Advertisement

ಉಡುಪಿ ರೈಲು ನಿಲ್ದಾಣ ಈಗ ಕ್ಯಾಶ್‌ಲೆಸ್‌

03:30 AM Jul 03, 2017 | Team Udayavani |

ಉಡುಪಿ: ದೂರದ ಊರಿನಿಂದ ಬಂದು ಉಡುಪಿ ರೈಲು ನಿಲ್ದಾಣದಲ್ಲಿ ಇಳಿದಾಗ ಖಾತೆಯಲ್ಲಿ ಹಣವಿದ್ದು, ಕೈಯಲ್ಲಿ ಹಣವಿಲ್ಲದಿದ್ದರೆ ಚಿಂತಿಸಬೇಕಾದ ಅಗತ್ಯವಿಲ್ಲ. ಕ್ರೆಡಿಟ್‌ ಕಾರ್ಡ್‌ ಅಥವಾ ಡೆಬಿಟ್‌ ಕಾರ್ಡ್‌ ಇದ್ದರೆ ಸಾಕು. ಎಲ್ಲ ರೀತಿಯ ವ್ಯವಹಾರ ನಡೆಸಬಹುದು. ಹೌದು ಕೊಂಕಣ ರೈಲ್ವೇಯ ಉಡುಪಿ ನಿಲ್ದಾಣವು ಈಗ ಸಂಪೂರ್ಣ ನಗದು ರಹಿತ ವಹಿವಾಟಿಗೆ ತೆರೆದುಕೊಂಡಿದ್ದು, ಇನ್ನು ಮುಂದೆ ಪ್ರಯಾಣಿಕರು ಚಿಲ್ಲರೆ ಸಮಸ್ಯೆಗೆ ತಡಕಾಡುವ ಪರಿಸ್ಥಿತಿ ಇರುವುದಿಲ್ಲ.

Advertisement

ಎರಡು ತಿಂಗಳ ಹಿಂದೆಯೇ ಮುಂಗಡ ಟಿಕೆಟ್‌ ಕಾದಿರಿಸುವಿಕೆಗೆ ಕ್ಯಾಶ್‌ಲೆಸ್‌ ವ್ಯವಸ್ಥೆ ಮಾಡಲಾಗಿತ್ತು. ರೈಲ್ವೇ ಸಾಮಾನ್ಯ ಟಿಕೆಟ್‌ ಕೇಂದ್ರದಿಂದ ಆರಂಭವಾಗಿ ನಿಲ್ದಾಣದಲ್ಲಿರುವ ಸಸ್ಯಾಹಾರ ಹೊಟೇಲ್‌, ಟೀ ಸ್ಟಾಲ್‌, ಕಾರು – ಬೈಕ್‌ ಪಾರ್ಕಿಂಗ್‌ ಪಾವತಿ, ಪ್ರಿಪೇಯ್ಡ ಆಟೋ, ಬುಕ್‌ ಸ್ಟಾಲ್‌, ಸ್ಥಳೀಯ ಆಹಾರ ಮಳಿಗೆ, ಜನರಲ್‌ ಸ್ಟೋರ್‌ ಸಹಿತ ಇತರ ಸ್ಟಾಲ್‌ಗ‌ಳಲ್ಲಿ ಸ್ಪೈಪ್‌ ಮೆಷಿನ್‌ ಹಾಗೂ ಪೇಟಿಎಂ ಮೊಬೈಲ್‌ ಆ್ಯಪ್‌ ಮೂಲಕ ನಗದು ರಹಿತ ವ್ಯವಹಾರ ನಡೆಸಲು ಶನಿವಾರದಿಂದ ಚಾಲನೆ ನೀಡಲಾಗಿದೆ.

1 ರೂ.ನಿಂದ ಆರಂಭ
ರೈಲು ನಿಲ್ದಾಣದಲ್ಲಿ ಈಗ ಕನಿಷ್ಠ ಒಂದು ರೂಪಾಯಿಯಿಂದ ಗರಿಷ್ಠ ಪ್ರಮಾಣದವರೆಗೆ ನಗದು ರಹಿತ ವಹಿವಾಟು ನಡೆಸಬಹುದು. ಸದ್ಯ ನಿಲ್ದಾಣದಲ್ಲಿರುವ ಕನಿಷ್ಠ ವಹಿವಾಟು ಎಂದರೆ 2 ರೂ.ನ ಸೈಕಲ್‌ ಪಾರ್ಕಿಂಗ್‌. ದ್ವಿಚಕ್ರ ವಾಹನಕ್ಕೆ 5 ರೂ., ಜತೆಗೆ ಪ್ರಿಪೇಯ್ಡ ಆಟೊ ನಿಲ್ದಾಣ, ಆಹಾ ರೋತ್ಪನ್ನ  ಖರೀದಿಯಲ್ಲಿ ನಗದು ರಹಿತ ವ್ಯವಹಾರ ನಡೆಸಬಹುದು.

