ಉಡುಪಿ: ಶ್ರೀ ಪುರಂದರದಾಸರ ಆರಾಧನೆ ಪ್ರಯುಕ್ತ ಶುಕ್ರವಾರ ಪರ್ಯಾಯ ಪುತ್ತಿಗೆ ಮಠದಿಂದ ಶತಕಂಠ ಗಾಯನ ಆಯೋಜಿಸಲಾಯಿತು. ಸುಗುಣ ಶ್ರೀ ಭಜನಾ ಮಂಡಳಿಯ ಶಾಂತ ಹೆಬ್ಬಾರ್ ಅವರ ನೇತೃತ್ವದಲ್ಲಿ, ರತ್ನ ಸಂಜೀವ ಕಲಾ ಮಂಡಲ ಸರಳೇ ಬೆಟ್ಟು ಇದರ ಸಂಯುಕ್ತ ಆಶ್ರಯದಲ್ಲಿ ಸುಮಾರು 600 ಸ್ತ್ರೀಯರು 3 ಗಂಟೆಗಳ ಕಾಲ ಶ್ರೀ ಪುರಂದರ ದಾಸರ ಕೀರ್ತನೆಗಳನ್ನು ಹಾಡಿದರು.
”ಶ್ರೀ ಕೃಷ್ಣ, ಮುಖ್ಯ ಪ್ರಾಣ ದೇವರಿಗೂ ಶ್ರೀ ಪುರಂದರದಾಸರಿಗೂ ವಿಶೇಷ ನಂಟು ಇದ್ದು ಉಡುಪಿ ಶ್ರೀ ಕೃಷ್ಣ ಮತ್ತು ಪ್ರಾಣ ದೇವರನ್ನು ತಮ್ಮ ಅನೇಕ ಕೀರ್ತನೆಗಳಲ್ಲಿ ವರ್ಣಿಸಿ ಸ್ತುತಿಸಿರುವ ಪುರಂದರದಾಸರು ಇಲ್ಲಿನ ಚಂದ್ರೇಶ್ವರ ಅನಂತೇಶ್ವರ ಮತ್ತು ಮಧ್ವ ಸರೋವರವನ್ನು ವರ್ಣಿಸಿದ್ದಾರೆ” ಎಂದು ಪರ್ಯಾಯ ಪುತ್ತಿಗೆ ಶ್ರೀಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಶ್ರೀ ಮಾಧವತೀರ್ಥ ಸಂಸ್ಥಾನದ ಕಿರಿಯ ಪೀಠಾಧೀಶರು ಉಡುಪಿ ಶ್ರೀ ಕೃಷ್ಣ ದೇವರ ದರ್ಶನ ಪಡೆದರು. ಪರ್ಯಾಯ ಪುತ್ತಿಗೆ ಉಭಯ ಶ್ರೀಗಳು ಸ್ವಾಗತಿಸಿ ಚಂದ್ರ ಶಾಲೆಯಲ್ಲಿ ಸಂಸ್ಥಾನ ಗೌರವ ನೀಡಿದರು.
ಪುರಂದರದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀ ಪುರಂದರ ದಾಸರ ಭಾವಚಿತ್ರ ಕೃತಿಗಳ ಶೋಭಾಯಾತ್ರೆ ರಥಬೀದಿಯಲ್ಲಿ ನೆರವೇರಿತು.