Advertisement

Udupiಸಂತೆಕಟ್ಟೆ ರಸ್ತೆ ಕಥೆ ವ್ಯಥೆ; ಶಾಶ್ವತ ರಸ್ತೆ ಆಮೇಲೆ,ಸಂಚಾರ ಯೋಗ್ಯ ರಸ್ತೆಯೇ ಮೊದಲಾಗಲಿ

12:56 AM Sep 25, 2024 | Team Udayavani |

ಉಡುಪಿ: ಇದುವರೆಗೆ ಹೇಳಿದ್ದೆಲ್ಲವೂ ಹಗಲಿನ ಕಥೆ. ರಾತ್ರಿ ಕಥೆ ಬಹಳ ಕಡಿಮೆ ಜನರಿಗೆ ಗೊತ್ತು. ಜಿಲ್ಲಾಧಿಕಾರಿ, ಜಿಲ್ಲಾಡ ಳಿತ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು – ಎಲ್ಲರಿಗೂ ಗೊತ್ತಿರುವುದು ಕಡಿಮೆ.ಅದಕ್ಕಾಗಿಯೇ ರಾತ್ರಿ ಹೊತ್ತು ಉದಯವಾಣಿ ಪ್ರತಿನಿಧಿ ಸಂಚರಿಸಿ ಸಮಸ್ಯೆಯನ್ನು ತೆರೆದಿಟ್ಟಿದ್ದಾರೆ.

Advertisement

ರಾತ್ರಿ 10ರ ಮೇಲೆ ಘನ ವಾಹನಗಳ ಓಡಾಟ ಹೆಚ್ಚು. ಬೃಹತ್‌ ಸರಕುಗಳನ್ನು ಹೊತ್ತುಕೊಂಡು ಬರುವ ಈ ಲಾರಿ-ಟ್ರಕ್‌ ಗಳು ಸಂತೆಕಟ್ಟೆ ರಸ್ತೆ ತಿರುವು (ಡೈವರ್ಶನ್‌) ಬಂದ ಕೂಡಲೇ ಕೆಲವು ಒಮ್ಮೆ ಗಕ್ಕನೆ ನಿಲ್ಲುತ್ತವೆ. ಇನ್ನು ಕೆಲವು ಸಂಪೂರ್ಣ ಮಂದಗತಿಗೆ ತಲುಪುತ್ತವೆ. ತಿರುವು ತೆಗೆದುಕೊಳ್ಳುವ ನೂರು ಮೀಟರ ನಲ್ಲಿ ಸಮಸ್ಯೆ ಇಲ್ಲ. ಬಳಿಕ ಒಂದೊಂದೇ ಗುಂಡಿಗಳು ಆರಂಭವಾಗುತ್ತವೆ. ಬಹಳ ನಾಜೂಕಿನಿಂದ ಸರಕು ತುಂಬಿದ ಲಾರಿಗಳನ್ನು ಗುಂಡಿಗೆ ಇಳಿಸಿ ಮೇಲಕ್ಕೆತ್ತಿಸಬೇಕು. ಚೂರು ಹೆಚ್ಚು ಕಡಿಮೆಯಾದರೆ ಲಾರಿಯೇ ಪಲ್ಟಿ. ಈ ಪಲ್ಟಿ ನಿಯಮ ಎರಡೂ ಕಡೆಯ ವಾಹನಗಳಿಗೆ ಅನ್ವಯವಾಗುತ್ತದೆ.

