Advertisement

Udupi: ಮಹಾಲಕ್ಷ್ಮೀ ಕೋ-ಆಪ್‌ ಬ್ಯಾಂಕ್‌ ಆರ್‌ಬಿಐ ನಿಯಮದಂತೆ ನಡೆಯುತ್ತಿದೆ: ಶಾಸಕ ಯಶ್‌ಪಾಲ್‌

04:12 AM Nov 10, 2024 | Team Udayavani |

ಉಡುಪಿ: ಮಹಾಲಕ್ಷ್ಮೀ ಕೋ-ಆಪರೇಟಿವ್‌ ಬ್ಯಾಂಕ್‌ ಆರ್‌ಬಿಐ ನಿಯಮಾವಳಿ, ನಿರ್ದೇಶನದಂತೆಯೇ ಕಾರ್ಯನಿರ್ವಹಿಸುತ್ತಿದೆ. ಬ್ಯಾಂಕ್‌ನ ಯಾವುದೇ ಶಾಖೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ. ಸಾಲ ಪಡೆದ ಕೆಲವರು ಸುಸ್ತಿದಾರರಾಗಿದ್ದು, ಸಾಲ ಮರುಪಾವತಿಸದೇ ಬ್ಯಾಂಕ್‌ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಸಹಕಾರಿ ಅಧಿನಿಯಮಗಳಂತೆ ಕೆಲವರ ಆಸ್ತಿ ಮುಟ್ಟುಗೋಲು ನೋಟಿಸ್‌ ಕೂಡ ಹೋಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ, ಶಾಸಕ ಯಶ್‌ಪಾಲ್‌ ಎ. ಸುವರ್ಣ ತಿಳಿಸಿದರು.

Advertisement

ಆರ್ಥಿಕ ಶಿಸ್ತು ಹಾಗೂ ಲೆಕ್ಕಪರಿಶೋಧನ ವರದಿ ಇಲ್ಲದೆ ಬ್ಯಾಂಕ್‌ ಅಥವಾ ಸಹಕಾರಿ ಸಂಸ್ಥೆ ಕಾರ್ಯನಿರ್ವಹಿಸಲು ಸಾಧ್ಯವೇ ಇಲ್ಲ. ಮಹಾಲಕ್ಷ್ಮೀ ಕೋ-ಆಪ್‌ ಬ್ಯಾಂಕ್‌ನ ಎಲ್ಲ ಲೆಕ್ಕಾಚಾರಗಳು ಸ್ಪಷ್ಟವಾಗಿವೆ. ಸಾಲ ಪಡೆದವರು ಯಾವುದೇ ಸಮಸ್ಯೆ ಇದ್ದರೆ ಬ್ಯಾಂಕ್‌ನ ಮಹಾಸಭೆ ಅಥವಾ ನಿರ್ದಿಷ್ಟ ವೇದಿಕೆಯಲ್ಲಿ ಪ್ರಶ್ನೆ ಮಾಡಲು ಅವಕಾಶ ಇತ್ತು. ನ್ಯಾಯಾ ಲಯದಲ್ಲೂ ಹೋರಾಟ ಮಾಡಬಹುದಿತ್ತು ಎಂದರು.

ಸುಸ್ತಿದಾರರು ಬ್ಯಾಂಕ್‌ನಿಂದ ಸಾಲ ಪಡೆದಿರುವುದಕ್ಕೆ ಎಲ್ಲ ದಾಖಲೆಗಳೂ ಇವೆ. ಯಾರೋ ಹೇಳಿದರು ಎಂದ ಮಾತ್ರಕ್ಕೆ ಕೈಯಲ್ಲಿ ಹಣ ನೀಡಿ ಸಾಲ ಕೊಡುತ್ತಿದ್ದೇವೆ ಎನ್ನುವುದನ್ನು ನಂಬಲು ಸಾಧ್ಯವೇ? ಬ್ಯಾಂಕ್‌ ಎಲ್ಲ ರೀತಿಯ ತನಿಖೆ ಹಾಗೂ ನ್ಯಾಯಾಂಗ ಹೋರಾಟಕ್ಕೂ ಸಿದ್ಧವಿದೆ ಎಂದು ಹೇಳಿದರು.

ಸವಾಲು ಸ್ವೀಕರಿಸಲಿ
ಸುಸ್ತಿದಾರರು ಬ್ಯಾಂಕ್‌ನಿಂದ ಸಾಲ ಪಡೆಯದೇ ಇದ್ದದ್ದನ್ನು ಸಾಬೀತು ಮಾಡಿದರೆ ಬ್ಯಾಂಕ್‌ ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧವಿದೆ. ಒಂದೊಮ್ಮೆ ಸುಸ್ತಿದಾರರು ಸಾಲ ಪಡೆದಿರುವುದು ಖಚಿತವಾದರೆ ರಘುಪತಿ ಭಟ್‌ ಅವರು ಸುಸ್ತಿದಾರರ ಸಾಲ ಮರುಪಾವತಿ ಜವಾಬ್ದಾರಿ ವಹಿಸಿಕೊಳ್ಳಲಿ ಎಂದು ಸವಾಲು ಹಾಕಿದರು. ಬ್ಯಾಂಕ್‌ ಉಪಾಧ್ಯಕ್ಷ ವಾಸುದೇವ ಸಾಲ್ಯಾನ್‌, ನಿರ್ದೇಶಕ ವಿನಯ ಕರ್ಕೇರ, ಪ್ರೊಫೆಶನಲ್‌ ಡೈರೆಕ್ಟರ್‌ ಮಂಜುನಾಥ ಎಸ್‌.ಕೆ., ಎಂಡಿ ಶರತ್‌ ಕುಮಾರ್‌ ಶೆಟ್ಟಿ, ಎಜಿಎಂ ಶಾರಿಕಾ ಕಿರಣ್‌ ಉಪಸ್ಥಿತರಿದ್ದರು.

ನಕಲಿ ದಾಖಲೆ ಸೃಷ್ಟಿ
ಗೋಕಾಕ್‌ ಮಹಾಲಕ್ಷ್ಮೀ ಟೌನ್‌ ಕೋ ಆಪರೇಟಿವ್‌ ಬ್ಯಾಂಕ್‌ಗೆ ಆರ್‌ಬಿಐ ನೀಡಿರುವ ನೋಟೀಸ್‌ ಅನ್ನು ನಮ್ಮ ಮಹಾಲಕ್ಷ್ಮೀ ಕೋ- ಆಪ್‌ ಬ್ಯಾಂಕ್‌ ಹೆಸರಿನಲ್ಲಿ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಬಗ್ಗೆ ಪೊಲೀಸ್‌ ವರಿಷ್ಠಾಧಿಕಾರಿಗಳಿಗೂ ದೂರು ಸಲ್ಲಿಸಿದ್ದೇವೆ. ನಕಲಿ ದಾಖಲೆ ಸೃಷ್ಟಿಸಿದವರ ವಿರುದ್ಧ ಕ್ರಮ ಆಗಲಿದೆ ಎಂದು ಯಶ್‌ಪಾಲ್‌ ಸುವರ್ಣ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next