ಉಡುಪಿ: ಪ್ರಧಾನಿ ನರೇಂದ್ರ ಮೋದಿಯನ್ನು ಹೋಲುವ ಹಿರಿಯಡಕದ ಸದಾನಂದ ನಾಯಕ್, ಮಹಾತ್ಮಾ ಗಾಂಧಿಯವರನ್ನು ಹೋಲುವ ಉಡುಪಿ ಮೂಲದ ಆಗಸ್ಟಿನ್ ಅಲ್ಮೇಡಾರಿಗೆ ಈಗ ಗುಜರಾತ್‌ನಲ್ಲಿ ಭಾರೀ ಬೇಡಿಕೆ ಕಂಡುಬಂದಿದೆ.
ಗುಜರಾತ್‌ನಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಗುಜರಾತ್ ಪ್ರಚಾರದಲ್ಲಿದ್ದಾರೆ. ಅವರು ಮುಂಬಯಿಯಿಂದ ರವಿ ವಾರ ಗುಜರಾತ್‌ಗೆ ತಲುಪಿದರು. ಮೊದಲು ಖಾನಾಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸೋಮವಾರ ಅಹಮದಾಬಾದ್‌ನ ಗಾಂಧೀ ಆಶ್ರಮಕ್ಕೆ ಬಂದರು. ಅಲ್ಲಿ ಅವರಿಬ್ಬರ ಸೆಲ್ಫಿಗೂ ಜನ ಮುಗಿ ಬಿದ್ದರು. ಡಿಎಸ್ಪಿಯಂತಹ ದೊಡ್ಡ ದೊಡ್ಡ ವ್ಯಕ್ತಿಗಳೂ ಸೆಲ್ಫಿಗೆ ಮುಗಿ ಬೀಳುತ್ತಿದ್ದಾರೆ. ಇವರಿಬ್ಬರ ಬಳಿ ಆಧುನಿಕ ಸೆಲ್ ಫೋನ್ ಇಲ್ಲದಿದ್ದರೂ ಅತೀ ಹೆಚ್ಚು ಸೆಲ್ಫಿ ತೆಗೆಸಿಕೊಳ್ಳುವ ಭಾಗ್ಯ ಇವರಿಗೆ ಒದಗಿದೆ.
ಇವರು ಸ್ವಂತ ಖರ್ಚಿನಿಂದ ಗುಜರಾತ್‌ಗೆ ತೆರಳಿದ್ದಾರೆ. ಅಹಮದಾಬಾದ್‌ನಲ್ಲಿ ಮಾತ್ರ ಅವಿನಾಶ್ ಎಂಬ ಬಿಜೆಪಿ ಕಾರ್ಯಕರ್ತರು ಸಹಕಾರ ನೀಡಿದರು. ಇನ್ನು ಮಣಿಪುರ ವಿಧಾನಸಭಾ ಕ್ಷೇತ್ರಕ್ಕೆ ತೆರಳುತ್ತೇವೆ. ಇಲ್ಲಿನ ವಾತಾವರಣ ನೋಡಿದರೆ ಬಿಜೆಪಿ ಗೆಲ್ಲುವುದು ಖಚಿತ. ನಮಗೆ ವಸತಿ, ಊಟಕ್ಕೆ ವ್ಯವಸ್ಥೆ ಸಿಕ್ಕಿದರೆ ಡಿ. 15ರ ಬಳಿಕ ಊರಿಗೆ ಬರುತ್ತೇವೆ ಎನ್ನುತ್ತಾರೆ ಸದಾನಂದ ನಾಯಕ್ ಮತ್ತು ಆಗಸ್ಟಿನ್ ಅಲ್ಮೇಡಾ ಅವರು.
ಇತ್ತೀಚೆಗೆ ಇವರಿಬ್ಬರೂ ಉಡುಪಿಯಲ್ಲಿ ಧರ್ಮಸಂಸದ್, ಉಜಿರೆಗೆ ಪ್ರಧಾನಿ ಬಂದಾಗ ಜನಾಕರ್ಷಣೆಯ ಕೇಂದ್ರವಾಗಿದ್ದರು. ಇದಕ್ಕೂ ಹಿಂದೆ ಸದಾನಂದ ಅವರು ಬಜಪೆಯಲ್ಲಿ ಟ್ಯಾಬ್ಲೋದಲ್ಲಿ ಭಾಗವಹಿಸಿದ್ದರು.
ಸದಾನಂದ ನಾಯಕ್ ಅವರು ಹಿಂದೆ ಹೊಟೇಲ್‌ನಲ್ಲಿ ಕೆಲಸ ಮಾಡಿದ್ದರು. ಮಣಿಪಾಲ ಕೆಎಂಸಿಯಲ್ಲಿದ್ದರು. ಈಗಷ್ಟೇ ನಿವೃತ್ತಿಯಾಗಿದ್ದಾರೆ. ಇವರಿಗೆ 59 ವರ್ಷ. ಆಗಸ್ಟಿನ್ ಅಲ್ಮೇಡಾ ಅವರು ಸಮುದ್ರದಡಿ ವೆಲ್ಡಿಂಗ್ ಕೆಲಸ ಮಾಡು ತ್ತಿದ್ದರು. ಇವರು ಹೆಚ್ಚಾಗಿ ಇದ್ದದ್ದು ಮುಂಬಯಿಯಲ್ಲಿ ಹಲವು ವಿದೇಶ ಗಳಲ್ಲಿಯೂ ಕೆಲಸ ಮಾಡಿದ ಅನುಭವ ಇದೆ. ಇವರ ತಾಯಿ ಮನೆ ಮೂಲ್ಕಿ, ತಂದೆ ಮನೆ ತೊಟ್ಟಂ. ಪ್ರಸ್ತುತ ನೆಲೆಸಿರುವುದು ಮುಂಬಯಿ ಅಂಧೇರಿಯಲ್ಲಿ. ಇವರಿಗೆ 71 ವರ್ಷ.