ಉಡುಪಿ: ಕೋವಿಡ್ ಸೋಂಕು ಆತಂಕಕ್ಕೆ ವಿಧಿಸಲಾದ ಲಾಕ್‌ಡೌನ್‌ಗೆ ನಗರ ಜನಸಂಚಾರ ಮತ್ತಷ್ಟು ವಿರಳವಾಗಿದೆ. ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿರುವ ಸಮಾಧಾನದ ನಡುವೆಯೂ ಆತಂಕ ಮುಂದುವರಿದಿದೆ. ಲಾಕ್‌ಡೌನ್ ಅವಧಿ ಮತ್ತೆ ವಿಸ್ತರಣೆಯಾಗಿದ್ದು, ಇನ್ನೆರಡು ದಿನಗಳಲ್ಲಿ ಮಾರ್ಗಸೂಚಿ ಹೊರಬೀಳಲಿದೆ. ಈ ನಡುವೆ ನಗರದಲ್ಲಿ ಲಾಕ್‌ಡೌನ್ ಇನ್ನಷ್ಟು ಬಿಗಿಗೊಳಿಸಲಾಗಿದೆ.
ಇನ್ನಷ್ಟು ಕಡಿವಾಣ
ರಾಜ್ಯದಲ್ಲಿ ಲಾಕ್‌ಡೌನ್ ಅವಧಿಯನ್ನು ಎ.30ರ ವರೆಗೆ ರಾಜ್ಯ ಸರಕಾರ ವಿಸ್ತರಿಸಿದೆ. ಜಿಲ್ಲೆಯಲ್ಲಿ ನಿರ್ಬಂಧ ಜಾರಿಯಲ್ಲಿದ್ದು, ಕಠಿನ ಕ್ರಮಗಳು ಮುಂದುವರೆದಿವೆ. ಜಿಲ್ಲೆಗಳ ಗಡಿಗಳನ್ನು ಲಾಕ್ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಜಿಲ್ಲೆಗಳ ನಡುವಿನ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಜಿಲ್ಲಾಡಳಿತ ಸೋಂಕು ತಡೆಗೆ ಭಾರೀ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ನಿರ್ಬಂಧ ಮುಂದುವರಿಯುತ್ತಿದ್ದಂತೆ ಜಿಲ್ಲಾದ್ಯಂತ ಮತ್ತು ನಗರದಲ್ಲಿ ಪೊಲೀಸರು ಓಡಾಟ ನಡೆಸುವವರ ಮೇಲೆ ನಿಗಾವಹಿಸುತ್ತಿದ್ದಾರೆ.
ಸಾರ್ವಜನಿಕರು ಅನಗತ್ಯವಾಗಿ ಮನೆಗಳಿಂದ ಹೊರ ಬಂದು ತಿರುಗಾಡುವುದಕ್ಕೆ ಕಡಿವಾಣ ಹಾಕುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ, ಮಾರುಕಟ್ಟೆ ಮೊದಲಾದ ಅಗತ್ಯ ಸೇವೆಗಳು ದೊರಕುವ ಸ್ಥಳಗಳತ್ತ ಸಾರ್ವಜನಿಕರು ಬಾರದಂತೆ ತಡೆಯುತ್ತಿದ್ದಾರೆ.
ದಿನಸಿ ಸಾಮಗ್ರಿ, ಹಾಲು, ಹಣ್ಣು, ತರಕಾರಿ, ಬೇಕರಿ ತಿಂಡಿಗಳನ್ನು ಖರೀದಿಸಲು ಬೆಳಗ್ಗೆ 11 ಗಂಟೆ ತನಕ ಅಂಗಡಿಗಳು ತೆರೆದಿದ್ದು ಆ ಸಮಯದಲ್ಲಿ ಮಾತ್ರ ಓಡಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಅವಧಿ ಮುಗಿದ ಅನಂತರದಲ್ಲಿ ಅನಗತ್ಯವಾಗಿ ಓಡಾಡಲು ಸಾರ್ವಜನಿಕರಿಗೆ ಅವಕಾಶ ನೀಡುತ್ತಿಲ್ಲ. ಸಾರ್ವಜನಿಕರು ಕೂಡ ಸಹಕರಿಸುತ್ತಿದ್ದು, ನಗರ ಕಳೆದ 20 ದಿನಗಳಿಂದ ಬಂದ್‌ನ ಸ್ಥಿತಿಯಲ್ಲಿದ್ದು, ನಗರ ಸ್ತಬ್ಧವಾಗಿದೆ. ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಕಾವಲು ಕಾಯುತ್ತಿದ್ದು, ಸಾರ್ವಜನಿಕರ ಓಡಾಟವನ್ನು ನಿಯಂತ್ರಿಸುತ್ತಿದ್ದಾರೆ.
ಬ್ಯಾರಿಕೇಡ್ ಹಾಕಿ ನಿರ್ಬಂಧ
ನಗರದ ಸಿಟಿ ಮಾರ್ಕೆಟ್ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರವೇಶ ನಿರ್ಬಂಧಿಸಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು ಹಾಗೂ ವಿನಾಕಾರಣ ಜನಸೇರುವುದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ.