Advertisement

ಉಡುಪಿ: ಪಂಚಾಯತ್‌ಗೊಂದು ಹೃದಯ ಕೇಂದ್ರ

02:07 AM Nov 24, 2021 | Team Udayavani |

ಕುಂದಾಪುರ: ಹಳ್ಳಿಗಾಡಿನ ಮಂದಿ ಎದೆನೋವು, ಹೃದಯಾ ಘಾತವಾದಾಗ ಇನ್ನು ಮುಂದೆ ಆ್ಯಂಬುಲೆನ್ಸ್‌ಗೆ ಒದ್ದಾಡಿ, ಆಸ್ಪತ್ರೆಗೆ ಹೋಗಲು ಪರದಾಡಬೇಕಿಲ್ಲ. ಪಂಚಾಯತ್‌ ಕಚೇರಿಗಳಲ್ಲಿ ತುರ್ತು ಸಂದರ್ಭಕ್ಕೆ ಒದಗುವಂತೆ ಹೃದ್ರೋಗ, ರಕ್ತದೊತ್ತಡ, ಮಧುಮೇಹ ತಪಾಸಣೆ ಮಾಡಿ ಜೀವ ಉಳಿಸುವ ಕಾಯಕಕ್ಕೆ ಚಾಲನೆ ದೊರೆತಿದೆ. ಪ್ರತೀ 5 ಕಿ.ಮೀ.ಗೊಂದು ಟೆಲಿಮೆಡಿಸಿನ್‌ ಕೇಂದ್ರ ಹೊಂದಿದ ದೇಶದ ಮೊದಲ ಜಿಲ್ಲೆ ಉಡುಪಿ ಎನಿಸಿಕೊಳ್ಳಲಿದೆ.

Advertisement

ಸ್ವತಃ ವೈದ್ಯರಾದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ನವೀನ್‌ ಭಟ್‌ ನೇತೃತ್ವದಲ್ಲಿ ಯೋಜನೆ ಜಾರಿಯಾಗುತ್ತಿದ್ದು ಮಂಗಳೂರು ಕೆಎಂಸಿ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ| ಪದ್ಮನಾಭ ಕಾಮತ್‌ ವೈದ್ಯಕೀಯ ನೆರವಿಗೆ ಒಪ್ಪಿದ್ದಾರೆ.

ಸದಾಶಯ
ಕೊರೊನೋತ್ತರ ದಿನಗಳಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆ, ಹೃದಯ ಸಮಸ್ಯೆಗಳ ಆತಂಕಕ್ಕೆ ಇದು ಕಡಿವಾಣ ಹಾಕಲಿದೆ. ಹೃದಯ ಸಂಬಂಧಿ ತೊಂದರೆಉಂಟಾದಾಗ 50-75 ಕಿ.ಮೀ. ದೂರದ ಆಸ್ಪತ್ರೆಗೆ ಬಂದು ತಪಾಸಣೆ ನಡೆದು ಚಿಕಿತ್ಸೆ ಸಿಗುವ ವೇಳೆ ಪರಿಸ್ಥಿತಿ ಶೋಚನೀಯವಾಗಿರುತ್ತದೆ. ಇಂತಹ ಸಂಕಟದಿಂದ ಪಂಚಾಯತ್‌ ಹೃದಯ ಕೇಂದ್ರ ಪಾರು ಮಾಡಲಿದೆ.

ತರಬೇತಿ
ಆಸಕ್ತ ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯೆಯರು, ಪಂಚಾಯತ್‌ ಪಿಡಿಒ, ಡಾಟಾ ಎಂಟ್ರಿ ಆಪರೇಟರ್‌, ಸಿಬಂದಿ, ಅಧ್ಯಕ್ಷ, ಸದಸ್ಯರಿಗೆ ಇಸಿಜಿ ನಿರ್ವಹಣೆಯ ತರಬೇತಿ ನೀಡಲಾಗುವುದು. ಯಂತ್ರವನ್ನು ಪಂಚಾಯತ್‌ ಕಚೇರಿಯಲ್ಲಿಯೇ ಇಡಲಾಗುವುದು. ಜನತೆ ಹಗಲು-ರಾತ್ರಿ ಎನ್ನದೇ ಆಪತ್ಕಾಲದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ಪರೀಕ್ಷಾ ವರದಿಯನ್ನು ಹೃತ್ಕುಕ್ಷಿ ಆ್ಯಪ್‌ನಲ್ಲಿ ವೈದ್ಯರು ನೋಡಿ ಟೆಲಿಮೆಡಿಸಿನ್‌ ಮಾದರಿಯಲ್ಲಿ ಸಲಹೆ ನೀಡುತ್ತಾರೆ. ಸಮೀಪದ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಬಹುದು.

