Advertisement

ಫೆಬ್ರವರಿ 26ರಂದು ಉಡುಪಿಯಲ್ಲಿ ರಾಮದಾಸ ಅಭಿನಂದನೆ 

03:50 AM Feb 24, 2017 | |

ನಟ, ನಾಟಕಕಾರ, ನಿರ್ದೇಶಕ ಪ್ರೊ| ರಾಮದಾಸ ಪ್ರಾಧ್ಯಾಪಕರಾಗಿ ನಿವೃತ್ತರು. ಸಾಹಿತ್ಯ ರಚನೆಯಲ್ಲಿ ಸದಾ ಪ್ರವೃತ್ತರು. ಎತ್ತರದ ನಿಲುವಿನ ಸ್ಪುರದ್ರೂಪಿ ರಾಮದಾಸ್‌ ನೇರ ನಡೆನುಡಿ ರೂಢಿಸಿಕೊಂಡವರು. ಹೋರಾಟದ ಬದುಕು ಅನ್ಯಾಯದ ವಿರುದ್ಧ ಪ್ರತಿಭಟಿಸಲು ಕಲಿಸಿತು. ಬದುಕಿನಲ್ಲಿ ಒದಗಿದ ಪ್ರತಿರೋಧಗಳು ಅವರನ್ನು ವಿಮುಖಗೊಳಿಸಲಿಲ್ಲ. ಸವಾಲುಗಳನ್ನು ಸ್ವೀಕರಿಸುತ್ತಾ ಬದುಕು ಕಟ್ಟಿಕೊಂಡರು. ಹೊಟ್ಟೆ ಹಸಿವು ಮೀರಿದ ಓದಿನ ಹಸಿವು ಎಲ್ಲಿಯೋ ಹೊಟೇಲ್‌ ಮಾಣಿಯಾಗಿ ಕಳೆದುಹೋಗಬಹುದಾದ ಹುಡುಗನನ್ನು ಪ್ರೊ| ರಾಮದಾಸರನ್ನಾಗಿಸಿತು.

Advertisement

ಉಡುಪಿ ಸುಮೀಪದ ಕುಂಜೂರಿನ ಕುಂಡಂತಾಯ ಕುಟುಂಬದ ಗುರುರಾಜರು ಹೊಟೇಲ್‌ ನಡೆಸುತ್ತಾ ಗುಂಡ್ಲುಪೇಟೆ, ಟಿ. ನರಸಿಪುರ, ಮೈಸೂರುಗಳಲ್ಲಿ ವಾಸವಾಗಿದ್ದರು. ಗುರುರಾಜ-ಸತ್ಯಭಾಮ ದಂಪತಿ ಪುತ್ರರಾಗಿ ಇವರು ಜನಿಸಿದ್ದು 1940ರಲ್ಲಿ. ತಂದೆ ನಡೆಸುತ್ತಿದ್ದ ಹೊಟೇಲ್‌ನಲ್ಲಿ ದುಡಿಯುತ್ತಾ ಕಲಿಯುವ ಅನಿವಾರ್ಯತೆ ಅವರಿಗೆ ಎದುರಾಗಿತ್ತು. ತಂದೆಯ ಅಕಾಲಿಕ ನಿಧನದ ಅನಂತರ ಹೊಟೇಲ್‌ ಮಾಣಿಯಾಗಿ ಕುಟುಂಬ ನಿರ್ವಹಣೆಯ ಹೊಣೆಗಾರಿಕೆಯೊಂದಿಗೆ ವಿದ್ಯಾಭ್ಯಾಸ ಮುಂದುವರಿಸಿದರು.  ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ರಾಮದಾಸ್‌  ಸ್ಪರ್ಧೆಯಲ್ಲಿ ಪಡೆದ  ಬಹುಮಾನಗಳು ಅನೇಕ. ಇದಕ್ಕೆಲ್ಲ  ಕಲಶಪ್ರಾಯವಾಗಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಚಿನ್ನದ ಪದಕಗಳೊಂದಿಗೆ ತೇರ್ಗಡೆಯಾದರು. ವಿದ್ಯಾರ್ಥಿಯಾಗಿರುವಾಗಲೇ ಅಡಿಗ, ಅನಂತಮೂರ್ತಿ, ರಾಜೀವ ತಾರಾನಾಥ ಮೊದಲಾದ ಶ್ರೇಷ್ಠ ಸಾಹಿತಿಗಳ ಒಡನಾಟ ಇವರ ಸಾಹಿತ್ಯಾಸಕ್ತಿಯನ್ನು ಉತ್ತೇಜಿಸಿತು. 

