Advertisement

Udupi: ಭತ್ತದ ಕಟಾವು ಚುರುಕು; ದ್ವಿದಳ ಧಾನ್ಯ ಬಿತ್ತನೆಗೆ ಸಿದ್ಧತೆ

01:06 PM Nov 08, 2024 | Team Udayavani |

ಉಡುಪಿ: ದೀಪಾವಳಿ ಹಬ್ಬದ ಅನಂತರ ಮಳೆ ಕಡಿಮೆಯಾಗಿರುವುದರಿಂದ ಜಿಲ್ಲಾದ್ಯಂತ ಭತ್ತದ ಕಟಾವು ಚುರುಕುಗೊಂಡಿದ್ದು, ಭತ್ತ ಮಾರಾಟ ಪ್ರಕ್ರಿಯೆಯೂ ನಡೆಯುತ್ತಿದೆ.

Advertisement

ಜಿಲ್ಲೆಯಲ್ಲಿ 36 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಭತ್ತ ಬಿತ್ತನೆ ಮಾಡಲಾಗಿದೆ. ಯಾಂತ್ರಿಕೃತ ವ್ಯವಸ್ಥೆ ಬರುವ ಮೊದಲು ಊರಿನವರು ಸೇರಿ ಕೊಯ್ಲು ಮಾಡುವ ಪ್ರಕ್ರಿಯೆ ಇತ್ತು. ಅನಂತರ ಅದನ್ನು ಮನೆಗೆ ಅಂಗಳಕ್ಕೆ ತಂದು ಭತ್ತ ಮತ್ತು ಹುಲ್ಲನ್ನು ಬೇರ್ಪಡಿಸಲಾಗುತ್ತಿತ್ತು. ಈ ಪ್ರಕ್ರಿಯೆ ಒಂದು ತಿಂಗಳು ಕಾಲ ಊರಲ್ಲಿ ನಡೆಯುತ್ತಿತ್ತು. ಇದೀಗ ನೇಜಿ ಹಾಗೂ ಕೊಯ್ಲುಗೆ ಯಂತ್ರವೇ ಬಂದಿರುವುದರಿಂದ ಒಂದೇ ದಿನದಲ್ಲಿ ಪ್ರಕ್ರಿಯೆ ಮುಗಿಯುತ್ತಿದೆ.
ಅಂದೇ ಮಿಲ್‌ಗೆ ಕೊಂಡೊಯ್ಯುವುದು

ಭತ್ತ ಕಟಾವು ಆದ ದಿನದ ಅಥವಾ ಮಾರನೇ ದಿನವೇ ಭತ್ತವನ್ನು ಮಿಲ್‌ಗೆ ಕೊಂಡೊಯ್ಯಲಾಗುತ್ತದೆ. ಎಲ್ಲಿಯೂ ಕೂಡ ಶೇಖರಿಸಿಟ್ಟುಕೊಳ್ಳುವ ಪದ್ಧತಿ ಇಲ್ಲ. ಕೆಲವೇ ಕೆಲವರು ಮಾತ್ರ ಒಣಗಿಸಿ ಅದನ್ನು ಕರ್ನಾಟಕ ಬೀಜ ನಿಗಮಕ್ಕೆ ನೀಡುತ್ತಾರೆ.

ಕರ್ನಾಟಕ ಬೀಜ ನಿಗಮದಿಂದ ಪಡೆದ ಸುಧಾರಿತ ತಳಿ ಭತ್ತದ ಬೇಸಾಯ ಮಾಡಲಾಗಿದ್ದು, ಎಕ್ರೆಗೆ ಸರಿ ಸುಮಾರು 24 ಕ್ವಿಂಟಾಲ್‌ ಇಳುವರಿ ಪಡೆಯಲಾಗಿದೆ. ಖಾಸಗಿ ಮಿಲ್‌ಗ‌ಳಿಗೆ ಇದನ್ನು ಮಾರಾಟ ಮಾಡುವುದಿಲ್ಲ. ಒಣಗಿಸಿ ಒಡಲಾಗುವುದು. ನಿಗಮದಿಂದ ಕೆ.ಜಿ.ಗೆ 37.5 ರೂ.ಗಳಂತೆ ಖರೀದಿಸಲಿದ್ದಾರೆ. ರೈತರು ಇದೇ ರೀತಿ ಬೀಜ ನಿಗಮದಿಂದ ಸುಧಾರಿತ ತಳಿಯ ಬೀಜದಿಂದ ಬೇಸಾಯ ಮಾಡಿ, ನಿಗಮಕ್ಕೆ ಬೀಜ ಮಾರಾಟ ಮಾಡುವ ಮೂಲಕ ಉತ್ತಮ ಧಾರಣೆ ಪಡೆಯಬಹುದು. ನಮ್ಮ ಗದ್ದೆಗಳಲ್ಲಿ ನ.6ರಿಂದ ಕೊಯ್ಲು ಆರಂಭಿಸಿದ್ದೇವೆ ಎಂದು ಬ್ರಹ್ಮಾವರ ತಾಲೂಕಿನ ಯಡ್ತಾಡಿಯ ಸತೀಶ್‌ ಕುಮಾರ್‌ ಶೆಟ್ಟಿ ಮಾಹಿತಿ ನೀಡಿದರು.

