ಉಡುಪಿ: ಬಿಜೆಪಿಯ ಹಿರಿಯ ಧುರೀಣ ಎಸ್. ಸೋಮಶೇಖರ ಭಟ್ ಅವರಿಗೆ ನುಡಿನಮನ ಕಾರ್ಯಕ್ರಮ ಶುಕ್ರವಾರ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭನದಲ್ಲಿ ನಡೆಯಿತು. ಪ್ರವೇಶ ದ್ವಾರ ಹಾಗೂ ಮುಖ್ಯವೇದಿಕೆಯಲ್ಲಿ ಭಾವಚಿತ್ರವಿಟ್ಟು ಪುಷ್ಪಾರ್ಚನೆಗೆ ಅವಕಾಶ ಮಾಡಿಕೊಡಲಾಗಿತ್ತು.
ಆರೆಸ್ಸೆಸ್‌ನ ಹಿರಿಯ ಪ್ರಚಾರಕ ಸು. ರಾಮಣ್ಣ ಮಾತನಾಡಿ, ಚಾರಿತ್ರ್ಯವನ್ನು ಎಲ್ಲಿಯೂ ಹಾಳು ಮಾಡಿಕೊಳ್ಳದೇ ಸಾಮಾಜಿಕ ಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಸಾಧನೆ ಮಾಡುವ ಜತೆಗೆ ಸಂಘಟನ್ನೆ, ಕಾರ್ಯಕರ್ತರು ಹಾಗೂ ತಮ್ಮವರನ್ನು ಬೆಳೆಸುವ ಮೂಲಕ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ಸೋಮಶೇಖರ ಭಟ್ಟರ ಜೀವನ ಎಲ್ಲ ರಿಗೂ ಮಾದರಿಯಾಗಿದೆ ಎಂದರು.
ಡಾ| ವಿ.ಎಸ್. ಆಚಾರ್ಯ ಹಾಗೂ ಸೋಮಣ್ಣನವರು ಸಾರ್ವಜನಿಕ ಜೀವನದಲ್ಲಿ ನಾವು ಹೇಗಿರಬೇಕು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಅಧಿಕಾರದ ಹಿಂದೆ ಹೋಗದೇ ಸಂಘಟನೆಯನ್ನು ಸಂಘಟನಾತ್ಮಕವಾಗಿ ಕಟ್ಟಿ ಬೆಳೆಸಿದ್ದರು ಎಂದು ಸ್ಮರಿಸಿಕೊಂಡರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸೋಮಶೇಖರ ಭಟ್ ಅವರ ಸಹೋದರ ಎಂ. ವಿಶ್ವನಾಥ ಭಟ್, ಆರೆಸ್ಸೆಸ್‌ನ ಡಾ| ನಾರಾಯಣ ಶೆಣೈ, ಪ್ರಮುಖರಾದ ಬೋಳ ಪ್ರಭಾಕರ ಕಾಮತ್, ಶ್ಯಾಮಲಾ ಕುಂದರ್ ನುಡಿನಮನ ಸಲ್ಲಿಸಿದರು.
ಆರೆಸ್ಸೆಸ್‌ನ ಹಿರಿಯ ಪ್ರಚಾರಕ ರಾದ ದಾ.ಮ. ರವೀಂದ್ರ, ನಿರ್ಮಲ್ ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಪ್ರಧಾನ ಕಾರ್ಯದರ್ಶಿಗಳಾದ ಕೆ. ರಾಘವೇಂದ್ರ ಕಿಣಿ, ದಿನಕರ ಶೆಟ್ಟಿ ಹೆರ್ಗ ಹಾಗೂ ಸೋಮಶೇಖರ ಭಟ್ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಗುಜ್ಜಾಡಿ ಪ್ರಭಾಕರ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.