ಉಡುಪಿ: ನಗರಸಭೆಯಲ್ಲಿ ರವಿವಾರ ನಡೆದ ವಿಶೇಷ ಅಧಿವೇಶನದಲ್ಲಿ ಸ್ವಚ್ಛತಾ ಕಾರ್ಮಿಕನ ಮೇಲೆ ಹಲ್ಲೆ ಮಾಡಿರುವ ಆರೋಪಿಗಳಿಗೆ ಸಂಬಂಧಿಸಿದ ಆಸ್ಮಾ ಕ್ಯಾಸೆಟ್ ಕಾರ್ನರ್ ಅಂಗಡಿಯ ವ್ಯಾಪಾರ ಪರವಾನಿಗೆ ರದ್ದು ಮಾಡುವ ತುರ್ತು ಖಂಡನಾ ನಿರ್ಣಯ ಕೈಗೊಳ್ಳಲಾಯಿತು.
ತುರ್ತು ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಕೆಲವರು ಅನಗತ್ಯವಾಗಿ ನಗರಸಭೆ ಪೌರಕಾರ್ಮಿಕರನ್ನು ಎತ್ತಿಕಟ್ಟುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ಹಾಗೂ ಸ್ವಚ್ಛತಾ ಸಿಂಬದಿಗಳ, ಗುತ್ತಿಗೆ ನೌಕರರ ರಕ್ಷಣೆಗೆ ಸದಾ ಸಿದ್ಧರಾಗಿದ್ದಾರೆ ಎಂದರು.
ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಸರಕಾರಿ ಅಧಿಕಾರಿಗಳ ವಿರುದ್ಧ ದುವರ್ತನೆ ತೋರಿಸಿದರೆ ಪಕ್ಷಭೇದವಿಲ್ಲದೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುತ್ತದೆ. ಇದರಲ್ಲಿ ಸಂಶಯವೇ ಬೇಡ. ಅದು ನಗರಸಭೆ ಸದಸ್ಯರಾಗಲೀ, ಪಕ್ಷದ ಪದಾಧಿಕಾರಿಗಳಾಗಲೀ ಅಥವಾ ನನ್ನ ಮನೆಯವರೇ ಆಗಿದ್ದರೂ ಅವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ :ಸಿಡಿ ಪ್ರಕರಣ : ಮತ್ತೊಬ್ಬ ಯುವಕನನ್ನ ವಶಕ್ಕೆ ಪಡೆದ ಎಸ್ ಐ ಟಿ!
ಸ್ವಚ್ಛತಾ ಕಾರ್ಮಿಕನ ಮೇಲೆ ಹಲ್ಲೆ ಮಾಡಿರುವ ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಅವರನ್ನು ರಕ್ಷಿಸುವ ಪ್ರಶ್ನೆ ಇಲ್ಲ. ಹಲ್ಲೆಯ ಸಂದರ್ಭ ಕೇರಳದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದೆ. ವಿಷಯ ತಿಳಿದ ತತ್‌ಕ್ಷಣವೇ ಎಸ್ಪಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದೇನೆ. ನಗರಸಭೆ ವಿರೋಧ ಪಕ್ಷದ ಸದಸ್ಯರು ಬೀದಿಯಲ್ಲಿ ನಿಂತು ಮಾತನಾಡುವ ಬದಲು ಅಧಿವೇಶನಕ್ಕೆ ಬಂದು ತಮ್ಮ ಅಭಿಪ್ರಾಯ ಮಂಡಿಸಬೇಕಿತ್ತು ಎಂದರು.
ಕಾರ್ಮಿಕರ ಮೇಲೆ ಹಲ್ಲೆ, ಅರೋಗ್ಯ ನಿರೀಕ್ಷಕ ಕರುಣಾಕರ್ ಹಾಗೂ ನಗರಸಭೆ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿರುವ ಕುರಿತು ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ವಿರೋಧ ಪಕ್ಷ ಸದಸ್ಯರು ಸಭೆಗೆ ಗೈರಾಗಿದ್ದರು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಪೌರಾಯುಕ್ತ ಉದಯಶೆಟ್ಟಿ, ಕಂದಾಯಾಧಿಕಾರಿ ಧನಂಜಯ ಉಪಸ್ಥಿತರಿದ್ದರು.
ನಗರಸಭೆಯ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಕಠಿಣ ಕ್ರಮ ಜರುಗಿಸುವ ಬಗ್ಗೆ ಶನಿವಾರ ಶಾಸಕರ ಕಚೇರಿಯಲ್ಲಿ ನಡೆಸ ಸಭೆಯಲ್ಲಿ ಚರ್ಚಿಸಲಾಯಿತು. ಸಂಸದೆ ಶೋಭಾ ಕರಂದ್ಲಾಜೆ ಅವರು ಟ್ವೀಟರ್ ಖಾತೆಯಲ್ಲಿ ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.