Advertisement

ಅಧ್ಯಕ್ಷ ಉಪಾಧ್ಯಕ್ಷರಿಲ್ಲದ ಉಡುಪಿ ನಗರಸಭೆ 

06:00 AM Oct 05, 2018 | Team Udayavani |

ಉಡುಪಿ: ಉಡುಪಿ ನಗರ ಸಭೆಯ ಚುನಾವಣಾ ಫ‌ಲಿತಾಂಶ ಪ್ರಕಟವಾಗಿ ಒಂದು ತಿಂಗಳು ಸಂದಿದೆ. ಆದರೆ ಇನ್ನೂ ಕೂಡ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯದೇ ಇರುವುದರಿಂದ ಆಡಳಿತ ಯಂತ್ರ ಚುರುಕಾಗಿಲ್ಲ. ನೂತನ ಸದಸ್ಯರು ಅಸಹಾಯಕರಾಗಿದ್ದಾರೆ. ನಗರದ ಜನತೆಯ ಪ್ರಶ್ನೆಗಳಿಗೆ ಉತ್ತರಿಸುವ ಸ್ಥಿತಿಯಲ್ಲಿ ಸದಸ್ಯರಿಲ್ಲ. 

Advertisement

ಮೀಸಲಾತಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ರಾಜ್ಯದ ಇತರ ಕೆಲವು ನಗರಾಡಳಿತ ಸಂಸ್ಥೆಗಳಂತೆ ಉಡುಪಿ ನಗರಸಭೆಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಕೂಡ ಬಾಕಿಯಾಗಿದೆ. ಸದ್ಯ ಜಿಲ್ಲಾಧಿಕಾರಿಯವರೇ ಆಡಳಿತಾಧಿ ಕಾರಿಯಾಗಿದ್ದಾರೆ. 

“ಕಾರ್ಯದೊತ್ತಡ, ಸ್ಥಳೀಯ ಜನ ಸಂಪರ್ಕದ ಕೊರತೆ ಮೊದಲಾದ ಕಾರಣ ಗಳಿಂದಾಗಿ ಜನತೆಯ ಹಲವಾರು ಸಮಸ್ಯೆ
ಗಳಿಗೆ ಸಮರ್ಪಕವಾಗಿ ಸ್ಪಂದಿಸುವುದು ಜಿಲ್ಲಾಧಿಕಾರಿಯವರಿಂದ ಅಸಾಧ್ಯ. ಅದಕ್ಕೆ ಜನಪ್ರತಿನಿಧಿಗಳ ಆಡಳಿತವೇ ಬೇಕು’ಎಂಬುದು ಅನೇಕ ಮಂದಿ ಮಾಜಿ, ಹಾಲಿ ಸದಸ್ಯರ ಮಾತು. 
 
ಉಡುಪಿ ನಗರದ ಬೀದಿದೀಪ ನಿರ್ವಹಣೆ, ರಸ್ತೆ ಗುಂಡಿ ಸಮಸ್ಯೆ ಬಗೆಹರಿದಿಲ್ಲ. ಕುಡಿಯುವ ನೀರು ಲಭ್ಯವಿದ್ದರೂ ಸಮರ್ಪಕವಾಗಿ ಪೂರೈಕೆ ಯಾಗು ತ್ತಿಲ್ಲ. ನಾವು ನಗರಸಭೆಯ ಅಧಿಕಾರಿಗಳ ಬಳಿ ಹೋಗುವುದು ಹೇಗೆ ಎಂಬುದು ತಿಳಿಯುತ್ತಿಲ್ಲ. ನಮ್ಮ ವಾರ್ಡ್‌ನ ಜನರಿಗೆ ಉತ್ತರಿಸುವುದು ಕಷ್ಟವಾಗುತ್ತಿದೆ ಎಂಬ ಅಸಹಾಯಕತೆ ಹೆಚ್ಚಿನ ಸದಸ್ಯರದ್ದು. 

ಬಜೆಟ್‌ ಕಾಮಗಾರಿಗಳಿಗೆ ಹೊಡೆತ 
ಕಳೆದ ನಗರಸಭೆ ಬಜೆಟ್‌ನಲ್ಲಿ ಘೋಷಿಸಿರುವ ಕಾಮಗಾರಿಗಳ ಅನುಷ್ಠಾನ ಪ್ರಕ್ರಿಯೆ ಈ ತಿಂಗಳಲ್ಲಿ ಆರಂಭಗೊಳ್ಳ ಬೇಕಿತ್ತು. ಅದರಲ್ಲಿ ರಸ್ತೆ, ನೀರು, ಕಳೆಗಿಡಗಳ ಕಟ್ಟಿಂಗ್‌, ಸ್ವತ್ಛತೆ ಮೊದಲಾದವು ಸೇರಿವೆ. ಈ ಕೆಲಸ ಸಮರ್ಪಕವಾಗಿ ನಡೆಯ
ಬೇಕಾದರೆ ನಗರಸಭೆಗೆ ಜನಪ್ರತಿನಿಧಿಗಳ ಚುಕ್ಕಾಣಿ ಬೇಕು. ಡಾಮರು ರಸ್ತೆಗಳ ಕಾಮಗಾರಿ ಜನವರಿ ಒಳಗೆ ಮುಗಿಸಬೇಕು.

