Advertisement

ಉಡುಪಿ ಬೀದಿದೀಪಗಳಲ್ಲಿ  ಹಗಲೂ ವಿದ್ಯುತ್‌ ಪೋಲು

01:00 AM Mar 12, 2019 | Harsha Rao |

ಉಡುಪಿ: ವಿದ್ಯುತ್‌ ಕೊರತೆ ಕಾಡುವ ಈ ದಿನಗಳಲ್ಲೂ ಉಡುಪಿ ನಗರದ ಬೀದಿಗಳಲ್ಲಿ ಹಗಲಲ್ಲೂ ದೀಪಗಳು ಉರಿಯುತ್ತಿವೆ. ಆದರೆ ಇದರ ಬಿಸಿ ನಗರಸಭೆ ಅಧಿಕಾರಿಗಳಿಗೆ ತಟ್ಟಿಲ್ಲ. ಇಂದ್ರಾಳಿಯ ರಸ್ತೆಯ ಬೀದಿದೀಪಗಳು ಕಳೆದ ಎರಡು ತಿಂಗಳಿನಿಂದ ಹಗಲಿನಲ್ಲಿಯೂ ಉರಿಯುತ್ತಿದೆ. ಈ ಬಗ್ಗೆ ಸಾರ್ವಜನಿಕರು ಮೆಸ್ಕಾಂ, ಸ್ಥಳೀಯಾಡಳಿತಕ್ಕೆ ದೂರು ನೀಡಿದರೂ ಸರಿಪಡಿಸುವ ಬದಲು ವಿದ್ಯುತ್‌ ಸಂಪರ್ಕವನ್ನೇ ಕಡಿತ ಮಾಡಲಾಗಿದೆ.  

Advertisement

ಸಮಸ್ಯೆ ಇಂದು ನಿನ್ನೆಯದಲ್ಲ 
ಬೀದಿದೀಪಗಳ ನಿರ್ವಹಣೆಯ ಸಮಸ್ಯೆ ಇಂದು ನಿನ್ನೆಯದಲ್ಲ. 2017-18ರಲ್ಲಿ ಬೀದಿದೀಪದ ಟೆಂಡರ್‌ ವಹಿಸಿಕೊಂಡ ಶಿವಮೊಗ್ಗದ ಗುತ್ತಿಗೆದಾರರು ಬೀದಿದೀಪಗಳ ನಿರ್ವಹಣೆಯಲ್ಲಿ ವಿಫ‌ಲರಾಗಿದ್ದರು. ಇದರ ಬಗ್ಗೆ ಸದಸ್ಯರಿಂದ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ 2018 ಜೂ.29ರಂದು ಶಾಸಕ ಕೆ.ರಘುಪತಿ ಭಟ್‌ ಕರೆದ ಸಭೆಯಲ್ಲಿ ಸ್ಥಳೀಯರಿಗೆ ಟೆಂಡರ್‌ ನೀಡಿದರೆ ಉತ್ತಮ ಎಂಬ ಅಭಿಪ್ರಾಯಕ್ಕೆ ಬರಲಾಗಿತ್ತು.  

ಸಮಸ್ಯೆಗೆ ಸಿಕ್ಕಿಲ್ಲ ಮುಕ್ತಿ
ನವೆಂಬರ್‌ 2018ರಲ್ಲಿ ಕಾರ್ಕಳದವರೊಬ್ಬರಿಗೆ ನಿರ್ವಹಣೆ ಟೆಂಡರ್‌ ಆಗಿತ್ತು. ಆರಂಭದಲ್ಲಿ ಚೆನ್ನಾಗಿಯೇ ಇದ್ದರೂ ಬಳಿಕ ಹಳೆಯ ಗುತ್ತಿಗೆದಾರರ ದಾರಿ ಹಿಡಿದ ದೂರುಗಳಿವೆ. ಈ ಬಗ್ಗೆ ಪ್ರಶ್ನಿಸಬೇಕಾದ ಜನಪ್ರತಿನಿಧಿಗಳು ಅಧಿಕಾರ ಸ್ವೀಕರಿಸಿಲ್ಲ. ಜನಸಾಮಾನ್ಯರ ಕೂಗು ಅಧಿಕಾರಿಗಳಿಗೆ ಕೇಳಿಸುತ್ತಿಲ್ಲ.