ಗಳಿಕೆಯಲ್ಲೂ ಉಡುಪಿ ಪ್ರಥಮ
ತೋಕೂರಿನಿಂದ ಆರಂಭವಾಗಿ ಮಹಾರಾಷ್ಟ್ರದ ರೋಹಾವರೆಗೆ ಕೊಂಕಣ ರೈಲ್ವೇ ವ್ಯಾಪ್ತಿಯಿದ್ದು, ಒಟ್ಟು 65 ನಿಲ್ದಾಣಗಳಿವೆ. ಉಡುಪಿ ನಿಲ್ದಾಣದಲ್ಲಿ ಎಲ್ಲ ವ್ಯವಹಾರವು ಕ್ಯಾಶ್‌ಲೆಸ್‌ ಆಗುತ್ತಿರುವುದು ಬಹುಶಃ ಕೊಂಕಣ್‌ ರೈಲ್ವೇ ವ್ಯಾಪ್ತಿಯಲ್ಲಿ ಪ್ರಥಮ ಇರಬಹುದು. ಕೊಂಕಣ ರೈಲ್ವೇಯ ಎಲ್ಲ ನಿಲ್ದಾಣಗಳಲ್ಲಿ ಉಡುಪಿಯು ವಾರ್ಷಿಕ ಹಣಗಳಿಕೆಯಲ್ಲೂ ಮುಂಚೂಣಿಯಲ್ಲಿದೆ. ದಿನಕ್ಕೆ ಸುಮಾರು 4 ಲ.ರೂ.ಗೂ ಅಧಿಕ ವಹಿವಾಟು ನಡೆಯುತ್ತಿದ್ದು, ಪ್ರವಾಸಿ ಸ್ಥಳ ಹಾಗೂ ಶಿಕ್ಷಣ ತಾಣವಾಗಿರುವ ಕಾರಣ ದಿನವೊಂದಕ್ಕೆ 2,000ಕ್ಕೂ ಮಿಕ್ಕಿ ಮಂದಿ ಪ್ರಯಾಣಿಕರು ಬಂದು- ಹೋಗುತ್ತಿರುತ್ತಾರೆ ಎಂದು ಕೊಂಕಣ ರೈಲ್ವೇಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ. ಸುಧಾಕೃಷ್ಣ ಮೂರ್ತಿ ತಿಳಿಸಿದರು.

ಜನರಿಗೆ ಹೆಚ್ಚಿನ ಪ್ರಯೋಜನ
ರೈಲು ಟಿಕೆಟ್‌ ಕೇಂದ್ರದಲ್ಲಿ ಈಗಾಗಲೇ ನಗದು ರಹಿತ ವಹಿವಾಟು ನಡೆಯುತ್ತಿದೆ. ಈಗ ನಿಲ್ದಾಣದ ಎಲ್ಲ ಮಳಿಗೆಗಳಲ್ಲಿ ಆರಂಭಿಸಿರುವುದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಪ್ರತಿಯೊಂದು ಮಳಿಗೆಗೂ ಸ್ವೈಪಿಂಗ್‌ ಯಂತ್ರಗಳನ್ನು ಅಳವಡಿಸಿದ್ದು, ಜನರಿಗೆ ಇನ್ನಷ್ಟು ಪ್ರಯೋಜನ ಸಿಗಲಿದೆ. ಇನ್‌ಸ್ಟಾಲೇಶನ್‌ ಸಮಸ್ಯೆಯಿಂದ ಸಾಮಾನ್ಯ ಟಿಕೆಟ್‌ ಕೌಂಟರ್‌ನಲ್ಲಿ ನಗದು ರಹಿತ ವಹಿವಾಟು ಆರಂಭಿಸಿಲ್ಲ. ಒಂದೆರಡು ದಿನಗಳಲ್ಲಿ ಅದು ಸಹ ಕ್ಯಾಶ್‌ಲೆಸ್‌ ಆಗಲಿದೆ.
– ಎಸ್‌. ವಿನಯ ಕುಮಾರ್‌, ಕೊಂಕಣ ರೈಲ್ವೇ ಮಂಗಳೂರು ವಲಯಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next