ಉಡುಪಿ: ನಗರದ ಮಾರುಥಿ ವಿಥಿಕಾ ರಸ್ತೆಯಲ್ಲಿ ಪಿಡಬ್ಲ್ಯೂಡಿ ಗುತ್ತಿಗೆದಾರರೊಬ್ಬರು ಸ್ಕೂಟರ್ ಸೀಟ್ ಅಡಿ ಇರಿಸಿದ್ದ 2.90 ಲಕ್ಷ ರೂಪಾಯಿ ಹಣವನ್ನು ಕಳ್ಳರು ಎಗರಿಸಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಕಟಪಾಡಿ ಕೋಟೆ ಗ್ರಾಮದ ಪ್ರಭಾಕರ ಕೋಟ್ಯಾನ್ ಅವರು ಅಜ್ಜರಕಾಡುವಿನ ಬ್ಯಾಂಕ್‌ನಲ್ಲಿ ಚೆಕ್ ಡ್ರಾ ಮಾಡಿ 3,44,000 ರೂಪಾಯಿ ಪಡೆದು ಮಾರುತಿ ವಿಥಿಕಾದಲ್ಲಿರುವ ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿಯಲ್ಲಿ ಆಭರಣ ಖರೀದಿಗೆ ಬಂದಿದ್ದರು.
ಜ್ಯುವೆಲ್ಲರಿಯಿಂದ ಅನತಿ ದೂರದಲ್ಲಿ ಸ್ಕೂಟರ್ ಪಾರ್ಕ್ ಮಾಡಿ , 54 000 ರೂಪಾಯಿ ತೆಗೆದುಕೊಂಡು ಉಳಿದ 2,90,000ರೂಪಾಯಿ ಹಣವನ್ನು ಸ್ಕೂಟರ್‌ನ ಸ್ಟೀಟ್ ಅಡಿಯಲ್ಲಿ ಬಿಟ್ಟು ಲಾಕ್ ಮಾಡಿ ತೆರಳಿದ್ದರು ಎಂದು ಹೇಳಲಾಗಿದೆ. ಚಿನ್ನದಂಗಡಿಯಿಂದ ಮರಳಿ ಬಂದಾಗ ಸ್ಕೂಟರ್‌ನಿಂದ ಹಣ ಕಳವಾಗಿರುವುದು ಕಂಡು ದಿಗಿಲಾಗಿದ್ದಾರೆ.
ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ. ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ಪ್ರಭಾಕರ್ ಅವರು ಸ್ಕೂಟರ್ ಇರಿಸಿದ ಸ್ಥಳ ಸೆರೆಯಾಗಿಲ್ಲ.
ಪ್ರಕರಣದ ತನಿಖೆ ನಡೆಸುವ ವೇಳೆ ಪೊಲೀಸ್ ಇಲಾಖೆ ಅಳವಡಿಸಿರುವ ಕ್ಯಾಮರಾಗಳು ನಿಷ್ಕ್ರೀಯವಾಗಿರುವುದು ಕಂಡು ಬಂದಿದೆ ಎಂದು ಪ್ರಭಾಕರ್ ಅವರು ಆರೋಪಿಸದ್ದಾರೆ.