Advertisement

ಉಡುಪಿ ನಗರಕ್ಕೆ ಸ್ವರ್ಣೆಯ ನೀರು; ಕೃಷಿಕರು ಕಂಗಾಲು

03:45 AM Feb 20, 2017 | Team Udayavani |

ಉಡುಪಿ: ಸ್ವರ್ಣಾ ನದಿಗೆ ಕಟ್ಟಿರುವ ಬಜೆ ಅಣೆಕಟ್ಟಿನ ಆಸುಪಾಸಿನ ಪ್ರದೇಶದಲ್ಲೇ ವಾಸವಿದ್ದರೂ ರೈತರಿಗೆ ಮಾತ್ರ ಆ ನೀರಿನ ಸದುಪಯೋಗ ಪಡೆಯುವ ಭಾಗ್ಯವಿಲ್ಲ. ಹಿಂದಿನ ವರ್ಷಗಳಲ್ಲಿ ಮಾರ್ಚ್‌-ಎಪ್ರಿಲ್‌ನಲ್ಲಿ ಕೃಷಿಗೆ ನದಿ ನೀರು ಬಳಸುವುದನ್ನು ನಿಷೇಧಿಸುತ್ತಿದ್ದ ಜಿಲ್ಲಾಡಳಿತ ಈ ಬಾರಿ ಜನವರಿ ಅಂತ್ಯ ಹಾಗೂ ಫೆಬ್ರವರಿಯಲ್ಲೇ ಕೃಷಿಗೆ ನೀರು ಬಳಕೆಗೆ ನಿರ್ಬಂಧ ಹೇರಿರುವುದರಿಂದ ಸುಮಾರು 600 ಕೃಷಿ ಕುಟುಂಬಗಳು ಕಂಗಾಲಾಗಿವೆ.

Advertisement

ಜಿಲ್ಲಾಡಳಿತ ಹಾಗೂ ಉಡುಪಿ ನಗರಸಭೆಯ ಈ ನಿರ್ಧಾರದಿಂದ 68 ಮಂದಿಯ 70 ಪಂಪ್‌ಸೆಟ್‌ಗಳಿಗೆ ನೀರು ಬಳಕೆಗೆ ನಿರ್ಬಂಧಿಸಲಾಗಿದ್ದು, ಇದರಿಂದ ಒಟ್ಟು  69 ಹೆಕ್ಟೇರು (171 ಎಕ್ರೆ) ಕೃಷಿ ಪ್ರದೇಶದಲ್ಲಿರುವ ಕೃಷಿ ಬೆಳೆ ಸಂಪೂರ್ಣ ನಾಶವಾಗುವ ಭೀತಿಯಲ್ಲಿದೆ ರೈತಾಪಿ ವರ್ಗ.

ಅನೇಕ ದಿನಗಳಿಂದ ನೀರಿಲ್ಲದೆ ಅಡಿಕೆ ಹಾಗೂ ತೆಂಗಿನ ತೋಟಗಳು ಒಣಗಿವೆ ಎಂದು ರೈತರು ಅಲವತ್ತುಕೊಂಡಿದ್ದಾರೆ. ಹೀಗೆ ಆದಲ್ಲಿ ಮುಂದಿನ ದಿನಧಿಗಳಲ್ಲಿ  ಪರಿಸ್ಥಿತಿ ಬಿಗಡಾಯಿಸಲಿದೆ.

700 ಅಡಿ ಆಳದಲ್ಲೂ  ನೀರಿಲ್ಲ: ಸರಕಾರವು ಉಡುಪಿ ಜಿಲ್ಲೆಯಲ್ಲಿ ಬೋರ್‌ವೆಲ್‌ ಕೊರೆ ಯಲು ಅನುಮತಿ ನೀಡಿದ್ದು, ರೈತರು ಕೃಷಿಗಾಗಿ ಸುಮಾರು 700 ಅಡಿ ಆಳ ತೋಡಿದರೂ ಕೇವಲ 1 ಇಂಚು ಮಾತ್ರ ನೀರು ಸಿಗುತ್ತಿದ್ದು, ಆ ನೀರು ಮನೆಯ ಬಳಕೆಗಷ್ಟೇ ಸಾಕಾಗುತ್ತದೆ. ನದಿ ತೀರದ ಪ್ರದೇಶವಾದ್ದರಿಂದ ಅಲ್ಲಲ್ಲಿ ಕಲ್ಲುಗಳಿದ್ದು, ಬಾವಿ ತೋಡಲು ಸಾಧ್ಯವಿಲ್ಲ. 