ನೆಚ್ಚಿನ ಪ್ರಾಧ್ಯಾಪಕ 
ಉಪನ್ಯಾಸಕರಾಗಿ ವೃತ್ತಿ ಬದುಕು ಆರಂಭಿಸಿದ್ದು ಮೂಲ್ಕಿಯ ವಿಜಯ ಕಾಲೇಜಿನಲ್ಲಿ. ಎಂ. ಗೋಪಾಲಕೃಷ್ಣ ಅಡಿಗರು ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ಪ್ರಾಂಶುಪಾಲರಾಗಿದ್ದಾಗ ಇವರನ್ನು ಅಲ್ಲಿಗೆ ಕರೆಸಿಕೊಂಡರು. ಮುಂದೆ ಸುಮಾರು ಮೂರು ದಶಕಗಳ ಅಧ್ಯಾಪನ ವೃತ್ತಿ ಪೂರೈಸಿ ಅಲ್ಲೇ ನಿವೃತ್ತರಾದರು. ಕನ್ನಡ ಸಾಹಿತ್ಯದ ತಲಸ್ಪರ್ಶಿ ಅಧ್ಯಯನ, ಸ್ವರಭಾರ, ಭಾಷೆಯ ಮೇಲಿನ ಹಿಡಿತ,  ಬೋಧನ ಕ್ರಮದಿಂದ ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕರಾಗಿ ವೃತ್ತಿ ಬದುಕಿನಲ್ಲಿ ಸಾರ್ಥಕ್ಯ ಕಂಡರು. 

ಕವನ ಸಂಕಲನ, ಕಾದಂಬರಿ, ನಾಟಕ
ವಿದ್ಯಾರ್ಥಿಯಾಗಿರುವಾಗಲೇ ಕಾವ್ಯ ರಚನೆ, ನಾಟಕಗಳಲ್ಲಿ ತೊಡಗಿಸಿಕೊಂಡ ಅವರಿಗೆ ಸಾಹಿತ್ಯಕ, ಸಾಂಸ್ಕೃತಿಕ ಕೇಂದ್ರವಾದ ಉಡುಪಿ ಪೂರಕ ಪ್ರೇರಕವಾಯಿತು. “ಋತುಗೀತಾಮೃತ’ದಿಂದ “ಹದಿಹರೆಯದ ಹುಡುಗರು’ ವರೆಗೆ ಐದು ಕವನಸಂಕಲಗಳು, “ಇದುಭಾರತ’ ದಿಂದ “ಸಾಕ್ಷಾತ್ಕಾರ’ ದವರೆಗೆ ಆರು ನಾಟಕಗಳು. “ಕಾಲಲಬ್ಧಿ’ ಯಿಂದ ತೊಡಗಿ “ಜ್ಯೋತಿ ಬೆಳಗುತಿದೆ’ ವರೆಗೆ ಆರು ರೇಡಿಯೋ ನಾಟಕಗಳು ಪ್ರಕಟವಾಗಿವೆ. “ಸೇಡು’ ಕಥಾಸಂಕಲನ. “ಕರ್ತಾರನ ಕಮ್ಮಟ’, “ಇವಳು’, “ಮುಕ್ತಪ್ರೇಮ’ ಅವರಿಂದ ರಚಿತ ಕಾದಂಬರಿಗಳು. “ಭೂಮಿಗೀತ ಕಾವ್ಯಪ್ರವೇಶ’ ಮತ್ತು “ಅಧ್ಯಯನ’ ವಿಮಶಾì ಕೃತಿಗಳು. ಇಪ್ಪತ್ತಕ್ಕೂ ಹೆಚ್ಚು ಸಂಕಲನಗಳ ಅಭಿನಂದನ ಗ್ರಂಥಗಳ ಸಂಪಾದಕಕತ್ವವನ್ನು ಸಮರ್ಥವಾಗಿ  ನಿರ್ವಹಿಸಿದ್ದಾರೆ. ಐದು ಅನುವಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ.  “ಎಳನಿಂಬೆ’ ಆತ್ಮಕಥನ ಎರಡು ಭಾಗಗಳಲ್ಲಿವೆ.  ಅವರ ಸಾಹಿತ್ಯ ಕೃತಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನವಾಗಿವೆ. ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪಠ್ಯಪುಸ್ತಕಗಳಾಗಿವೆ. ಜ್ಯೋತಿಷ್ಮತಿ ಪ್ರಕಾಶನದ ಮೂಲಕ ಪ್ರಕಾಶಕರಾಗಿಯೂ ಮಾನ್ಯರು. ನಿಡುಗಾಲದ ಸಾಹಿತ್ಯ ಸಾಧನೆಗೆ ಅರ್ಹವಾಗಿಯೇ ಉಡುಪಿ ಜಿಲ್ಲಾ ಒಂಬತ್ತನೆಯ  ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಅವರನ್ನರಸಿ ಬಂದಿದೆ. 

