Advertisement

Udupi; ಸಾಸ್ತಾನ ಟೋಲ್‌: ಸ್ಥಳೀಯರಿಗೆ ಸುಂಕ ವಿನಾಯಿತಿ

12:17 AM Dec 31, 2024 | Team Udayavani |

ಉಡುಪಿ: ಜಿಲ್ಲೆಯ ರಾ.ಹೆ. ಸಾಸ್ತಾನ ಸುಂಕ ವಸೂಲಾತಿ ಕೇಂದ್ರದ ಸ್ಥಳೀಯ ಜನರ ವಾಹನಗಳಿಗೆ ಈ ಹಿಂದೆ ನೀಡುತ್ತಿದ್ದ ರಿಯಾಯಿತಿ ಮುಂದುವರಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾ.ಹೆ. ಟೋಲ್‌ ಶುಲ್ಕ ವಸೂಲಾತಿಗೆ ಸಂಬಂಧಿಸಿದಂತೆ ಟೋಲ್‌ಗ‌ಳಲ್ಲಿ ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡುವ ವಿಚಾರದ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಸ್ತಾನ ಹೆದ್ದಾರಿ ಸುಂಕ ವಸೂಲಾತಿ ಕೇಂದ್ರವು ಸಾಲಿಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿದ್ದು, ಸ್ಥಳೀಯ ಜನರು ಸುಂಕ ವಸೂಲಾತಿ ಕೇಂದ್ರದ ಸುತ್ತಮುತ್ತ ವಾಸವಿದ್ದಾರೆ. ದೈನಂದಿನ ಪ್ರತಿಯೊಂದು ಕಾರ್ಯಕ್ಕೂ ಟೋಲ್‌ ಅನ್ನು ದಾಟುವ ಪ್ರಸಂಗ ಒದಗಿ ಬರಲಿದ್ದು, ಪ್ರತಿ ಬಾರಿಯೂ ಶುಲ್ಕ ಪಾವತಿ ಮಾಡಲು ಕಷ್ಟ ಸಾಧ್ಯವಾಗಿದೆ. ಕೋಟ ಜಿ.ಪಂ.ವ್ಯಾಪ್ತಿಯ ಸ್ಥಳೀಯ ಖಾಸಗಿ ಹಾಗೂ ಸಣ್ಣ ವಾಣಿಜ್ಯ ವಾಹನಗಳಿಗೆ ಟೋಲ್‌ ಶುಲ್ಕ ವಿನಾಯಿತಿ ನೀಡಬೇಕು ಎಂದರು.

ಸಂತೆಕಟ್ಟೆ ಕಾಮಗಾರಿ ಪೂರ್ಣಗೊಳಿಸಿ
ಸಂತೆಕಟ್ಟೆ ಸಮೀಪ ರಾ.ಹೆ. ಅಂಡರ್‌ಪಾಸ್‌ ರಸ್ತೆ ಕಾಮಗಾರಿಯನ್ನು ಜ. 7ರ ಒಳಗೆ ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ರಾ.ಹೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ಸೂಚನ ಫ‌ಲಕ ಅಳವಡಿಸಿ
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದೆ. ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾಮಗಾರಿ ಇದಕ್ಕೆಲ್ಲ ಕಾರಣವಾಗಿದೆ. ಇವುಗಳಿಗೆ ಕಡಿವಾಣ ಹಾಕಲು ಅಗತ್ಯವಿರುವ ಕಡೆ ಸರ್ವೀಸ್‌ ರಸ್ತೆ, ದಾರಿದೀಪ ಅಳವಡಿಕೆ, ರಸ್ತೆಯಲ್ಲಿ ಹೊಂಡ ದುರಸ್ತಿ, ಜಂಕ್ಷನ್‌ಗಳಲ್ಲಿ ಸರಿಯಾದ ಸೂಚನ ಫ‌ಲಕಗಳನ್ನು ಅಳವಡಿಸುವಂತೆ ಸೂಚನೆ ನೀಡಿದರು.

