ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಜಿಲ್ಲೆಯ ಮಹಿಳೆಯರು ಆರ್ಥಿಕ ಲಾಭ ತರುವ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಎಲ್ಲ ಸೇವೆಗಳನ್ನು ಒದಗಿಸುವ ಸೂಪರ್ ಮಾರ್ಕೆಟ್ ಆರಂಭಿಸಲಾಗುತ್ತಿದೆ.
Advertisement
ಮಳಿಗೆಯನ್ನು ಉಡುಪಿ ತಾ. ಪಂ., ನಬಾರ್ಡ್ ಸಂಸ್ಥೆಯ ಸಹಯೋಗದಲ್ಲಿ ಚೇರ್ಕಾಡಿ ಗ್ರಾ.ಪಂ. ಪ್ರಗತಿ ಜಿಪಿಎಲ್‌ಎಫ್ ನ ಸಮೃದ್ಧಿ ಸಂಜೀವಿನಿ ಸ್ವಸಹಾಯ ಗುಂಪಿನ ಸದಸ್ಯರು ನಡೆಸಲಿದ್ದಾರೆ. ಜಿಲ್ಲೆಯ ವಿವಿಧ ಸಂಜೀವಿನಿ ಸಂಘದ ಸದಸ್ಯರು ಉತ್ಪಾದಿಸಿರುವ ವಸ್ತುಗಳನ್ನು ಈ ಕೇಂದ್ರದ ಮೂಲಕ ಮಾರಾಟ ಮಾಡಲಾಗುತ್ತದೆ. ಈ ಮಾರ್ಕೆಟ್‌ನಲ್ಲಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಉತ್ತಮ ಗುಣಮಟ್ಟದ ಆಲಂಕಾರಿಕ, ಒಳಾಂಗಣ ಗಿಡಗಳು, ಯಕ್ಷಗಾನ ಮುಖವಾಡಗಳು, ಹ್ಯಾಂಡ್ ಮೇಡ್ ಬ್ಯಾಗ್‌ಗಳು, ಕ್ಯಾಂಡಲ್ಸ್, ಬಿದಿರಿನ ಬುಟ್ಟಿ, ಗ್ರೊ ಬ್ಯಾಗ್, ಕೀ ಚೈನ್, ವಾಲ್‌ಪೈಂಟಿಂಗ್ಸ್ ಲಭ್ಯವಿದೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ 155 ಗ್ರಾ. ಪಂ. ಮಟ್ಟದ ಒಕ್ಕೂಟಗಳ ಮೂಲಕ ಒಟ್ಟು 7,623 ಸ್ವ ಸಹಾಯ ಗುಂಪು ರಚಿಸಲಾಗಿದೆ. ಈ ಗುಂಪುಗಳಲ್ಲಿ 85,000 ಅಧಿಕ ಮಂದಿ ಸದಸ್ಯರಿದ್ದು, ಜಿಲ್ಲೆಯ ಗ್ರಾಮೀಣ ಭಾಗದ ಮಹಿಳೆಯರು ಸಮುದಾಯ ಬಂಡವಾಳ ನಿಧಿ ಪಡೆದು ಅನೇಕ ರೀತಿಯ ಜೀವನೋಪಾಯ ಚಟುವಟಿಕೆ ನಡೆಸುತ್ತಿದ್ದಾರೆ.
Related Articles
ಸಂಜೀವಿನಿ ಸೂಪರ್ ಮಾರ್ಕೆಟನ್ನು ಆ.14ರಂದು ಮಧ್ಯಾಹ್ನ 12.15ಕ್ಕೆ ಉಡುಪಿ ತಾ. ಪಂ. ಕಟ್ಟಡದಲ್ಲಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಆ. 14ರಂದು ಆಹಾರೋತ್ಸವ ನಡೆಯಲಿದ್ದು ಆಷಾಢ ಮಾಸದ ಆಟಿ ತಿಂಡಿ ತಿನಿಸುಗಳು ದೊರಕಲಿವೆ.
Advertisement
ಹಲವು ಸೇವೆಗಳು ಲಭ್ಯಈ ಸೂಪರ್ ಮಾರ್ಕೆಟ್‌ನಲ್ಲಿ ಸೇವಾ ಸಿಂಧು, ಪಾಸ್ ಪೋರ್ಟ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಕಾರ್ಮಿಕರ ನೋಂದಣಿ ಇತ್ಯಾದಿ ಆನ್‌ಲೈನ್ ಸೇವೆಗಳು, ಶಿಕ್ಷಣ, ಬ್ಯೂಟೀಶಿಯನ್, ಟೈಲರಿಂಗ್, ಎಂಬ್ರಾಯಿಡರಿ, ಕುಚ್ಚು ಮೆಹಂದಿ, ಚೆಂಡೆ, ಯಕ್ಷಗಾನ, ಕ್ಯಾಟರಿಂಗ್, ಕಾನೂನು ಮತ್ತು ಆಪ್ತ ಸಲಹೆ, ಪೋಟೋಗ್ರಫಿ ಮತ್ತು ವೀಡಿಯೋಗ್ರಫಿ, ಆರೋಗ್ಯ ಸಲಹೆ ಸೇವೆಗಳು ದೊರೆಯಲಿದೆ. ಜಿಲ್ಲೆಯ ಸಂಜೀವಿನಿ ಸ್ವ ಸಹಾಯ ಸಂಘದ ಮಹಿಳೆಯರಿಗೆ ಜಿ. ಪಂ. ಮೂಲಕ ಸೊದ್ಯೋಗ ಆರಂಭಿಸಲು ಅಗತ್ಯವಿರುವ ತರಬೇತಿ ಮತ್ತು ಸಮುದಾಯ ಬಂಡವಾಳ ನೀಡಲಾಗುತ್ತಿದೆ. ಅವರು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರೆತಲ್ಲಿ ಹೆಚ್ಚಿನ ಆರ್ಥಿಕ ಲಾಭ ಗಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರೇ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಸೂಪರ್ ಮಾರ್ಕೆಟ್ ತೆರೆಯುತ್ತಿರುವುದು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ.
ಪ್ರಸನ್ನ ಎಚ್., ಸಿಇಒ, ಉಡುಪಿ ಜಿ. ಪಂ.