿಂತ ಅಧಿಕ ಹೊರೆ ಲಾರಿ ಬಾಡಿಗೆ. ಬಾಡಿಗೆ ದರ ಸರಕಾರ ನಿಗದಿ ಮಾಡಿದ್ದರೂ ಮೂರ್ನಾಲ್ಕು ದಿನ ಕಾಯ ಬೇಕಾದ ಸಂದರ್ಭ ಬಂದಾಗ ಲಾರಿ ಯವರು ಅಷ್ಟೂ ದಿನದ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಮರಳು ಸಂಗ್ರಹಿಸಿ ದುಬಾರಿ ಬೆಲೆಗೆ ಮಾರುವ ಕುರಿತೂ ಆರೋಪ ಇದೆ. ಒಟ್ಟಿನಲ್ಲಿ 6,500 ರೂ.ಗೆ ದೊರೆಯಬೇಕಾದ ಒಂದು ಲೋಡ್‌ ಮರಳು ಗ್ರಾಹಕರನ್ನು ತಲುಪುವಾಗ 15 ಸಾವಿರ ದಾಟುವುದೂ ಉಂಟು!

Advertisement

ಹೊಸದರಲ್ಲಿ ಇಲ್ಲ
ಕಿರು ಅವಧಿಯ ಟೆಂಡರ್‌ ಕರೆ ಯುವ ಮೂಲಕ ಇನ್ನಷ್ಟು ಮಂದಿಗೆ ಕಾನೂನುಬದ್ಧ ಅವಕಾಶ ನೀಡಬೇಕೆಂದು ಉಡುಪಿ ಜಿಲ್ಲೆಯ ಎಲ್ಲ ಶಾಸಕರೂ ಸರಕಾರವನ್ನು ಒತ್ತಾಯಿಸಿದ್ದಾರೆ. ಆದರೆ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮರಳುಗಾರಿಕೆ ಸಮರ್ಪಕವಾಗದಿದ್ದರೆ ಬೈಂದೂರು ಶಾಸಕರ ಜತೆಗೂಡಿ ಧರಣಿ ಕೂರುವುದಾಗಿ ತಾ.ಪಂ. ಸಭೆಯಲ್ಲಿ ಘೋಷಿಸಿದ್ದಾರೆ. ಬೈಂದೂರು ತಾಲೂಕಿನ ಕಿಂಡಿ ಅಣೆಕಟ್ಟುಗಳಲ್ಲೂ ಹೂಳೆತ್ತುವ ಮೂಲಕ ದೊರೆಯುವ ಮರಳನ್ನು ಬಳಸ ಲಾಗುವುದು ಎಂದು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಹೇಳಿದ್ದಾರೆ. ಕೆಲವು ಕಡೆ ಅಕ್ರಮ ಮರಳುಗಾರಿಕೆ, ಅಕ್ರಮ ಸಾಗಾಟ ನಡೆಯುತ್ತಿದ್ದು, ಕಂಡೂÉರು ಠಾಣೆಯಲ್ಲಿ ಅತಿಹೆಚ್ಚಿನ ಪ್ರಕರಣಗಳು ದಾಖಲಾಗಿವೆ.