ಯಂತ್ರ ಒದಗಣೆ
ಜಿಲ್ಲೆಯಲ್ಲಿ 155 ಗ್ರಾ.ಪಂ.ಗಳಿದ್ದು, ಮೊದಲ ಹಂತದಲ್ಲಿ 50ರಲ್ಲಿ ತುರ್ತು ಪರೀಕ್ಷಾ ಸಲಕರಣೆಗಳನ್ನು ಇಡಲಾಗುತ್ತಿದೆ. ಕುಂದಾಪುರ ತಾಲೂಕಿನ 29 ಪಂಚಾಯತ್‌ಗಳಿಗೆ ನೀಡಲಾಗಿದೆ. ಉಡುಪಿಯ 21 ಪಂಚಾಯತ್‌ಗಳಿಗೆ ಈ ವಾರ ವಿತರಿಸಲಾಗುತ್ತಿದೆ. ಕಾರ್ಕಳ ಹಾಗೂ ಕಾಪು ತಾಲೂಕಿಗೆ ವ್ಯವಸ್ಥೆಯಾಗಬೇಕಿದೆ. ಜಿಲ್ಲೆಯ 50 ಪಂಚಾಯತ್‌ಗಳಿಗೆ ಕರ್ಣಾಟಕ ಬ್ಯಾಂಕ್‌ ಏಕಕಂತಿನಲ್ಲಿ ಇಸಿಜಿ ಯಂತ್ರಗಳನ್ನು ನೀಡಿದೆ. ಉಳಿದ ಯಂತ್ರಗಳಿಗೆ ಇತರ ಕಾರ್ಪೊರೆಟ್‌ ಕಂಪೆನಿಗಳ ಸಿಎಸ್‌ಆರ್‌ ನಿಧಿಯನ್ನು ಬಳಸಲಾಗುತ್ತದೆ. ಅದೇ ರೀತಿ ಟೆಲಿಮೆಡಿಸಿನ್‌ಗೆ ಡಾ| ಪದ್ಮನಾಭ ಕಾಮತ್‌ ಅವರೇ ನೆರವಾಗಲಿದ್ದಾರೆ. ಡಾ| ಕಾಮತ್‌ ಕಾರ್ಡಿಯೋ ಅಟ್‌ ಡೋರ್‌ಸ್ಟೆಪ್‌ ಯೋಜನೆಯಲ್ಲಿ 25 ಜಿಲ್ಲೆಗಳಲ್ಲಿ 500 ಯಂತ್ರಗಳನ್ನು ದಾನಿಗಳ ಮೂಲಕ ನೀಡಿದ್ದಾರೆ.

Advertisement

ರಾಜ್ಯಕ್ಕೆ ವಿಸ್ತರಣೆ
2019-20ರಲ್ಲಿ ರಾಜ್ಯ ಸರಕಾರ ಗ್ರಾಮೀಣ ಆರೋಗ್ಯ ಕೇಂದ್ರ ಯೋಜನೆಯಲ್ಲಿ ಶಾಲೆ ಇತ್ಯಾದಿಗಳಿಗೆ ಮಧುಮೇಹ, ರಕ್ತದೊತ್ತಡ ಪರೀಕ್ಷೆಗೆ ಯಂತ್ರಗಳನ್ನು ನೀಡಿತ್ತು. ಅದು ನಿರೀಕ್ಷಿತ ಫ‌ಲ ನೀಡಲಿಲ್ಲ. ಉಡುಪಿ ಜಿಲ್ಲೆಯಲ್ಲಿ ಈಗ ಹೃದಯ ಕೇಂದ್ರ ಪೈಲಟ್‌ ಮಾದರಿಯಲ್ಲಿ ಯೋಜನೆ ಜಾರಿಯಾಗುತ್ತಿದ್ದು 6 ತಿಂಗಳು ಸಾಧಕ, ಬಾಧಕ ಗಮನಿಸಲಾಗುತ್ತದೆ. ಪರಿಣಾಮಕಾರಿ ಎನಿಸಿದರೆ ಬಳಿಕ ರಾಜ್ಯದ ಎಲ್ಲ (6,008) ಪಂಚಾ ಯತ್‌ಗಳಲ್ಲಿ ಜಾರಿಗೊಳಿ ಸಲು ಪಂಚಾಯತ್‌ ರಾಜ್‌ ಇಲಾಖೆ ಆಸಕ್ತಿ ತೋರಿಸಿದೆ.

ಪೈಲಟ್‌ ಯೋಜನೆಯಾಗಿ ಜಾರಿಯಾಗುತ್ತಿದೆ. ಆರೋಗ್ಯ ರಕ್ಷಾ ಸಮಿತಿ ಮೂಲಕ ಆರೋಗ್ಯ ತಪಾಸಣೆ ಪರಿಕರಗಳ ನಿರ್ವಹಣೆ ಮಾಡಲಾಗುವುದು. ಅಗತ್ಯವುಳ್ಳ ಸಿಬಂದಿಗೆ ತರಬೇತಿ ನೀಡಲಾಗುವುದು. ದಾನಿಗಳು, ವೈದ್ಯರು, ಆಸ್ಪತ್ರೆಗಳು ಮುಂದೆ ಬಂದರೆ ಅವರ ಸೇವೆಯನ್ನು ಬಳಸಿಕೊಳ್ಳಲಾಗುವುದು.
– ಡಾ| ನವೀನ್‌ ಭಟ್‌,
ಉಡುಪಿ ಜಿ.ಪಂ. ಸಿಇಒ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next