ಉಡುಪಿ: ಉಡುಪಿ ಲೋಕಸಭಾ ಕ್ಷೇತ್ರವನ್ನು 1971ರಲ್ಲಿ ಪ್ರತಿನಿಧಿಸಿದ್ದ ಕಾಂಗ್ರೆಸ್ ಪಕ್ಷದ ದಿ| ರಂಗನಾಥ ಶೆಣೈ ಅವರ ಸಹೋದರ ಡಾ| ಅನಂತ್ ಶೆಣೈ ಅವರ ಪುತ್ರ, ಎಐಸಿಸಿ ಸದಸ್ಯ ಅಮೃತ್ ಶೆಣೈ ಈ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದರೆ, ರಂಗನಾಥ ಶೆಣೈ ಅವರ ಮಗ ಲಕ್ಷ್ಮಣ ಶೆಣೈ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ.
ರಂಗನಾಥ ಶೆಣೈಯವರ ಮನೆಯಲ್ಲಿ ಇತ್ತೀಚೆಗೆ ವಳಕಾಡು ವಾರ್ಡ್‌ನ ಕಾಂಗ್ರೆಸ್ ಕಾರ್ಯಕರ್ತರ ಸಭೆ ಜರಗಿತ್ತು. ರಂಗನಾಥ ಶೆಣೈ 1971ರಿಂದ 1976ರವರೆಗೆ ಸಂಸತ್ತಿನಲ್ಲಿ ಉಡುಪಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಇದಕ್ಕೂ ಮುನ್ನ ಅವರು ಉಡುಪಿ ಪುರಸಭಾಧ್ಯಕ್ಷರಾಗಿದ್ದರು. 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ ಒಂದು ವರ್ಷ ಸಂಸತ್ ಸದಸ್ಯತ್ವವನ್ನು ವಿಸ್ತರಿಸಲಾಗಿತ್ತು. 1977ರಲ್ಲಿ ಸ್ಪರ್ಧಿಸಲು ಅವರಿಗೆ ಟಿಕೆಟ್ ನೀಡಿರಲಿಲ್ಲ. 1979ರಲ್ಲಿ ರಂಗನಾಥ ಶೆಣೈ ನಿಧನ ಹೊಂದಿದರು.
ರಂಗನಾಥ ಶೆಣೈಯವರು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರಿ ದ್ದನ್ನು ವಿರೋಧಿಸಿದ್ದರು. ಅಂತಹ ಧೈರ್ಯ ಅವರಿಗಿತ್ತು ಎಂದು ಅಮೃತ್ ಶೆಣೈ ಹೇಳಿದರೆ, ನನ್ನ ತಂದೆಯವರು ಬಹಿರಂಗವಾಗಿ ವಿರೋಧಿಸದೆ ಪಕ್ಷದ ವೇದಿಕೆಯಲ್ಲಿ ವಿರೋಧಿಸಿದ್ದರು. ಅದೇ ಕಾರಣಕ್ಕೆ 1977ರಲ್ಲಿ ಅವರಿಗೆ ಸ್ಪರ್ಧಿಸಲು ಟಿಕೆಟ್ ನೀಡಲಿಲ್ಲ. ಆದರೂ ಅವರು ಪಕ್ಷವನ್ನು ಬಿಡಲಿಲ್ಲ ಎಂದು ಲಕ್ಷ್ಮಣ ಶೆಣೈ ಹೇಳುತ್ತಾರೆ.
ಕಾಂಗ್ರೆಸ್ ಪಕ್ಷವು ಉಡುಪಿ ಚಿಕ್ಕ ಮಗಳೂರು ಕ್ಷೇತ್ರದ ಟಿಕೆಟ್‌ನ್ನು ಜೆಡಿ ಎಸ್‌ಗೆ ಬಿಟ್ಟುಕೊಟ್ಟ ನಿರ್ಧಾರ ಸರಿಯಲ್ಲ. ಬಿಜೆಪಿಯನ್ನು ಸೋಲಿಸಲು ಈ ನಿರ್ಧಾರ ಪೂರಕ ವಲ್ಲ. ಈ ಕಾರಣಕ್ಕಾಗಿ ನಾನು ಸ್ಪರ್ಧಿಸುತ್ತಿದ್ದೇನೆ ಎಂದು ಅಮೃತ್ ಶೆಣೈ ಹೇಳಿದರೆ, ನಾನು ಪ್ರಮೋದ್ ಪರವಾಗಿ ಪ್ರಚಾರ ಮಾಡು ತ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದೇನೆ. ವೈಯಕ್ತಿಕವಾಗಿ ನನಗೆ ಅಮೃತ್ ಮೇಲೆ ಪ್ರೀತಿ ಇದೆ. ಆದರೆ ಸಿದ್ಧಾಂತಕ್ಕೆ ತಿಲಾಂಜಲಿ ಕೊಡಲು ಸಾಧ್ಯವಿಲ್ಲ ಎಂದು ಲಕ್ಷ್ಮಣ ಶೆಣೈ ಹೇಳುತ್ತಾರೆ.