ನೇರ ಬುಕ್ಕಿಂಗ್‌
ಹಿರಿಯಡ್ಕ ಮರಳು ಧಕ್ಕೆಯಲ್ಲಿ ಸ್ಯಾಂಡ್‌ ಆಪ್‌ ಮೂಲಕ ಬುಕಿಂಗ್‌ ಮಾಡಬಹುದು. ಆದರೆ ಕುಂದಾಪುರದಲ್ಲಿ ಕಂಡೂರಿನ ಧೂಪದಕಟ್ಟೆಯಲ್ಲಿ ಇರುವ ಮರಳು ವಿತರಣ ಕೇಂದ್ರದಲ್ಲಿ ಹಣ ಪಾವತಿಸಿ ಬುಕಿಂಗ್‌ ಮಾಡಬೇಕು. ಎಲ್ಲ ಕಡೆ ಟೋಕನ್‌ ಪದ್ಧತಿಯಿದೆ. ಸರಕಾರ ನಿಗದಿ ಮಾಡಿದ ಒಂದು ಲೋಡ್‌ಗೆ
(ಅಂದಾಜು 3 ಯುನಿಟ್‌) 6,500 ರೂ. ಹಣ ಪಾವತಿಸಿದ ಬಳಿಕ ಜಿಎಸ್‌ಟಿ, ಲೋಡಿಂಗ್‌ ಮತ್ತು ಲಾರಿ ಬಾಡಿಗೆ ಮರಳು ಪಡೆಯುವವರೇ ಭರಿಸಬೇಕಾಗುತ್ತದೆ. ದಿನಗಟ್ಟಲೆ ಕಾಯಬೇಕಾದಾಗ ಮರಳಿಗಿಂತ ಲಾರಿ ಬಾಡಿಗೆಯೇ ಹೆಚ್ಚಾಗುತ್ತದೆ.

ಈಗಾಗಲೇ ವಿವಿಧ ಕಾರಣಗಳಿಗಾಗಿ ಬೇರೆ ಬೇರೆ ಇಲಾಖೆಗಳಿಗೆ ನೀಡಿದ್ದ ಮರಳು ದಕ್ಕೆಗಳನ್ನು ಮರಳಿ ಗಣಿ ಇಲಾಖೆ ತೆಕ್ಕೆಗೆ ತೆಗೆದುಕೊಳ್ಳಲಾಗುವುದು. ಗಜೆಟ್‌ ನೋಟಿಫಿಕೇಶನ್‌ ಆದ ಕೂಡಲೇ 21 ಮರಳು ದಕ್ಕೆಗಳ ಏಲಂ ನಡೆಯಲಿದೆ. ಈಗಾಗಲೇ ಏಲಂ ನಡೆದಲ್ಲಿ ಇಲಾಖೆಯ ಅಧಿಕಾರಿಗಳು ಇರಲಿದ್ದು ಹೆಚ್ಚುವರಿ ಮರಳು ತೆಗೆಯಲು, ಅಕ್ರಮ ನಡೆಸಲು ಅವಕಾಶ ಇಲ್ಲ. – ರಾಮ್‌ ಜಿ. ನಾಯ್ಕ…
ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಉಡುಪಿ

ಮಧ್ಯವರ್ತಿಗಳಿಗೆ ಕಡಿವಾಣ
ಮರಳು ಖರೀದಿಸಿ ಸಂಗ್ರಹಿಸಿ ಮಾರುವ ಮಧ್ಯವರ್ತಿಗಳಿಂದ ಮರಳಿನ ಬೆಲೆ ಕೆಲವೆಡೆ ದುಪ್ಪಟ್ಟಾಗಿದೆ. ಇದಕ್ಕಾಗಿ ಒಬ್ಬರಿಗೆ 5 ಲೋಡ್‌ ಅಥವಾ ಮನೆ, ಕಟ್ಟಡ ಕಟ್ಟಲು ಎಷ್ಟು ಅವಶ್ಯವೋ ಅಷ್ಟಕ್ಕೆ ಪಂಚಾಯತ್‌ನಿಂದ ಪತ್ರ ಇದ್ದಷ್ಟು ಮರಳು ನೀಡಿದರೆ ಕಾಳಸಂತೆಕೋರರ ಕಾಟ ತಡೆಯಬಹುದು. ಅಷ್ಟಲ್ಲದೆ ಹೊಸದಾಗಿ 21 ದಕ್ಕೆಗಳು ಕಾರ್ಯಾರಂಭಿಸಿದರೆ ಮಧ್ಯವರ್ತಿಗಳಿಗೆ ಯಾವುದೇ ಕೆಲಸ ಇರದೆ ಅಪೇಕ್ಷಿತರಿಗೆ ಸುಲಭದಲ್ಲಿ ಮರಳು ದೊರೆಯಲಿದೆ.

