Advertisement

ಉಡುಪಿ ಶ್ರೀಕೃಷ್ಣ ದೇವರಿಗೆ:ಕಾಶೀ ಮಠಾಧೀಶರಿಂದ ಪಚ್ಚೆ ಕಲ್ಲಿನ ಸ್ವರ್ಣ ಹಾರ

04:57 PM Jan 01, 2022 | Team Udayavani |

ಉಡುಪಿ: ಉಡುಪಿ ಶ್ರೀಕೃಷ್ಣದೇವರಿಗೆ ಸಮರ್ಪಿಸಲು ಕಾಶೀ ಮಠ ಸಂಸ್ಥಾನದ ಶ್ರೀಸಂಯಮೀಂದ್ರ ತೀರ್ಥ ಶ್ರೀಪಾದರು ಕೊಡಮಾಡಿದ ಪಚ್ಚೆ ಕಲ್ಲಿನ ಸ್ವರ್ಣ ಹಾರವನ್ನು ಶುಕ್ರವಾರ ಗೌಡ ಸಾರಸ್ವತ ಸಮಾಜದ ದೇವಸ್ಥಾನಗಳ ಪ್ರಮುಖರು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಿದರು.

Advertisement

ಪ್ರಪಂಚದ ಎಲ್ಲ ವಸ್ತುಗಳೂ ಭಗವಂತನ ಕೊಡುಗೆಗಳಾಗಿವೆ ಎಂಬ ಅನುಸಂಧಾನದ ಮೂಲಕ ದೇವರಿಗೆ ವಸ್ತುಗಳ ಸಮರ್ಪಣೆಯಾಗಬೇಕು. ಶ್ರೀಕೃಷ್ಣನ ವಿಗ್ರಹದಲ್ಲಿ ದೇವರನ್ನು ನೋಡಿ ಈ ಹಾರವನ್ನು ಶ್ರೀಸಂಯಮೀಂದ್ರತೀರ್ಥ ಶ್ರೀಪಾದರು ಸಮರ್ಪಿಸುತ್ತಿದ್ದಾರೆ ಎಂದು ಶ್ರೀಈಶಪ್ರಿಯತೀರ್ಥ ಶ್ರೀಪಾದರು ತಿಳಿಸಿದರು.
ಶ್ರೀಕೃಷ್ಣನ ಅಂತರಂಗದ ಭಕ್ತನಾಗಿದ್ದ ಉದ್ದವನಿಗೆ ಶ್ರೀಕೃಷ್ಣನ ಅಗಲುವಿಕೆ ತಾಳಲಾರದೆ ಹೋಯಿತು. ಆಗ ಶ್ರೀಕೃಷ್ಣ ತಾನು ಗ್ರಂಥದಲ್ಲಿ (ಶ್ರೀಮದ್ಭಾಗವತ) ಮತ್ತು ಜ್ಞಾನಿಗಳಲ್ಲಿರುವುದಾಗಿ ತಿಳಿಸಿದ. ಜ್ಞಾನವೆಂದರೆ ಯಾವುದನ್ನು ತಿಳಿದುಕೊಂಡರೆ ಭಗವಂತನನ್ನು ತಿಳಿಯಲಾಗುತ್ತದೋ ಅದು. ಮಧ್ವಾಚಾರ್ಯರು ಸ್ವತಂತ್ರ ತತ್ವ ಮತ್ತು ಅಸ್ವತಂತ್ರ ತತ್ವ ಎಂಬೆರಡು ಚಿಂತನೆಗಳನ್ನು ತಿಳಿಸಿದ್ದಾರೆ. ಸ್ವತಂತ್ರ ತತ್ವವೆಂದರೆ ಭಗವಂತನ ಅರಿವು. ಉಳಿದೆಲ್ಲವೂ ಭಗವಂತನ ಅಧೀನವಾದ ಅಸ್ವತಂತ್ರ ತತ್ವ. ಮಧ್ವಾಚಾರ್ಯರು ಭಗವಂತನ ವಿಶೇಷ ಸನ್ನಿಧಾನವಿರುವ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ ಸಾಧಕರಿಗೆ ಅನುವು ಮಾಡಿಕೊಟ್ಟರು ಎಂದು ಶ್ರೀಪಾದರು ನುಡಿದರು.

ಶ್ರೀಸಂಯಮೀಂದ್ರ ತೀರ್ಥ ಶ್ರೀಪಾದರು ಇತ್ತೀಚೆಗೆ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ದ್ಯೋತಕವಾಗಿ ಈ ಹಾರವನ್ನು ಶ್ರೀಕೃಷ್ಣದೇವರಿಗೆ ಸಮರ್ಪಿಸಲು ಕೊಟ್ಟಿದ್ದಾರೆಂದು ಜಿಎಸ್‌ಬಿ ದೇವಸ್ಥಾನಗಳ ಒಕ್ಕೂಟದ ಉಪಾಧ್ಯಕ್ಷ ದಿನೇಶ್‌ ಕಾಮತ್‌ ತಿಳಿಸಿದರು.

ಇದನ್ನೂ ಓದಿ:ಶೀಘ್ರ ಬಿಜೆಪಿ, ಜೆಡಿಎಸ್‌ ನಾಯಕರು ಕಾಂಗ್ರೆಸ್‌ ಸೇರ್ಪಡೆ: ಸತೀಶ ಜಾರಕಿಹೊಳಿ

ಶಾಸಕ ಕೆ. ರಘುಪತಿ ಭಟ್‌, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಘವೇಂದ್ರ ಕಿಣಿ, ಕೋಟೇಶ್ವರ ಪಟ್ಟಾಭಿರಾಮಚಂದ್ರ ದೇವಸ್ಥಾನದ ಆಡಳಿತೆ ಮೊಕ್ತೇಸರ ಶ್ರೀಧರ ಕಾಮತ್‌, ಮಂಜೇಶ್ವರ ಅನಂತೇಶ್ವರ ದೇವಸ್ಥಾನದ ಆಡಳಿತೆ ಮೊಕ್ತೇಸರ ದಿನೇಶ್‌ ಕಾಮತ್‌, ಮಂಗಳೂರಿನ ನರೇಶ ಶೆಣೈ, ಮೂಲ್ಕಿ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್‌ ಕುಡ್ವ, ಸೋಮೇಶ್ವರ ವೆಂಕಟರಮಣ ದೇವಸ್ಥಾನದ ಮೊಕ್ತೇಸರ
ರಾಘವೇಂದ್ರ ಭಕ್ತ, ಮಾಧವ ಕಾಮತ್‌, ಉಡುಪಿ ವೆಂಕಟರಮಣ ದೇವಸ್ಥಾನದ ಆಡಳಿತೆ ಮೊಕ್ತೇಸರ ಪಿ. ವಿಟಲದಾಸ ಶೆಣೈ, ಮೊಕ್ತೇಸರ ಎಂ. ವಿಶ್ವನಾಥ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next