ಇದರೊಂದಿಗೆ ಅವಘಡ ಘಟಿಸುವ ಸಾಧ್ಯತೆ ಇರುವಲ್ಲಿ ಹೆದ್ದಾರಿ ದೀಪಗಳಿಲ್ಲ. ಇಡೀ ರಸ್ತೆಯುದ್ದಕ್ಕೂ ಗುಂಡಿಗಳೇ ಇರುವುದರಿಂದ ಪ್ರತಿಯೊಬ್ಬರೂ ಗುಂಡಿ ತಪ್ಪಿಸಲು ಪ್ರಯತ್ನಿಸುತ್ತಾರೆ. ಹೀಗೆ ಪರಸ್ಪರ ಗುಂಡಿ ತಪ್ಪಿಸುವಾಗ ಅಪಘಾತವಾಗುವ ಸಾಧ್ಯತೆಯೇ ಹೆಚ್ಚು. ಇದರ ಮಧ್ಯೆ ಎದುರು ಬರುವ ವಾಹನಗಳ ಲೈಟು ಕಣ್ಣಿಗೆ ಕುಕ್ಕುವಾಗ ವಾಹನ ಸವಾರರಿಗೆ ತಿಳಿಯದೇ ಚಕ್ರಗಳು ಗುಂಡಿಗೆ ಇಳಿದು ಆಯ ತಪ್ಪುವುದು ಖಚಿತ. ಹಗಲಿಗಿಂತ ರಾತ್ರಿ ವಾಹನ ಚಲಾಯಿಸುವುದೂ ಇನ್ನೂ ಕಿರಿಕಿರಿ ಎಂಬುದು ಹಲವರ ಅಭಿಪ್ರಾಯ. ಈ ಕಷ್ಟವನ್ನು ಹೇಳಿಕೊಂಡವರಲ್ಲಿ ಬಹುತೇಕರು ಸುತ್ತಮುತ್ತಲಿನವರು, ಜಿಲ್ಲೆಯವರು. ಹೊರಗಿನ ಹೊಸಬರು ಬಂದರೆ ರಸ್ತೆ ಅವ್ಯವಸ್ಥೆ ಕಂಡು ಕಂಗಾಲು.

ಬಸ್ಸುಗಳ ಸಮಸ್ಯೆಯೇ ಬೇರೆ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ಸಂಚರಿಸಬೇಕು. ಅದನ್ನು ನಿಗಾವಹಿಸಲು ಅವರದ್ದೇ ಆದ ಪ್ರತ್ಯೇಕ ವ್ಯವಸ್ಥೆ ಇದೆ. ಪ್ರತಿ ಎರಡು-ಮೂರು ನಿಮಿಷಕ್ಕೆ ಒಂದು ಕುಂದಾಪುರ-ಉಡುಪಿ, ಉಡುಪಿ-ಕುಂದಾಪುರ ಮಧ್ಯೆ ಬಸ್ಸುಗಳು ಸಂಚರಿಸುತ್ತಿವೆ. ಇವುಗಳೂ ಒಂದು ನಿಮಿಷ ತಡವಾದರೆ ಹಿಂದಿನ ಬಸ್ಸಿನವ ಬೊಬ್ಬೆ ಹಾಕುತ್ತಾನೆ. ಹಾಗಾಗಿ ಸಮಯ ವ್ಯರ್ಥ ಮಾಡುವಂತಿಲ್ಲ. ಇಂಥ ಸಂದರ್ಭದಲ್ಲಿ ಅವರು ಜಾಗ ಇರುವಲ್ಲಿ ನುಗ್ಗಿಸಿ ವೇಗವಾಗಿ ಹೋಗಲು ಪ್ರಯತ್ನಿಸುವುದು, ದಾರಿ ಗಾಗಿ ಅನಿವಾರ್ಯವಾಗಿ ಹಾದಿ ಯುದ್ದಕ್ಕೂ ಹಾರ್ನ್ ಮಾಡಿಕೊಂಡೇ ಹೋಗಬೇಕಾದ ಸ್ಥಿತಿಯೂ ಉದ್ಭವಿಸಿದೆ. ಇದರಿಂದ ಉಳಿದ ವಾಹನ ಸವಾರರೂ ಕೆಲವೊಮ್ಮೆ ಗಾಬರಿಗೆ ಸಿಲುಕುವ ಪ್ರಸಂಗಗಳೂ ಇವೆ.

ಇನ್ನು ಬಹುತೇಕ ದ್ವಿಚಕ್ರ ವಾಹನ ಸವಾರರು ದುರಸ್ತಿಯ ಅವಸ್ಥೆಯಲ್ಲಿರುವ ಸರ್ವೀಸ್‌ ರಸ್ತೆಯಲ್ಲೇ ಕಷ್ಟಪಟ್ಟು ಸಾಗುತ್ತಿದ್ದಾರೆ. ಒಂದುವೇಳೆ ಈ ರಸ್ತೆಯಲ್ಲಿ ಬಂದರೆ ಯಾವುದಾದರೂ ಒಂದು ವಾಹನದ ಕೆಳಗೆ ಸಿಕ್ಕಿಹಾಕಿಕೊಳ್ಳಬೇಕಾದೀತು. ಹಾಗಿದೆ ಇಲ್ಲಿನ ಪರಿಸ್ಥಿತಿ. ಈಗ ಮಳೆಯೂ ಸುರಿಯುತ್ತಿರುವುದರಿಂದ ಗುಂಡಿಗಳ ಅಳವೂ ತಿಳಿಯದು, ಅಗಲವೂ ಹೊಳೆಯದು. ಇಳಿದ ಮೇಲೆಯೇ ಸಮಸ್ಯೆಯ ಭೀಕರತೆ ಅರಿವಿಗೆ ಬರುವಂತಿದೆ.

