Advertisement

Udupi ಕೃಷ್ಣ ನಗರಿಯಲ್ಲಿಂದು ಜನ್ಮಾಷ್ಟಮಿ ಸಂಭ್ರಮ

12:43 AM Sep 06, 2023 | Team Udayavani |

ಉಡುಪಿ: ಕೃಷ್ಣನೂರು ಉಡುಪಿಯಲ್ಲಿ ಜನ್ಮಾಷ್ಟಮಿ ಸಂಭ್ರಮ ಕಳೆಗಟ್ಟಿದ್ದು ಶ್ರೀಕೃಷ್ಣ ಮಠದಲ್ಲಿ ಸೆ. 6ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಸೆ. 7ರಂದು ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ಆಚರಣೆ ಜರಗಲಿದೆ. ಶ್ರೀಕೃಷ್ಣ ಮಠದಲ್ಲಿ ದೇವರಿಗೆ ವಿಶೇಷ ಪೂಜೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.

Advertisement

ಮನೆಗಳಲ್ಲಿ ಶ್ರೀ ಕೃಷ್ಣಾಷ್ಟಮಿಯನ್ನು ಶ್ರದ್ಧಾ, ಭಕ್ತಿ, ಸಂಭ್ರಮದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣ ಮಠದಲ್ಲಿ ಆ. 6ರಂದು ಬೆಳಗ್ಗೆ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಲಕ್ಷತುಳಸಿ ಅರ್ಚನೆ ನಡೆಸಿ, ಮಹಾಪೂಜೆ ನೆರವೇರಿಸಲಿದ್ದಾರೆ.

ಅನಂತರ ರಾತ್ರಿ ಪೂಜೆ ನಿವೇದನೆಗೆ ಉಂಡೆ ಕಟ್ಟುವುದಕ್ಕೆ ಶ್ರೀಪಾದರು ಲಡ್ಡಿಗೆ ಮುಹೂರ್ತ ಮಾಡಲಿದ್ದಾರೆ. ಶ್ರೀಗಳೂ ಸಹಿತ ಭಕ್ತರು, ಶಿಷ್ಯ ವರ್ಗ ಏಕಾದಶಿಯಂತೆ ನಿರ್ಜಲ ಉಪವಾಸವಿದ್ದು ಕೃಷ್ಣಾಷ್ಟಮಿ ವ್ರತ ಆಚರಿಸುವರು. ಆದ್ದರಿಂದ ರಾತ್ರಿಯೂ ಅರ್ಚನೆ, ಮಹಾಪೂಜೆಯನ್ನು ನಡೆಸುವ ಶ್ರೀಗಳು ಬೆಳಗ್ಗೆ ಮುಹೂರ್ತ ಮಾಡಿದ ಲಡ್ಡುಗಳನ್ನು ಶ್ರೀಕೃಷ್ಣನಿಗೆ ನಿವೇದಿಸುವರು. ಬಳಿಕ ರಾತ್ರಿ ಚಂದ್ರೋದಯದ ವೇಳೆ 11.42ಕ್ಕೆ ಕೃಷ್ಣಾಘÂì ಪ್ರದಾನ ನೆರವೇರಿಸುವರು.

ಗುರುವಾರ ದ್ವಾದಶಿ ರೀತಿಯಲ್ಲಿ ಮುಂಜಾವ ಎಲ್ಲ ವಿಧದ ಪೂಜೆಗಳನ್ನು ಶ್ರೀಪಾದರು ನೆರವೇರಿಸುವರು.

ಶ್ರೀಕೃಷ್ಣ ಮಠದಲ್ಲಿ ರಾತ್ರಿ ಕನಕನ ಕಿಂಡಿ ಎದುರು ಮತ್ತು ವಸಂತ ಮಂಟಪದಲ್ಲಿ ಅರ್ಘ್ಯ ಪ್ರದಾನ ಬಿಡಲು ಭಕ್ತರಿಗೆ ಅನುವು ಮಾಡಿಕೊಡಲಾಗುತ್ತದೆ. ಶ್ರೀಕೃಷ್ಣ ಮಠವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗುತ್ತಿದೆ. ಕೃಷ್ಣ ಮಠದಲ್ಲಿ ಸೆ. 6, 7ರಂದು ಬೆಳಗ್ಗೆಯಿಂದ ರಾತ್ರಿವರೆಗೆ ದೇವರ ದರ್ಶನ ಎಂದಿನಂತೆ ಇರಲಿದೆ.

Advertisement

ಸೆ. 6ರಂದು ಜನ್ಮಾಷ್ಟಮಿ ಪ್ರಯುಕ್ತ ದಿನಪೂರ್ತಿ ಮುದ್ದುಕೃಷ್ಣ ವೇಷ ಸ್ಪರ್ಧೆ ಸಹಿತ ಭಜನೆ ಮುಂತಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ನಾಳೆ ಕೃಷ್ಣಲೀಲೋತ್ಸವ
ಸೆ. 7ರಂದು ರಥಬೀದಿಯಲ್ಲಿ ಸಂಭ್ರಮದ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ಉತ್ಸವ ನಡೆಯಲಿದೆ. ಬೆಳಗ್ಗೆ 10ರಿಂದಲೇ ಅನ್ನ ಸಂತರ್ಪಣೆ ಆರಂಭಗೊಳ್ಳಲಿದ್ದು, ಭೋಜನ ಶಾಲೆ, ಅನ್ನಬ್ರಹ್ಮದಲ್ಲಿ ಸಾವಿರಾರು ಭಕ್ತರಿಗೆ ಕೃಷ್ಣ ಪ್ರಸಾದ ವಿತರಣೆಗೆ ತಯಾರಿ ನಡೆದಿದೆ. ಈ ವರ್ಷ ರಾಜಾಂಗಣದಲ್ಲಿ ಭೋಜನ ವ್ಯವಸ್ಥೆ ಇಲ್ಲ. ಇಲ್ಲಿ ಭಕ್ತರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3ಕ್ಕೆ ರಥಬೀದಿಯಲ್ಲಿ ಸ್ವರ್ಣರಥದಲ್ಲಿ ಕೃಷ್ಣನ ಮೃಣ್ಮಯ ಮೂರ್ತಿ ಮತ್ತು ಅನಂತೇಶ್ವರ ಚಂದ್ರಮೌಳೀಶ್ವರ ದೇವಸ್ಥಾನದ ಉತ್ಸವ ಮೂರ್ತಿಗಳನ್ನು ನವರತ್ನ ರಥದಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಗುತ್ತದೆ.

ಈ ಸಂದರ್ಭ ಗುರ್ಜಿಗಳಿಗೆ ನೇತು ಹಾಕಿರುವ ಮೊಸರು ಕುಡಿಕೆಯನ್ನು ಕೃಷ್ಣಮಠದ ಗೋವಳರು ಒಡೆಯುತ್ತಾರೆ. ಪರ್ಯಾಯ ಶ್ರೀಪಾದರು ಚಕ್ಕುಲಿ, ಉಂಡೆ ಪ್ರಸಾದವನ್ನು ಮೆರವಣಿಗೆ ವೇಳೆ ಭಕ್ತರಿಗೆ ವಿತರಿಸುತ್ತಾರೆ. ಅನಂತರ ಮೃಣ್ಮಯ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ಮಧ್ವ ಸರೋವರದಲ್ಲಿ ಜಲಸ್ತಂಭನ ಮಾಡಲಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next