ಉಡುಪಿ: ಅಷ್ಟಮಠಗಳಲ್ಲಿ ಒಂದಾಗಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಪಟ್ಟಶಿಷ್ಯರ ಸ್ವೀಕಾರ ಸಮಾರಂಭ ಎ. 22ರಂದು ಪೂರ್ವಾಹ್ನ 11.45ಕ್ಕೆ ಹಿರಿಯಡಕ ಸಮೀಪದ ಶ್ರೀ ಪುತ್ತಿಗೆ ಮೂಲ ಮಠದಲ್ಲಿ ಸರಳವಾಗಿ ಜರಗಲಿದೆ.
ಎಂಜಿನಿಯರಿಂಗ್ ಪದವೀಧರ ಪ್ರಶಾಂತ ಆಚಾರ್ಯ (27) ಅವರನ್ನು ಶ್ರೀ ಸುಗುಣೇಂದ್ರತೀರ್ಥರು ಮಠದ ಕಿರಿಯ ಯತಿಯಾಗಿ ನೇಮಿಸಲಿದ್ದಾರೆ.
ಶ್ರೀ ಪುತ್ತಿಗೆ ಮಠದ ಶ್ರೀ ಉಪೇಂದ್ರತೀರ್ಥ ಶ್ರೀಪಾದರ 750 ವರ್ಷಗಳ ಗುರುಪರಂಪರೆಯಲ್ಲಿ 30ನೇ ಯತಿಗಳಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ 12ನೇ ವಯಸ್ಸಿನಲ್ಲಿ ಬಾಲ ಸನ್ಯಾಸ ಸ್ವೀಕರಿಸಿದ್ದರು. ಸೋಮವಾರಕ್ಕೆ ಸನ್ಯಾಸ ಸ್ವೀಕರಿಸಿ 45 ಸಂವತ್ಸರಗಳನ್ನು ಪೂರೈಸಲಿದ್ದಾರೆ.
ಶ್ರೀಗಳು ದೇಶ ವಿದೇಶದಲ್ಲಿ ಧರ್ಮ ಪ್ರಸಾರ ಕಾರ್ಯದ ಮೂಲಕ ಪ್ರಸಿದ್ಧರು.
ಪ್ರಶಾಂತ ಆಚಾರ್ಯ ಅವರು ಕುಂಜಿಬೆಟ್ಟಿನ ಗುರುರಾಜ ಆಚಾರ್ಯ ಮತ್ತು ವಿನುತಾ ಆಚಾರ್ಯ ದಂಪತಿಯ ಪುತ್ರ. ಸಂಸ್ಕೃತದ ಬಗ್ಗೆ ಮೂಲಜ್ಞಾನವಿದೆ.
ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಬಾಲ್ಯದಿಂದಲೇ ಅಧ್ಯಾತ್ಮದ ಒಲವಿತ್ತು. ಜಾತಕ ಪರಿಶೀಲಿಸಿ ಆಯ್ಕೆ ಮಾಡಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.