ಶೀಂಬ್ರ-ಬಾವುಕಾಡಿ ಅಣೆಕಟ್ಟು  ಪರಿಹಾರ: ಶಿರೂರಿನಲ್ಲಿ  ಫೆಬ್ರವರಿ ಮೊದಲ ವಾರದಲ್ಲೇ ನೀರು ಖಾಲಿಯಾಗಿತ್ತು. 
ಇದರಿಂದ ಬಜೆ ಅಣೆಕಟ್ಟಿನಲ್ಲಿಯೂ ನೀರಿನ ಮಟ್ಟ ಕೆಳಮಟ್ಟಕ್ಕೆ ತಲುಪಿದೆ. ಅದಕ್ಕಾಗಿ ಮಣಿಪಾಲದ ಶೀಂಬ್ರ ಹಾಗೂ ಬಾವುಕಾಡಿಯ ಎರ್ಲಪಾಡಿ ಪ್ರದೇಶಗಳಲ್ಲಿ ಇನ್ನೆರಡು ಆಣೆಕಟ್ಟು  ನಿರ್ಮಿಸಿದರೆ ನೀರಿನ ಸಂಗ್ರಹ ಮಟ್ಟ ಏರಿಕೆಯಾಗುತ್ತದೆ. ಈ ಬಗ್ಗೆ ಸರಕಾರ ಮುತುವರ್ಜಿ ವಹಿಸಿದರೆ ಕುಡಿಯುವ ನೀರು ಹಾಗೂ ರೈತರ ನೀರಿನ ಸಮಸ್ಯೆಗೂ ತಕ್ಕಮಟ್ಟಿನ ಪರಿಹಾರ ದೊರಕಲು ಸಾಧ್ಯ.

Advertisement

69 ಹೆಕ್ಟೇರು ಪ್ರದೇಶಕ್ಕಿಲ್ಲ ನೀರು: ಬಜೆ ಅಣೆಕಟ್ಟಿನ ಹಿನ್ನೀರಿಗೆ ಒಟ್ಟು 70 ಪಂಪ್‌ಸೆಟ್‌ಗಳನ್ನು ಅಳವಡಿಸಿದ್ದು, ಸದ್ಯ 68 ಬಳಕೆಯಲ್ಲಿವೆ. ಈಪೈಕಿ ಬಲದಂಡೆಯಲ್ಲಿ 27 ಹಾಗೂ ಎಡದಂಡೆಯಲ್ಲಿ 41 ಪಂಪ್‌ಸೆಟ್‌ಗಳಿವೆ. 

ಕೃಷಿಕರು ಮನುಷ್ಯರಲ್ಲವೆ?
ಕುಡಿಯುವ ನೀರಿಗೆ ಆದ್ಯತೆ ನೀಡುವುದನ್ನು ನಾವು ಕೂಡ ಬೆಂಬಲಿಸುತ್ತೇವೆ. ಆದರೆ ಕೃಷಿಕರಲ್ಲಿಯೂ ಹೆಚ್ಚಿನವರು ಕುಡಿಯಲು ಇದೇ ನೀರನ್ನು ಅವಲಂಬಿಸಿದ್ದಾರೆ. ಅವರು ಕೂಡ ಮನುಷ್ಯರಲ್ಲವೇ? ಕೃಷಿಯನ್ನೇ ಜೀವನಾಧಾರವಾಗಿ ಬದುಕುತ್ತಿದ್ದಾರೆ. ರೈತರ ಹೊಟ್ಟೆಗೆ ಕಲ್ಲು ಹಾಕುವುದು ಎಷ್ಟು ಸರಿ? ಸರಿಯಾದ ಸಮಯ ನೋಡಿಕೊಂಡು ಹೂಳೆತ್ತುವ ಕಾರ್ಯ ಮಾಡಲಿ. ಅಣೆಕಟ್ಟಿನ ಎತ್ತರ ಏರಿಸಿ ನೀರಿನ ಸಂಗ್ರಹ ಹೆಚ್ಚಿಸಲಿ. ಕೃಷಿಗೆ ಕನಿಷ್ಠ ವಾರಕ್ಕೆ ಎರಡು ಬಾರಿಯಾದರೂ ನೀರು ಕೊಡುವಂತೆ ಮನವಿ ಮಾಡಲಿ.

– ಕುದಿ ಶ್ರೀನಿವಾಸ್‌ ಭಟ್‌,
ಜಿಲ್ಲಾ ಕೃಷಿಕ ಸಂಘದ ಪ್ರ. ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next