Advertisement

Udupi MGM: ಎಂಜಿಎಂ ಕ್ಯಾಂಪಸ್‌ನಲ್ಲಿ ಚಿಟ್ಟೆಗಳ ಕಲರವ

04:43 PM Sep 29, 2023 | Team Udayavani |

ಉಡುಪಿ: ಎಂಜಿಎಂ ಕಾಲೇಜಿನ ಕ್ಯಾಂಪಸ್‌ನಲ್ಲಿ ನಡೆದ ಚಿಟ್ಟೆಗಳ ಸಮಗ್ರ ಸಮೀಕ್ಷೆಯಲ್ಲಿ 25 ಪ್ರಭೇದ ಪತ್ತೆ ಮಾಡಲಾಗಿದೆ. ಚಿಟ್ಟೆಗಳು ಪರಿಸರ ವ್ಯವಸ್ಥೆಯಲ್ಲಿ ಪರಾಗ ಸ್ಪರ್ಶ ಪ್ರಕ್ರಿಯೆ, ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ಹೊಂದಿದ್ದು, ಚಿಟ್ಟೆಗಳು ಮತ್ತು ಸಸ್ಯಗಳ ನಡುವೆ ಸಹ-ವಿಕಸನೀಯ ಸಂಬಂಧವಿದೆ. ಶೈಕ್ಷಣಿಕ ಚಟುವಟಿಕೆ ಜತೆಗೆ ಪರಿಸರ ವೈವಿಧ್ಯತೆ ಕಾಪಾಡಿಕೊಂಡು ವಿದ್ಯಾರ್ಥಿಗಳಿಗೆ ಚಿಟ್ಟೆ, ಪಕ್ಷಿ, ಪರಿಸರದ ಬಗ್ಗೆ ಮಾಹಿತಿ, ಅರಿವು ಮೂಡಿಸುವಲ್ಲಿ ಎಂಜಿಎಂ ಕಾಲೇಜು ಮುಂಚೂಣಿಯಲ್ಲಿದೆ.

Advertisement

ಇಲ್ಲಿರುವ ವಿವಿಧ ಜಾತಿಯ ಗಿಡ, ಮರಗಳು ಜೀವ ವೈವಿಧ್ಯತೆಯ ಆಗರವಾಗಿದ್ದು, ವಿವಿಧ ಪಕ್ಷಿಗಳ ಆವಾಸ ಸ್ಥಾನದ ಜತೆಗೆ ಚಿಟ್ಟೆಗಳು ಇಲ್ಲಿನ ಆಕರ್ಷಣೆಯಾಗಿದೆ.ಚಿಟ್ಟೆ ಪ್ರಭೇದಗಳ ವೈವಿಧ್ಯತೆ ಮತ್ತು ಸಮೃದ್ಧಿಯನ್ನು ದಾಖಲಿಸುವ ಉದ್ದೇಶದಿಂದ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಸೆ.25ರಂದು ಸಮಗ್ರ ಚಿಟ್ಟೆ ಸಮೀಕ್ಷೆ ಕೈಗೊಳ್ಳಲಾಗಿತ್ತು.

ವಿವಿಧ ಪ್ರಭೇದ
ಹಾರುವ ಚಿಟ್ಟೆಗಳನ್ನು ಅವುಗಳ ರೆಕ್ಕೆಗಳ ಮಾದರಿ, ಗಾತ್ರ ಮತ್ತು ಬಣ್ಣದ ಮೂಲಕ ಗುರುತಿಸಿ, ಹೆಚ್ಚಿನ ದಾಖಲಾತಿಗಾಗಿ ಗುರುತಿಸಿದ ಚಿಟ್ಟೆಗಳ ಛಾಯಾಚಿತ್ರ ತೆಗೆದುಕೊಳ್ಳಲಾಯಿತು. ಸಮೀಕ್ಷೆಯಲ್ಲಿ ಒಟ್ಟು 25 ಚಿಟ್ಟೆ ಪ್ರಭೇದ ಗುರುತಿಸಲಾಗಿದ್ದು, ಪ್ಯಾಪಿಲಿಯೊನಿಡೆ, ನಿಂಫಾಲಿಡೆ, ಪಿಯರಿಡ, ಲೈಕೆನಿಡೆ ಮತ್ತು ಹೆಸ್ಪೆರಿಡೆ ಸೇರಿದಂತೆ ವಿವಿಧ ಕುಟುಂಬಗಳನ್ನು ಪ್ರತಿನಿಧಿಸುವ ಚಿಟ್ಟೆಗಳು ಕ್ಯಾಂಪಸ್‌ನಲ್ಲಿ ಕಂಡು ಬಂದಿವೆ.

ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಎಚ್‌ಒಡಿ ಡಾ| ಮನಿತಾ, ಅಧ್ಯಾಪಿಕೆ ಯಶಸ್ವಿನಿ.ಬಿ ಅವರು ಎಂಬಿಎಸಿಯ ತಜ್ಞ ನಿಹಾಲ್‌, ಮಣಿಪಾಲ ಬರ್ಡರ್ಸ್‌ ಕ್ಲಬ್‌ನ ತೇಜಸ್ವಿ ಆಚಾರ್ಯ ಅವರ ಸಹಕಾರದಲ್ಲಿ ಸಮೀಕ್ಷೆ ನಡೆದಿದೆ. ಸಮೀಕ್ಷೆಯ ದಿನ
ಮಳೆಯಾಗಿದ್ದರಿಂದ ಚಿಟ್ಟೆಗಳ ಚಟುವಟಿಕೆ ಕಡಿಮೆ ಇತ್ತು. ಈ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯ ಚಿಟ್ಟೆಗಳನ್ನು
ವೀಕ್ಷಿಸಬಹುದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟರು. ಪ್ರಾಂಶುಪಾಲ ಪ್ರೊ|ಲಕ್ಷ್ಮೀನಾರಾಯಣ ಕಾರಂತ್‌ ಅವರು
ಸಮೀಕ್ಷೆಗೆ ಚಾಲನೆ ನೀಡಿದರು.

ಚಿಟ್ಟೆಗಳ ವೈವಿಧ್ಯಮಯ ಸಂತತಿ
ಸಮೀಕ್ಷೆಯಲ್ಲಿ ಗುರುತಿಸಲಾದ ವಿಧಗಳಲ್ಲಿ ಕಾಮನ್‌ ಗ್ರಾಸ್‌ ಯೆಲ್ಲೋ, ಕಾಮನ್‌ ರೋಸ್‌, ಕಾಮನ್‌ ಎಮಿಗ್ರೆಂಟ್‌, ಕಾಮನ್‌ ಮರ್ಮಾನ್‌ ಚಿಟ್ಟೆಗಳು ಪ್ರಮುಖವಾಗಿತ್ತು. ಆರೋಗ್ಯಕರ ಪರಿಸರ ವ್ಯವಸ್ಥೆ ಸೂಚಕವಾಗಿರುವ ಚಿಟ್ಟೆಗಳ ವೈವಿಧ್ಯಮಯ ಸಂತತಿ, ಸ್ವಭಾವ, ಜೀವನ ಶೈಲಿಯನ್ನು ದಾಖಲಿಸಲು ಸಮೀಕ್ಷೆ ನಡೆಸಲಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪರಿಸರ ವ್ಯವಸ್ಥೆ-ಚಿಟ್ಟೆ ಜೀವನ ಕ್ರಮದ ಬಗ್ಗೆ ಮಾಹಿತಿ ಪಡೆದರು.

Advertisement

ಡಾ| ಮನೀತಾ.ಟಿ.ಕೆ.,
ಮುಖ್ಯಸ್ಥರು, ಪ್ರಾಣಿಶಾಸ್ತ್ರ ವಿಭಾಗ, ಎಂಜಿಎಂ ಕಾಲೇಜು

Advertisement

Udayavani is now on Telegram. Click here to join our channel and stay updated with the latest news.

Next