ನಟ, ನಿರ್ದೇಶಕ ನಾಟಕ ನಟರಾಗಿ ಅವರು ನಿರ್ವಹಿಸಿದ ಪಾತ್ರಗಳು ನೂರಾರು.  “ತುಘಲಕ್‌’, “ಈಡಿಪಸ್‌’, “ಸಂಕ್ರಾಂತಿ’, “ಅಂಧಯುಗ’, “ಹರಕೆಯ ಕುರಿ’, “ಭಾರತಭಾಗ್ಯವಿಧಾತ’ ವೂ ಸೇರಿದಂತೆ ಹಲವು ನಾಟಕಗಳ ಪ್ರಧಾನ ಭೂಮಿಕೆಯಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ನಾಟಕ ನಿರ್ದೇಶಕರಾಗಿಯೂ ತಮ್ಮ ಕಲಾಪ್ರತಿಭೆಯನ್ನು ಅವರು ಮೆರೆದಿದ್ದಾರೆ.  ಸ್ವರಭಾರ ಮತ್ತು ಮಾತಿನ ಓಘದಿಂದ ಆಕಾಶವಾಣಿಯ ಶ್ರೋತೃಗಳನ್ನು ಮುದಗೊಳಿಸಿದ್ದಾರೆ. ಆಕಾಶವಾಣಿಯ ಬಿ-ಹೈಗ್ರೇಡ್‌ ಕಲಾವಿದರು. “ಗುಡ್ಡದ ಭೂತ’ ಧಾರಾವಾಹಿಯ ಅವರ ಅಭಿನಯ ಟಿ.ವಿ. ವೀಕ್ಷಕರ ಮನದಲ್ಲಿ ಇನ್ನೂ ಹಸಿರಾಗಿದೆ. 

Advertisement

ಬಾಳಸಂಗಾತಿ ಲಕ್ಷ್ಮೀಕಾಂತಿ. ಬಾಳಬಳ್ಳಿಗೊಡೆದ ಕುಡಿ ಜ್ಯೋತಿಷ್ಮತಿ. ಆ ಕುಡಿಯಡಿ ನೇಹಾ, ನವ್ಯಾ. ಪ್ರಸ್ತುತ ಉಡುಪಿ ದೊಡ್ಡಣಗುಡ್ಡೆಯ “ಮಂದಾರ’ ದಲ್ಲಿ ವಿಶ್ರಾಂತ ಬದುಕು ಸಾಗಿಸುತ್ತಿದ್ದಾರೆ. ಆದರೂ ಸಾಹಿತ್ಯ ರಚನೆಯಲ್ಲಿ ಅವಿಶ್ರಾಂತರು.  ಇವರ ಸಾಹಿತ್ಯ,  ಸಾಂಸ್ಕೃತಿಕ  ಸಾಧನೆ ಗುರುತಿಸಿ ಅವರ ಅಭಿಮಾನಿಗಳು ಫೆಬ್ರವರಿ 26ರಂದು   ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ದಿನಪೂರ್ತಿ ಕಾರ್ಯಕ್ರಮದೊಂದಿಗೆ ಅಭಿನಂದಿಸಲಿದ್ದಾರೆ. ಇದೇ ಸಂದರ್ಭ ಅವರ ಮಹತ್ವದ ಕೃತಿ “ದಾಸಭಾರತ’ ಲೋಕಾರ್ಪಣೆಗೊಳ್ಳಲಿದೆ. 

ನಾರಾಯಣ ಎಂ. ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next