Advertisement

ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಟ್ಟಾಗಿ ತಾತ್ಕಾಲಿಕ ಪರಿಹಾರ ಹುಡುಕಿದರೆ ಜನರಿಗೆ ಅನುಕೂಲವಾಗಲಿದೆ.

ಆಶಯ ಚೆನ್ನಾಗಿದೆ, ಆಶ್ಚರ್ಯ ಪಡುವಂತಾಗಲಿ
ಎರಡು ತಿಂಗಳಲ್ಲಿ ಕಾಮಗಾರಿ ಮುಗಿಯುತ್ತದೆ ಎನ್ನುವ ಧಾಟಿ ಆಡಳಿತದವರದ್ದು. ಅಂದರೆ ಅದಾದ ಮೇಲೆ ಶಾಶ್ವತ ರಸ್ತೆ ಆಗುತ್ತದೆ, ಅಲ್ಲಿಯವರೆಗೆ ಕಾಯಿರಿ ಎನ್ನುವ ಧ್ವನಿ. ಅದಾದರೆ ಚೆಂದ ಮತ್ತು ಆಶ್ಚರ್ಯ ಖಚಿತ. ಆದರೆ ಈಗಾಗಲೇ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು(ಈ ಹಿಂದಿನ ಅವಧಿಯವರು) ಉಡುಪಿ-ಮಣಿಪಾಲ ಹೈವೇ ಬೀದಿ ದೀಪ, ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿಯಲ್ಲಿ ನೀಡಿದ ಭರವಸೆಗಳನ್ನು ಕಂಡಿರುವ ನಾಗರಿಕರು, ಶಾಶ್ವತ ರಸ್ತೆ ಆಮೇಲೆ ನೋಡೋಣ. ಸದ್ಯ ಸಂಚಾರ ಯೋಗ್ಯ ರಸ್ತೆ ಮಾಡಿಕೊಡಿ ಎನ್ನುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಸದ್ಯ ಸಂಚಾರ ಯೋಗ್ಯ ರಸ್ತೆ ಬಗ್ಗೆ ಗಮನಹರಿಸಲಿ ಎಂಬುದು ಜನಾಗ್ರಹ.

ಶಾಶ್ವತ ಬೇಡ, ಸಂಚಾರ ಯೋಗ್ಯ ರಸ್ತೆ ಕೊಡಿ ಸಾಕು
ಶಾಶ್ವತ ಡಾಮರು, ಕಾಂಕ್ರೀಟ್‌ ರಸ್ತೆಯಿಲ್ಲದೇ ಒಂದೂವರೆ ವರ್ಷವಾಗುತ್ತಾ ಬಂದಿದೆ. ಕಾಮಗಾರಿ ಆರಂಭಿಸುವ ಮುನ್ನ ನಿರ್ಮಿಸಿದ ರಸ್ತೆಯೂ ಶಾಶ್ವತ ರಸ್ತೆ ಇದ್ದಂತೆ ಇರಲಿಲ್ಲ. ಒಂದು ಮಳೆಗೇ ರಸ್ತೆಯ ಸ್ಥಿತಿ ಅಧೋಗತಿಯಾಗಿತ್ತು. ಈಗ ಸಂಚಾರ ಯೋಗ್ಯ ರಸ್ತೆಯನ್ನು ನಿರ್ಮಿಸಿಕೊಡಬೇಕೆಂಬುದೇ ಜನರ ಆಗ್ರಹ. ಬರೀ ಸರ್ವೀಸ್‌ ರಸ್ತೆಯಿಂದ ಸಮಸ್ಯೆ ಬಗೆಹರಿಯದು.