ಬೀದಿ ದೀಪ ನಿರ್ವಹಣೆಗೆ 3.95 ಲಕ್ಷ ರೂ., ವಿದ್ಯುತ್‌ ಬಿಲ್‌ 21.40 ಲಕ್ಷ  ರೂ.
ನಗರಸಭೆ ವ್ಯಾಪ್ತಿಯ ಬೀದಿ ದೀಪಗಳ ದುರಸ್ತಿ, ನಿರ್ವಹಣೆಗೆ ಪ್ರತಿ ತಿಂಗಳು ಗುತ್ತಿಗೆದಾರರಿಗೆ 3.95 ಲಕ್ಷ ನೀಡಲಾಗುತ್ತದೆ. ವಾರ್ಷಿಕವಾಗಿ 47.4 ಲಕ್ಷ ರೂ. ಗುತ್ತಿಗೆದಾರರಿಗೆ ನೀಡಲಾಗುತ್ತದೆ. ಬೀದಿ ದೀಪದ ವಿದ್ಯುತ್‌ ಬಿಲ್‌ 21.4 ಲ. ರೂ. ಮೊತ್ತವನ್ನು ಸರಕಾರ ಮೆಸ್ಕಾಂಗೆ ಸಂದಾಯ ಮಾಡುತ್ತಿದೆ. ಇದರ ವಾರ್ಷಿಕ ಮೊತ್ತ 2.52 ಕೋ.ರೂ. 

13,068 ಬೀದಿ ದೀಪ
ಪ್ರತಿನಿತ್ಯ ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ವಿದ್ಯುತ್‌ ದೀಪ ಬೆಳಗಬೇಕು. ಆದರೆ ನಗರದ ಕೆಲ ವಾರ್ಡ್‌ಗಳಲ್ಲಿ ಹಗಲೂ ಉರಿಯುತ್ತಿರುತ್ತವೆ.  
ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಲ್ಲಿ ಒಟ್ಟು 13,068 ಬೀದಿದೀಪಗಳಿವೆ. ಅದರಲ್ಲಿ 815 ಕಂಟ್ರೋಲಿಂಗ್‌ ಪಾಯಿಂಟ್‌ಗಳಿವೆ.

Advertisement

ದೂರು ನೀಡಿದ್ದಕ್ಕೆ ಶಿಕ್ಷೆ 
ಇಂದ್ರಾಳಿಯಲ್ಲಿ ಕಳೆದ 2 ತಿಂಗಳಿನಿಂದ ಹಗಲು ರಾತ್ರಿಯೆನ್ನದೆ ಬೀದಿ ದೀಪಗಳು ಉರಿಯುತ್ತಿರುವ  ದೂರು ನೀಡಲಾಗಿದೆ. ಮೆಸ್ಕಾಂನವರು ನಗರಸಭೆ ನಿರ್ವಹಣೆ ಎಂದಿದ್ದಾರೆ. ದೂರು ನೀಡಿದ ತಪ್ಪಿಗೆ ಕಳೆದ ಮೂರು ದಿನದಿಂದ ಬೀದಿ ದೀಪಗಳ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಹೀಗಾಗಿ ರಾತ್ರಿಯೂ ದೀಪವಿಲ್ಲ. 
-ರಾಮಚಂದ್ರ ನಾಯರಿ, ಇಂದ್ರಾಳಿ ನಿವಾಸಿ

ಗುತ್ತಿಗೆದಾರರಿಗೆ ನೊಟೀಸು 
ಮಾಸಿಕ ವಿದ್ಯುತ್‌ ಬಿಲ್‌ ಮೊತ್ತದಲ್ಲಿ ಶೇ. 5ಕ್ಕಿಂತ ಹೆಚ್ಚು ಕಂಡು ಬಂದರೆ ಗುತ್ತಿಗೆದಾರರಿಗೆ ನೊಟೀಸು ನೀಡಲಾಗುತ್ತದೆ. 
-ಗಣೇಶ್‌, ಸಹಾಯಕ ಎಂಜಿನಿಯರ್‌, ನಗರಸಭೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next