Advertisement

ಟಿಪ್ಪರ್‌ಗಳಿಗೆ ಪಾಸ್‌
ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಮಾತನಾಡಿ, ಸಾಸ್ತಾನದ ಸ್ಥಳೀಯ ಒಟ್ಟು 34 ಟಿಪ್ಪರ್‌ಗಳು ಮಾಸಿಕ ತಲಾ 6,705 ರೂ.ಪಾಸ್‌ ಮಾಡಿಸಿಕೊಂಡರೆ ಎಷ್ಟು ಬಾರಿ ಬೇಕಿದ್ದರೂ ಟೋಲ್‌ಗೇಟ್‌ ಮೂಲಕ ಪ್ರವೇಶಿಸಬಹುದು. ಈ ಹಿಂದೆ ಕೇವಲ 50 ಟ್ರಿಪ್‌ ಮಾಡಲು ಮಾತ್ರ ಅವಕಾಶವಿತ್ತು. ಪ್ರಸ್ತುತ 7.5 ಟನ್‌ಗಳಿಗಿಂತ ಮೇಲ್ಪಟ್ಟ ಬಸ್‌, ಲಾರಿ, ಜೆಸಿಬಿ ಹೊರತುಪಡಿಸಿ ಅರ್ಥ್ ಮೂವರ್ಸ್‌ ಯಂತ್ರಗಳಿಗೆ ಶುಲ್ಕ ವಸೂಲಾತಿಗೆ ಅನುಮತಿ ನೀಡಲಾಗಿದೆ ಎಂದರು.

ಹಲವು ಸುತ್ತಿನ ಮಾತುಕತೆ
ಕೋಟ ಜಿ.ಪಂ.ವ್ಯಾಪ್ತಿಯಲ್ಲಿ ಒಟ್ಟು 1,752 ವಾಹನಗಳಿವೆ. ಆ ಪೈಕಿ 606 ವಾಹನಗಳಲ್ಲಿ 421 ಕಾರುಗಳು, 182 ಲಾರಿ ಟಿಪ್ಪರ್‌ಗಳು 12,616 ಟ್ರಿಪ್‌ ಮಾಡುತ್ತಿವೆ. ಇದಕ್ಕೆ ಶುಲ್ಕ ವಿನಾಯಿತಿ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದರು. ಆದರೆ ಇದರಿಂದಾಗಿ ಮಾಸಿಕ ಸುಮಾರು 26 ಲ.ರೂ.ನಷ್ಟ ಉಂಟಾಗಲಿದೆ ಎಂಬುವುದು ಗುತ್ತಿಗೆ ಸಂಸ್ಥೆಯವರು ವಾದಿಸಿದರು. ಬಳಿಕ ಹಲವು ಸುತ್ತಿನ ಮಾತುಕತೆ ನಡೆದು ಒಪ್ಪಿಗೆ ಸೂಚಿಸಲಾಯಿತು.

ಶಾಸಕರಾದ ಕಿರಣ್‌ ಕುಮಾರ್‌ ಕೊಡ್ಗಿ, ಗುರ್ಮೆ ಸುರೇಶ್‌ ಶೆಟ್ಟಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ. ಅರುಣ್‌, ರಾ.ಹೆ. ಪ್ರಾಧಿಕಾರದ ಅಧಿಕಾರಿಗಳು, ತಹಶೀಲ್ದಾರ್‌ಗಳಾದ ಪ್ರತಿಭಾ, ಶ್ರೀಕಾಂತ್‌, ಗುತ್ತಿಗೆದಾರರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಮಾತುಕತೆ ಫ‌ಲಪ್ರದ
ಟೋಲ್‌ ಗೇಟ್‌ ನಲ್ಲಿ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಡಿ. 31ರಂದು ಕರೆ ನೀಡಿದ್ದ ಕೋಟ ಜಿ.ಪಂ. ವ್ಯಾಪ್ತಿಯ ಬಂದ್‌ ವಾಪಾಸು ಪಡೆಯಲಾಗಿದೆ. ಜಿಲ್ಲಾಡಳಿತ ಮತ್ತು ಹೆದ್ದಾರಿ ನಿರ್ವಹಣೆ ಕಂಪೆನಿ ಬಹುತೇಕ ನಮ್ಮ ಎಲ್ಲ ಬೇಡಿಕೆಗೆ ಸ್ಪಂದಿಸಿದ್ದು, ಹೀಗಾಗಿ ಮಂಗಳವಾರದ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿದೆ ಎಂದು ಹೆದ್ದಾರಿ ಜಾಗೃತಿ ಸಮಿತಿ ಪರವಾಗಿ ಸಮಿತಿಯ ಅಧ್ಯಕ್ಷ ಶ್ಯಾಮ್‌ ಸುಂದರ್‌ ನಾಯರಿ ತಿಳಿಸಿದ್ದಾರೆ.

ಹೆಜಮಾಡಿ ಟೋಲ್‌: ಯಥಾಸ್ಥಿತಿ
ಹೆಜಮಾಡಿ ಟೋಲ್‌ಗೇಟ್‌ನ ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ ನೀಡುತ್ತಿದ್ದ ಈ ಹಿಂದಿನ ರಿಯಾಯಿತಿಯನ್ನು ಮುಂದುವರಿಸುವುದಾಗಿ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next