Advertisement
ಹಿರಿಯ – ಕಿರಿಯ ಶ್ರೀಗಳ ಪರಸ್ಪರ ಗೌರವಾಭಿವಂದನೆ !ಉಡುಪಿ: ಕಿಕ್ಕಿರಿದು ತುಂಬಿದ್ದ ರಥಬೀದಿ. ಬಣ್ಣದ ವಿದ್ಯುತ್ ದೀಪಗಳ ಬೆಳಕು. ಪೇಜಾವರ ಶ್ರೀಗಳಿಗೆ ಪೇಟ, ಶಾಲು, ಹಾರ ಸಮರ್ಪಣೆ. ದಶದಿಕ್ಕುಗಳಿಂದಲೂ ಜಯಘೋಷ ಕೇಳಿಬಂದಂತೆ ಸಹಸ್ರ ಕರತಾಡನದ ಸದ್ದು. ಭಾವಪರವಶರಾದ ಭಕ್ತರಿಗೆ ಪೇಟಧಾರಿ ಪೇಜಾವರ ಶ್ರೀಗಳ ಮೂಲಕ ಭಗವಂತನನ್ನೇ ಕಣ್ತುಂಬಿಕೊಂಡ ಧನ್ಯತೆ. ಇವೆಲ್ಲ ಕ್ಷಣಗಳಿಗೆ ಸಾಕ್ಷಿಯಾದದ್ದು ರಥಬೀದಿಯ ಶ್ರೀ ಪರವಿದ್ಯಾ ಮಂಟಪ. ಐತಿಹಾಸಿಕ ಪಂಚಮ ಪರ್ಯಾಯವನ್ನು ಪೂರೈಸಿ ಪಲಿಮಾರು ಶ್ರೀಗಳಿಗೆ ಶ್ರೀಕೃಷ್ಣ ಪೂಜಾ ಕೈಂಕರ್ಯದ ಜವಾಬ್ದಾರಿಯನ್ನು ಹಸ್ತಾಂತರಿಸಿದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಅಭಿವಂದನೆ ಸಲ್ಲಿಸುವ ಸಮಾರಂಭ ಪರ್ಯಾಯದ ಪ್ರಮುಖ ಘಟ್ಟವಾದದ್ದು ಮಾತ್ರವಲ್ಲದೆ ಮತ್ತೂಂದು ಇತಿಹಾಸವನ್ನು ದಾಖಲು ಮಾಡಿತು.
ಮೊದಲು ಮಾತನಾಡಿದ ಪೇಜಾವರ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು “ಪೇಜಾವರ ಕಿರಿಯ ಶ್ರೀಗಳಿಂದಾಗಿ ಹಿರಿಯರು 5ನೇ ಪರ್ಯಾಯ ನಡೆಸುವಂತಾಯಿತು ಎಂಬ ಮಾತು ಕೆಲವು ಭಕ್ತವರ್ಗದಲ್ಲಿದೆ. ಆದರೆ ಇದು ಸರಿಯಲ್ಲ. ಎಲ್ಲರ ಸಹಕಾರದಿಂದ ಪೇಜಾವರ ಪರ್ಯಾಯ ನಿರ್ವಿಘ್ನವಾಗಿ ನೆರವೇರಿದೆ. ನನಗೂ ಶ್ರೀಕೃಷ್ಣನ ಸೇವೆ ಮಾಡುವ ಅವಕಾಶ ದೊರೆಯಿತು ಅಷ್ಟೆ. ಕೃಷ್ಣ ತನ್ನ ಕಿರುಬೆರಳಲ್ಲಿ ಗೋವರ್ಧನಗಿರಿ ಪರ್ವತ ಎತ್ತಿಹಿಡಿದಾಗ ಗೋಪಾಲಕರು ತಮ್ಮಲ್ಲಿದ್ದ ಕೋಲನ್ನು ಅದರಡಿ ಆತು ಹಿಡಿದಿದ್ದರು. ಅಂತೆಯೇ ನಾನು ಕೂಡ ಪೇಜಾವರ ಶ್ರೀಗಳ ಜತೆ ಇದ್ದೆ ಅಷ್ಟೆ. 