Advertisement

ಚಾಲಕ, ನಿರ್ವಾಹಕರ ನಿರ್ಲಕ್ಷ್ಯ: ಬಸ್ಸಿನಡಿಗೆ ಬಿದ್ದು ಸಾವು: ಮೂವರ ಬಂಧನ

12:17 AM Dec 06, 2022 | Team Udayavani |

ಉಡುಪಿ: ಬಸ್‌ಗಳಲ್ಲಿ ಚಾಲಕರು ಹಾಗೂ ನಿರ್ವಾಹಕರ ನಿರ್ಲಕ್ಷ್ಯತನದಿಂದ ಪ್ರಯಾಣಿಕರಿಗೆ ಹಲವಾರು ರೀತಿಯ ಅವಘಡಗಳು ಹಾಗೂ ಪ್ರಾಣಹಾನಿಯಾದ ಘಟನೆಗಳು ಸಂಭವಿಸಿವೆ. ಇಂತಹ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

Advertisement

ಘಟನೆ -1
ಡಿ. 4ರಂದು ಹಿರ್ಗಾನದ ಕೃಷ್ಣ ನಾಯ್ಕ (70) ಅವರು ಕಾರ್ಕಳದಿಂದ ಹೆಬ್ರಿಗೆ ತೆರಳುವ ಖಾಸಗಿ ಬಸ್‌ ಮೂರೂರು ಬಳಿ ಏರಲು ಪ್ರಯತ್ನಿಸಿದಾಗ ನಿರ್ವಾಹಕ ಜಯಪ್ರಕಾಶ್‌ ಶೆಟ್ಟಿ ಅವರು ನಿರ್ಲಕ್ಷ್ಯದಿಂದ ಬಸ್‌ ಚಾಲನೆಗೆ ಸೂಚನೆ ನೀಡಿದ ಪರಿಣಾಮ ಅವರು ಬಸ್‌ನಿಂದ ಬಿದ್ದು ಮೃತಪಟ್ಟಿದ್ದಾರೆ. ಅವರನ್ನು ಸ್ಥಳೀಯರಾದ ಶಶಿಕಾಂತ್‌ ನಾಯಕ್‌ ಮತ್ತು ಶಿವಾನಂದ ಅವರು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿನ ವೈದ್ಯರು ಪರೀಕ್ಷಿಸಿದಾಗ ಗಾಯಾಳು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ -2
ನ. 26ರಂದು ಕೊಂಚಾಡಿಯ ನಿವಾಸಿ ಚಂದ್ರಶೇಖರ ನಾಯ್ಕ (65) ಅವರು ಕೊಂಚಾಡಿ ಹಳೆನೀರು ಬೆಟ್ಟು ಎಂಬಲ್ಲಿ ಶ್ರೀ ಖಾಸಗಿ ಬಸ್‌ಗೆ ಪಾರ್ಸೆಲ್‌ ನೀಡಿ ಬಸ್‌ನಿಂದ ಇಳಿಯುವಾಗ ಬಸ್‌ನ ನಿರ್ವಾಹಕ ಮಂಜುನಾಥ ಬಸ್‌ ಚಲಾಯಿಸುವಂತೆ ಚಾಲಕ ವಿಶ್ವನಾಥ ಶೆಟ್ಟಿಗೆ ಸೂಚನೆ ನೀಡಿದ ಪರಿಣಾಮ ಚಂದ್ರಶೇಖರ ನಾಯ್ಕ… ಬಸ್‌ನಿಂದ ಬಿದ್ದು, ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಜಯಪ್ರಕಾಶ್‌ ಶೆಟ್ಟಿ (60) ಹಾಗೂ ಮಂಜುನಾಥ (31), ಚಾಲಕ ವಿಶ್ವನಾಥ ಶೆಟ್ಟಿ (53)ಯನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿ ನಿತ್ಯ ಫ‌ುಟ್‌ಬೋರ್ಡ್‌ ಪ್ರಯಾಣ
ಗ್ರಾಮೀಣ ಭಾಗ ಸೇರಿದಂತೆ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲೂ ಬಸ್ಸಿನ ಫ‌ುಟ್‌ಬೋರ್ಡಿನಲ್ಲಿ ನೇತಾಡಿಕೊಂಡು ಹೋಗುವ ಜಾಯಮಾನ ಕಡಿಮೆಯಾಗಿಲ್ಲ. ಮಂಗಳೂರಿನಿಂದ ಪಡುಬಿದ್ರಿಯಾಗಿ ಕಾರ್ಕಳಕ್ಕೆ ಹೋಗುವ ಬಸ್ಸಿನಲ್ಲಿ ಕುರಿಗಳಂತೆ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುತ್ತಿದ್ದಾರೆ. ನಿತ್ಯ ಈ ಭಾಗದಲ್ಲಿ ಫ‌ುಟ್‌ಬೋರ್ಡಿನಲ್ಲಿ ವಿದ್ಯಾರ್ಥಿಗಳ ಪ್ರಯಾಣ ಸಾಗುತ್ತಿದೆ. ಇತ್ತೀಚೆಗೆ ಓರ್ವ ವಿದ್ಯಾರ್ಥಿ ಫ‌ುಟ್‌ಬೋರ್ಡಿನಿಂದ ರಸ್ತೆಗೆ ಬಿದ್ದ ಘಟನೆಯೂ ಸಂಭವಿಸಿದೆ. ಬಸ್ಸಿನ ವಿರಳ ಸಂಚಾರದಿಂದ, ಕಾಲೇಜು ಪ್ರಾರಂಭ, ಬಿಡುವಿನ ಸಂದರ್ಭ ಬಸ್ಸು ತುಂಬಿ ತುಳುಕುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ಮುಂದಕ್ಕೆ ಇನ್ನಷ್ಟು ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಪೊಲೀಸ್‌, ಜಿಲ್ಲಾಡಳಿತ ಈ ಕುರಿತು ನಿಗಾ ವಹಿಸಬೇಕಿದೆ.

ಕಾನೂನು ಕ್ರಮ
ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕ ಬಸ್‌ಗಳಲ್ಲಿ ನಿರ್ವಾಹಕ ಹಾಗೂ ಬಸ್‌ನ ಚಾಲಕರ ನಿರ್ಲಕ್ಷ್ಯತನದಿಂದ ಪ್ರಯಾಣಿಕರು ಇಳಿಯುವ ಮತ್ತು ಏರುವ ಮೊದಲೇ ಬಸ್‌ ಚಲಾಯಿಸುವುದು ಹಾಗೂ ಅತಿಯಾದ ಪ್ರಯಾಣಿಕರನ್ನು ತುಂಬಿಸಿಕೊಂಡು, ಫ‌ುಟ್‌ಬೋರ್ಡ್‌ ಮೇಲೆ ನೇತಾಡಿಕೊಂಡು ಪ್ರಯಾಣಿಕರನ್ನು ಸಾಗಿಸುತ್ತಿರುವುದು ಅಪಘಾತ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ. ಈ ಘಟನೆಗಳಿಗೆ ನೇರವಾಗಿ ಕಾರಣವಾಗುವ ಬಸ್‌ನ ಚಾಲಕ ಹಾಗೂ ನಿರ್ವಾಹಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್‌ ಮಚ್ಚೀಂದ್ರ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next