ಮಾರ್ಚ್‌- ಎಪ್ರಿಲ್‌ ಮಾಡಿದರೆ ಅದು ಮಳೆಗೆ ಪೂರ್ಣ ಹಾಳಾಗುತ್ತದೆ. ಡಾಮರು ರಸ್ತೆಗೆ ಕನಿಷ್ಠ 2-3 ತಿಂಗಳಾದರೂ ಬಿಸಿಲು ಬೇಕೇಬೇಕು ಎನ್ನುತ್ತಾರೆ ನಗರಸಭೆಯ ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಅವರು. 

Advertisement

“ನಾನು ಪ್ರತಿದಿನ ನಗರಸಭೆ ಕಚೇರಿಗೆ ತೆರಳಿ ವಾರ್ಡ್‌ನ ಕೆಲಸ, ಸಮಸ್ಯೆ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ. ಆದರೆ ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ ವಿದ್ದರೆ ಸಮಪರ್ಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಫ‌ಲಾನುಭವಿಗಳ ಆಯ್ಕೆಗೂ ತೊಡಕಾಗಿದೆ. ಜಿಲ್ಲಾಧಿಕಾರಿ ದೊಡ್ಡ ತೀರ್ಮಾನ ತೆಗೆದುಕೊಳ್ಳಬಹುದು. ಆದರೆ ಸಾಮಾನ್ಯ ಮತ್ತು ಜನರಿಗೆ ಅಗತ್ಯ ವಾದ ಕೆಲವು ಕೆಲಸಗಳ ಕಡೆ ಅವರು ಗಮನ ಹರಿಸುವುದು ಕಡಿಮೆ’ ಎಂಬುದು ಸದಸ್ಯೆ ಅಮೃತಾ ಕೃಷ್ಣಮೂರ್ತಿ ಅವರ ಅಭಿಪ್ರಾಯ. 

ಲೋಕಸಭಾ ಚುನಾವಣೆ: ಯಾರಿಗೆ ಹೊಡೆತ?
ಉಡುಪಿ ನಗರಸಭೆಯಲ್ಲಿಯೂ ಜನತೆ ಬಿಜೆಪಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಷ್ಟರೊಳಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಆಗಿರುತ್ತಿದ್ದರೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗುತ್ತಿತ್ತು. ಇದು ಮುಂದಿನ ಲೋಕಸಭಾ ಚುನಾವಣೆಗೂ ನೆರವಾಗುತ್ತಿತ್ತು. ಆದರೆ ಈಗ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿಯ ಅತಂತ್ರ ಆಡಳಿತ ಲೋಕಸಭೆ ಚುನಾವಣೆವರೆಗೂ ಮುಂದುವರಿಯ ಬಹುದೇ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ ಎನ್ನುತ್ತಾರೆ ಬಿಜೆಪಿಯ ಕೆಲವು ಮಂದಿ ಸ್ಥಳೀಯ ಮುಖಂಡರು.

ಜಿಲ್ಲಾಧಿಕಾರಿ “ಪವರ್‌’
ಈಗಾಗಲೇ ನಗರದ ಪಾರ್ಕಿಂಗ್‌ ಸುವ್ಯವಸ್ಥೆ ದೃಷ್ಟಿಯಿಂದ ಪಾರ್ಕಿಂಗ್‌ಗಾಗಿ ಮೀಸಲಿಟ್ಟ ಕಟ್ಟಡಗಳಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲು ಆದೇಶ ನೀಡುವ ಮೂಲಕ ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿ ಕಾರಿಯವರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸೂಚನೆ ರವಾನಿಸಿದ್ದಾರೆ. ಜಿಲ್ಲಾಧಿಕಾರಿ “ಪವರ್‌’ ನಗರದ ಕೆಲ ವೊಂದು ಮಹತ್ವದ ಸುಧಾರಣೆಗಳಿಗೂ ಕಾರಣವಾಗಬಹುದು ಎಂಬ ಆಶಾವಾದ ನಗರದ ಒಂದು ವರ್ಗದ ಜನತೆಯಲ್ಲಿದೆ.ಫ‌ುಲ್‌ ಸ್ವಿಂಗ್‌ನಲ್ಲಿ ಆಡಳಿತ ನಡೆಸಿ ಜನರ ಹೃದಯ ಗೆಲ್ಲಬೇಕೆಂಬ ಬಿಜೆಪಿ ಹುಮ್ಮಸ್ಸಿಗೆ ಆರಂಭದ ಹಿನ್ನಡೆಯಾಗಿದೆ. ತಮ್ಮ ಸಮಸ್ಯೆಯನ್ನು ಹೊಸ ಆಡಳಿತ, ಸದಸ್ಯರ ಮೂಲಕ ಬಗೆಹರಿಸಿ ಕೊಳ್ಳಬೇಕೆಂಬ ಜನತೆಯ ಆಶಯಕ್ಕೂ ತಣ್ಣೀರು ಬಿದ್ದಿದೆ.   