6ನೇ ಪರ್ಯಾಯ ಪೂರೈಸುವ ಸಾಮರ್ಥ್ಯವೂ ಗುರುಗಳಲ್ಲಿದೆ. ಅವರ ಅನುಗ್ರಹ ನನ್ನ ಮೇಲೆ ಸದಾ ಇರಲಿ’ ಎಂದರು. ಅನಂತರ ಮಾತನಾಡಿದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು “ಕಿರಿಯ ಶ್ರೀಗಳ ಸಹಾಯವಿಲ್ಲದಿದ್ದರೆ ನಾನು 5ನೇ ಪರ್ಯಾಯ ಪೂರೈಸಲು ಖಂಡಿತ ಸಾಧ್ಯವಿರಲಿಲ್ಲ. ಅವರ ಭಕ್ತಿ, ಪ್ರೇಮ, ತ್ಯಾಗ ಎಲ್ಲವೂ ಅನುಕರಣೀಯ. ಪತಾಕೆ ಹಾರಾಡಲು ಗಟ್ಟಿ ಕಂಬ ಬೇಕು. ನಾನು ಪತಾಕೆ. ಪತಾಕೆಯ ಧ್ವಜ (ಕಂಬ) ಕಿರಿಯ ಶ್ರೀಗಳು’ ಎಂದರು.
Related Articles
ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಪೇಜಾವರ ಶ್ರೀಗಳದ್ದು ಹಾರುವ ಹಕ್ಕಿಯಂತಹ ಚಟುವಟಿಕೆಯ ವ್ಯಕ್ತಿತ್ವ. ಅವರು ಇಡೀ ಮನುಕುಲಕ್ಕೆ ಸಂದೇಶ ನೀಡುವ ಯತಿಗಳು. ಸಾಮಾನ್ಯ ವ್ಯಕ್ತಿಯಿಂದ ಪ್ರಧಾನ ಮಂತ್ರಿವರೆಗಿನ ಸಂಪರ್ಕ ಅವರದು. ಎಲ್ಲರ ಕಷ್ಟಗಳಿಗೂ ಸ್ಪಂದಿಸುವ ಗುಣ ಅವರದ್ದು. ಇದು ಉಡುಪಿಯ ಭಾಗ್ಯ. ಶ್ರೀಕೃಷ್ಣ ಪೂಜೆ, ಪಾಠ ಪ್ರವಚನ, ಸಾಮಾಜಿಕ ಸೇವಾ ಕಾರ್ಯದ ಜತೆಗೆ ಸ್ವಲ್ಪ ರಾಜಕೀಯವನ್ನೂ ಮಾಡುತ್ತಾರೆ’ ಎಂದರು. ಮಾತ್ರವಲ್ಲ ನನ್ನ ಮಾತುಗಳಿಗೆ ಶೋಭಾ ಕರಂದ್ಲಾಜೆ ಉತ್ತರವನ್ನೂ ನೀಡುತ್ತಾರೆ ಎಂದು ಲಘುದಾಟಿಯಲ್ಲಿ ಹೇಳಿದರು.
