ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಜ. 9ರಿಂದ 15ರ ವರೆಗೆ ನಡೆಯಲಿರುವ ವಾರ್ಷಿಕ ಸಪ್ತೋತ್ಸವ ದಲ್ಲಿ ಆಸ್ಟ್ರೇಲಿ ಯಾದ ವಿಕ್ಟೋರಿಯಾ ರಾಜ್ಯದ ಸಂಸದ ಜಾನ್ ಮುಲಾಯ್ ಹಾಗೂ ಭಾಗವತ ಪ್ರವಚನಗಳಿಂದ ಖ್ಯಾತರಾದ ಮಥುರಾದ ಗೌಡೀಯ ಮಾಧ್ವಮಠದ ಮಹಾಸ್ವಾಮಿ ಶ್ರೀ ಪುಂಡರೀಕ ಗೋಸ್ವಾಮಿ ಅವರು ಭಾಗವಹಿಸಲಿದ್ದಾರೆ.ಇವರಿಬ್ಬರೂ ಜ. 14ರಂದು ನಡೆಯುವ ಮಕರ ಸಂಕ್ರಮಣ ಹಾಗೂ ಮೂರು ತೇರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಜ. 15ರಂದು ಚೂರ್ಣೋತ್ಸವ (ಹಗಲು ತೇರು) ಜರಗಲಿದೆ.
ಜ.9ರಿಂದ 13ರ ವರೆಗೆ ವಿಶೇಷ ಕಾರ್ಯಕ್ರಮಗಳು
ಜ. 9ರಂದು ಪ್ರಸಿದ್ಧ ಸಂಗೀತ ಕಲಾಕಾರ ಸುಧಾಮ ದಾಂಡೇಲಿ ಅವರಿಂದ ಸಂಗೀತ ಕಾರ್ಯಕ್ರಮ, ಜ. 11ರ ಬೆಳಗ್ಗೆ 10ಕ್ಕೆ ರಾಜಾಂಗಣದಲ್ಲಿ ಸಾವಯವ ಸಿರಿಧಾನ್ಯ ಹಬ್ಬ, ರಾತ್ರಿ 7 ಯಕ್ಷ ನಂದನ ಮಂಗಳೂರು ಇವರಿಂದ ಆಂಗ್ಲ ಭಾಷಾ ಯಕ್ಷಗಾನ “ಸೀತಾಪಹರಣ’ ಹಾಗೂ “ಜಟಾಯು ಮೋಕ್ಷ’ ಪ್ರದರ್ಶನಗೊಳ್ಳಲಿದೆ. ಮಧ್ವಮಂಟಪದಲ್ಲಿ ಬೆಳಗ್ಗೆ 10ಕ್ಕೆ ಚಂದ್ರಕಲಾ ಶರ್ಮ ಹಾಗೂ ಸುಜಲಾ ಎನ್. ಭಟ್ ಅವರಿಂದ ಗಮಕ ವ್ಯಾಖ್ಯಾನ, ತುಳಸಿರಾಮಾಯಣ ಚೂಡಾಮಣಿ ಪ್ರಸಂಗ, ಸಂಜೆ 4ಕ್ಕೆ ಆರ್.ಪಿ. ಪ್ರಶಾಂತ್ ಮತ್ತು ಆರ್.ಪಿ. ಪ್ರಮೋದ್ ಅವರಿಂದ ವೀಣಾ ವಾದನ ಜರಗಲಿದೆ.
ಜ. 12ರಂದು ರಥಬೀದಿಯ ಸುತ್ತ 24 ತಂಡಗಳಿಂದ ವಿಶೇಷ ಕುಣಿತ ಭಜನೆಯ “ವೈಭವೋತ್ಸವ’ ನೆರವೇರಲಿದೆ. ಅಹಲ್ಯಾಬಾೖ ಹೋಳ್ಕರ್ ಅವರ ಜನ್ಮತ್ರಿಶತಾಬ್ದಿ ಪ್ರಯುಕ್ತ ಬೆಳಗ್ಗೆ 10ರಿಂದ ಸಂಜೆ 4ರ ತನಕ ಚಿತ್ರಕಲೆ, ಪ್ರಬಂಧ, ವೇಷಭೂಷಣ ಸ್ಪರ್ಧೆಗಳು, ವಿವಿಧ ವಿಚಾರಗೋಷ್ಠಿಗಳು, ಅನಂತರ ಪರ್ಯಾಯ ಶ್ರೀಪಾದರು ಅನುಗ್ರಹ ಸಂದೇಶ ನೀಡುವರು.
ಪಂಚವಾದ್ಯಂ ರಜತಪೀಠಪುರಂ ಅವರ 6ನೇ ವಾರ್ಷಿಕೋತ್ಸವ ಪ್ರಯುಕ್ತ ಜ. 12ರ ಸಂಜೆ 4ರಿಂದ ರಾಜಾಂಗಣದಲ್ಲಿ ಚಿರಕ್ಕಲ್ ನಿಧೀಶ್ ಮತ್ತು ತಂಡದವರಿಂದ ತಾಯಂಬಕ, 6ರಿಂದ ಕೇರಳದ ಪ್ರಸಿದ್ಧ ವಟ್ಟಪಾಲಂ ಹರಿ ಮತ್ತು ತಂಡದವರಿಂದ ಪಂಚವಾದ್ಯಂ ನಡೆಯಲಿದೆ. ಜ. 12ರ ಬೆಳಗ್ಗೆ 10ರಿಂದ 12ರ ತನಕ ಮಧ್ವ ಮಂಟಪದಲ್ಲಿ ಭೀಮಾಶಂಕರ್ ಮೈಸೂರು ಅವರಿಂದ ತಬಲಾ ಮತ್ತು ಹಾರ್ಮೋನಿಯಂ ಜುಗಲ್ಬಂದಿ, ಸಂಜೆ 4ರಿಂದ ಗೋವರ್ಧನ ಸ್ಕೂಲ್ ಆಫ್ ಮ್ಯೂಸಿಕ್ನ 10 ಮಂದಿ ತಂಡದಿಂದ ವಿಶೇಷ ಸಂಗೀತ ಕಛೇರಿ, ರಾಜಾಂಗಣದಲ್ಲಿ ರಾಮಮೂರ್ತಿ ತಂಡದವರಿಂದ ನೃತ್ಯ ಸಂಕ್ರಮಣ ವಿಶಿಷ್ಟ ಪ್ರಯೋಗ ನೆರ ವೇರಲಿದೆ.
ಜ. 13ರಂದು ಸಿಗ್ದಕೃಷ್ಣ ಅವರಿಂದ ಭರತನಾಟ್ಯ, ಜ. 14ರಂದು ಪ್ರಸ್ತುತಿ ಗ್ರೂಪ್ ಸಹನಂ ಟ್ರಸ್ಟ್ ವತಿಯಿಂದ ಸಂಗೀತ ಮತ್ತು ಭರತನಾಟ್ಯ, ಜ. 15ರಂದು ಶಾಂಭವಿ ನೃತ್ಯ ನಿಕೇತನ ಕಾಪು ಅವರಿಂದ “ಶ್ರೀಕೃಷ್ಣಾರ್ಪಣ ಮಸ್ತು’ ಭರತನಾಟ್ಯ ನಡೆಯಲಿದೆ ಎಂದು ಪರ್ಯಾಯ ಶ್ರೀ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ತಿಳಿಸಿದ್ದಾರೆ.