Advertisement

ಜ.3:ಪಲಿಮಾರುಶ್ರೀ ಪುರಪ್ರವೇಶ: ಕೆ.ಎಂ.ಮಾರ್ಗದಲ್ಲಿ ಪರ್ಯಾಯ ಮೆರವಣಿಗೆ

02:55 PM Dec 05, 2017 | |

ಉಡುಪಿ: ಭಾವೀ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪರ್ಯಾಯ ಸಂಚಾರ ಮುಗಿಸಿ
ಜ. 3ರಂದು ಪುರಪ್ರವೇಶ ಮಾಡಲಿದ್ದಾರೆ. 

Advertisement

ಅಂದು ಅಪರಾಹ್ನ 3.30ಕ್ಕೆ ಜೋಡು ಕಟ್ಟೆಯಿಂದ ಅವರನ್ನು ಸ್ವಾಗತಿಸಲಾಗುವುದು. 6.45ಕ್ಕೆ ರಥಬೀದಿ ಯಲ್ಲಿ ನಿರ್ಮಿಸುವ ವೇದಿಕೆಯಲ್ಲಿ ಪರ್ಯಾಯ ಶ್ರೀ ಪೇಜಾವರ ಶ್ರೀಗಳ ಅಧ್ಯಕ್ಷತೆಯಲ್ಲಿ ಪೌರ ಸಮ್ಮಾನ ದೊಂದಿಗೆ ಗೌರವಿಸಲಾಗುವುದು. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಬದರೀನಾಥ ಕ್ಷೇತ್ರದ ರಾವಲ್‌ಜಿ ಈಶ್ವರ ಪ್ರಸಾದ ನಂಬೂದಿರಿ, ಸಚಿವ ಪ್ರಮೋದ್‌ ಮಧ್ವರಾಜ್‌, ಸಂಸದೆ ಶೋಭಾ ಕರಂದ್ಲಾಜೆ, ನಗರ ಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಮೊದಲಾದವರು ಪಾಲ್ಗೊಳ್ಳುವರು. ಪುರಪ್ರವೇಶದ ಮೆರವಣಿಗೆ ಮೂಡಬಿದಿರೆಯ ಡಾ| ಮೋಹನ ಆಳ್ವರ ನೇತೃತ್ವದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ ಸುದ್ದಿಗೋಷ್ಠಿಯಲ್ಲಿ  ತಿಳಿಸಿದರು. 

ಪುರಪ್ರವೇಶದ ಮೆರವಣಿಗೆ ಜೋಡು ಕಟ್ಟೆಯಿಂದ ಕೆ.ಎಂ. ಮಾರ್ಗ, ತ್ರಿವೇಣಿ ಸರ್ಕಲ್‌, ಸಂಸ್ಕೃತ ಕಾಲೇಜು ಸರ್ಕಲ್‌ ಮಾರ್ಗವಾಗಿ ರಥಬೀದಿ ಯನ್ನು ಪ್ರವೇಶಿಸಲಿದೆ. ಅದೇ ರೀತಿ ಜ. 18ರಂದು ನಡೆಯುವ ಪರ್ಯಾಯ ಮೆರವಣಿಗೆಯೂ ಇದೇ ಮಾರ್ಗದಲ್ಲಿ ಸಾಗಿ ಬರಲಿದೆ. ತೆಂಕಪೇಟೆ ಮಾರ್ಗವು ಇಕ್ಕಟ್ಟು ಆಗಿರುವುದರಿಂದ ಪರ್ಯಾಯ ಮೆರವಣಿಗೆಯೂ ಕೆಎಂ ಮಾರ್ಗದಿಂದ ಬಂದರೆ ಉತ್ತಮವೆಂದು ಶ್ರೀಗಳವರಿಗೆ ತಿಳಿಸಿದಾಗ ಒಪ್ಪಿದರು. ಈ ಮಾರ್ಗದಲ್ಲಿ ಮೆರವಣಿಗೆ ಹಿಂದೆ ಒಮ್ಮೆ ನಡೆದಿತ್ತು ಎಂದು ರಾಘವೇಂದ್ರ ಆಚಾರ್ಯ ತಿಳಿಸಿದರು. 

ಜ. 4ರಿಂದ 16ರ ವರೆಗೆ ನಿತ್ಯ ಹೊರೆ ಕಾಣಿಕೆ ಅರ್ಪಣೆ ವಿವಿಧ ಪ್ರದೇಶಗಳಿಂದ ನಡೆಯಲಿದೆ. ಜ. 4ರಿಂದ 17ರ ವರೆಗೆ ರಥಬೀದಿಯಲ್ಲಿ, ಜ. 18ರಿಂದ 29ರ ವರೆಗೆ ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಪದಾಧಿ ಕಾರಿಗಳಾದ ಶ್ರೀಧರ ಭಟ್‌, ಪದ್ಮನಾಭ ಭಟ್‌, ಮಟ್ಟಿ ಲಕ್ಷ್ಮೀ ನಾರಾಯಣ ರಾವ್‌, ರಮೇಶ ರಾವ್‌ ಬೀಡು, ವಿಷ್ಣು ಪಾಡಿಗಾರ್‌, ವಿಷ್ಣು ಆಚಾರ್ಯ ಉಪಸ್ಥಿತರಿದ್ದರು. 

ಡಿ.7: ಭತ್ತ ಮುಹೂರ್ತ
ಉಡುಪಿ: ಪಲಿಮಾರು ಮಠದ ಪರ್ಯಾಯದ ಕೊನೆಯ ಮುಹೂರ್ತ ವಾದ ಭತ್ತ ಮುಹೂರ್ತವು ಡಿ. 7ರ ಬೆಳಗ್ಗೆ 8.55ಕ್ಕೆ ಶ್ರೀಕೃಷ್ಣಮಠದ ಬಡಗು ಮಾಳಿಗೆಯಲ್ಲಿ ನಡೆಯಲಿದೆ. ಇದಾದ ಬಳಿಕ ಪರ್ಯಾಯದ ಚಪ್ಪರ ಮುಹೂರ್ತ ನಡೆಯಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next