ನೆಪ ಮಾತ್ರಕ್ಕೆ ವೆಟ್‌ಮಿಕ್ಸ್‌
ಒಂದು ತಿಂಗಳಾದರೂ ಸಮಸ್ಯೆಗೆ ಪರಿಹಾರ ಸಿಗುತ್ತದೆಂಬ ಖಾತ್ರಿ ಕಷ್ಟ ಎನಿಸತೊಡಗಿರುವುದು ಸ್ಥಳದಲ್ಲಿ ಕಂಡು ಬರುವ ವಾಸ್ತವ. ಕಾರಣವೆಂದರೆ, ವೆಟ್‌ ಮಿಕ್ಸ್‌ ಅನ್ನು ನೆಪ ಮಾತ್ರಕ್ಕೆ ಹಾಕಿದರೆ ಯಾವ ಪ್ರಯೋಜನವೂ ಆಗದು. ಇಷ್ಟರಲ್ಲೇ ಎರಡೂ ಬದಿಯಲ್ಲಿ ಸರ್ವೀಸ್‌ ರಸ್ತೆ ಆಗಬೇಕಿತ್ತು. ಕಾಮಗಾರಿ ವಿಳಂಬವಾಗಿದೆ. ಅದರೊಂದಿಗೆ ಸುಮಾರು ಮೂರು ತಿಂಗಳಿನಿಂದ ಈ ರಸ್ತೆಯ ಸ್ಥಿತಿ ಅಧೋಗತಿಯಲ್ಲೇ ಇದೆ. ಇನ್ನು ಒಂದು ತಿಂಗಳಲ್ಲಿ ಯಾವ ತೆರನಾದ ಪರಿಹಾರ ಸಿಗುತ್ತದೋ ಕಾದು ನೋಡಬೇಕು.

ಕಾಮಗಾರಿಗೆ ವೇಗ ನೀಡಿದ್ದೇವೆ
ಹೆದ್ದಾರಿ, ಗುತ್ತಿಗೆ ಪಡೆದ ಸಂಸ್ಥೆಯ ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡಿದ್ದೇವೆ. ಕಾಮಗಾರಿ ವೇಗ ಪಡೆದುಕೊಂಡಿದೆ. ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ. ಆದರೆ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಶಾಶ್ವತ ಡಾಮರು/ಕಾಂಕ್ರೀಟ್‌ ಈ ಹಂತದಲ್ಲಿ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಸರ್ವೀಸ್‌ ರಸ್ತೆ ಸರಿಪಡಿಸಿ ಸಮಸ್ಯೆ ನಿವಾರಿಸಲು ಸೂಚಿಸಲಾಗಿದೆ.
– ಕೋಟ ಶ್ರೀನಿವಾಸ ಪೂಜಾರಿ, ಸಂಸದರು

ಜಿಲ್ಲಾಧಿಕಾರಿಗಳ ಅಭಿಪ್ರಾಯ ಇಲ್ಲಿದೆ !
ಒಂದು ತಿಂಗಳು ಸಮಸ್ಯೆ ಹೀಗೆ ಇರಲಿದೆ. ಸರ್ವೀಸ್‌ ರಸ್ತೆ ಸರಿಯಾದ ಅನಂತರ ಸಮಸ್ಯೆ ಸ್ವಲ್ಪ ಕಡಿಮೆ ಆಗಬಹುದು. ಇತ್ತೀಚೆಗೆ ನಾವು ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆಯನ್ನು ಮಾಡಿದ್ದೇವೆ. ಸದ್ಯದ ಮಟ್ಟಿಗೆ ಗುಂಡಿಗಳಿಗೆ ವೆಟ್‌ಮಿಕ್ಸ್‌ ಹಾಕುವುದು ಬಿಟ್ಟು ಬೇರೆ ಯಾವುದೇ ಪರಿಹಾರ ಇಲ್ಲದ್ದಾಗಿದೆ.
-ಡಾ| ಕೆ. ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ

ಇನ್ನೂ ಸ್ವಲ್ಪ ದಿನ ಕಾಯಿರಿ !
ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ಅಭಿಪ್ರಾಯ. ಗುಂಡಿ ಮುಚ್ಚಲು ನಾವು ನಿತ್ಯವೂ ವೆಟ್‌ ಮಿಕ್ಸ್‌ ಹಾಕುತ್ತಿದ್ದೇವೆ. ಮಳೆ ಹೆಚ್ಚಿದ್ದರಿಂದ ರಸ್ತೆ ದುರಸ್ತಿ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಮುಂದಿನ 10-15 ದಿನಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುತ್ತೇವೆ. ಶಾಶ್ವತ ಡಾಮರು ಅಥವಾ ಕಾಂಕ್ರೀಟ್‌ ರಸ್ತೆಯನ್ನು ಈ ಸಂದರ್ಭದಲ್ಲಿ ಮಾಡಲು ಸಾಧ್ಯವಿಲ್ಲ.
– ಅಬ್ದುಲ್‌ ಜಾವೇದ್‌ ಹಜ್ಮಿ,
ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರು

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next