ದರ ಹೀಗಿದೆ
ಸಿಆರ್‌ಝಡ್‌ ವ್ಯಾಪ್ತಿಯಲ್ಲಿ 10 ಮೆ. ಟನ್‌ಗೆ 6,500 ರೂ., ನಾನ್‌ಸಿಆರ್‌ಝಡ್‌ ವ್ಯಾಪ್ತಿಯಲ್ಲಿ 5,500 ರೂ. ದರ ನಿಗದಿ ಮಾಡಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಮರಳು ಸಾಗಾಟ ದರ ಹೀಗಿದೆ (10 ಮೆ.ಟನ್‌ಗೆ): ದೊಡ್ಡ ಲಾರಿಗೆ 3,000 ರೂ. (20 ಕಿ.ಮೀ.ಗೆ), ಅನಂತರದ ಪ್ರತಿ ಕಿ.ಮೀ.ಗೆ 50 ರೂ.ಗಳು. ಮಧ್ಯಮ ಗಾತ್ರದ ವಾಹನಗಳಿಗೆ: 2,000 ರೂ. (20 ಕಿ.ಮೀ.ಗೆ), ಅನಂತರದ ಪ್ರತಿ ಕಿ.ಮೀ.ಗೆ 40 ರೂ.ಗಳು. ಸಣ್ಣ ವಾಹನಗಳಿಗೆ: 1,500 ರೂ. (20 ಕಿ.ಮೀ.), ಬಳಿಕದ ಪ್ರತಿ ಕಿ.ಮೀ.ಗೆ 35 ರೂ.ಗಳು.

ಅಧಿಕ ದರ ಇಲ್ಲ
ನಾವು ಸರಕಾರ ನಿಗದಿಪಡಿಸಿದ ದರದಲ್ಲಿ ಮರಳು ನೀಡುತ್ತಿದ್ದೇವೆ. ಜನರಿಗೆ ತಲುಪುವಾಗ ಹೇಗೆ ದರ ಅಧಿಕವಾಗುತ್ತಿದೆ ಎಂಬ ಮಾಹಿತಿಯಿಲ್ಲ. ಈ ಹಿಂದೆ ಮರಳು ತೆಗೆಯುತ್ತಿದ್ದ ದೋಣಿಯವರಿಗೇ ಆದ್ಯತೆ ನೀಡಲಾಗಿದೆ.
-ಬಿ. ನರಸಿಂಹ ಪೂಜಾರಿ, ಮರಳು ಗುತ್ತಿಗೆದಾರರು

ಕುಂದಾಪುರ: ಅಂಕಿಅಂಶ
ಪ್ರತಿದಿನ ಸಾಗಾಟ : 230 ಲೋಡ್‌
ದೋಣಿಗಳು: 55
ಕಾರ್ಮಿಕರು: 500
ಅನುಮತಿ: ಬ್ಲಾಕ್‌ ನಂ.6ರಲ್ಲಿ 27,125 ಮೆ.ಟನ್‌ , ಬ್ಲಾಕ್‌ ನಂ.4ರಲ್ಲಿ 56,000 ಮೆ. ಟನ್‌
ತೆಗೆದದ್ದು: ಬ್ಲಾಕ್‌ ನಂ.6ರಲ್ಲಿ 13 ಸಾವಿರ, ಬ್ಲಾಕ್‌ ನಂ.4ರಲ್ಲಿ 20 ಸಾವಿರ ಮೆ.ಟನ್‌
ದರ: 1 ಮೆ. ಟನ್‌ಗೆ
550 ರೂ.+ಜಿಎಸ್‌ಟಿ +
ಲೋಡಿಂಗ್‌ ದರ+ಲಾರಿ ಬಾಡಿಗೆ

ಹಿರಿಯಡ್ಕ:
ಪ್ರತಿದಿನ 250 ಮೆ.ಟನ್‌ ದಾಸ್ತಾನು
ದರ: 1 ಮೆ. ಟನ್‌ಗೆ
550 ರೂ.+ಜಿಎಸ್‌ಟಿ +
ಲೋಡಿಂಗ್‌ ದರ+ಲಾರಿ ಬಾಡಿಗೆ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next