ಉಡುಪಿ: ಶ್ರೀಕೃಷ್ಣ ಮಠದ ಸುವರ್ಣ ಗೋಪುರ ಸಮರ್ಪಣೆಯ ಪೂರ್ವಭಾವಿ ಯಾಗಿ ಜೂ. 1ರಂದು ಜೋಡುಕಟ್ಟೆಯಿಂದ ಮೆರವಣಿಗೆ ಮೂಲಕ ಮಠಕ್ಕೆ ತರಲಿರುವ 6 ಅಡಿ ಎತ್ತರದ ಗರ್ಭಗುಡಿಯ ಸುವರ್ಣ ಗೋಪುರ ಮೆರವಣಿಗೆಗೆ ರಂಗು ತರಲು ಶ್ರೀಕೃಷ್ಣ ಮಠದ ಮೂರು ರಥಗಳ ಪತಾಕೆಯನ್ನು 1008 ಬೆಳ್ಳಿಯ ಕಲಶಗಳನ್ನು ಬಳಸಿ ಮಾಡಲಾದ ಅತ್ಯಾಕರ್ಷಕ ಸ್ತಬ್ಧಚಿತ್ರ ನಿರ್ಮಾಣಗೊಂಡಿದೆ.
ಈ ಸ್ತಬ್ಧಚಿತ್ರಕ್ಕೆ ಕಬ್ಬಿಣದ ಸರಳುಗಳು, ಫೋಮ್, ಬಟ್ಟೆ, ಕೊಡೆ, ಪತಾಕೆ, ಬೆಳ್ಳಿ ತಂಬಿಗೆಗಳನ್ನು ಬಳಸಲಾಗಿದೆ. ರಥದಲ್ಲಿ ದಶಾವತಾರ ಚಿತ್ರಗಳು, ರಥದ ಕೆಳಗಿನ ಮರದ ದಿಡ್ಡೆಯನ್ನು ಹೋಲುವ ಕಲಾಕೃತಿಯನ್ನು ವಿನ್ಯಾಸಗೊಳಿಸಲಾಗಿದೆ.
ಕಿದಿಯೂರು ಆರ್ಟ್ಸ್ನ ಕಲಾವಿದ ರಮೇಶ್ ಕಿದಿಯೂರು ಅವರು ಎಂಜಿನಿಯರ್ ರಾಘವೇಂದ್ರ ರಾವ್ ಮಾರ್ಗ ದರ್ಶನದಲ್ಲಿ ಈ ವಿಶೇಷ ಕಲಾಕೃತಿ ರಚಿಸಿದ್ದಾರೆ. ಸುಮಾರು ಒಂದು ವಾರದಿಂದ ಕಿದಿಯೂರು ಶ್ರೀ ವಿಷ್ಣುಮೂರ್ತಿ ದೇಗುಲದ ಹೊರಾಂಗಣದಲ್ಲಿ ರವಿರಾಜ್ ಕೋಟ್ಯಾನ್, ಸತೀಶ್ ಆರ್. ಅಮೀನ್ ಅವರ ಸಹಕಾರದಿಂದ ಈ ಸ್ತಬ್ಧಚಿತ್ರ ರಚನೆಗೊಂಡಿದೆ.
ಗರ್ಭಗುಡಿಯ ಮಾದರಿ
ರಥಗಳಿರುವ ಟ್ರೇಲರ್‌ನಲ್ಲಿಯೇ ಶ್ರೀಕೃಷ್ಣ ಮಠದ ಗರ್ಭಗುಡಿಯನ್ನು ಹೋಲುವ ತದ್ರೂಪಿ ಕಲಾಕೃತಿಯೂ ಮೆರವಣಿಗೆಯಲ್ಲಿ ಸಾಗಿ ಬರಲಿದೆ. ಇದನ್ನು ರಚಿಸಲು ಗೋಲ್ಡ್ ಸ್ಟಿಕ್ಕರ್, ಪ್ಲೆ„ವುಡ್, ಮರದ ಕೆತ್ತನೆಗಳನ್ನು ಬಳಸಲಾಗಿದೆ.