ಕೋಟ: ದೂರದ ಒಡಿಶಾದ ಕೃಷಿ ಕಾರ್ಮಿಕ ಮಹಿಳೆಯರ ತಂಡವೊಂದು ಉಡುಪಿ ಜಿಲ್ಲೆಯ ಕೋಟ ಆಸುಪಾಸಿನಲ್ಲಿ ಸಾಂಪ್ರದಾಯಿಕ ಭತ್ತ ನಾಟಿಯಲ್ಲಿ ತೊಡಗಿಸಿಕೊಂಡಿದೆ.
ಕರಾವಳಿಯಲ್ಲಿ ಕಾರ್ಮಿಕರ ಕೊರತೆಯಿಂದ ಸಾಂಪ್ರದಾಯಿಕ ಭತ್ತದ ನಾಟಿ ಮರೆಯಾಗುತ್ತಿದೆ. ಆದರೆ ಸಾಂಪ್ರದಾಯಿಕ ರೀತಿಯಿಂದಲೇ ಹೆಚ್ಚು ಲಾಭ ಹಾಗೂ ಅನುಕೂಲಗಳಿವೆ ಎಂದು ಅನೇಕ ರೈತರು ಹೇಳುತ್ತಿದ್ದು, ಎಷ್ಟು ಕಷ್ಟವಾದರೂ ಈ ವಿಧಾನವನ್ನೇ ಅನುಸರಿಸುತ್ತಾರೆ. ಒಡಿಶಾದ ಕಾರ್ಮಿಕ ಮಹಿಳೆಯರ ನೇಜಿ ನಾಟಿ ಇದಕ್ಕೆ ಪೂರಕವಾಗಿದೆ.
ಮೀನುಗಾರಿಕೆ ಕಾರ್ಮಿಕರು
ಒಡಿಶಾದ ಈ ತಂಡದಲ್ಲಿ 40 ಮಂದಿ ಮಹಿಳೆಯರಿದ್ದಾರೆ. ಇವರೆಲ್ಲ ಮೂಲತಃ ಮೀನುಗಾರಿಕೆಗೆ ಸಂಬಂಧಿಸಿದ ಕೆಲಸ ಮಾಡುವವರಾಗಿದ್ದು, ಉಡುಪಿ ಸುತ್ತಮುತ್ತ ಫಿಶ್‌ಕಟ್ಟಿಂಗ್ ಶೆಡ್ ಹಾಗೂ ಮೀನಿಗೆ ಸಂಬಂಧಿಸಿದ ಇತರ ಕಾರ್ಖಾನೆಗಳಲ್ಲಿ ದುಡಿಯು ತ್ತಾರೆ. ಈ ಹಿಂದೆ ಜೂನ್‌ನಿಂದ ಆಗಸ್ಟ್ ತನಕ ಮೀನುಗಾರಿಕೆ ರಜೆ ಸಂದರ್ಭ ತಮ್ಮ ಊರುಗಳಿಗೆ ತೆರಳಿ ಅಲ್ಲಿ ಕೃಷಿಯಲ್ಲಿ ತೊಡಗುತ್ತಿದ್ದರು. ಆದರೆ ಪ್ರಸ್ತುತ ಉಡುಪಿಯಲ್ಲೇ ಕೆಲಸ ಸಿಗುತ್ತಿರುವುದರಿಂದ ಮತ್ತು ತಮ್ಮೂರಿಗೆ ಹೋಲಿಸಿದರೆ ಸಂಬಳವೂ ಹೆಚ್ಚು ಇರುವುದರಿಂದ ಈ ಬಾರಿ ಊರಿಗೆ ಹೋಗಿಲ್ಲ.