ದ್ವಿದಳ ಧಾನ್ಯ
ಭತ್ತವನ್ನು ಮುಂಗಾರು ಮತ್ತು ಹಿಂಗಾರಿನಲ್ಲಿ ಸಮ ಪ್ರಮಾಣದಲ್ಲಿ ಬೆಳೆಯುವುದಿಲ್ಲ. ಬಹುತೇಕರು ಹಿಂಗಾರಿನಲ್ಲಿ ಭತ್ತದ ಬದಲಿಗೆ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಜಿಲ್ಲೆಯಲ್ಲಿ ನೆಲಕಡಲೆ, ಉದ್ದು, ಹೆಸರುಬೇಳೆ ಇತ್ಯಾದಿಗಳನ್ನು ಬೆಳೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕುಂದಾಪುರ, ಬೈಂದೂರು ಭಾಗದಲ್ಲಿ ನೆಲಕಡಲೆ ಹೆಚ್ಚು ಬೆಳೆಯಲಾಗುವುತ್ತದೆ. ಈ ಅವಧಿಯಲ್ಲಿ ಕೆಲವು ರೈತರು ಕಲ್ಲಂಗಡಿ ಅಥವಾ ತರಕಾರಿ ಬೆಳೆಯುತ್ತಾರೆ.

Advertisement

ಸಂಜೆಯೊಳಗೆ ಕಟಾವು ಪೂರ್ಣ
ಬೆಳಗ್ಗೆಯಿಂದ ಸಂಜೆಯೊಳಗೆ ಎಕ್ರೆಗಟ್ಟಲೆ ಗದ್ದೆಯ ಕೊಯ್ಲನ್ನು ಯಂತ್ರ ಪೂರೈಸಿ, ಭತ್ತ ಮತ್ತು ಹುಲ್ಲನ್ನು ಬೇರ್ಪಡಿಸಲಿದೆ. ಭತ್ತವನ್ನು ಅದೇ ದಿನ ಮಿಲ್‌ಗ‌ಳಿಗೆ ಕೊಂಡೊಯ್ಯಲಾಗುತ್ತದೆ. ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಹೆಬ್ರಿ, ಬೈಂದೂರು ಹಾಗೂ ಕಾಪು ತಾಲೂಕಿನಾದ್ಯಂತ ಕೊಯ್ಲು ನಡೆಯುತ್ತಿದೆ.

ಹಿಂದೆಲ್ಲ ಅನೇಕರು ಸೇರಿ ಮಾಡುತ್ತಿದ್ದ ಕಾರ್ಯವನ್ನು ಈಗ ಒಂದು ಯಂತ್ರ ಮಾಡುತ್ತಿದೆ. ಕಾರ್ಮಿಕರು ಸಿಗುತ್ತಿಲ್ಲ ಮತ್ತು ಸ್ಥಳೀಯರು ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯಾಗಿದೆ. ಗಂಟೆಗೆ 2,400ರಿಂದ 2,500 ರೂ. ನೀಡಿ ಯಂತ್ರದ ಮೂಲಕ ಕಟಾವು ಮಾಡಿಸಲಾಗುತ್ತಿದೆ.

ಹುಲ್ಲು ಸುತ್ತುವ ಯಂತ್ರವೂ ಬಂದಿರುವುದರಿಂದ ಕಟಾವಾದ ತತ್‌ಕ್ಷಣವೇ ಹುಲ್ಲನ್ನು ಸುತ್ತಿ ಅದನ್ನು ಮಾರಾಟ ಮಾಡಲಾಗುತ್ತದೆ. ಮನೆಯಲ್ಲಿ ಹಸು ಸಾಕುವವರು ಹುಲ್ಲನ್ನು ಮಾರಾಟ ಮಾಡದೇ ಮನೆಯಲ್ಲೇ ಉಳಿಸಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next