Advertisement
ಸಮಾಜಕ್ಕೆ ಚೈತನ್ಯಶೋಭಾ ಕರಂದ್ಲಾಜೆ ಅವರು ಮಾತನಾಡಿ, “ಸಚಿವರು ಹೇಳಿದಂತೆಯೇ ಉತ್ತರ ಕೊಡುತ್ತೇನೆ. ಪೇಜಾವರ ಶ್ರೀಗಳ ಪರ್ಯಾಯ ಅವಧಿ ಶತಮಾನ ಕಾಲ ನೆನಪಿಡುವಂತಹುದು. ಅವರು ಸಮಾಜಕ್ಕೆ ಚೈತನ್ಯ, ದೇಶಕ್ಕೆ ಪ್ರೇರಣೆ ನೀಡುವ ಕಾರ್ಯ ಮಾಡಿದ್ದಾರೆ. ಶ್ರೀಗಳು ಎಂದೂ ರಾಜಕೀಯ ಮಾಡಿದವರಲ್ಲ. ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ. ಧರ್ಮ, ಆಚಾರ ವಿಚಾರ ಉಳಿಯಲು ಮಠಮಂದಿರಗಳು ಅವಶ್ಯ’ ಎಂದರು. ಧರ್ಮ, ಲೋಕಕಲ್ಯಾಣ…
ಪೇಜಾವರ ಶ್ರೀಗಳು ತಮ್ಮ ಆಶೀರ್ವಚನದಲ್ಲಿ , “ಪ್ರಮೋದ್ ನನ್ನ ಅತ್ಯಂತ ಆತ್ಮೀಯರು. ಹಾಗಾಗಿ ಅವರು ಸಲುಗೆಯಿಂದ ಮಾತನಾಡುತ್ತಾರೆ. ನಾವು ಯತಿಗಳು ರಾಜಕೀಯದಿಂದ ದೂರವಿರಬೇಕು ಹೌದು. ಆದರೆ ಧರ್ಮ, ಲೋಕಕಲ್ಯಾಣ, ಪರಿಸರ ವಿಚಾರ ಬಂದಾಗ ಹೋರಾಟ ಮಾಡಬೇಕಾಗುತ್ತದೆ. ಚುನಾವಣೆ ಬಂದಾಗ ನಾನು ರಾಜ್ಯದಲ್ಲಿ ಇರುವುದಿಲ್ಲ. ಅಂದರೆ ನಾನು ಅಂತಹ ರಾಜಕೀಯದಿಂದ ದೂರವಿರುತ್ತೇನೆ’ ಎಂದು ಹೇಳಿದರು.
ದರ್ಬಾರ್ ಸಮ್ಮಾನ
ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ| ಮೋಹನ ಆಳ್ವ ಅವರಿಗೆ ಪಲಿಮಾರು ಪರ್ಯಾಯ ದರ್ಬಾರ್ ಸಮ್ಮಾನ ನೀಡಿ ಗೌರವಿಸಲಾಯಿತು.
ವರ್ಣರಂಜಿತ ಮೆರವಣಿಗೆ
ಬುಧವಾರ ರಾತ್ರಿ ನಡೆದ ಪಲಿಮಾರು ಪರ್ಯಾಯದ ಪೂರ್ವಭಾವಿ ವರ್ಣರಂಜಿತ ಮೆರವಣಿಗೆಯಲ್ಲಿ ಗಮನ ಸೆಳೆದ ಸ್ತಬ್ಧಚಿತ್ರಗಳು.
ಶ್ವೇತ ವಸ್ತ್ರ ಪಥ
ಪಲಿಮಾರು ಮಠಾಧೀಶರು ಇತರ ಯತಿಗಳೊಂದಿಗೆ ರಥಬೀದಿ ಪ್ರವೇಶಿಸುವಾಗ ಸಂಪ್ರದಾಯದಂತೆ ಶ್ವೇತ ವಸ್ತ್ರದ ಮೇಲೆ ನಡೆದು ಬಂದರು. ಲಕ್ಷ ತುಳಸೀ ಅರ್ಚನೆ ಆರಂಭ
ಪಲಿಮಾರು ಮಠ ಪರ್ಯಾಯದ ಎರಡು ವರ್ಷ ನಡೆಸುವ ಲಕ್ಷ ತುಳಸೀ ಅರ್ಚನೆ ಗುರುವಾರವೇ ಆರಂಭಗೊಂಡಿತು. ಇದಕ್ಕಾಗಿ ಪೆರಂಪಳ್ಳಿ, ಪಲಿಮಾರಿನಲ್ಲಿ ತುಳಸಿ ಗಿಡಗಳನ್ನು ನೆಡಲಾಗಿದೆ. ಅಲ್ಲದೆ ಮನೆಮನೆಗಳಲ್ಲಿಯೂ ನೆಟ್ಟು ಅಲ್ಲಿನ ತುಳಸಿಯನ್ನು ಶ್ರೀಕೃಷ್ಣ ಮಠಕ್ಕೆ ತಂದುಕೊಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.