ಮೂಲತಃ ಕೃಷಿಕರು: ಇವರೆಲ್ಲರೂ ಮೂಲತಃ ಕೃಷಿ ಕಾರ್ಮಿಕರು. ಒಡಿಶಾದಲ್ಲೂ ಸಾಂಪ್ರದಾಯಿಕ ಭತ್ತ ನಾಟಿ ಇಲ್ಲಿನ ಮಾದರಿಯಲ್ಲೇ ನಡೆಯುತ್ತದೆ. ಈ ತಂಡದ ಮಹಿಳೆಯರು ಬೆಳಗ್ಗೆ 7ರಿಂದ 11 ಗಂಟೆ ತನಕ ನೇಜಿ ಕಿತ್ತು, ಅಪರಾಹ್ನ 1ರಿಂದ 5.30ರ ತನಕ ನಾಟಿ ಮಾಡುತ್ತಾರೆ. ಪ್ರತಿದಿನ ಎಕ್ರೆಗಟ್ಟಲೆ ಗದ್ದೆ ನಾಟಿ ಮಾಡುವ ಇವರಿಗೆದಿನಕ್ಕೆ 550 ರೂ. ಸಂಬಳ ನೀಡಲಾಗುತ್ತದೆ.
ತಂಡವು ನಾಟಿಯ ನಡುವೆ ಒಡಿಸ್ಸಿ ಜಾನಪದ ಹಾಡು ಹಾಡುತ್ತ ಖುಷಿ ಪಡೆದುಕೊಳ್ಳುತ್ತದೆ. ಸ್ಥಳೀಯ ಕಾರ್ಮಿಕರಿಗೆ ಕಡಿಮೆ ಇಲ್ಲದಂತೆ ವೇಗವಾಗಿ ಹಾಗೂ ಉತ್ತಮರೀತಿಯಲ್ಲಿ ಕೆಲಸ ಮಾಡುತ್ತಾರೆ ಎನ್ನುವುದು ಇವರಿಗೆ ಸಹಾಯಕರಾಗಿರುವ ಸ್ಥಳೀಯರ ಅನಿಸಿಕೆ. ಇವರ ಜತೆಗೆ ಕೊಪ್ಪಳ, ಗಂಗಾವತಿಯಿಂದಲೂ ನೂರಾರು ಕಾರ್ಮಿಕರು ಇಲ್ಲಿಗೆ ಆಗಮಿಸಿ ಭತ್ತ ಬೇಸಾಯದ ಕೆಲಸ ನಿರ್ವಹಿಸುತ್ತಿದ್ದಾರೆ. ಅತ್ತ ದಕ್ಷಿಣ ಕನ್ನಡದಲ್ಲಿಯೂ ಹಲವೆಡೆ ಅಡಿಕೆ ಕೃಷಿ ಕಾರ್ಮಿಕರಾಗಿ ಉತ್ತರ ಭಾರತ ದವರಿದ್ದಾರೆ. ಒಟ್ಟಾರೆ ಕರಾವಳಿಯ ಸಾಂಪ್ರ ದಾಯಿಕ ಕೃಷಿಗೆ ಹೊರ ಜಿಲ್ಲೆ, ಹೊರ ರಾಜ್ಯದ ಕಾರ್ಮಿಕರೇ ಆಧಾರವಾಗುತ್ತಿರುವಂತಿದೆ.
“ನಮಗೆ ಊರಿನಲ್ಲಿ ಸಾಕಷ್ಟು ಜಮೀನಿದ್ದು, ಇದೇ ರೀತಿ ನಾಟಿ ಮಾಡುತ್ತೇವೆ. ಈ ಕೆಲಸ ನಮಗೆ ಖುಷಿ ಕೊಡುತ್ತಿದೆ. ಹೀಗಾಗಿ ಈ ಬಾರಿ ರಜೆಯಲ್ಲಿ ಊರಿಗೆ ತೆರಳದೆ ಇಲ್ಲಿ ಕೆಲಸ ಮಾಡುತ್ತಿದ್ದೇವೆ.’
–ಜೆಲ್ಲಿ, ಕಾರ್ಮಿಕ ಮಹಿಳೆ
– ರಾಜೇಶ ಗಾಣಿಗ ಅಚ್ಲಾಡಿ