ಮಾಜಿ ಸದಸ್ಯರಿಗೇ ಪ್ರಶ್ನೆ
ಮೊದಲ ಸಭೆಯೂ ಆಗಿಲ್ಲ. ಆಯ್ಕೆಯಾದ ಸದಸ್ಯರಿಗೆ ಕೆಲಸವೇ ಇಲ್ಲ. ನಗರಾಡಳಿತದ ಅನುಭವವೇ ದೊರೆಯುತ್ತಿಲ್ಲ. ಅವರು ಜನರಿಗೆ ಸ್ಪಂದಿಸುವುದು ಕಷ್ಟವಾಗುತ್ತಿದೆ. ಜನತೆ ಮಾಜಿ ಸದಸ್ಯರ ಬಳಿ ಪ್ರಶ್ನಿಸುತ್ತಿದ್ದಾರೆ. ಬೀದಿ ದೀಪ ನಿರ್ವಹಣೆ ಗುತ್ತಿಗೆಯನ್ನು ಸ್ಥಳೀಯರಿಗೆ ನೀಡುವ ಪ್ರಕ್ರಿಯೆಯೂ ನಿಂತಿದೆ. ಎಸ್‌ಟಿ/ ಎಸ್‌ಸಿ, ಹಿಂದುಳಿದ ವರ್ಗಗಳಿಗಾಗಿ ನಿಗದಿಯಾದ ಕೇಂದ್ರ, ರಾಜ್ಯದ ಅನುದಾನ ಬಳಕೆಯೂ ಸಾಧ್ಯವಾಗುತ್ತಿಲ್ಲ.
– ದಿನಕರ ಶೆಟ್ಟಿ ಹೆರ್ಗ,  ಮಾಜಿ ಅಧ್ಯಕ್ಷರು, ಉಡುಪಿ ನಗರಸಭೆ

 ಎಲ್ಲರ ಅಹವಾಲು ಆಲಿಸುವೆ 
ಅವಶ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ನಗರಸಭಾ ಸದಸ್ಯರು ಕೂಡ ಸಾರ್ವಜನಿಕರಂತೆಯೇ ಪೌರಾಯುಕ್ತರ ಮೂಲಕ ನನಗೆ ಅಹವಾಲು ಸಲ್ಲಿಸಬಹುದು. ಬೀದಿದೀಪ ನಿರ್ವಹಣೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಎಸ್‌ಟಿ/ಎಸ್‌ಸಿ, ಹಿಂದುಳಿದ ವರ್ಗದ ಫ‌ಲಾನುಭವಿಗಳ ಆಯ್ಕೆಯನ್ನು ನಾನು ಕೂಡ ಮಾಡಬಹುದು. ಆದರೆ ಅದು ಸ್ವಲ್ಪ ಸೂಕ್ಷ್ಮ ವಿಚಾರ. ಅದನ್ನು ಸದಸ್ಯರೇ ಮಾಡುವುದು ಉತ್ತಮ. ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನೋಟಿಫಿಕೇಶನ್‌ ಶೀಘ್ರ ಆದರೆ ಸದಸ್ಯರೇ ಫ‌ಲಾನುಭವಿಗಳ ಆಯ್ಕೆ ಮಾಡಬಹುದು ಎಂದು ನಾನು ಮಾಡಿಲ್ಲ.
– ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಜಿಲ್ಲಾಧಿಕಾರಿ 

 ಪೌರಾಯುಕ್ತರ ಭೇಟಿಗೆ ನಿರ್ಧಾರ 
ತೆರಿಗೆ ಕಟ್ಟುವುದು, ಪರಿಚಯದವರ ಲೈಸನ್ಸ್‌ ಮತ್ತಿತರ ಕೆಲಸಗಳನ್ನು ಮಾಡಿಸಿಕೊಡಲು ನಗರಸಭೆಗೆ ಹೋಗುತ್ತಿದ್ದೇನೆ. ಆದರೆ ಓರ್ವ ನಗರಸಭಾ ಸದಸ್ಯನಂತೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ದಾರಿದೀಪ, ನೀರು, ರಸ್ತೆ ಸಮಸ್ಯೆ ಹೆಚ್ಚಾಗಿದೆ. ಹಕ್ಕುಪತ್ರ ವಿತರಣೆಯೂ ಬಾಕಿ ಇದೆ. ಶೀಘ್ರದಲ್ಲೇ ಬಿಜೆಪಿ ಅಧ್ಯಕ್ಷರ ಜತೆಗೆ ತೆರಳಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಿದ್ದೇವೆ.
– ಮಂಜುನಾಥ ಶೆಟ್ಟಿಗಾರ್‌, ಈಶ್ವರನಗರ ವಾರ್ಡ್‌

– ಸಂತೋಷ್‌ ಬೊಳ್ಳೆಟ್ಟು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next